ಖುಷಿಯಾಗಿರೋದೂ ಒಂದು ಸೀರಿಯಸ್ ವಿಷಯ!
ಖುಷಿಯಾಗಿರೋಕೆ
ಮಹೂರ್ತ ನೋಡ್ಬೇಕಾ… ಮೊಬೈಲ್‌ನಲ್ಲಿ ʼಬಿ ಹ್ಯಾಪಿʼ ಅಂತ ಟೈಪಿಸಿ ಇಮೋಜಿ ಅಂಟಿಸಿ ಮೆಸೇಜ್
ಕಳ್ಸೋದು ಕಷ್ಟದ ಕೆಲ್ಸಾನಾ… ಒಂದು ವಾಯ್ಸ್ ಮೆಸೇಜ್- ವೀಡಿಯೋ ಕಾಲ್ ಮಾಡೋಕೆ ಎಷ್ಟ್ ಟೈಮ್
ಬೇಕು. ಎಂಜಾಯ್ ಮಾಡೋಕೆ ರೀಲ್ಸ್ ಇಲ್ವಾ... ಅಂತೆಲ್ಲಾ ಅನ್ಸೋದು ತಪ್ಪೇನಲ್ಲ…
ಆದ್ರೆ ಖುಷೀನೂ ಈಗ
ಸೀರಿಯಸ್ ವಿಷ್ಯ, ಅದಕ್ಕೂ ಒಂದು ದಿನ ಇದೆ ಅನ್ನೋದು ನಿಮಗೆ ಗೊತ್ತಾ?! ಇವತ್ತು ನಿನ್ನೆಯಲ್ಲ,
ಸುಮಾರು ಹನ್ನೆರಡು ವರ್ಷಗಳ ಹಿಂದೆ, ಅಂದ್ರೆ 2011 ರಲ್ಲೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲೇ ʼಸಂತೋಷ ಮನುಷ್ಯನ
ಮೂಲಭೂತ ಗುರಿಯಾಗಿರಬೇಕುʼ ಎಂದು ನಿರ್ಣಯ ಪಾಸ್ ಮಾಡಲಾಗಿದೆ. ವಿಶ್ವಸಂಸ್ಥೆಯ ಎಲ್ಲಾ
193 ಸದಸ್ಯ ದೇಶಗಳೂ ಸರ್ವಾನುಮತದಿಂದ ಈ ನಿರ್ಣಯವನ್ನು ಒಪ್ಪಿಕೊಂಡಿವೆ. ಇಷ್ಟೇ ಅಲ್ಲಾ ಕೇಳಿ,
2013 ರಿಂದ ಪ್ರತಿ ವರ್ಷ ಮಾರ್ಚ್ 20 ನ್ನು ಅಂತಾರಾಷ್ಟ್ರೀಯ ಖುಷಿಯ ದಿನ ಅಂತ ಆಚರಿಸಲಾಗ್ತಿದೆ!
ಖುಷಿಯ ವಿಚಾರ
ಇಷ್ಟಕ್ಕೇ ನಿಲ್ಲಲ್ಲ. ನಾವೆಲ್ಲಾ ಖುಷಿಯಾಗಿರ್ಬೇಕು, ಚೆನ್ನಾಗಿರ್ಬೇಕು ಅಂತ ವಿಶ್ವಸಂಸ್ಥೆ 17
ಅಂಶಗಳ ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಪ್ರಕಟಿಸಿದೆ. ಪುಟಾಣಿ ದೇಶ ಭೂತಾನ್ ಅಂತೂ ಈ
ವಿಷ್ಯದಲ್ಲಿ ಎಷ್ಟು ಸೀರಿಯಸ್ಸಾಗಿದೆ ಅಂದ್ರೆ, ಅದು 1970 ರಿಂದಲೇ ತನ್ನ ದೇಶದ ಜಿಡಿಪಿ ಗಿಂತಲೂ
ತನ್ನ ಪ್ರಜೆಗಳ ಸಂತೋಷಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿದೆ!
ಹೌದು, ಸಂತೋಷ ಅನ್ನೋದೂ
ಈಗ ಗಂಭೀರ ವಿಷ್ಯ. ಯಾರನ್ನಾದ್ರೂ ಸುಮ್ನೆ ಕೇಳಿ ನೋಡಿ, ಹೇಗಿದೀರಾ ಅಂತ. ʼಅಯ್ಯೋ ನನ್ ಕಥೆ ಏನ್
ಹೇಳೋದು…ʼ ಅನ್ನೋವಲ್ಲಿಂದ ʼಹೇಗೋ ನಡೀತಿದೆ…ʼ ಅನ್ನೋವರೆಗೆ ವಿಚಿತ್ರ ಉತ್ತರಗಳು
ಸಿಗ್ತಾವೆ. ಹಾಗಾದ್ರೆ ನಾವೆಲ್ಲಾ ಖುಷಿಯಾಗಿಲ್ವಾ. ಅಥವಾ ಖುಷಿಯಾಗಿದ್ದೇವೆ ಅನ್ನೋ
ಭ್ರಮೆಯಲ್ಲಿದ್ದೇವಾ ? ಯಾರಿಗಾಗಿಯೋ ಅಥವಾ ಅನಿವಾರ್ಯ ಕರ್ಮ ಅಂತಲೋ ನಾಲ್ಕು ಹಲ್ಲು ತೋರಿಸ್ಕೊಂಡು
ಓಡಾಡೋರು ನಮ್ಮಲ್ಲಿ ಎಷ್ಟೋ ಮಂದಿ ಇದ್ದಾರೆ!
ಹಾಗಾದ್ರೆ ಸಂತೋಷ
ಅನ್ನೋದು ಎಲ್ಲಿದೆ? ಈ ಪ್ರಶ್ನೆಗೆ ನಮ್ಮೆಲ್ಲರ ಉತ್ತರ ವಿಭಿನ್ನವಾಗಿರುತ್ತೆ. ನಮ್ಮ ನಡುವಿನ ಅಸಮಾನತೆ ಹೋದಾಗ, ಬಡತನ ಇಲ್ಲದಾದಾಗ,
ಒಳ್ಳೆಯ ಗಾಳಿ- ನೀರು ಸಿಕ್ಕಾಗ ನಾವು ಖುಷಿಯಾಗಿರ್ತೀವಿ ಅನ್ನೋದು ತಪ್ಪಲ್ಲ. ಒಂದು ದೇಶದ
ಪ್ರಜೆಯಾಗಿ, ಸಮಾಜದ ಭಾಗವಾಗಿ ನಾವೆಲ್ಲರೂ ಒಟ್ಟಾಗಿ ಇದನ್ನು ಸಾಧಿಸಿದಾಗ ನಮ್ಮ ನಡುವಿನ ಶಾಂತಿ,
ಸಂತೋಷ ಹೆಚ್ಚಾಗಬಹುದು ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಜಾತಿ- ಧರ್ಮ ಮೀರಿ ಮನುಷ್ಯತ್ವವನ್ನು
ಪಾಲಿಸಿದರೆ ಇದು ಸಾಧ್ಯ.
ದೇಶ, ಪ್ರಪಂಚ
ಬಿಟ್ಟಾಕಿ, ನಾನಂತೂ ಖುಷಿಯಾಗಿರ್ಬೇಕು ಅನ್ನೋದು ಸ್ವಾರ್ಥಿಗಳು ನಾವು! ಆಯ್ತಪ್ಪಾ ನಾವಾದ್ರೂ
ಸಂತೋಷವಾಗಿರೋದು ಯಾವಾಗ? ಬರೋವಾಗ- ಹೋಗೋವಾಗ ಒಂಟಿಯಾದ್ರೂ ನಮ್ಮ ಬದುಕು ಸಂಬಂಧಗಳನ್ನು
ಆಧರಿಸಿರುತ್ತೆ. ಮನೆ, ಸಂಸಾರ, ಸ್ನೇಹಿತರು, ಹಿತೈಷಿಗಳು ಹೀಗೆ ನಾವು ಒಬ್ಬರಿಗೊಬ್ಬರು
ಬೆಸೆದುಕೊಂಡಿರ್ತೇವೆ. ಯಾರಿಗೋ ಸಹಾಯ ಮಾಡಿದಾಗ, ಯಾರೊಂದಿಗೋ ಮುಕ್ತವಾಗಿ ಮಾತನಾಡಿದಾಗ, ಅಪ್ಪ-
ಅಮ್ಮನ ಪ್ರೀತಿ ಸಿಕ್ಕಾಗ, ಮಡದಿ ಮಕ್ಕಳ ಕಾಳಜಿ ಅರ್ಥ ಮಾಡಿಕೊಂಡಾಗ ಸಂತೋಷವಾಗಿರುವುದು
ಕಷ್ಟವಲ್ಲ. ಮಾಜಿ ರಾಷ್ಟ್ರಪತಿ ಭಾರತರತ್ನ ಎ ಪಿ ಜೆ ಅಬ್ದುಲ್ ಕಲಾಂ ಹೇಳುತ್ತಾರೆ- “ನನ್ನ ತಾಯಿ
ಸಂತೋಷವಾಗಿದ್ದರೆ ಮನೆ ಖುಷಿಯಿಂದ ತುಂಬಿರುತ್ತದೆ. ಮನೆಯಲ್ಲಿ ಸಂತಸವಿದ್ದರೆ ಸಮಾಜದಲ್ಲೂ ಖುಷಿಯಿರುತ್ತದೆ.
ಸಮಾಜ ಸಂತೋಷವಾಗಿದ್ದರೆ ನನ್ನ ದೇಶ ಖುಷಿಯಾಗಿರುತ್ತದೆ,” ಎಂದು. ನಮ್ಮ ಸಂತೋಷವನ್ನು ಇನ್ನೊಬ್ಬರಲ್ಲಿ
ಕಂಡಾಗಿ ದುಃಖ ಅನ್ನೋದು ದೂರದ ಮಾತು.
ಯಾವುದೇ
ಸ್ವಾರ್ಥವಿಲ್ಲದೆ, ಯಾವ ಅಪೇಕ್ಷೆಯೂ ಇಲ್ಲದೆ ಬದುಕಿದಾಗ ನೋವುಣ್ಣುವ ಸಾಧ್ಯತೆ ಕಡಿಮೆ.
ತಾನಾಯಿತು, ತನ್ನ ಕೆಲಸವಾಯಿತು ಎಂದು ಬದುಕುವ ʼಅಲ್ಪ ಸಂತೋಷಿʼಗೆ ಸಂತೋಷವನ್ನು
ಸಿದ್ಧಿಸಿಕೊಳ್ಳುವುದು ಕಷ್ಟದ ಕೆಲಸವಲ್ಲ. ನಮ್ಮವರ ಸಂತೋಷ ಬಯಸುವುದಲ್ಲೇ ನಮ್ಮ ಸಂತೋಷ ಅಡಗಿದೆ
ಅನ್ನೋದು ಸರಿ ಅಲ್ವಾ! ʼಸಂತೋಷ ನಮ್ಮೊಳಗಿದೆʼ ಎಂಬ ಉತ್ತರದಲ್ಲಿ ಆಧ್ಯಾತ್ಮ ಇಣುಕಿದರೂ ಈ
ಮಾತು ಸತ್ಯವೂ ಹೌದು. ನಾವು ಜೀವನವನ್ನು ಹೇಗೆ ಸ್ವೀಕರಿಸುತ್ತೇವೆ, ಅರ್ಥಮಾಡಿಕೊಳ್ಳುತ್ತೇವೆ
ಮತ್ತು ಬದುಕುತ್ತೇವೆ ಎಂಬುದರಲ್ಲಿ ಸಂತೋಷ ಅಡಗಿದೆ. ಸರ್ವಸ್ವನ್ನೂ ಬಿಟ್ಟ ಯೋಗಿಯೂ
ಸಂತೋಷವಾಗಿರುತ್ತಾನೆ. ಏಕೆಂದರೆ ಆತನ ಸಂಬಂಧ ಪರಮಾತ್ಮನೊಂದಿಗೆ. ಆತನೇ ಅವನಿಗೆ ಸರ್ವಸ್ವ.
ಹೀಗಾಗಿ ಆತ ಸದಾ ಸಂತೋಷಿಯೇ!
ಇಷ್ಟಕ್ಕೂ ನಾವೇನು
ಖುಷಿಯಾಗಿರ್ಲೇಬೇಕಾ ಎಂದರೆ ಉತ್ತರ ʼಹೌದುʼ… ನಗುವನ್ನು, ಸಂತೋಷವನ್ನು ಪಸರಿಸುವವನು
ಪುಣ್ಯ ಸಂಪಾದಿಸುತ್ತಾನಂತೆ! ಪುಣ್ಯದ ಕಥೆ ಇರಲಿ, ನಮ್ಮ ಸಂತೋಷದಿಂದ ಇನ್ನೊಬ್ಬರ ಜೀವನ
ಸುಂದರವಾಗೋದಾದ್ರೆ ಖುಷಿಯಾಗಿರೋದೂ ಒಂದು ಒಳ್ಳೇ ಕೆಲ್ಸ ಅಲ್ವಾ! ಸಂತೋಷಿಯನ್ನು ನೋಡಿ ಅದೆಷ್ಟೋ
ಜನರು ತಮ್ಮ ದುಃಖ ಮರೆಯುತ್ತಾರೆ, ನೋವು ತಾಳಿಕೊಳ್ಳುತ್ತಾರೆ. ಎಂತಾ ಕಷ್ಟದಲ್ಲಿದ್ದವರಿಗೂ ಬದುಕು
ಟಾಲರೇಬಲ್ (ಸಹನಸಾಧ್ಯ) ಆಗುತ್ತದೆ. ಅದೆಂತದೋ ಧನಾತ್ಮಕ ಶಕ್ತಿ ಎಲ್ಲರಲ್ಲೂ ಹರಿಯುತ್ತದೆ !
ಸಂತೋಷವಿಲ್ಲದ ವ್ಯಕ್ತಿ
ರೋಗಿಗೆ ಸಮ ಅಥವಾ ರೋಗಿಯೇ! ಅವನಿಗೆ ಸಣ್ಣ ಸಮಸ್ಯೆಯೂ ಬೆಟ್ಟದಷ್ಟು ದೊಡ್ಡ ಕಷ್ವವೆನಿಸುತ್ತದೆ.
ಖುಷಿಯೇ ಪಡಲಾರದ ವ್ಯಕ್ತಿ ಯಾರಿಗೂ ಸ್ನೇಹಿತನಾಗಲಾರ. ಸ್ನೇಹಿತರು, ಸಂಬಂಧಿಕರು ಇಲ್ಲದ ವ್ಯಕ್ತಿ
ಮನಸ್ಸು ಬಿಚ್ಚಿ ಮಾತನಾಡಲಾರ. ದುಃಖ, ಅಸಹನೆ, ತನ್ನೊಳಗಿನ ಸಂತೋಷ…ಯಾವ ಭಾವನೆಗಳನ್ನೂ ಯಾರೊಂದಿಗೂ
ಹಂಚಿಕೊಳ್ಳಲಾಗದವನು ರೋಗಿಯೇ ಆಗುತ್ತಾನೆ. ಖರ್ಚಿಲ್ಲದೆ ಸಿಗುವ ಸಂತೋಷ ಹಂಚಿದಷ್ಟೂ
ಹೆಚ್ಚುತ್ತದೆ!
ಸಂತೋಷವಾಗಿರುವುದರಿಂದ
ಆಗುವ ಮತ್ತೊಂದು ಲಾಭವೆಂದರೆ ನಮ್ಮ ಯೋಚನಾ ಶಕ್ತಿ ಹೆಚ್ಚುವುದು. ಸಂತಸ ಮನಸ್ಸನ್ನು
ಹಗುರಾಗಿಸುತ್ತದೆ, ಮನಸ್ಸಿಗೆ ಇನ್ನಷ್ಟು ಯೋಚಿಸುವ, ಅರ್ಥಮಾಡಿಕೊಳ್ಳುವ ಶಕ್ತಿ ಸಿಗುತ್ತದೆ.
ಕ್ರಿಯಾಶೀಲ ಮನಸ್ಸು ಹೊಸತನಕ್ಕಾಗಿ ತುಡಿಯುತ್ತದೆ. ಇದಕ್ಕಾಗಿಯೇ ಸ್ವಾಮಿ ವಿವೇಕಾನಂದರು “ನಿಜವಾದ ಸಂತೋಷವೇ
ಯಶಸ್ಸಿನ ಮೂಲ” ಎಂದಿರುವುದು.
ಹೆಚ್ಚುತ್ತಿರುವ
ಪೈಪೋಟಿ, ಹೊಸ ಹೊಸ ಸವಾಲುಗಳ ನಡುವೆ ನಾವು ಸಂತೋಷವಾಗಿರಲು ಮರೆಯುತ್ತಿದ್ದೇವೆ! ಅದರ ಕಡೆಗೆ ಗಮನ
ಹರಿಸಲೂ ನಮಗೆ ಪುರುಸೊತ್ತಿಲ್ಲದಂತಾಗಿದೆ. ಆದರೆ ನಾವು ಸಂತೋಷವಾಗಿದ್ದು ನಮ್ಮ ಸುತ್ತಮುತ್ತಲಿನ
ವಾತಾವರಣವನ್ನು ಖುಷಿಯಾಗಿಡುವುದು ನಮ್ಮ ಕರ್ತವ್ಯ. ʼಇಲ್ಲʼ ಗಳನ್ನು ಮರೆತು ಇರುವುದನ್ನು ನೋಡಿ
ಖುಷಿಪಡೋಣ. ಅಷ್ಟಕ್ಕೂ ಒಮ್ಮೆ ಸಿಗುವ ಈ ಬದುಕು ಬಲು ಸುಂದರ…ಈ ಅವಕಾಶವನ್ನು ಕಳೆದುಕೊಳ್ಳದಿರೋಣ…
-ಜಿಪಿ-
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ