ಆಕೆ ನೆರಳಲ್ಲ, ಬೆಳಕು …!
ಮನುಷ್ಯ ಸಮಯ, ಸಂದರ್ಭಕ್ಕೆ ಅನುಗುಣವಾಗಿ ಬದಲಾಗುವಾಗ ನಮ್ಮ ಮೂಗಿನ ನೇರಕ್ಕೆ ಯಾರನ್ನೂ ಅಳೆಯಲಾಗದು, ಯಾರೊಂದಿಗೂ ಹೋಲಿಸಲಾಗದು. ಇಷ್ಟಕ್ಕೂ ಪ್ರತಿಯೊಬ್ಬ ವ್ಯಕ್ತಿಯೂ ಪರಮಾತ್ಮನ ವಿಶೇಷ ಸೃಷ್ಟಿಯೇ. ಆದರೆ ಪರಿಸ್ಥಿತಿಯನ್ನು ಮೀರಿ ಬೆಳೆದು ತಮ್ಮನ್ನು ತಾವು ರೂಪಿಸಿಕೊಂಡು, ಎಂತಹ ಸಂದರ್ಭ ಬಂದರೂ ಬದಲಾಗದೇ ಇರುವವರು ಅಪರೂಪ.
ಆಂಗ್ಲ ವಿಭಾಗದ ಡಾ. ರಾಜಲಕ್ಷ್ಮೀ ಮೇಡಂ ಅಥವಾ ಪ್ರೀತಿಪಾತ್ರರ ಪಾಲಿನ ʼರಾಜಿ ಮೇಡಂʼ ಬಗ್ಗೆ ಬರೆಯಲು ನನಗಿರುವ ಅರ್ಹತೆ ಪ್ರಶ್ನಾರ್ಹ, ಆದರೂ ಸಲಿಗೆ, ಪ್ರೀತಿಯಿಂದ ಒಂದಿಷ್ಟು ಬರೆದರೆ ಮೇಡಂ ಕ್ಷಮಿಸಿಯಾರು ಎಂಬ ಧೈರ್ಯ! ಅವರ ಪರಿಚಯ ನನಗಾದುದು ಕೇವಲ ನಾಲಕ್ಕು ವರ್ಷಗಳ ಹಿಂದೆಯಷ್ಟೇ. ಆಗ ಅವರು ನನಗೆ ʼಪ್ರಾಂಶುಪಾಲರ ಪತ್ನಿʼ ಅಷ್ಟೆ! ಆದರೆ ಹೊಸಬನಾದ ನನ್ನನ್ನು ಸಹೋದರನಂತೆ ಕಂಡು ಸಲಹೆ-ಮಾರ್ಗದರ್ಶನ ನೀಡಿದ ಕೆಲವು ಹಿರಿಯರಲ್ಲಿ ರಾಜಲಕ್ಷ್ಮೀ ಮೇಡಂ ಕೂಡ ಒಬ್ಬರು. ಆ ವಿಷಯದಲ್ಲಿ ನಾನು ಅದೃಷ್ಟವಂತ.
ನನ್ನ ಅರಿವಿನ ಮಿತಿಯೊಳಗೆ ಹೇಳುವುದಾದರೆ, ರಾಜಲಕ್ಷ್ಮೀ ಮೇಡಂ ಎಲ್ಲರಂತಲ್ಲ. ನೇರ, ದಿಟ್ಟ, ನಿರಂತರ ಎಂಬ ಮಾತು ಅವರಿಗೆ ಅನ್ವಯಿಸುತ್ತದೆ. ಅವರ ಮಾತು ನೇರ, ದಿಟ್ಟ ನಿರ್ಧಾರ, ಮತ್ತದನ್ನು ಸದಾ ಉಳಿಸಿಕೊಂಡವರು ಅವರು. ಆಗ ಪ್ರಾಂಶುಪಾಲರಾಗಿದ್ದ ಉದಯ್ ಸರ್ ಮತ್ತು ಮೇಡಂ ಕಾಲೇಜಿನಲ್ಲಿ ಹೇಗಿರುತ್ತಾರೆ, ವೈಯಕ್ತಿಕ ಜೀವನ ಮತ್ತು ಔದ್ಯೋಗಿಕ ಜೀವನವನ್ನು ಹೇಗೆ ಸಂಭಾಳಿಸುತ್ತಾರೆ ಎಂಬ ಕುತೂಹಲ ನನಗಂತೂ ಇತ್ತು. ಅವರಿಬ್ಬರು ಕಾಲೇಜಿನಲ್ಲಿ ವೈಯಕ್ತಿಕ ಜೀವನವನ್ನು ಬದಿಗಿರಿಸಿ ತಮ್ಮ ಮಿತಿಗಳನ್ನು ಅರಿತು ನಡೆದುಕೊಳ್ಳುತ್ತಿದ್ದುದು ನನ್ನಲ್ಲಿ ಅಚ್ಚರಿ ಮೂಡಿಸುತ್ತಿತ್ತು. ಎಷ್ಟೆಂದರೆ ಪ್ರಾಂಶುಪಾಲರ ಕೊಠಡಿಗೂ ಮೇಡಂ, ಎಲ್ಲರಂತೆ ಅನುಮತಿ ಪಡೆದೇ ಹೋಗುತ್ತಿದ್ದರು ಎಂಬುದು ವಿಶೇಷ!
ಯಶಸ್ವೀ ಪುರುಷನ ಹಿಂದೆ ಮಹಿಳೆಯೊಬ್ಬಳ, ಹೆಚ್ಚಾಗಿ ಹೆಂಡತಿಯ ತ್ಯಾಗ ಇರುತ್ತದೆ ಎಂಬುದು ಸತ್ಯ. ಅರ್ಹ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಭೋಜನ ವ್ಯವಸ್ಥೆ ಆರಂಭಿಸಿದಾಗ ಮೇಡಂ ತೆಗೆದುಕೊಂಡ ದಿಟ್ಟ ನಿರ್ಧಾರವನ್ನು ಸರ್ ತಮ್ಮ ನಿವೃತ್ತಿಯ ಸಂದರ್ಭದಲ್ಲಿ ವಿವರಿಸಿದಾಗ, ಇಲ್ಲೂ ಆ ಮಾತು ಸತ್ಯವೇ ಆಗಿದೆ ಎಂಬುದು ತಿಳಿದುಬಂತು. ತಮ್ಮ ಪತ್ನಿಯ ಬಗ್ಗೆ ಅವರಿಗಿರುವ ಗೌರವ, ನನಗೂ ರಾಜಿ ಮೇಡಂ ಎಲ್ಲರಂತಲ್ಲ ಎಂದು ಅನಿಸುವಂತೆ ಮಾಡಿತು. ಅವರ ಮೇಲಿನ ಗೌರವ ಇನ್ನಷ್ಟು ಹೆಚ್ಚಿತು.
ಮೆಲು ಮಾತು, ಕೆಲಸದಲ್ಲಿ ಮಾತ್ರ ಕಟ್ಟುನಿಟ್ಟು ಎಂಬುದು ನಾನು ಅವರಲ್ಲಿ ಗಮನಿಸಿದ ಅಂಶ. ಸಂಸ್ಥೆಯ ಬಗ್ಗೆ ಅಪಾರ ಪ್ರೀತಿ, ಕಾಳಜಿ ಹೊಂದಿರುವ ಅವರು ಪ್ರಾಂಶುಪಾಲರೆಲ್ಲರ ಪಾಲಿನ ʼಟ್ರಬಲ್ ಶೂಟರ್ʼ. ಕಿರಿಯ ಉಪನ್ಯಾಸಕರನ್ನು ಪ್ರೀತಿಯಿಂದ ಕಾಣುವ ಮೇಡಂ, ಎಲ್ಲರ ಸಮಯ, ವೈಯಕ್ತಿಕ ಜೀವನವನ್ನು ಅಪಾರವಾಗಿ ಗೌರವಿಸುತ್ತಾರೆ. ಶ್ಯಾಮ್ ಭಟ್ ಸರ್, ಪಟ್ಟಾಭಿ ಸರ್ ನಿವೃತ್ತರಾದಾಗ ತಮ್ಮದೇ ಯುವ ಸೈನ್ಯವನ್ನು ಕಟ್ಟಿಕೊಂಡು ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದಾರೆ. ನಿವೃತ್ತಿಯ ಅಂಚಿನಲ್ಲಿದ್ದರೂ ಅವರು ಕೆಲಸದಲ್ಲಿ ತೋರಿಸುತ್ತಿದ್ದ ಹುರುಪು, ಹೊಸ ವಿಷಯಗಳಲ್ಲಿನ ಕುತೂಹಲವನ್ನು ಎಲ್ಲರಲ್ಲೂ ಕಾಣಲು ಸಾಧ್ಯವಿಲ್ಲ. ನಮ್ಮ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರೂ ಆಗಿದ್ದ ಅವರೂ, ಬಳಿಕವೂ ವಿಭಾಗದ ಜೊತೆಗಿನ ಕಾಳಜಿ, ನಂಟನ್ನು ಬಿಡಲಿಲ್ಲ.
ರಾಜಿ ಮೇಡಂ ಅವರ ಅದ್ಭುತ ಕ್ರೋಷೆಟ್ ಕಲೆ ನನ್ನನ್ನು ಸದಾ ಅಕರ್ಷಿಸಿದೆ. ಅವರನ್ನು ನೋಡಿ ಇನ್ನಷ್ಟು ಕಲಿಯುವುದಿತ್ತೇನೋ ಎಂದನಿಸುತ್ತದೆ. ಅದೇನೇ ಇದ್ದರೂ…. ಸಂತಸ, ದುಃಖ ಎರಡನ್ನೂ ಸಮಭಾವದಿಂದ ಸ್ವೀಕರಿಸುವವರು ಹೆಚ್ಚು ಖುಷಿಯಾಗಿರುತ್ತಾರಂತೆ. ಮೇಡಂ ಅವರ ನಿವೃತ್ತ ಜೀವನ ಆರೋಗ್ಯ, ಸಂತಸದಿಂದ ಕೂಡಿರಲಿ, ನನ್ನಂತ ಅಲ್ಪನ ಮೇಲಿನ ಅವರ ಪ್ರೀತಿ ಹೀಗೇ ಇರಲಿ ಎಂಬ ಹಾರೈಕೆ ಇದ್ದೇ ಇದೆ.
ಪ್ರೀತಿ, ಗೌರವಗಳೊಂದಿಗೆ
ಗುರು…
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ