ಶಿಕ್ಷಕರ ಆ ಏಟು ಮತ್ತು ಆ ಕಲ್ಮಶವಿಲ್ಲದ ಪ್ರೀತಿ!

(ಸಾಂಧರ್ಭಿಕ ಚಿತ್ರ)

ನಮ್ಮ ಕಳಸೇಗೌಡರು ಊರಿಗೆಲ್ಲಾ ಮೇಷ್ಟ್ರು. ನಮ್ಮ ಹಳ್ಳಿಯ ಶಾಲೆಗೆ ಅವರೇ ಮುಖ್ಯೋಪಾಧ್ಯಾಯರು. ಅವರಿಗೆ ಆ ಗತ್ತು, ಜ್ಞಾನ, ಅನುಭವ ಎಲ್ಲವೂ ಇತ್ತು. ಅವರು ಬಾಸುಂಡೆ ಬರುವಂತೆ ಬಾರಿಸಿದ ನೆನಪು ಈಗಲೂ ಹಸಿರಾಗಿದ್ದರೂ ಈಗಲೂ ಊರಿಗೆ ಹೋದಾಗ ಅವರು ತೋರಿಸುವ ಪ್ರೀತಿ ಕಲ್ಮಶವಿಲ್ಲದ್ದು. ಜಾತಿ ಆಧಾರದಲ್ಲಿ ಜನರು ಬೇರೆಯಾಗಿದ್ದರೂ ಎಲ್ಲಾ ಮಕ್ಕಳು ಶಾಲೆಗೆ ಬರುವಂತೆ ಮಾಡಲು ಅವರು ಪಡುತ್ತಿದ್ದ ಪಾಡು ಈಗಲೂ ನೆನಪಿದೆ. 

ಹೈಸ್ಕೂಲಿನ ನಮ್ಮ ಪಿಟಿ ಮೇಷ್ಟ್ರು ನರೇಂದ್ರ ಸರ್. ಅವರ ಅದೆಷ್ಟೋ ವಿದ್ಯಾರ್ಥಿಗಳಲ್ಲಿ ನಾನೊಬ್ಬ. ಆದರೆ ಆರೋಗ್ಯ ಸರಿಯಿಲ್ಲದೆ ಕಂಗಾಲಾದ ಅದೊಂದು ಸಂದರ್ಭದಲ್ಲಿ ಅವರು ನನ್ನೆಡೆಗೆ ತೋರಿದ ಕಾಳಜಿ, ಪರೀಕ್ಷೆ ಬರೆದು ಪಾಸಾಗಲು ಅವರು ಪ್ರೋತ್ಸಾಹಿಸಿದ ರೀತಿ ಯಾವತ್ತೂ ಮರೆಯಲಾಗದ್ದು. ಅವರು ಹೇಗಿದ್ದಾರೋ ತಿಳಿದಿಲ್ಲ, ಆದರೆ ನನ್ನ ನೆನಪಿನಲ್ಲಿ ಅವರ‍್ಯಾವತ್ತೂ ಅಮರ.

ಹೈಸ್ಕೂಲಲ್ಲಿ ಗಣಿತ ಗಳಿಸಿದ ಧನ್ಯ ಕುಮಾರ್ ಸರ್ ಜೊತೆಗೆ ಅಂತಹ ವಿಶೇಷ ಘಟನೆಗಳೇನೂ ಇಲ್ಲ. ಆದರೆ ಶಿಕ್ಷಕನಾಗಿ ಅವರು ವಿದ್ಯಾರ್ಥಿಗಳೆಡೆಗೆ ತೋರಿಸುತ್ತಿದ್ದ ಪ್ರೀತಿ, ಅವರು ಕಲಿಸಿದ ರೀತಿ, ಅವರ ಶಿಸ್ತು ನನಗೂ ಆಗಲೇ ನಾನೂ ಮೇಷ್ಟ್ರಾಗಬೇಕು ಎಂಬ ಬಯಕೆ ಹುಟ್ಟಲು ಕಾರಣವಾಗಿತ್ತು. ಕಾಲೇಜು ದಿನಗಳಲ್ಲಿ ನನ್ನನ್ನು ಅತ್ಯಂತ ಪ್ರಭಾವಿಸಿದ ಶಿಕ್ಷಕ ಪ್ರೊ. ಭಾಸ್ಕರ ಹೆಗಡೆ ಸರ್‌. ವಿದ್ಯಾರ್ಥಿಗಳ ಯಶಸ್ಸನ್ನು ಸದಾ ಬಯಸುವ, ಸಂಭ್ರಮಿಸುವ, ಯಾವತ್ತೂ ಪ್ರೋತ್ಸಾಹಿಸುವ ಅವರ ಗುಣ ಎಲ್ಲರಲ್ಲೂ ಕಾಣಸಿಗುವುದಿಲ್ಲ.

ಶಿಕ್ಷಕ ವೃತ್ತಿಯೇ ಹಾಗೆ… ಒಮ್ಮೆ ಶಿಕ್ಷಕನಾದವನು ಸದಾ ಶಿಕ್ಷಕನೇ. ಶಿಕ್ಷಕರಿಗೂ ವಿದ್ಯಾರ್ಥಿಗಳ ಮೇಲಿರುವ ಮೋಹ ಸದಾ ಮುಂದುವರಿಯುತ್ತದೆ. ಅವರ ಯಶಸ್ಸು ಯಾವತ್ತೂ ಆತನಿಗೆ ಹೆಮ್ಮೆ ತರುತ್ತದೆ. ಅದಕ್ಕಾಗಿಯೇ ಶಿಕ್ಷಕ ವೃತ್ತಿ ಬೇರೆ ವೃತ್ತಿಗಳಂತಲ್ಲ. ಇಲ್ಲಿ ಸಿಗುವ ಆತ್ಮ ಸಂತೃಪ್ತಿ ಬೇರೆಲ್ಲೂ ಸಿಗದು. ಸಮಾಜಕ್ಕೆ ಶಿಕ್ಷಕನಿಂದ ಇರುವ ನಿರೀಕ್ಷೆಗಳೂ ಹೆಚ್ಚು. ಹಾಗಾಗಿ ಅವನ ಜವಾಬ್ದಾರಿಯೂ ಹೆಚ್ಚು.

ಶಿಕ್ಷಕ ಪಾಠ ಕಲಿಸುವುದು ಮಾತ್ರವಲ್ಲ ಜೀವನವನ್ನೇ ಬದಲಿಸಬಲ್ಲ. ವಿದ್ಯಾರ್ಥಿ ಅಸಹಾಯಕನಾದಾಗ ನೆರವಿಗೆ ನಿಂತು ಬದುಕಿನಲ್ಲಿ ಮುಂದೆ ಸಾಗಲು ಶಿಕ್ಷಕ ನೀಡುವ ಸ್ಪೂರ್ತಿ, ಸಲಹೆಗಳು ಅದೆಷ್ಟೋ ಸಾಧಕರನ್ನು ಸೃಷ್ಟಿಸಿವೆ. ಶಿಕ್ಷಕರು ಹೆತ್ತವರ ಪಾತ್ರ ನಿರ್ವಹಿಸಬಲ್ಲರು, ಸ್ನೇಹಿತರಾಗಬಲ್ಲರು. ಒಂದಂತೂ ನಿಜ, ಸಾಧಕನೇ ಇರಲಿ, ಸಾಮಾನ್ಯನೇ ಆಗಿರಲಿ ಆತನ ಜೀವನದಲ್ಲಿ ಶಿಕ್ಷಕನ ಪಾತ್ರ ಇದ್ದೇ ಇರುತ್ತದೆ.

ಶಿಕ್ಷಕ ನಾಲ್ಕು ಗೋಡೆಗಳ ಮಧ್ಯೆ ಪಾಠ ಹೇಳಿ ಕೊಡುವವನು ಮಾತ್ರ ಆಗಬೇಕೆಂದಿಲ್ಲ. ನಮ್ಮ ಜೀವನದಲ್ಲಿ ಅದೆಷ್ಟೋ ಜನರು ಯಾವುದೇ ಸ್ವಾರ್ಥವಿಲ್ಲದೆ ಬಂದು, ಕಷ್ಟಕಾಲದಲ್ಲಿ ನೆರವಾಗುತ್ತಾರೆ. ಹಾಗಂತ ನಮ್ಮ ನಡುವೆ ಯಾವುದೇ ವಿಶೇಷ ಸಂಬಂಧವಿರುವುದಿಲ್ಲ. ಅವರೇಕೆ ಬರುತ್ತಾರೆ, ನಮಗ್ಯಾಕೆ ಸಹಾಯ ಮಾಡುತ್ತಾರೆ, ಗೊತ್ತಿಲ್ಲ. ಆದರೆ ಬದುಕಿನ ಪಾಠಗಳನ್ನು ಕಲಿಸುತ್ತಾರೆ. ಇವರೂ ನಿರ್ವಹಿಸುವುದು ಒಬ್ಬ ಶಿಕ್ಷಕ ನಿರ್ವಹಿಸುವ ಪಾತ್ರವನ್ನೇ. ಇಂಥವರಿಂದ ಶಾಲೆಗೆ ಹೋಗದ ಅದೆಷ್ಟೋ ಜನರು ಸಮಾಜದಲ್ಲಿ ಗಣ್ಯ  ವ್ಯಕ್ತಿಗಳಾಗುತ್ತಾರೆ.

ನಾವು ನಮ್ಮ ಶಿಕ್ಷಕರಿಗೆ ಯಾವತ್ತೂ ಕೃತಜ್ಞರಾಗಿರಬೇಕು. ಏಕೆಂದರೆ ಅವರೇ ನಮ್ಮ ಸಮಾಜದ ಭವಿಷ್ಯ ಅಥವಾ ನಮ್ಮ ಸಮಾಜವನ್ನು ರೂಪಿಸುವವರು ಎಂದರೆ ಅತಿಶಯೋಕ್ತಿಯಲ್ಲ.

-ಜಿಪಿ-





ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪ್ರೀತಿ ಎಂದರೇನು ಎಂದು ಈಗ ಅರಿತೆನು…

ಸಿಂಹಾವಲೋಕನಕ್ಕೊಂದು ಸಮಯ

ಬೇಸರದಲ್ಲಿ ಬರೆದದ್ದು…ಹೌದಾ?!