ಮನುಷ್ಯ ಸಮಯ, ಸಂದರ್ಭಕ್ಕೆ ಅನುಗುಣವಾಗಿ ಬದಲಾಗುವಾಗ ನಮ್ಮ ಮೂಗಿನ ನೇರಕ್ಕೆ ಯಾರನ್ನೂ ಅಳೆಯಲಾಗದು, ಯಾರೊಂದಿಗೂ ಹೋಲಿಸಲಾಗದು. ಇಷ್ಟಕ್ಕೂ ಪ್ರತಿಯೊಬ್ಬ ವ್ಯಕ್ತಿಯೂ ಪರಮಾತ್ಮನ ವಿಶೇಷ ಸೃಷ್ಟಿಯೇ. ಆದರೆ ಪರಿಸ್ಥಿತಿಯನ್ನು ಮೀರಿ ಬೆಳೆದು ತಮ್ಮನ್ನು ತಾವು ರೂಪಿಸಿಕೊಂಡು, ಎಂತಹ ಸಂದರ್ಭ ಬಂದರೂ ಬದಲಾಗದೇ ಇರುವವರು ಅಪರೂಪ. ಆಂಗ್ಲ ವಿಭಾಗದ ಡಾ. ರಾಜಲಕ್ಷ್ಮೀ ಮೇಡಂ ಅಥವಾ ಪ್ರೀತಿಪಾತ್ರರ ಪಾಲಿನ ʼ ರಾಜಿ ಮೇಡಂ ʼ ಬಗ್ಗೆ ಬರೆಯಲು ನನಗಿರುವ ಅರ್ಹತೆ ಪ್ರಶ್ನಾರ್ಹ, ಆದರೂ ಸಲಿಗೆ, ಪ್ರೀತಿಯಿಂದ ಒಂದಿಷ್ಟು ಬರೆದರೆ ಮೇಡಂ ಕ್ಷಮಿಸಿಯಾರು ಎಂಬ ಧೈರ್ಯ! ಅವರ ಪರಿಚಯ ನನಗಾದುದು ಕೇವಲ ನಾಲಕ್ಕು ವರ್ಷಗಳ ಹಿಂದೆಯಷ್ಟೇ. ಆಗ ಅವರು ನನಗೆ ʼಪ್ರಾಂಶುಪಾಲರ ಪತ್ನಿʼ ಅಷ್ಟೆ! ಆದರೆ ಹೊಸಬನಾದ ನನ್ನನ್ನು ಸಹೋದರನಂತೆ ಕಂಡು ಸಲಹೆ-ಮಾರ್ಗದರ್ಶನ ನೀಡಿದ ಕೆಲವು ಹಿರಿಯರಲ್ಲಿ ರಾಜಲಕ್ಷ್ಮೀ ಮೇಡಂ ಕೂಡ ಒಬ್ಬರು. ಆ ವಿಷಯದಲ್ಲಿ ನಾನು ಅದೃಷ್ಟವಂತ. ನನ್ನ ಅರಿವಿನ ಮಿತಿಯೊಳಗೆ ಹೇಳುವುದಾದರೆ, ರಾಜಲಕ್ಷ್ಮೀ ಮೇಡಂ ಎಲ್ಲರಂತಲ್ಲ. ನೇರ, ದಿಟ್ಟ, ನಿರಂತರ ಎಂಬ ಮಾತು ಅವರಿಗೆ ಅನ್ವಯಿಸುತ್ತದೆ. ಅವರ ಮಾತು ನೇರ, ದಿಟ್ಟ ನಿರ್ಧಾರ, ಮತ್ತದನ್ನು ಸದಾ ಉಳಿಸಿಕೊಂಡವರು ಅವರು. ಆಗ ಪ್ರಾಂಶುಪಾಲರಾಗಿದ್ದ ಉದಯ್ ಸರ್ ಮತ್ತು ಮೇಡಂ ಕಾಲೇಜಿನಲ್ಲಿ ಹೇಗಿರುತ್ತಾರೆ, ವೈಯಕ್ತಿಕ ಜೀವನ ಮತ್ತು ಔದ್ಯೋಗಿಕ ಜೀವನವನ್ನು ಹೇಗೆ ಸಂಭಾಳ...