ಭವಿಷ್ಯದ ಕರಿಛಾಯೆ ಮತ್ತು ಶಿಕ್ಷಕನೆಂಬ ಆಶಾಕಿರಣ


 


ಅತ್ಯುತ್ತಮ ಶಿಕ್ಷಕ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುವವನಲ್ಲ ಬದಲಾಗಿ ಉತ್ತರ ಕಂಡುಕೊಳ್ಳಬೇಕೆಂಬ ಹಂಬಲದ ಕಿಡಿಯನ್ನು ನಿಮ್ಮೊಳಗೆ ಹೊತ್ತಿಸುವವನು…. ಈ ಮಾತು ಶಿಕ್ಷಕನೆಂದರೆ ಯಾರು ಅಥವಾ ಶಿಕ್ಷಕ ಹೇಗಿರಬೇಕು ಎಂಬುದನ್ನು ಅದೆಷ್ಟು ಸೂಚ್ಯವಾಗಿ ಹೇಳುತ್ತದೆ,  ಅಲ್ಲವೇ…  

ಮಾಜಿ ರಾಷ್ಟ್ರಪತಿ, ‘ಭಾರತರತ್ನʼ ದಿವಂಗತ ಡಾ. ಎಪಿಜೆ ಅಬ್ದುಲ್‌ ಕಲಾಂ ಅವರು ತಮ್ಮ ಆತ್ಮಚರಿತ್ರೆಯಲ್ಲಿ ಗುರುಗಳಾದ ಪ್ರೊ. ಶ್ರೀನಿವಾಸನ್‌ ಅವರನ್ನು ವಿಶೇಷವಾಗಿ ಹೆಸರಿಸುತ್ತಾರೆ. ಮದ್ರಾಸು ಎಂಐಟಿಯಲ್ಲಿ ಕಲಾಂ ಮತ್ತವರ ತಂಡಕ್ಕೆ ಆಕಾಶಕಾಯ (ಏರೋಡೈನಾಮಿಕ್ಸ್‌) ವಿನ್ಯಾಸ ರಚಿಸಲು ಹೇಳಿದ್ದ ಪ್ರೊಫೆಸರ್‌, ಕಷ್ಟಪಟ್ಟು ತಯಾರಿಸಿದ ವಿನ್ಯಾಸವನ್ನು ನೋಡಿದ ಕೂಡಲೆ ʼಕೆಟ್ಟದಾಗಿದೆ, ನಿನ್ನಿಂದ ಇದನ್ನು ನಿರೀಕ್ಷಿಸಿರಲಿಲ್ಲʼ ಎಂದುಬಿಟ್ಟರಂತೆ. ಅಲ್ಲದೆ ಮೂರು ದಿನದಲ್ಲಿ  ಮರುವಿನ್ಯಾಸ ರಚಿಸಿ ಒಪ್ಪಿಸಲು ಕಟ್ಟಾಜ್ಞೆ ಹೊರಡಿಸುತ್ತಾರೆ. ಪ್ರಾಧ್ಯಾಪಕರಿಂದ ಯಾವತ್ತು ಇಂತಹ ಮಾತು ಕೇಳದ ಕಲಾಂ ಕಂಗಾಲಾದರು. ಆದರೆ ಹಗಲಿರುಳು ಕೆಲಸ ಮಾಡಿ ತಯಾರಿಸಿದ ವಿನ್ಯಾಸವನ್ನು ನೋಡಿ ಬಾಯ್ತುಂಬ ಹೊಗಳಿದ ಗುರುಗಳು, ʼನಿನಗೆ ನನ್ನಿಂದ ಬೇಸರವಾಗುತ್ತದೆ ಎಂದು ತಿಳಿದಿತ್ತು. ಆದರೆ ನೀನು ಅದಕ್ಕಿಂತಲೂ ಉತ್ತಮ ವಿನ್ಯಾಸ ಸಿದ್ಧಪಡಿಸುತ್ತೀಯ ಎಂಬ ವಿಶ್ವಾಸ ನನಗಿತ್ತು,ʼ ಎಂದರಂತೆ!

ಪ್ರತಿಯೊಂದು ಯಶೋಗಾಥೆಯ ಹಿಂದೆಯೂ ಶಿಕ್ಷಕನೊಬ್ಬನ ನೆರಳು ಕಾಣಸಿಗುತ್ತದೆ. ಹೌದು, ಹೆತ್ತವರಷ್ಟೇ ಅಥವಾ ಅವರಿಗಿಂತಲೂ ಮಿಗಿಲಾಗಿ ವ್ಯಕ್ತಿಯೊಬ್ಬನ ಜೀವನದ ಮೇಲೆ ಪ್ರಭಾವ ಬೀರುವವನು ಶಿಕ್ಷಕ. ಆ ಅಧಿಕಾರ ಇರುವುದು ಅವನಿಗೆ ಮಾತ್ರ. ಶಾಲೆಗೆ ಹೋಗುವ ಮಗುವಿನ ಪುಟ್ಟ ಪ್ರಪಂಚದಲ್ಲಿ ದೊಡ್ಡ ಸ್ಥಾನ ಪಡೆದುಕೊಳ್ಳುವವನು ಶಿಕ್ಷಕ. ಆತ/ಆಕೆ ಹೇಳಿದ್ದೇ ಪರಮಸತ್ಯ ಎಂದು ನಂಬುತ್ತದೆ ಮಗು. ಇಲ್ಲಿಂದ ಆರಂಭವಾಗಿ ಜೀವನ ಪ್ರತಿ ಹಂತದಲ್ಲೂ ಎಲ್ಲರ ಜೀವನದಲ್ಲೂ ಒಬ್ಬ ಶಿಕ್ಷಕನ ಮಾರ್ಗದರ್ಶನ ಇದ್ದೇ ಇರುತ್ತದೆ.

ಶಿಕ್ಷಕ ವೃತ್ತಿ, ಬೇರೆ ವೃತ್ತಿಗಳಂತಲ್ಲ. ಇದು ಬರೀ ಒಂದು ವೃತ್ತಿಯಲ್ಲ, ಬದಲಾಗಿ ಒಂದು ದೀರ್ಘಕಾಲೀನ ಸಂಬಂಧ. ಶಿಕ್ಷಕನ ಪಾಲಿಗೆ ಒಮ್ಮೆ ವಿದ್ಯಾರ್ಥಿಯಾದವನು ಜೀವನದುದ್ದಕ್ಕೂ ತನ್ನ ವಿದ್ಯಾರ್ಥಿಯಾಗಿಯಾಗಿಯೇ ಇರುತ್ತಾನೆ. ತರಗತಿಯಲ್ಲಿ ಹೇಳಿಕೊಡುವ ಪಾಠ ಇಲ್ಲಿ ಒಂದು ಸಂಬಂಧದ ಬುನಾದಿಯಷ್ಟೇ. ತನ್ನ ವಿದ್ಯಾರ್ಥಿಯ ಸಾಧನೆ ಅಧ್ಯಾಪಕನಿಗೆ ಸದಾ ಹೆಮ್ಮೆ ತರುತ್ತದೆ. ತನ್ನ ʼವಿದ್ಯಾರ್ಥಿʼಯ ವೈಯಕ್ತಿಕ ಜೀವನದ ಬಗ್ಗೆಯೂ ಶಿಕ್ಷಕನಿಗೆ ಕಾಳಜಿ ಇದ್ದೇ ಇರುತ್ತದೆ. ನೀವು ಓದಿ, ಕೆಲಸ ಗಿಟ್ಟಿಸಿಕೊಂಡು ಜೀವನದಲ್ಲಿ ಒಂದು ಹಂತ ತಲುಪಿದ ಬಳಿಕ, ಇಳಿವಯಸ್ಸಿನಲ್ಲಿರುವ ನಿಮ್ಮ ಶಿಕ್ಷಕರ ಮುಂದೆ ನಿಂತು ʼನಾನು ನಿಮ್ಮ ವಿದ್ಯಾರ್ಥಿʼ ಎಂದು ಪರಿಚಯಿಸಿಕೊಂಡು ನೋಡಿ. ಅವರ ಮುಖದಲ್ಲಿ ಮೂಡುವ ಹೆಮ್ಮೆಯ ನಗು, ಕಳೆ ಅನನ್ಯ.

ಸದಾ ಕಾಲ ಭವಿಷ್ಯದ ಚಿಂತೆ ಇದ್ದೇ ಇರುತ್ತದೆ. ಆದರೆ ಈಗ ಈ ಚಿಂತೆ ಹೆಚ್ಚಿರುವುದಕ್ಕೆ ಬಲವಾದ ಕಾರಣಗಳಿವೆ. ಸಂಸ್ಕಾರವೆಂಬ ಅಡಿಪಾಯದ ಮೇಲೆ ಬೆಳೆಯುತ್ತಿದ್ದ ನಮ್ಮ ಜೀವನಕ್ಕೆ ಒಂದು ರೂಪುರೇಷೆಯಿತ್ತು. ನಮ್ಮ ಮಿತಿ, ಚೌಕಟ್ಟುಗಳು ನಮಗೆ ಚೆನ್ನಾಗಿಯೇ ತಿಳಿದಿದ್ದವು. ಆದರೆ ಈಗ ಸಹಜೀವನ ಸಾಧ್ಯವಾಗದಿರುವುದಕ್ಕೆ ನಾವು ಸಂಸ್ಕಾರವನ್ನು ಕಳೆದುಕೊಳ್ಳುತ್ತಿರುವುದೂ ಒಂದು ಕಾರಣ. ಮನೆಯಲ್ಲಿ ಮಗುವಿಗೆ ಸಂಸ್ಕಾರದ ಪಾಠ ಸಿಗದಿದ್ದಾಗ ಇದನ್ನು ಉಳಿಸುವುದು, ಬೆಳೆಸುವುದು ಹೇಗೆ ಎಂಬ ಪ್ರಶ್ನೆ ದೊರೆಯುವ ಉತ್ತರ ʼಶಿಕ್ಷಕʼ ಎಂಬುದು. ಉತ್ತರ ಎಂಬುದಕ್ಕಿಂತ ಅದೊಂದು ಆಶಾವಾದ ಎಂದೇ ಹೇಳಬಹುದು!

ಇದಕ್ಕಿರುವ ಬಲವಾದ ಕಾರಣವೆಂದರೆ ಶಿಕ್ಷಕ ತನ್ನ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಸಮಾಜಕ್ಕೂ ಬುದ್ಧಿ ಹೇಳುವ ನೈತಿಕ ಅಧಿಕಾರವಿದೆ. ಅದರಲ್ಲೂ ಗ್ರಾಮೀಣ ಭಾರತದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು, ಗೊಂದಲಗಳನ್ನು ಪರಿಹರಿಸಿಕೊಳ್ಳಲು ಆ ಊರಿನ ಶಿಕ್ಷಕರ ಮೊರೆಹೋಗುವ ವಾಡಿಕೆ ಈಗಲೂ ಮುಂದುವರಿದಿದೆ. ಜಾತಿ, ಧರ್ಮ, ಭಾಷೆ… ಹೀಗೆ ಸಮಾಜದ ವಿಘಟನೆಯಾಗುತ್ತಿರುವ ಸಂದರ್ಭದಲ್ಲಿ ಎಲ್ಲರನ್ನೂ ಹಿಡಿದಿಡುವ, ಮಕ್ಕಳ ಮನಸ್ಸಿನಲ್ಲಿ ಸೂಕ್ತ ವಿಚಾರಗಳನ್ನು ತುಂಬುವುದು ಶಿಕ್ಷಕನಿಂದ ಮಾತ್ರ ಸಾಧ್ಯ.

ಭಾರತದ ಎರಡನೆಯ ರಾಷ್ಟ್ರಪತಿ ಸರ್ವೆಪಲ್ಲಿ ರಾಧಾಕೃಷ್ಣನ್ ಅವರು ತಮ್ಮ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲು ಕರೆ ಕೊಟ್ಟಿರುವುದು ಶಿಕ್ಷಕರ ಮೇಲಿನ ಅವರ ನಂಬಿಕೆ, ಗೌರವ, ಅಪಾರ ನಿರೀಕ್ಷೆಯನ್ನು ತೋರಿಸುತ್ತದೆ. ಹೀಗಿರುವಾಗ ಶಿಕ್ಷಕ ತನ್ನ ವೃತ್ತಿಯನ್ನು ಅತ್ಯಂತ ಶ್ರದ್ಧೆಯಿಂದ, ನೈತಿಕ ಮೌಲ್ಯಗಳನ್ನು ಅರಿತುಕೊಂಡು ಮಾಡುವುದು ತುರ್ತು ಅಗತ್ಯವಾಗಿದೆ. ಶಿಕ್ಷಕರೂ ಕೆಲವೊಮ್ಮೆ ಅನೈತಿಕ ಚಟುವಟಿಕೆಗಳಲ್ಲಿ ಭಾಗಿಯಾಗುವುದು ಮತ್ತು ಸಮಾಜವಿರೋಧಿ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದು ಕಂಡುಬರುತ್ತದೆ. ಇಂತಹ ಬೆಳವಣಿಗೆಗಳಿಗೆ ಕಡಿವಾಣ ಹಾಕುವ ಕೆಲಸ ಶಿಕ್ಷಕರಿಂದಲೇ ಆರಂಭವಾಗಬೇಕು, ಹೊರತು ಬೇರೆಯವರಿಂದಲ್ಲ. ಆತನಿಗೇ ಸಮಾಜ ಪಾಠ ಹೇಳಬೇಕಾದ ಪರಿಸ್ಥಿತಿ ಬಂದರೆ ಅದು ನಮ್ಮ ದೌರ್ಭಾಗ್ಯ. ಹೀಗಾಗಿ ವೃತ್ತಿಧರ್ಮವನ್ನು ಕಾಪಾಡಿಕೊಳ್ಳುವುದು ಶಿಕ್ಷಕನ ಜವಾಬ್ದಾರಿಯಾಗಿದೆ. ಆತನಿಗೆ ಗೌರವ ತಾನಾಗಿಯೇ ಬರಬೇಕೇ ಹೊರತು, ಅದನ್ನಾತ ಕೇಳಿ ಪಡೆದುಕೊಳ್ಳಬಾರದು.

ಹಾಗಾದರೆ, ಶಿಕ್ಷಕ ಎಂದರೆ ಶಿಕ್ಷಕ ವೃತ್ತಿಯಲ್ಲೇ ಇರಬೇಕೆ? ಹಾಗೇನು ಇಲ್ಲ. ಅಬ್ದುಲ್ ಕಲಾಂ ಅವರು ತಮ್ಮ ಆತ್ಮಚರಿತ್ರೆಯಲ್ಲಿ ಆಹ್ಮದ್ ಜಲಾಲುದ್ದೀನ್ ಎಂಬ ವ್ಯಕ್ತಿಯನ್ನು ತಮ್ಮ ಜೀವನದ ಮೊದಲ ಮಾರ್ಗದರ್ಶಕ ಎಂದು ಬಣ್ಣಿಸುತ್ತಾರೆ. ಅಷ್ಟೇ ಅಲ್ಲದೆ ತನ್ನೊಳಗಿನ ಚೈತನ್ಯವನ್ನು ಗುರುತಿಸಿ ಬೆಳೆಸಿದವನು, ಜೀವನದಲ್ಲಿ ಪ್ರತಿಯೊಂದು ಹಂತದಲ್ಲೂ ಜೊತೆಗಿದ್ದು ಮಾರ್ಗದರ್ಶನ ಮಾಡಿದ, ಸಮಸ್ಯೆಗಳನ್ನು ಪರಿಹರಿಸಿದ, ನನ್ನಲ್ಲಿ ಆತ್ಮವಿಶ್ವಾಸ ತುಂಬಿದ ವ್ಯಕ್ತಿ ಜಲಾಲುದ್ದೀನ್ ಎನ್ನುತ್ತಾರೆ ಕಲಾಂ. ಜಲಾಲುದ್ದೀನ್‌ ಶಿಕ್ಷಕರಾಗಿರಲಿಲ್ಲ, ಆದರೂ ನಿಜಾರ್ಥದಲ್ಲಿ ಆತ ಕಲಾಂ ಅವರ ಶಿಕ್ಷಕನಾಗಿದ್ದ. ಅವರ ಪ್ರತಿಯೊಂದು ಯಶಸ್ಸಿನ ಹಿಂದೆ ಆತನ ಪಾತ್ರವಿದೆ.

ಕಲಾಂ ಅವರು ರಾಕೆಟ್ ಎಂಜಿನಿಯರ್ ಆಗಿ ನೇಮಕಗೊಂಡು ಅಮೆರಿಕಾಕ್ಕೆ ತರಬೇತಿ ಹೊರಟ ಸಂದರ್ಭದಲ್ಲಿ ಅಹ್ಮದ್ ಜಲಾಲುದ್ದೀನ್ ತಮ್ಮನ್ನು ಕಣ್ಣೀರಿನೊಂದಿಗೆ ಬೀಳ್ಕೊಟ್ಟ ಗಳಿಗೆಯನ್ನು ನೆನಪಿಸಿಕೊಳ್ಳುತ್ತಾರೆ. ತಾವು ಪಿಎಸ್‌ಎಲ್‌ವಿ ರಾಕೆಟ್ ವಿನ್ಯಾಸದಲ್ಲಿ ತೊಡಗಿದ್ದಾಗ ಜಲಾಲುದ್ದೀನ್‌ ಅವರ ಸಾವಿನ ಸುದ್ದಿ ಬಂದ ಘಳಿಗೆ,ಮತ್ತದು ತಮ್ಮಲ್ಲಿ ಸೃಷ್ಟಿಸಿದ ಶೂನ್ಯವನ್ನು, ಹತಾಶೆಯನ್ನು ಕಲಾಂ ಬಣ್ಣಿಸುತ್ತಾರೆ. ಅತಿ ಸಾಮಾನ್ಯ ವ್ಯಕ್ತಿಯೊಬ್ಬ ಇಲ್ಲಿ ಅಸಾಮಾನ್ಯ ಸಾಧಕನ ಗುರುವಿನ ಪಾತ್ರ ನಿರ್ವಹಿಸುತ್ತಾನೆ. ಯಾವುದೇ ನಿರೀಕ್ಷೆಯಿಲ್ಲದೆ ಕಲಾಂ ಅವರ ಒಳಿತಿಗಾಗಿ ಸದಾ ಬೆಂಬಲಕ್ಕೆ ನಿಲ್ಲುತ್ತಾನೆ. ಇವನು ಶಿಕ್ಷಕನಲ್ಲದೆ  ಮತ್ತೇನು? ಹಾಗಾಗಿ ನಮ್ಮ ಜೀವನದಲ್ಲಿ ನಾಲ್ಕು ಗೋಡೆಗಳ ಮಧ್ಯೆ ಪಾಠ ಹೇಳಿಕೊಡುವ ಶಿಕ್ಷಕರು ಮಾತ್ರವಲ್ಲದೆ, ವೈಯಕ್ತಿಕ ಜೀವನದಲ್ಲಿ, ಸಮಾಜದಲ್ಲಿ, ಅನೇಕ ವ್ಯಕ್ತಿಗಳು ನಮ್ಮ ಶಿಕ್ಷಕನ ಪಾತ್ರ ನಿರ್ವಹಿಸಬಹುದು. ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಅಂತವರನ್ನು ನಾವು ನೆನಪಿಸಿಕೊಳ್ಳದಿದ್ದರೆ ಹೇಗೆ…

ಶಿಕ್ಷಕನ ವೃತ್ತಿ ಧರ್ಮ, ಅವನ ಜವಾಬ್ದಾರಿ, ಅವನಿಂದ ಇರುವ ನಿರೀಕ್ಷೆಯನ್ನು ನಾವೆಲ್ಲ ಪಟ್ಟಿ ಮಾಡುತ್ತೇವೆ.  ಹಾಗಾದರೆ ಅವನಿಗೂ ಒಂದು ಸ್ವಂತ ಬದುಕಿದೆಯಲ್ಲ… ತನ್ನ ವೈಯಕ್ತಿಕ ಜೀವನವನ್ನು ಶಿಕ್ಷಕ ಯಾವುದೇ ಕಪ್ಪು ಗುರುತಿಲ್ಲದಂತೆ ಕಟ್ಟಿಕೊಳ್ಳಬೇಕಾಗುತ್ತದೆ. ಹೀಗಾಗಿ ಆತನ ಜವಾಬ್ದಾರಿಗಳ ಬಗ್ಗೆ ಹೇಳುವಾಗ, ಆತ ಸಮಾಜದಲ್ಲಿ ಗೌರವಪೂರ್ಣವಾಗಿ ಬದುಕಲು ನಾವು ನೆರವಾಗಬೇಕು. ಪುಡಾರಿಗಳು ಕಣ್ಣೆದುರೇ  ಲೂಟಿ ಮಾಡಿ ಬದುಕುವಾಗ, ನಿಯತ್ತಿನಿಂದ ಸಮಾಜಕ್ಕೆ ಮಾರ್ಗದರ್ಶಕನಾಗಿ ಬದುಕುವ ಶಿಕ್ಷಕನಿಗೆ ಸೂಕ್ತ ಸಮಯದಲ್ಲಿ, ಗೌರವಪೂರ್ಣ ಸಂಭಾವನೆ ನೀಡಿ ಆತನನ್ನು ಜೀತದಾಳಿನಂತೆ ದುಡಿಸಿಕೊಳ್ಳದೇ ಇರುವುದು ಸರ್ಕಾರ ಮಾಡಬೇಕಾದ ಮೊದಲ ಕೆಲಸ. ಶಿಕ್ಷಕ ಸಮಾಜದೊಂದಿಗೆ ಮತ್ತು ವಿದ್ಯಾರ್ಥಿಗಳೊಂದಿಗೆ ಹೊಂದಿರುವ ಭಾವನಾತ್ಮಕ ನಂಟನ್ನು, ಈ ವೃತ್ತಿಯ ವೈಶಿಷ್ಟ್ಯತೆಯನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಶಿಕ್ಷಕ ತನ್ನ ವೃತ್ತಿಯನ್ನು ಯಾವುದೇ ಅಡೆತಡೆಯಿಲ್ಲದೆ ನಿರ್ವಹಿಸುವುದು ಆತನಿಗೆ ಮಾತ್ರವಲ್ಲ, ಸಮಾಜಕ್ಕೂ ಅಗತ್ಯ. 

 

ಅಧ್ಯಾಪಕ ಸಮಾಜದಲ್ಲಿ ಜನರನ್ನು ಮಾನವೀಯ ಸಂಬಂಧಗಳ ಮೂಲಕ ಹೂವಿನಂತೆ ಪೋಣಿಸುವ ದಾರದಂತೆ. ಹಾಗಾಗಿ ನಮ್ಮ ಜೀವನದಲ್ಲಿ ನಾವು ಅವರಿಂದ ಕಲಿತ ಜೀವನ ಪಾಠವನ್ನು ನೆನಪಿಸಿಕೊಂಡು ಶಿಕ್ಷಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸೋಣ. ಸಾಧ್ಯವಾದರೆ ನಮಗೆ ಪಾಠ ಕಲಿಸಿದ ಶಿಕ್ಷಕರನ್ನು ಭೇಟಿಯಾಗಿ, ಅವರ ಬಗ್ಗೆ ಒಳ್ಳೆಯ ಮಾತು, ಒಂದೆರಡು ಸವಿನೆನಪುಗಳನ್ನು ಹಂಚಿಕೊಂಡರೆ ಅವರಿಗೆ ಅದಕ್ಕಿಂತ ಸಂತೋಷ ಬೇರೆ ಇರಲಿಕ್ಕಿಲ್ಲ.

ಶಿಕ್ಷಕ ವೃತ್ತಿಗೆ ಇರುವ ಗೌರವವನ್ನು ಕಾಪಾಡಿಕೊಂಡು, ನಿಸ್ವಾರ್ಥವಾಗಿ ಸಮಾಜಕ್ಕೆ ಕೊಡುಗೆ ನೀಡುವ ಪ್ರಕ್ರಿಯೆ ಮುಂದುವರೆಯಲಿ. ಭವಿಷ್ಯದ ಬಗೆಗಿನ ಕರಿಛಾಯೆಯ ಮಧ್ಯೆ ಶಿಕ್ಷಕರು ನಮಗೆಲ್ಲಾ ಆಶಾಕಿರಣವಾಗಿದ್ದಾರೆ. ಅವರನ್ನು ನೆನಪಿಸಿಕೊಂಡು, ಮನಸ್ಸಿನಲ್ಲಿ ಅವರಿಗೊಂದು ಧನ್ಯವಾದ ಸಮರ್ಪಿಸುವ ಸುಸಂದರ್ಭ ಇದು.

ಎಲ್ಲ ಶಿಕ್ಷಕರಿಗೂ, ವಿದ್ಯಾರ್ಥಿಗಳಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

 

-ಜಿಪಿ-

(ʼಮಂಜುವಾಣಿʼಯ ಸೆಪ್ಟೆಂಬರ್‌, ೨೦೨೨ ರ ಸಂಚಿಕೆಗಾಗಿ ಬರೆದ ಲೇಖನ)

 

 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪ್ರೀತಿ ಎಂದರೇನು ಎಂದು ಈಗ ಅರಿತೆನು…

ಸಿಂಹಾವಲೋಕನಕ್ಕೊಂದು ಸಮಯ

ಬೇಸರದಲ್ಲಿ ಬರೆದದ್ದು…ಹೌದಾ?!