ಭಾಸ್ಕರ ಹೆಗಡೆಯೆಂಬ ವ್ಯಕ್ತಿ ಮತ್ತು ಶಕ್ತಿ

 

ಬಹುಶಃ ಭಾಸ್ಕರ ಹೆಗಡೆ ಸರ್‌ ಅವರ ಹೆಚ್ಚಿನ ವಿದ್ಯಾರ್ಥಿಗಳ ಮನಸ್ಸಲ್ಲಿ ವಿಶೇಷ ಸ್ಥಾನವೊಂದನ್ನು ಪಡೆದುಕೊಂಡಿದ್ದಾರೆ. ಅದು ತರಗತಿ, ಕಾಲೇಜು ಎಂಬ ಚೌಕಟ್ಟು ಎಂಬುದನ್ನು ಮೀರಿದ ಅನುಬಂಧ. ಪತ್ರಿಕೋದ್ಯಮ ಪ್ರಾಧ್ಯಾಪಕರಾಗಿ ತಮ್ಮ ಗುರುತು ಮೂಡಿಸುವುದರ ಜೊತೆಗೆ, ಒಬ್ಬ ವ್ಯಕ್ತಿಯಾಗಿಯೂ ಅವರು ಭಿನ್ನರೆನಿಸುತ್ತಾರೆ, ಆತ್ಮೀಯರೆನಿಸುತ್ತಾರೆ.

ಪಡೆದ ಶಿಕ್ಷಣ ಜೀವನದಲ್ಲಿ ಉಪಯೋಗಕ್ಕೆ ಬರಬೇಕು ಎಂಬುದೇನೋ ಸರಿ, ಅದನ್ನು ಸಾಧಿಸುವುದು ಹೇಗೆ ಎಂಬ ಯೋಚನೆ ಕಾಲೇಜು ಶಿಕ್ಷಣದಲ್ಲಿ ಉಪನ್ಯಾಸಕರನ್ನು, ಪ್ರಾಧ್ಯಾಪಕರನ್ನು ಸದಾ ಕಾಡುವ ಒಂದು ರೀತಿಯ  ಯಕ್ಷಪ್ರಶ್ನೆ. ಅದರಲ್ಲೂ ಪತ್ರಿಕೋದ್ಯಮ ಶಿಕ್ಷಣದಲ್ಲಿ ಈ ಜಿಜ್ಞಾಸೆ ಹೊಸದೇನಲ್ಲ. ಬದಲಾಗುವ ತಂತ್ರಜ್ಞಾನ, ಓದುಗರು ಹೀಗೆ ವಿವಿಧ ಕಾರಣಗಳಿಂದ ಪತ್ರಿಕೋದ್ಯಮ ಸದಾ ಬದಲಾಗುತ್ತಲೇ ಇರುತ್ತದೆ.

ಹೀಗಿರುವಾಗ ಓದುಗರ, ಕೇಳುಗರ, ನೋಡುಗರ ಬದಲಾಗುವ ನಿರೀಕ್ಷೆಗಳನ್ನು ಪೂರೈಸುವುದು ಉದ್ಯಮಕ್ಕೆ ಹೇಗೆ ಸವಾಲೋ, ಹಾಗೇ ಅಂತಹ ಪತ್ರಕರ್ತರನ್ನು ರೂಪಿಸುವುದು ಪ್ರಾಧ್ಯಾಪಕರಿಗೆ ಅದಕ್ಕಿಂತ ದೊಡ್ಡ ಸವಾಲು. ಉದ್ಯಮದ ಅಗತ್ಯವಿರುವ ಕೌಶಲ್ಯಗಳನ್ನು ಕಲಿಯದ ವಿದ್ಯಾರ್ಥಿ ಅಲ್ಲಿ ಸಲ್ಲುವುದಿಲ್ಲ ಎಂಬುದೂ ಪ್ರಾಧ್ಯಾಪಕರ ಮತ್ತೊಂದು ಚಿಂತೆ. ಇಲ್ಲಿ ನಮಗೆ ಭಾಸ್ಕರ ಸರ್‌ ವಿಭಿನ್ನವಾಗಿ ನಿಲ್ಲುತ್ತಾರೆ.

ಭವಿಷ್ಯ ಬಲ್ಲವರು

ದೃಶ್ಯ ಮಾಧ್ಯಮ ಬಹುಜನರ ಗಮನ ಸೆಳೆಯಲು ಆರಂಭಿಸಿದ ಎಂಬತ್ತು ತೊಂಭತ್ತರ ದಶಕದಲ್ಲಿ ಅಪ್‌ಡೇಟ್‌ ಆಗುವುದು ಅಳಿವು- ಉಳಿವಿನ ಪ್ರಶ್ನೆ ಆಗಿರದಿದ್ದರೂ ಅಂತದ್ದೊಂದು ಸವಾಲಿಗೆ ಸರ್‌ ಉತ್ತರ ಕಂಡುಕೊಂಡಿದ್ದರು. ಪತ್ರಿಕೋದ್ಯಮ ಕಲಿಕೆಗೆ ಬೇಕಾಗುವ ಅಗತ್ಯಗಳ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲದಿದ್ದ ಸಮಯವದು ಎಂಬುದು ಗಮನಾರ್ಹ.

ಕ್ಲಾಸ್‌ ಎಂಬ ವಿಸ್ಮಯ

ಭಾಸ್ಕರ ಸರ್‌ ಅವರ ಕ್ಲಾಸ್‌ ಬರೀ ಸಿಲೆಬಸ್‌ಗೆ ಎಂದೂ ಸೀಮಿತವಾಗಿರಲಿಲ್ಲ. ಅದೊಂದು ವೃತ್ತಿಪರ ಪತ್ರಿಕೋದ್ಯಮಕ್ಕೆ ಹೋಗುವವರಿಗೆ ಬೇಕಾದ ತಯಾರಿ, ತರಬೇತಿಯೆನ್ನಬಹುದು. ಆಗಷ್ಟೇ ಪತ್ರಿಕೋದ್ಯಮಕ್ಕೆ ವಿಶೇಷ ಆಸಕ್ತಿಯೂ ಇಲ್ಲದೆ, ಮಾಹಿತಿಯೂ ಇಲ್ಲದೆ ಬರುವವರಿಗೆ ಕ್ಲಾಸ್‌ ಎಂಬುದರ ಹಿಂದಿನ ಸರ್‌ ಕಲ್ಪನೆ ಆಗೇನೂ ಅರ್ಥವಾಗುತ್ತಿರಲಿಲ್ಲ. ಆದರೆ ವಿದ್ಯಾರ್ಥಿಗಳು ತಮಗೇ ಗೊತ್ತಿಲ್ಲದೆ ಕೆಲವು ಕ್ಲಾಸ್‌ಗಳಲ್ಲೇ ನಿಜಾರ್ಥದಲ್ಲಿ ʼಜರ್ನಲಿಸಂ ಸ್ಟುಡೆಂಟ್ಸ್‌ʼ ಆಗಿಬಿಡುತ್ತಿದ್ದರು.

ಅವರದ್ದು ಅಸಂಪ್ರದಾಯಕ, ಅನೌಪಚಾರಿಕ ಕಲಿಕಾ ವಿಧಾನ. ಒಬ್ಬರೇ ವಿಭಾಗವನ್ನು ಮುನ್ನಡೆಸುವಾಗಲೂ, ತುಸು ಹೆಚ್ಚೇ ಕೆಲಸ ಬಯಸುತ್ತಿದ್ದ ಅವರ ಆ ಶೈಲಿಯನ್ನು ಅವರು ಯಾವತ್ತೂ ಬಿಡಲಿಲ್ಲ. ಸರ್‌ ಬಯಸುತ್ತಿದ್ದುದು ಒಂದೇ, ಅದು ವಿದ್ಯಾರ್ಥಿಗಳ ಕ್ರಿಯಾಶೀಲತೆ, ಅವರು ಸದಾ ಎಚ್ಚರವಾಗಿರಬೇಕು ಎಂದು.

ಅವರ ಪ್ರತಿಯೊಂದು ಕ್ಲಾಸ್‌ ಒಂದು ಹೊಸ ಅನುಭವ ನೀಡುತ್ತಿತ್ತು. ಆರಂಭದಲ್ಲೇ ದಿನ ಪತ್ರಿಕೆ ಓದಿಸುವುದು, ಯಾವುದಾದರೊಂದು ವಿಷಯದ ಬಗ್ಗೆ ವಿದ್ಯಾರ್ಥಿಗಳಿಗೆ ಮಾತನಾಡಲು ಹೇಳುವುದು, ಸಾಧನೆಗಳಿಗೆ ವಿಶೇಷ ಅಭಿನಂದನೆಯ ಮೂಲಕ ಪ್ರೋತ್ಸಾಹ ತುಂಬುವುದು… ಹೀಗೆ ಪತ್ರಿಕೋದ್ಯಮದ ಪ್ರಾಯೋಗಿಕ ಕಲಿಕೆ ಗೊತ್ತೇ ಇಲ್ಲದಂತೆ ಆರಂಭವಾಗಿಬಿಡುತ್ತಿತ್ತು. ಪತ್ರಕರ್ತನಿಗೆ ಬೇಕಾದ ಧೈರ್ಯ, ಸಂವಹನ ಕೌಶಲ್ಯ, ದಿನಪತ್ರಿಕೆ ತಪ್ಪದೇ ಓದುವ ಹವ್ಯಾಸ… ಇವೆಲ್ಲವೂ ಅವರ ವಿದ್ಯಾರ್ಥಿ ಪತ್ರಕರ್ತನಾಗಬಯಸಿದರೆ ಒಂದು ಅಡಿಪಾಯ ಹಾಕಿಬಿಡುತ್ತಿದ್ದವು.

ಹೊಸತನಕ್ಕೆ ಮಣೆಹಾಕಿದ ಸರ್‌

ಪತ್ರಿಕೋದ್ಯಮ ವಿಭಾಗವನ್ನು ಅವರು ಏಕಾಂಗಿಯಾಗಿ  ಮುನ್ನಡೆಸುತ್ತಿದ್ದ ದಿನಗಳವು. ಆಗಲೇ ಅವರು ತರಗತಿಗಳಲ್ಲಿ ನಡೆಸುತ್ತಿದ್ದ ಗುಂಪು ಚರ್ಚೆಗಳೆಷ್ಟೋ. ವಾಲ್‌ ಮ್ಯಾಗಜೀನ್‌ಗಳು, ಚಿಗುರು… ಅದೆಷ್ಟೋ ವಿದ್ಯಾರ್ಥಿಗಳಿಗೆ ಬರವಣಿಗೆಯ ಮೊದಲಾಕ್ಷರಗಳನ್ನು ಕಲಿಸಿವೆ. ಆ ಕಾಲಕ್ಕೆ ಹೊಸ ಮೈಲಿಗಲ್ಲಾಗಿದ್ದ  ʼನಮ್ಮೂರ ವಾರ್ತೆʼ ವಾರ್ತಾ ಸಂಚಿಕೆ ಬದಲಾವಣೆಗೆ ನಿಧಾನವಾಗಿ ವಿಭಾಗವನ್ನು, ವಿದ್ಯಾರ್ಥಿಗಳನ್ನು ಸಿದ್ಧಪಡಿಸಿದ್ದವು. ಇದರಿಂದ ತೊಂಭತ್ತರ ದಶಕದಲ್ಲಿ ಹೊಸ ಚಾನೆಲ್‌ಗಳು ಆರಂಭವಾದಾಗ ಎಸ್‌ಡಿಎಂ ವಿದ್ಯಾರ್ಥಿಗಳು ಅವಕಾಶಗಳನ್ನು ಬಾಚಿಕೊಂಡರು.

ಡಾ. ಯಶೋವರ್ಮ- ಭಾಸ್ಕರ ಹೆಗಡೆ ಜಂಟಿ ಯಾನ

ಎಲ್ಲರಿಗಿಂತಲೂ ನಮ್ಮ ವಿದ್ಯಾರ್ಥಿಗಳು ಒಂದು ಹೆಜ್ಜೆ ಮುಂದಿರಬೇಕು ಎಂದು ಬಯಸುತ್ತಿದ್ದ ಅಂದಿನ ಪ್ರಾಂಶುಪಾಲ ದಿವಂಗತ ಡಾ.ಯಶೋವರ್ಮ ಸರ್‌  ಹಾಗೂ ಭಾಸ್ಕರ ಸರ್‌ ಅವರ ಯೋಚನೆಗಳಲ್ಲಿ ಸಾಮ್ಯತೆಯಿತ್ತು. ಇದರಿಂದ ಉಜಿರೆಯ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿಗಳು ಅಂದಿನಿಂದ ಇಂದಿನವರೆಗೂ ಒಂದು ವಿಶೇಷ ಮಹತ್ವ ಪಡೆಯುತ್ತಿದ್ದಾರೆ.  ಇವರಿಬ್ಬರೂ ತಮ್ಮ ವಿದ್ಯಾರ್ಥಿಗಳ ಸಾಧನೆಯನ್ನು ಸಂಭ್ರಮಿಸುವ ಗುಣ ಹೊಂದಿದ್ದರು ಎಂಬುದು ಗಮನಾರ್ಹ. ಸಂಸ್ಥೆಗೋಸ್ಕರ ತಮ್ಮನ್ನು ಮುಡಿಪಾಗಿಟ್ಟಿದ್ದರು.

ಎಂದೆಂದಿಗೂ ಭಾಸ್ಕರ ಸರ್‌ ವಿದ್ಯಾರ್ಥಿಗಳೇ!

ಮತ್ತೊಂದು ಮರೆಯಲು ಸಾಧ್ಯವೇ ಇಲ್ಲದ ಸಂಗತಿಯೆಂದರೆ, ಅವರಿಂದ ಪತ್ರಿಕೋದ್ಯಮ ಕಲಿತು ಎಲ್ಲೋ ಉದ್ಯೋಗದಲ್ಲಿರುವ ಹಿಂದಿನ ವಿದ್ಯಾರ್ಥಿಗಳನ್ನು ನೆನಪಿಸಿಕೊಳ್ಳುತ್ತಿದ್ದ ರೀತಿ. ಅವರ ಸಾಧನೆಯನ್ನು ಬಣ್ಣಿಸಿ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುತ್ತಿದ್ದರು. ಅಂತವರು ವಿಭಾಗಕ್ಕೆ ಭೇಟಿ ನೀಡಿದರಂತೂ ಅವರನ್ನೂ ಸೀದಾ ತರಗತಿಗೇ ಕರೆಸಿಬಿಡುತ್ತಿದ್ದರು. ಅವರ ಅನುಭವಗಳನ್ನು  ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಲು ತರಗತಿಯೇ ವೇದಿಕೆ!

ಇಷ್ಟೇ ಅಲ್ಲ, ಭಾಸ್ಕರ ಸರ್‌, ತಮ್ಮ ವಿದ್ಯಾರ್ಥಿಗಳು ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬ ಮಾಹಿತಿಗಳನ್ನೆಲ್ಲಾ ಕೇಳಿ ತಿಳಿದುಕೊಳ್ಳುವವರು. ಅವರಿಗೇನಾದರೂ ಸಹಾಯ ಬೇಕಾದರೆ ಕೇಳದೆಯೇ ಮಾಡುವವರು. ಅದನ್ನು ಅವರು ಎಲ್ಲಿಯೂ ಹೇಳಿಕೊಳ್ಳುತ್ತಿರಲಿಲ್ಲ. ಅದರಲ್ಲೂ ಅಪರೂಪಕ್ಕೆ ವಿಭಾಗಕ್ಕೆ ಭೇಟಿ ನೀಡುವ ತಮ್ಮ ವಿದ್ಯಾರ್ಥಿಗಳನ್ನೂ ಅವರು ಹೆಸರು ಹಿಡಿದು ಕರೆಯುತ್ತಿದ್ದರು. ಅವರ ಮಾತು ವಿದ್ಯಾರ್ಥಿಗಳಿಗೆ ತಮ್ಮ ಮನೆಗೇ ಮರಳಿ ಬಂದ ಅನುಭವ ನೀಡುತ್ತಿತ್ತು. 

ಹೀಗೆ ಹಿಂದೆಲ್ಲಾ ಅರ್ಥವಾಗದಿದ್ದ ಸರ್‌, ಈಗ ಅರ್ಥವಾಗುತ್ತಿದ್ದಾರೆ. ಅರ್ಥವಾಗುತ್ತಲೇ ಇದ್ದಾರೆ. ವ್ಯಕ್ತಿಯಲ್ಲ ಶಕ್ತಿ ಎಂಬ ಮಾತಿನ ಅರ್ಥವನ್ನು ಭಾಸ್ಕರ ಹೆಗಡೆ ಸರ್‌ ತಮ್ಮ ಕೃತಿಯ ಮೂಲಕ ತೋರಿಸಿದ್ದಾರೆ. ತಮ್ಮ ವಿದ್ಯಾರ್ಥಿಗಳಿಗೆ, ಅದರಲ್ಲೂ ಪತ್ರಕರ್ತರಿಗೆ, ಮೇಷ್ಟ್ರುಗಳಿಗೆ ಸರ್‌ ಮತ್ತು ಅವರ ತರಗತಿಗಳು ಹೆಚ್ಚೇ ನೆನಪಾಗುತ್ತವೆ. ಅಂದಹಾಗೆ, ಅವರೊಂದು ಮಾತು ಹೇಳುತ್ತಿದ್ದರು… ತಾಳ್ಮೆ ನನ್ನ ದೌರ್ಬಲ್ಯವಲ್ಲ ಎಂದು. ಹೌದು, ಅದೇ ಅವರ ಯಶಸ್ಸಿನ ಗುಟ್ಟಿರಬಹುದು.

ಗುರುಪ್ರಸಾದ್‌ ಟಿ.ಎನ್‌


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕೊಟ್ಟಷ್ಟೂ ಹೆಚ್ಚುವ ಸಂತೋಷ!

ಎಮೋಜಿ : ಸಂಸ್ಕೃತಿಗಳಾಚೆಗೆ ಹೃದಯಗಳನ್ನು ಬೆಸೆಯುವ ಸಾರ್ವತ್ರಿಕ ಭಾಷೆ

ಬೇಸರದಲ್ಲಿ ಬರೆದದ್ದು…ಹೌದಾ?!