ನಗುವ ನಯನ ಮಧುರ ಮೌನ, ಮಿಡಿವ ಹೃದಯ ಇರೆ ಮಾತೇಕೆ…
ಯಾಕೋ ಮಾತು ಮೌನವಾಗಿದೆ. ಮೌನವೇ ಮಧುರವಾಗಿದೆ
ಜೊತೆಗಿರುವ ಮಿಡಿವ ಹೃದಯ ಸದಾ ಜೊತೆಗಿರಲಿ ಅಷ್ಟು ಸಾಕೆನಿಸಿದೆ…
ಹತ್ತು ಸಂವತ್ಸರಗಳು
ಕಳೆದಿವೆ. ಸಹಜವಾಗೇ ಕಲ್ಲು ಮುಳ್ಳುಗಳ ಹಾದಿಯಲ್ಲಿ ನಡೆದು ಬಂದಿದ್ದೇನೆ…ಆದರೆ ನಾನು ಯಾವತ್ತೂ ಒಂಟಿಯಾಗಿಲ್ಲ.
ಆ ಭಾವನೆ ಒಂದು ಕ್ಷಣವೂ ಮನಸ್ಸಿನಲ್ಲಿ ಸುಳಿಯಲೂ ಆಕೆ ಬಿಟ್ಟಿಲ್ಲ. ನನ್ನನ್ನೇ ನಂಬಿ ಬಂದಾಕೆ, ತನ್ನ
ಬೇಕು ಬೇಡಗಳನ್ನು ಕಡೆಗಣಿಸಿ ಅನುಕ್ಷಣವೂ ನನಗಾಗಿ ಬದುಕಿದ್ದಾಳೆ ಎಂದರೆ ಅದು ಸಾಮಾನ್ಯ ಸಂಗತಿಯಲ್ಲ.
ನನಗೆ ಬದುಕು ಬಲು ಸುಂದರ ಅನಿಸುವಂತೆ ಮಾಡಿದ್ದು ಆಕೆಯೇ.
ಹಾಗೆಂದು ನಾನು
ಮೊದಲಿಂದಲೂ ಅದೃಷ್ಟವಂತನೇ. ಮನೆಯಲ್ಲಿ ಕಿರಿಯವನು. ಅಪ್ಪ- ಅಮ್ಮನ ಪ್ರೀತಿಯ ಜೊತೆಗೆ ಅಣ್ಣನ ಆರೈಕೆ
ಬೋನಸ್. ಆದರೆ ಬದುಕಲ್ಲಿ ತಿರುವುಗಳು ಸಹಜ. ಸುಖದ ಬಳಿಕ ಕಷ್ಟ ಕಾಯುತ್ತಿರುತ್ತದೆ ಎಂಬುದಕ್ಕೆ ನಿದರ್ಶನಗಳು
ಎಷ್ಟಿಲ್ಲ! ಆದರೆ ಸೃಷ್ಟಿಕರ್ತ ನನ್ನ ಹಣೆಬರಹವನ್ನು ವಿಶೇಷ ಕಾಳಜಿಯಿಂದ ಬರೆದಿದ್ದ ಅನಿಸುತ್ತದೆ.
ʼಋಣಾನುಬಂಧʼ ಎಂಬ ಮಾತಿಗೆ ನಮಗಿಂತ ಬೇರೆ ಉದಾಹರಣೆ ಬೇಡ…!
ʼಪ್ರೀತಿಯೊಂದು ಮಾಯೆ…ʼ ಎಂಬುದು ಸತ್ಯ. ನಾವಿಬ್ಬರೂ ಭೇಟಿಯಾಗಿದ್ದೇ ಒಂದು ಅಚ್ಚರಿ. ಸ್ನೇಹಿತರಾಗಿದ್ದ ನಮ್ಮಲ್ಲಿ ಪ್ರೀತಿಯೆಲ್ಲಿಂದ ಮೊಳಕೆಯೊಡೆಯಿತು, ಅದ್ಯಾವ ರೀತಿಯ ಆಕರ್ಷಣೆ... ಯಾವ ಧೈರ್ಯದಲ್ಲಿ ನಾನದನ್ನು ವ್ಯಕ್ತಪಡಿಸಿದೆನೋ…ನಂತರ ಆ ಕಾಯುವಿಕೆ… ದೇವರಿಗೇ ಪ್ರೀತಿ! ಇದೆಲ್ಲಾ ಆತನೇ ಆಡಿಸಿದ ಆಟವೇ? ಹಾಗಿದ್ದರೆ ಅವನೆಷ್ಟು ಕರುಣಾಮಯಿ, ನಾನೆಷ್ಟು ಅದೃಷ್ಟವಂತ. ದೊಡ್ಡದೊಂದು ಪಯಣಕ್ಕೆ ಅದೊಂದು ಮುನ್ನುಡಿ ಆಗಿತ್ತಷ್ಟೇ.... ಮುನ್ನುಡಿಯಷ್ಟೇ ಅಲ್ಲ, ನಮ್ಮ ಬಾಳ ಪಯಣದ ಪ್ರತಿ ಪುಟವೂ ನೆನಪಿನಲ್ಲಿಡುವಂತಿದೆ…
ಕಷ್ಟಗಳು ಪ್ರೀತಿಯನ್ನು
ಪರೀಕ್ಷೆಗೆ ಒಡ್ಡುತ್ತವೆ. ಅನಿರೀಕ್ಷಿತ ಘಟನೆಗಳು, ಸೋಲುಗಳು ಭಾವನೆಗಳನ್ನು ಕದಡುತ್ತವೆ. ಆದರೆ ಎಲ್ಲವನ್ನೂ
ಮೀರಿ ಜೊತೆಗೆ ನಡೆದಿದ್ದೇವೆ. ಪರೀಕ್ಷೆ ಗೆದ್ದಿದ್ದೇವೆ. ಆಕೆಗೂ ಹೀಗೇ ಅನಿಸೀತೇ….ಗೊತ್ತಿಲ್ಲ. ಆಕೆಯದು
ನಗುವ ನಯನ ಮಧುರ ಮೌನ, ಮಿಡಿವ ಹೃದಯ… ಅದರೊಳಗೆ
ನೋವೂ ಇದ್ದೀತೂ. ʼಕ್ಷಮಿಸುʼ ಎನ್ನುವ ಹಂತ ದಾಟಿ ಬಂದಿದ್ದೇವೆ. ಮಾತೆಂಬ ಔಪಚಾರಿಕತೆ ಈಗ ಬೇಕಿಲ್ಲ.
ಇದುವೇ ನಿಜವಾದ ಪ್ರೀತಿಯಲ್ಲವೇ….
ನಾಳೆಯೆಂಬುದು
ತಿಳಿದಿಲ್ಲ. ನಿರೀಕ್ಷೆಗಳು ಹೆಚ್ಚಿಲ್ಲ. ಆದರೆ ಇಷ್ಟು ದೂರವನ್ನು ಸಲೀಸಾಗಿ ಸಾಗಿದವರಿಗೆ ಮುಂದಿನ
ಪಯಣ ಕಷ್ಟವಾಗದು ಎಂಬ ಭರವಸೆಯಿದೆ. ಮಕ್ಕಳು ಈ ಪ್ರಯಾಣವನ್ನು ಸುಂದರವಾಗಿಸಿದ್ದಾರೆ. ಹತ್ತು ಸಂವತ್ಸರ
ಜೊತೆಗೆ ಸಾಗಿದ ನಮಗೆ ಹೆಮ್ಮೆಯಿದೆ. ಪ್ರೀತಿ ಎಲ್ಲಾ ನೋವುಗಳನ್ನು ಮರೆಸಿದೆ. ಮುಂದೆಯೂ ಮರೆಸುತ್ತದೆ.
ಈ ಮಿಡಿವ ಹೃದಯ ಜೊತೆಯಿರುವವರೆಗೂ ಬದುಕು ಬಲು ಸುಂದರ…
ಜೊತೆಯಾಗಿ ನಡೆವೆ ನಾ ಮಳೆಯಲು
ಬಿಡದಂತೆ ಹಿಡಿವೆ ನಿನ ಕೈಯನು…
ಸದಾ ನಿನ್ನವನು…💓
ತುಂಬಾ ಚೆನ್ನಾಗಿದೆ.
ಪ್ರತ್ಯುತ್ತರಅಳಿಸಿ