ಭಾಸ್ಕರ ಸರ್ ಅವರ ಕ್ಲಾಸ್ ಎಂಬ ಕಾರ್ಯಾಗಾರ!
ಭಾಸ್ಕರ ಹೆಗಡೆ ಸರ್
ಅವರ ಕ್ಲಾಸ್ ಬೆಳಗ್ಗೆ ಇದ್ದರೆ ಅದು ಆ ದಿನಕ್ಕೊಂದು ಅದ್ಭುತ ಆರಂಭ!
ಹೌದು, ಅವರ ಕ್ಲಾಸ್
ಬೋರ್ ಎಂದು ಅನಿಸಿದ್ದು ನೆನಪೇ ಇಲ್ಲ. ಇದು ಅವರ ದೊಡ್ಡ ಶಿಷ್ಯಬಳಗದ ಎಲ್ಲರ ಅಭಿಪ್ರಾಯವೂ ಆಗಿರಬಹುದು.
ಈ ವಿಶಿಷ್ಟತೆ ಅವರಿಗೆ ವೃತ್ತಿಯಲ್ಲಿ ಎಷ್ಟು ಯಶಸ್ಸು ತಂದುಕೊಟ್ಟಿದೆಯೋ ಗೊತ್ತಿಲ್ಲ, ಆದರೆ ಅವರ ಶಿಷ್ಯ
ಬಳಗದ ಯಶಸ್ಸಿನಲ್ಲಿ ಅವರ ಪಾಠದ ಶೈಲಿ ದೊಡ್ಡ ಪಾತ್ರ ವಹಿಸಿದೆ.
ಭಾಸ್ಕರ ಸರ್ ಅವರ ತರಗತಿಯನ್ನು ನಲಿ-ಕಲಿ ಪರಿಕಲ್ಪನೆಗೆ ಹೋಲಿಸಬಹುದೇನೋ! ಹೌದು, ಜರ್ನಲಿಸಂ ಅನ್ನು ನಿಜಾರ್ಥದಲ್ಲಿ ಜನರಲಿಸಂ ಮಾಡಿಬಿಡುತ್ತಿದ್ದರು. ನನ್ನಂತೆ ಸೈನ್ಸ್ ಓದಿ, ಪತ್ರಿಕೋದ್ಯಮಕ್ಕೆ ವಿಶೇಷ ಆಸಕ್ತಿಯೂ ಇಲ್ಲದೆ, ಮಾಹಿತಿಯೂ ಇಲ್ಲದೆ ಬರುವವರಿಗಂತೂ ಆ ತರಗತಿಗಳು ಅಮೂಲ್ಯವಾಗಿರುತ್ತಿದ್ದವು. ಮೊದಲ ಕೆಲವು ಕ್ಲಾಸ್‌ಗಳಲ್ಲೇ ನಾವು ಗೊತ್ತೇ ಆಗದಂತೆ ʼಜರ್ನಲಿಸಂ ಸ್ಟುಡೆಂಟ್ಸ್ʼ ಆಗಿಬಿಡುತ್ತಿದ್ದೆವು.
ಸರ್, ಹತ್ತು ಹಲವು ಆಯಾಮಗಳಲ್ಲಿ ನೋಡಿದಾಗಲೂ ವಿಶಿಷ್ಠವಾಗಿ ಕಾಣುವ ವ್ಯಕ್ತಿ. ಅದು ಆರಂಭವಾಗುವುದು ಅವರ ಕ್ಲಾಸ್‌ನಿಂದಲೇ. ಅವರಿಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ಅವರು ಅಳವಡಿಸಿಕೊಂಡಿದ್ದ ಕಲಿಕಾ ವಿಧಾನ ಅತ್ಯಂತ ಪರಿಣಾಮಕಾರಿಯಾಗಿತ್ತು. ಜರ್ನಲಿಸಂ ಕ್ಲಾಸ್ ಎಂಬುದು ಸರಳ, ಆದರೆ ಆಸಕ್ತಿದಾಯಕ. ಅವರ ತರಗತಿಗಳು ಯಾವತ್ತೂ ಏಕಮುಖವಾಗಿರುತ್ತಿರಲಿಲ್ಲ. ಬಹುಶಃ ಅಂತಹ ಕಲಿಕಾ ವಿಧಾನದಲ್ಲಿ ಅವರಿಗೆ ನಂಬಿಕೆಯೂ ಇರಲಿಲ್ಲವೇನೋ.
ಅವರದ್ದು ಅಸಂಪ್ರದಾಯಕ, ಅನೌಪಚಾರಿಕ ಕಲಿಕಾ ವಿಧಾನ. ಒಬ್ಬರೇ ವಿಭಾಗವನ್ನು ಮುನ್ನಡೆಸುವಾಗಲೂ, ತುಸು ಹೆಚ್ಚೇ ಕೆಲಸ ಬಯಸುತ್ತಿದ್ದ ಅವರ ಆ ಶೈಲಿಯನ್ನು ಅವರು ಯಾವತ್ತೂ ಬಿಡಲಿಲ್ಲ. ಸರ್ ಬಯಸುತ್ತಿದ್ದುದು ಒಂದೇ, ಅದು ವಿದ್ಯಾರ್ಥಿಗಳ ಕ್ರಿಯಾಶೀಲತೆ, ಅವರು ಸದಾ ಎಚ್ಚರವಾಗಿರಬೇಕು ಎಂದು. ತರಗತಿ ಪ್ರವೇಶಿಸಿ ʼಹಾ…ʼ ಎಂಬ ತಮ್ಮ ಎಂದಿನ ಶೈಲಿಯಲ್ಲಿ ಪ್ರತಿಕ್ರಿಯೆ. ಬಳಿಕ ದೃಷ್ಟಿ ಹಾಯಿಸುತ್ತಿದ್ದುದು ಬೋರ್ಡ್ ಕಡೆಗೆ. ಅಲ್ಲಿ ದಿನಾಂಕ, ದಿನ, ಶುಭನುಡಿಯೊಂದಿದ್ದರೆ ಅವರಿಗೆ ಅದು ಮೊದಲ ಸಮಾಧಾನ.
ಆ ದಿನ ಯಾರದ್ದೋ ಹುಟ್ಟಿದ ದಿನವೋ ಅಥವಾ ಮತ್ತೇನೋ ವಿಶೇಷವಿದ್ದರೆ ಕೇಳಿ ತಿಳಿದುಕೊಂಡು, ತಮ್ಮ ಎಂದಿನ ಅನೌಪಚಾರಿಕ, ಆದರೆ ಅಷ್ಟೇ ಪ್ರೀತಿಯ ಶುಭಾಶಯ ಕೋರುತ್ತಿದ್ದರು. ಅದು ಸಹಜವಾಗಿಯೇ ವಿದ್ಯಾರ್ಥಿಗಳ ಮೂಡ್ ಸೆಟ್ ಮಾಡಿಬಿಡುತ್ತಿತ್ತು. ಗಮನವೆಲ್ಲಾ ತರಗತಿಯ ಕಡೆಗಿರುತ್ತಿತ್ತು. ಸರ್ ʼಹಾ ಯಾರು ಬನ್ನಿʼ ಎಂದರೆ ಅವತ್ತು ಮುಂದೆ ನಿಂತು ಮಾತನಾಡಲಿರುವ ವಿದ್ಯಾರ್ಥಿ ಬರಬೇಕು ಎಂದರ್ಥ. ಆಗ ನಮಗೆಲ್ಲಾ ಸರ್ ಯಾಕೆ ಹೀಗೆಲ್ಲಾ ಮಾಡಿಸುತ್ತಾರೆ ಎಂದು ದೇವರಾಣೆಗೂ ಗೊತ್ತಿರಲಿಲ್ಲ. ಆದರೆ ಈಗ ಅದರ ಬೆಲೆ ತಿಳಿಯುತ್ತಿದೆ.
ಆ ದಿನದ ಪತ್ರಿಕೆಗಳ ಪ್ರಮುಖ ಸುದ್ದಿಗಳ ಮೇಲೊಂದು ಬೆಳಕು ಚೆಲ್ಲುವುದೂ ಕೂಡ ಸರ್ ಕ್ಲಾಸ್‌ನ ಅವಿಭಾಜ್ಯ ಅಂಗ, ವಿದ್ಯಾರ್ಥಿಗಳು ಸಿದ್ಧರಾಗಿಲ್ಲ ಎಂದಾದರೆ, ತಾವೇ ಆ ಕೆಲಸವನ್ನು ಮಾಡುತ್ತಿದ್ದರು. ಪ್ರತಿದಿನ ಪತ್ರಿಕೆ ಓದಬೇಕು ಎಂದು ಸರ್ ಖಂಡಿತಾ ಹೇಳುತ್ತಿದ್ದರೂ, ಅದನ್ನೂ ಮಾಡಲು ʼಪುರ್ಸೊತ್ತುʼ ಸಿಗದವರಿಗಾಗಿಯೂ ಸರ್ ಸಿದ್ಧರಾಗಿ ಬರುತ್ತಿದ್ದರು.
ಬಹುಶಃ, ಭಾಸ್ಕರ ಸರ್
ಅವರ ಅತ್ಯಂತ ಪ್ರೀತಿಯ ಸಂಗತಿ ಎಂದರೆ ಅದು ತಮ್ಮ ವಿದ್ಯಾರ್ಥಿಗಳಲ್ಲಿ ಯಾರಿಗೋ ಬಹುಮಾನ ಸಿಕ್ಕಿದ್ದರೆ,
ಲೇಖನಗಳು ಪ್ರಕಟವಾಗಿದ್ದರೆ ಆ ವಿಷಯವನ್ನು ಕ್ಲಾಸ್‌ನಲ್ಲಿ ಹೇಳಿ, ಅವರಿಗೊಂದು ಶುಭಾಶಯ ಕೋರುವುದು.
ಈಗಲೂ ನೆನಪಿದೆ, ಅದನ್ನು ಹೇಳುವಾಗ ಭಾಸ್ಕರ ಸರ್ ಅವರ ಮುಖ ಹೇಗಿರುತ್ತೆಂದರೇ ಅವರಿಗೇ ಯಾವುದೋ ಪ್ರಶಸ್ತಿ
ಸಿಕ್ಕಿತೇನೋ ಎಂಬಂತೆ. ಒತ್ತಿ ಒತ್ತಿ ಹೇಳುತ್ತಿದ್ದರು. ಅದು ಹೆಮ್ಮೆ, ಖುಷಿ, ಉಳಿದವರೂ ಹಾಗೇ ಆಗಲಿ
ಎಂಬ ಆಶಾವಾದ ಎಲ್ಲವೂ…
ಬಳಿಕ ಲೇಖನ ಬರೆಯುವುದು, ವಾಲ್ ಮ್ಯಾಗಜೀನ್ ತಂಡ…ಹೀಗೆ ಎಲ್ಲರನ್ನೂ ಜಾಗೃತರನ್ನಾಗಿಸುತ್ತಿದ್ದರು. ಇದು ಸರ್ ಅವರ ಕ್ಲಾಸ್‌ನ ಪ್ರಮುಖಾಂಶ. ಬಳಿಕ ಪಾಠ! ಅದರಲ್ಲೂ ಏನನ್ನೂ ಬಿಡುತ್ತಿರಲಿಲ್ಲ. ಆದರೆ ಎಷ್ಟು ಬೇಕೋ ಅಷ್ಟೇ. ಅವರಿಗೆ ಚೆನ್ನಾಗಿ ಗೊತ್ತಿತ್ತು ತಮ್ಮ ವಿದ್ಯಾರ್ಥಿಗಳು ಯಾವ ರೀತಿ ತಯಾರಾಗಬೇಕು ಎಂದು! ಸರ್ ಸಿಲೆಬಸ್ ಮುಗಿಸುತ್ತಿದ್ದುದು ಒಮ್ಮೊಮ್ಮೆ ನಮ್ಮ ಗಮನಕ್ಕೇ ಬರುತ್ತಿರಲಿಲ್ಲ. ಪ್ರಸ್ತುತ ತುಂಬಾ ಮುಖ್ಯ ಎಂಬ ವಿಷಯಗಳನ್ನು ಒತ್ತುಕೊಟ್ಟು ಕಲಿಸುತ್ತಿದ್ದರು. ಅದು ಅವರದೇ ಶೈಲಿಯಲ್ಲಿ.
ಮತ್ತೊಂದು ಮರೆಯಲು ಸಾಧ್ಯವೇ ಇಲ್ಲದ ಸಂಗತಿಯೆಂದರೆ, ಅವರಿಂದ ಪತ್ರಿಕೋದ್ಯಮ ಕಲಿತು ಎಲ್ಲೋ ಉದ್ಯೋಗದಲ್ಲಿರುವ ಹಿಂದಿನ ವಿದ್ಯಾರ್ಥಿಗಳನ್ನು ನೆನಪಿಸಿಕೊಳ್ಳುತ್ತಿದ್ದ ರೀತಿ. ಅವರ ಸಾಧನೆಯನ್ನು ಬಣ್ಣಿಸಿ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುತ್ತಿದ್ದರು. ಅಂತವರು ವಿಭಾಗಕ್ಕೆ ಭೇಟಿ ನೀಡಿದರಂತೂ ಅವರನ್ನೂ ಸೀದಾ ತರಗತಿಗೇ ಕರೆಸಿಬಿಡುತ್ತಿದ್ದರು. ಅವರ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಲು ತರಗತಿಯೇ ವೇದಿಕೆ!
ಒಮ್ಮೆ ಭಾಸ್ಕರ ಸರ್ ವಿದ್ಯಾರ್ಥಿಯಾದರೆ ಮತ್ಯಾವತ್ತೂ ಅವರ ವಿದ್ಯಾರ್ಥಿಗಳೇ ಆಗಿರುತ್ತಾರೆ ಎಂಬ ಮಾತು ಸುಮ್ಮನೆ ಬಂದಿಲ್ಲ. ತಮ್ಮ ವಿದ್ಯಾರ್ಥಿಗಳು ಕಲಿತು ಹೋದ ನಂತರವೂ ಸರ್ ಯಾವತ್ತೂ ಅವರ ನಂಟು ಕಡಿದುಕೊಂಡವರಲ್ಲ. ಭಾಸ್ಕರ ಸರ್ ಅವರ ಕ್ಲಾಸ್ ಅಂತೂ ನಮಗೆಲ್ಲಾ ಒಂದು ಕಾರ್ಯಾಗಾರ ಇದ್ದಂತೆ. ಅದಕ್ಕಾಗಿ ಈಗಲೂ ಮನಸ್ಸು ಹಂಬಲಿಸುತ್ತದೆ.
ಗುರುಪ್ರಸಾದ್ ಟಿ.ಎನ್
ಬಿಎ 2005-2007
ಎಂಸಿಜೆ- 2010-
2011
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ