ಮುಂದೆ ಹೇಗೆ ಜೀವನ….?!
ಇದೆಲ್ಲಾ ಬರೀ ಕಲ್ಪನೆ, ಋಣಾತ್ಮಕ ಚಿಂತನೆ, ನಿರಾಶಾವಾದ ಎಂದೆಲ್ಲಾ ಹಂಗಿಸುವ ಸ್ಥಿತಿಯಲ್ಲಿ ನಾವಿಲ್ಲ. ನಮ್ಮ ಹಿರಿಯವರು ತಲೆಯ ಮೇಲೊಂದು ಸೂರಿಲ್ಲದೆ ಬದುಕಿರಬಹುದು, ಸೀಮೆ ಎಣ್ಣೆ ದೀಪದಲ್ಲೇ ಬೆಳಕು ಕಂಡಿರಬಹುದು, ದಿನಂಪ್ರತಿ ಮೈಲುಗಟ್ಟಲೆ ನಡೆದಿರಬಹುದು. ಈಗಿನಷ್ಟು ದುಡ್ಡು, ಸೌಕರ್ಯ ಇದ್ದಿರಲಿಕ್ಕಿಲ್ಲ. ಹಾಗೆಂದು ಅವರೇನೂ ಬಡವರಲ್ಲ. ಎಲ್ಲೆಲ್ಲೂ ಹಚ್ಚಹಸಿರು, ತಂಪಾದ ಗಾಳಿ, ನದಿ-ಕೆರೆ-ತೊರೆಗಳು, ಪ್ರಕೃತಿಯ ಒಡನಾಟ, ಸಾಕುಪ್ರಾಣಿಗಳ ಸಂಗವಿತ್ತು. ಮನೆಯೆಂಬ ದೇವಾಲಯ, ಸಂಸಾರವೆಂಬ ಬಿಟ್ಟಿರಲಾರದ ಅನುಬಂಧ ಎಲ್ಲವೂ ಇತ್ತು. ಆ ಶ್ರೀಮಂತಿಕೆ ಈ ಬಡತನವನ್ನು ಮರೆಸುತ್ತಿತ್ತು. ಕಳೆದ ಶತಮಾನದ ಕೊನೆಯಲ್ಲಿ ಜನಿಸಿದ ನಾವೂ ಈ ನಿಟ್ಟಿನಲ್ಲಿ ಸ್ವಲ್ಪ ಅದೃಷ್ಟವಂತರೇ. ಆದರೆ ಈಗ?
ಮುಂದಿನ ಪೀಳಿಗೆ ಎದುರಿಸಲಿರುವ ಸವಾಲುಗಳು ಇತಿಹಾಸದಲ್ಲಿ ಯಾವಾಗಲೂ ಇರಲಿಲ್ಲ. ನಮ್ಮ ಅಜ್ಜ-ಅಜ್ಜಿಯರು ಸಹಜವಾಗಿ ಅನುಭವಿಸಿದ ಮೂಲಭೂತ ಸೌಕರ್ಯಗಳು ನಮ್ಮ ಮಕ್ಕಳಿಗೆ ದುಸ್ಸಾಧ್ಯವಾಗಲಿವೆ. ವಿವಿಧ ಬಗೆಯ ಮಾಲಿನ್ಯಗಳು, ಎಲ್ಲಿ ಬಿಸಾಡಿದರೂ ನಮ್ಮತ್ತಲೇ ಬರುವಷ್ಟು ಪ್ಲಾಸ್ಟಿಕ್, ಜೊತೆಗೆ ಕಾಡು ಕಡಿದು ಬಯಲಾಗಿಸಿದ್ದೇವೆ. ನಾವು ಮುಂದಿನ ಪೀಳಿಗೆಗೆ ಹಣ ಕಟ್ಟಿಡಬಹುದು, ಆದರೆ ಪ್ರಕೃತಿದತ್ತ ಸಂಪನ್ಮೂಲಗಳನ್ನು ಉಳಿಸಲು ಮರೆತಿದ್ದೇವೆ, ಮರೆಯುತ್ತಲೇ ಇದ್ದೇವೆ. ಪರಿಣಾಮ…
ಶುದ್ಧ ಗಾಳಿಯಲ್ಲಿ ಉಸಿರಾಡುವುದು ನಮ್ಮ ಹಕ್ಕೆಂದು ನಾವು ಭಾವಿಸಬಹುದು, ಆದರೆ ಅದನ್ನು ಶುದ್ಧವಾಗಿಡುವುದೂ ನಮ್ಮ ಕರ್ತವ್ಯ. ಆದರೆ ಅದನ್ನು ನಾವು ಮರೆತಿದ್ದೇವೆ. ಅಂದರೆ, ಮುಂಬರುವ ದಶಕಗಳಲ್ಲಿ ಶುದ್ಧ ವಾಯು ಒಂದು ಐಷಾರಾಮಿ ವಸ್ತುವಾಗಲಿದೆ. ದಿನೇ ದಿನೇ ಹೆಚ್ಚುತ್ತಿರುವ ವಾಯುಮಾಲಿನ್ಯ, ಕಾರ್ಖಾನೆಗಳ ಹೊಗೆ, ವಾಹನಗಳ ಹೊರಸೂಸುವಿಕೆ - ಇವೆಲ್ಲವೂ ನಮ್ಮ ವಾತಾವರಣವನ್ನು ವಿಷಕಾರಿಯಾಗಿಸುತ್ತಿವೆ. ಮುಂದಿನ ಪೀಳಿಗೆಯ ಮಕ್ಕಳು ಹೊರಗೆ ಆಡಲು ಹೋಗುವ ಮುನ್ನ ಆಕ್ಸಿಜನ್ ಮಾಸ್ಕ್ ಧರಿಸಬೇಕಾಗಬಹುದು. ಪ್ರತಿ ಮನೆಯಲ್ಲೂ ವಾಯು ಶುದ್ಧೀಕರಣ ಯಂತ್ರಗಳು ಕಡ್ಡಾಯವಾಗಬಹುದು. ಉಸಿರಾಟದ ಕಾಯಿಲೆಗಳು, ಶ್ವಾಸಕೋಶದ ಸಮಸ್ಯೆಗಳು ಸಾಮಾನ್ಯವಾಗುತ್ತವೆ. "ಹೊರಗೆ ಹೋಗಿ ಆಡು" ಎಂದು ಯಾರೂ ಹೇಳಲಾಗದ ಪರಿಸ್ಥಿತಿ ಬರಬಹುದು. ಈಗ ದೆಹಲಿಯಲ್ಲಿ ಕಾಣುತ್ತಿರುವುದು ಒಂದು ಸ್ಯಾಂಪಲ್ ಮಾತ್ರ!
ಇಂದು ನಾವು ನಲ್ಲಿ ತೆರೆದರೆ ಹರಿಯುವ, ಸ್ನಾನಕ್ಕೆ ಬಕೆಟ್‌ಗಟ್ಟಲೆ ಸಿಗುವ ನೀರು ನಮ್ಮ ಮಕ್ಕಳಿಗೆ ಕಥೆಯಾಗಿ ಉಳಿಯಬಹುದು. ಅಂತರ್ಜಲ ಮಟ್ಟ ಅಪಾಯಕಾರಿಯಾಗಿ ಇಳಿಯುತ್ತಿದೆ, ನದಿಗಳು ಒಣಗುತ್ತಿವೆ, ಸರೋವರಗಳು ಕಣ್ಮರೆಯಾಗುತ್ತಿವೆ. ನೀರಿನ ಕೊರತೆಯಿಂದಾಗಿ ರಾಜ್ಯಗಳ ನಡುವೆ, ದೇಶಗಳ ನಡುವೆ ಸಂಘರ್ಷಗಳು ತೀವ್ರವಾಗುತ್ತವೆ. ಹೀಗೇ ಆದರೆ ಪ್ರತಿ ಹನಿ ನೀರು ಚಿನ್ನಕ್ಕಿಂತ ಬೆಲೆಯುಳ್ಳದ್ದಾಗುತ್ತದೆ. ಯಂತ್ರಗಳನ್ನು ಬಳಸಿ ಶುದ್ಧೀಕರಿಸಿದ ನೀರು ಶ್ರೀಮಂತರಿಗೆ ಮಾತ್ರ ಎಂಬಂತಾಗಬಹುದು. ಕುಡಿಯುವ ನೀರಿಲ್ಲದೆ ಆರೋಗ್ಯ ಸಮಸ್ಯೆಗಳು ಏರಬಹುದು, ದುಡಿಮೆ ಅಸಾಧ್ಯವೆನಿಸಬಹುದು, ವಿವಿಧ ಆರೋಗ್ಯ ಸಮಸ್ಯೆಗಳು ಕಾಡಬಹುದು….ಹೀಗೆ ಪಟ್ಟಿ ಮುಂದುವರಿಯುತ್ತದೆ.
ತಂತ್ರಜ್ಞಾನ ಬೆಳೆದಂತೆ ರೋಗಗಳೂ ಬೆಳೆಯುತ್ತಿವೆ. ಮಾಲಿನ್ಯದಿಂದ ಉಂಟಾಗುವ ಕ್ಯಾನ್ಸರ್ ಪ್ರಕರಣಗಳು ಗಗನಕ್ಕೇರುತ್ತವೆ. ಪ್ಲಾಸ್ಟಿಕ್ ಸೂಕ್ಷ್ಮ ಕಣಗಳು ನಮ್ಮ ರಕ್ತದಲ್ಲಿಯೇ (ಅಮ್ಮನ ಎದೆಹಾಲಿನಲ್ಲೂ) ಸೇರುತ್ತಿವೆ. ಮಾನಸಿಕ ಅಸ್ವಸ್ಥತೆಗಳು ಹೆಚ್ಚಾಗುತ್ತವೆ. ಡಿಜಿಟಲ್ ಸಮಸ್ಯೆಗಳು. ಆಹಾರದಲ್ಲಿ ನೈಸರ್ಗಿಕ ಪೌಷ್ಟಿಕಾಂಶಗಳ ಕೊರತೆ, ಕೃತಕ ಪದಾರ್ಥಗಳ ಮಿತಿಮೀರಿದ ಬಳಕೆ ಇವೆಲ್ಲವೂ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಆಸ್ಪತ್ರೆಗಳು ಎಂದೂ ಖಾಲಿಯಾಗವು, ಆದರೆ ಚಿಕಿತ್ಸೆಯ ವೆಚ್ಚ ಸಾಮಾನ್ಯರಿಗೆ ಎಟಕುವುದು ಕಷ್ಟ.
ಅಂಟಾರ್ಟಿಕದ ಮಂಜುಗಡ್ಡೆಗಳು ವೇಗವಾಗಿ ಕರಗುತ್ತಿವೆ. ಸಮುದ್ರ ಮಟ್ಟದ ಏರುವುದರಿಂದ ನಮ್ಮ ಮಂಗಳೂರು ಸೇರಿದಂತೆ ಕರಾವಳಿ ನಗರಗಳು ಅಪಾಯದಲ್ಲಿವೆ. ವಿಶ್ವಸಂಸ್ಥೆಯ ವಾಯುಗುಣ ಬದಲಾವಣೆಯ ಮೇಲಿನ ಅಂತರಸರ್ಕಾರಿ ನಿಯೋಗ (ಐಪಿಸಿಸಿ)ಯೇ ಇದನ್ನು ದೃಢಪಡಿಸಿದೆ. ಮುಂಬೈ, ಕೋಲ್ಕತ್ತಾ, ಚೆನ್ನೈ ಮೊದಲಾದ ಹೆಸರುಗಳು ಭವಿಷ್ಯದಲ್ಲಿ ಇತಿಹಾಸ ಪುಸ್ತಕಗಳಲ್ಲಿ ಮಾತ್ರ ಉಳಿಯಬಹುದು. ಹಾಗೇನಾದರೂ ಆದರೆ ಆರ್ಥಿಕತೆ ಕೊಚ್ಚಿಹೋಗುತ್ತದೆ, ಕೋಟ್ಯಂತರ ಜನರು ನಿರಾಶ್ರಿತರಾಗುತ್ತಾರೆ. ಕರಾವಳಿಯ ಜನರು ಒಳನಾಡುಗಳಿಗೆ ವಲಸೆ ಹೋಗಬೇಕಾಗುತ್ತದೆ. ಜಾಗತಿಕ ತಾಪಮಾನದ ಹೆಚ್ಚಳ ಹವಾಮಾನ ಬದಲಾವಣೆಗಳನ್ನು ತೀವ್ರಗೊಳಿಸುತ್ತದೆ. ಬರಗಾಲಗಳು, ಪ್ರವಾಹಗಳು, ಅನಿರೀಕ್ಷಿತ ಚಂಡಮಾರುತಗಳು, ಕಾಡ್ಗಿಚ್ಚು ಹೀಗೆ…
ನಾವು ಏನೂ ಮಾಡದೆ ಯಾವುದೋ ಮ್ಯಾಜಿಕ್ ಸಂಭವಿಸಬಹುದು ಎಂದು ನಿರೀಕ್ಷಿಸುವುದು ತಪ್ಪು. ಈಗಿನಷ್ಟು ವೇಗದಲ್ಲಿ ನಗರೀಕರಣ, ಪರಿಸರ ನಾಶ ಮುಂದುವರಿದರೆ ಈ ಎಲ್ಲಾ ಕಲ್ಪನೆ ನಿಜವಾಗಲು ಹೆಚ್ಚು ಸಮಯ ಬೇಕಾಗದು. ನೆನಪಿರಲಿ, ಈಗಲೇ ನಿಸರ್ಗ ಕೆಲವೊಂದು ಸೂಚನೆಗಳನ್ನು ರವಾನಿಸಲಾರಂಭಿಸಿದೆ. ಮೇಲೆ ಹೇಳಿದ ಎಲ್ಲಾ ಭಯಾನಕ ಸಂಗತಿಗಳನ್ನು ನಾವು ತಡೆಯದಿದ್ದರೆ, ಭೂಮಿಯೇ ನರಕವಾಗುವುದರಲ್ಲಿ ಎಳ್ಳಷ್ಟೂ ಅನುಮಾನವಿಲ್ಲ.
ನಾವು ಇಂದು ತೆಗೆದುಕೊಳ್ಳುವ ನಿರ್ಧಾರಗಳು ನಾಳೆಯ ಜಗತ್ತನ್ನು ನಿರ್ಧರಿಸುತ್ತವೆ. ಪರಿಸರ ಸಂರಕ್ಷಣೆಯನ್ನು ಕೇವಲ ಪ್ರಚಾರಕ್ಕೆ ಸೀಮಿತವಾಗದೆ, ಕೃತಿಗಿಳಿಯಬೇಕು. ನಾವು ಮಕ್ಕಳಿಗೆ ಬೇರೆ ಎಲ್ಲಾ ಸೌಲಭ್ಯ ಮಾಡಿಡುವಲ್ಲಿ ತೋರುವ ಕಾಳಜಿ ಪರಿಸರವನ್ನು ರಕ್ಷಿಸುವುದರಲ್ಲಿಯೂ ಬೇಕಾಗುತ್ತದೆ. ದಿನನಿತ್ಯದ ಜೀವನದಲ್ಲಿ, ಪ್ರತಿ ವ್ಯಕ್ತಿಯೂ ಜವಾಬ್ದಾರಿ ತೆಗೆದುಕೊಳ್ಳಬೇಕು. ತ್ಯಾಜ್ಯ ಕಡಿಮೆ ಮಾಡುವುದು, ನವೀಕರಿಸಬಹುದಾದ ಇಂಧನಗಳನ್ನು ಬಳಸುವುದು, ವನ, ಜಲ, ವಾಯು ಸಂರಕ್ಷಣೆ ನಮ್ಮ ಆದ್ಯತೆಯಾಗಬೇಕು. ಸರ್ಕಾರಗಳು ಕಠಿಣ ನೀತಿಗಳನ್ನು ಜಾರಿಗೊಳಿಸದೆ ವಿಧಿಯಿಲ್ಲ. ಕೈಗಾರಿಕೆಗಳು ಮಾಲಿನ್ಯ ನಿಯಂತ್ರಣದ ಜವಾಬ್ದಾರಿ ತೆಗೆದುಕೊಳ್ಳಬೇಕು. ಒಮ್ಮೆ ಯೋಚಿಸಿ ಇದೆಲ್ಲಾ ಆಗಲು ಸಾಧ್ಯವೇ?
ಹಣ ಮತ್ತು ತಂತ್ರಜ್ಞಾನ ಮಾತ್ರ ಸಾಕಾಗುವುದಿಲ್ಲ. ನಮ್ಮ ಮಕ್ಕಳಿಗೆ ಬೇರೆ ರೀತಿಯ ಶಿಕ್ಷಣ ಬೇಕು, ಬೇರೆ ರೀತಿಯ ಸಿದ್ಧತೆ ಬೇಕು. ಮೊದಲನೆಯದಾಗಿ, ಅವರಿಗೆ ಪರಿಸರ ಸಂರಕ್ಷಣೆಯ ಮಹತ್ವ ಕಲಿಸಬೇಕು. ನೀರು ಉಳಿಸುವುದು, ವಿದ್ಯುತ್ ಸಂರಕ್ಷಿಸುವುದು, ಮರು ಬಳಕೆ ಮಾಡುವುದು - ಇವು ಉಪದೇಶಗಳಲ್ಲ, ಬದುಕಿನ ಅಭ್ಯಾಸಗಳಾಗಬೇಕು. ಎರಡನೆಯದಾಗಿ, ಅವರಲ್ಲಿ ಬದಲಾವಣೆಗೆ ಹೊಂದಿಕೊಳ್ಳುವ ಸಾಮರ್ಥ್ಯ ಅನಿವಾರ್ಯ. ಕಷ್ಟಗಳನ್ನು ಎದುರಿಸುವ ಶಕ್ತಿ, ಬದಲಾಗುತ್ತಿರುವ ಪರಿಸರದೊಂದಿಗೆ ಏಗುವ ಸಾಮರ್ಥ್ಯ. ಮೂರನೆಯದಾಗಿ, ಒಂದು ಸಮುದಾಯವಾಗಿ, ಸಮಾಜವಾಗಿ ಯೋಚಿಸಬೇಕಾಗುತ್ತದೆ. ಒಬ್ಬರಿಗೊಬ್ಬರು ಸಹಾಯ ಮಾಡುವ ಮನೋಭಾವ, ಸಹಕಾರದ ಮನಸ್ಸು ಇದ್ದರಷ್ಟೇ ಜೀವನ.
ಕೆಲವು ದಶಕಗಳ ಹಿಂದೆ, ಮನುಷ್ಯ ರೋಬೋಟ್ ಕಂಡುಹಿಡಿದ್ದಾನಂತೆ. ಅದು ನಮ್ಮ ಹಾಗೇ ಕೆಲಸ ಮಾಡುತ್ತಂತೆ ಅಂತೆಲ್ಲಾ ಮಾತನಾಡುತ್ತಿದ್ದರು. ಅದು ನಿಜವಾಗಲು ಜಾಸ್ತಿ ಸಮಯ ಬೇಕಾಗಲಿಲ್ಲ. ಯಂತ್ರಗಳು ಹೇಳಿದಂತೆ ಮನುಷ್ಯ ಕೇಳಬೇಕಂತೆ, ಎನ್ನಲಾಗುತ್ತಿತ್ತು. ಈಗ ಮೆದುಳಿಗೂ ಚಿಪ್ ಅಳವಡಿಸುವ ಕಾಲದಲ್ಲಿದ್ದೇವೆ. ಆ ಮಾತೂ ನಿಜವಾಗಿದೆ. ಇನ್ನು ನಿಜ ಸ್ಥಿತಿ ಕಣ್ಣೆದುರೇ ಇರುವಾಗ, ಮುಂದಿನ ದಿನಗಳಲ್ಲಿ ದುರಂತಗಳು ಕಾದಿವೆ ಎಂಬುದನ್ನು ಅಲ್ಲಗೆಳೆಯಲು ಕಾರಣಗಳಿಲ್ಲ. ಒಟ್ಟಿನಲ್ಲಿ, ನಮ್ಮ ಮುಂದಿನ ಪೀಳಿಗೆ ಅತಿದೊಡ್ಡ ವಿರೋಧಾಭಾಸದೊಂದಿಗೆ ಬದುಕಲಿದೆ.
ಹವ್ಯಾಸಿ ಬರಹಗಾರ, ಮಂಗಳೂರು

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ