ಧರ್ಮಗಳ ಸಂಗಮವೆಂಬ ವಿಸ್ಮಯ ಈ ಧರ್ಮಸ್ಥಳ!

 

ಮಲೆನಾಡಿನ ತಪ್ಪಲಲ್ಲಿ, ಕರಾವಳಿಯ ಮಡಿಲಲ್ಲಿ, ಪವಿತ್ರ ನೇತ್ರಾವತಿ ನದಿಯ ತಟದಲ್ಲಿರುವ ಸ್ವಾಮಿ ಮಂಜುನಾಥನ ಸನ್ನಿಧಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡದವರು ಅಪರೂಪಕ್ಕೆ ಸಿಕ್ಕಿಯಾರು. ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಧರ್ಮಸ್ಥಳ ಸಹಜವಾಗಿಯೇ ಹಿಂದೂಗಳ ಧಾರ್ಮಿಕ ಕ್ಷೇತ್ರ. ಆದರೆ ಅಷ್ಟಕ್ಕೇ ಸೀಮಿತವಾಗದೆ ಅದೊಂದು ಸರ್ವಧರ್ಮಗಳ ಸಂಗಮ ಕ್ಷೇತ್ರ ಎನಿಸಿಕೊಂಡಿದೆ.

ಧರ್ಮಸ್ಥಳದ ಪ್ರಮುಖ ಆರಾಧ್ಯ ದೈವ ಶ್ರೀ ಮಂಜುನಾಥ ಅಂದರೆ ಶಿವ. ಸಹಜವಾಗಿಯೇ ಅಲ್ಲಿ ಶೈವ ಪರಂಪರೆಗೆ ಆದ್ಯತೆಯಿದೆ. ಕುತೂಹಲಕಾರಿ ಅಂಶವೆಂದರೆ, 16ನೇ ಶತಮಾನದಲ್ಲಿ ಧರ್ಮಸ್ಥಳದ ಶಿವಲಿಂಗವನ್ನು ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪಿಸಿ, ಕುಡುಮ ಕ್ಷೇತ್ರಕ್ಕೆ ʼಧರ್ಮಸ್ಥಳʼವೆಂದು ನಾಮಕರಣ ಮಾಡಿದವರು ವೈಷ್ಣವ ಪರಂಪರೆಯನ್ನು ಅನುಸರಿಸುವ ಉಡುಪಿಯ ಶ್ರೀ ವಾದಿರಾಜ ಶ್ರೀಗಳು. ಮಧ್ವ ಪರಂಪರೆಯ ವೈಷ್ಣವ ಬ್ರಾಹ್ಮಣರು ಮಂಜುನಾಥ ಸ್ವಾಮಿಗೆ ಪೂಜೆ ಸಲ್ಲಿಸುತ್ತಿದ್ದಾರೆ.

ಶ್ರೀ ಕ್ಷೇತ್ರದ ಪೆರ್ಗಡೆ (ಹೆಗ್ಗಡೆ) ಕುಟುಂಬದ ಮೂಲ ಮನೆ ʼನೆಲ್ಯಾಡಿಬೀಡುʼವಿನಲ್ಲಿ ನೆಲೆಸಿರುವ ಮೂಲ ನಾಲ್ಕು ಧರ್ಮ ದೈವಗಳಾದ ಕಾಲರಾಹು, ಕಾಲರ್ಕಾಯಿ, ಕುಮಾರಸ್ವಾಮಿ ಮತ್ತು ಕನ್ಯಾಕುಮಾರಿಯ ಆದೇಶದಂತೆ ಈ ವ್ಯವಸ್ಥೆ ಜಾರಿಯಲ್ಲಿದೆ ಎಂದು ನಂಬಲಾಗಿದೆ. ಇದರೊಂದಿಗೆ, ಹಿಂದೂ ಧರ್ಮಾನುಯಾಯಿಗಳಲ್ಲಿ ವಿವಿಧ ಬ್ರಾಹ್ಮಣ ಪಂಗಡ ಹಾಗೂ ಬ್ರಾಹ್ಮಣೇತರರಿಗೆ ಕೆಲವೊಂದು ಜವಾಬ್ದಾರಿಗಳನ್ನು ಶತಮಾನಗಳ ಹಿಂದೆಯೇ ಹಂಚಲಾಗಿದೆ. ಇದು ನಿಜಕ್ಕೂ ಅಚ್ಚರಿ ಹುಟ್ಟಿಸುತ್ತದೆ!

ಹಿಂದೂ ಜೈನ ಧರ್ಮಗಳ ಸಂಗಮ

ಧರ್ಮಸ್ಥಳ ಕ್ಷೇತ್ರದ ಅತೀ ವಿಶಿಷ್ಠ ಸಂಗತಿಗಳಲ್ಲಿ ಇಲ್ಲಿನ ಹಿಂದೂ- ಜೈನ ಪರಂಪರೆಯ ಸಂಗಮವೂ ಒಂದು. ಶ್ರೀ ಕ್ಷೇತ್ರದ ಆಡಳಿತವನ್ನು ಇಲ್ಲಿನ ಪೆರ್ಗಡೆ ಅಥವಾ ಹೆಗ್ಗಡೆ ವಂಶ ವಂಶಪಾರಂಪರ್ಯವಾಗಿ ಶತಮಾನಗಳಿಂದಲೂ ನಡೆಸಿಕೊಂಡು ಬರುತ್ತಿದೆ. ದಿವಂಗತ ಶ್ರೀ ರತ್ನವರ್ಮ ಹೆಗ್ಗಡೆಯವರ ನಂತರ 20 ನೇ ವಯಸ್ಸಿನಲ್ಲಿ ಜವಾಬ್ದಾರಿ ವಹಿಸಿಕೊಂಡ ಈಗಿನ ಧರ್ಮಾಧಿಕಾರಿ ಪದ್ಮವಿಭೂಷಣ ಡಾ.ವೀರೇಂದ್ರ ಹೆಗ್ಗಡೆ (ಸ್ಥಳೀಯವಾಗಿ ಖಾವಂದರು ಎಂದೂ ಸಂಭೋಧಿಸಲಾಗುತ್ತದೆ), ಈ ಕ್ಷೇತ್ರದ ಖ್ಯಾತಿಯನ್ನು ಮತ್ತಷ್ಟು ಎತ್ತರಕ್ಕೇರಿಸಿದ್ದಾರೆ. 

ಗಮನಾರ್ಹ ಸಂಗತಿಯೆಂದರೆ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಸನ್ನಿಧಿಯಾಗಿ ಮಾತ್ರ ಉಳಿದಿಲ್ಲ. ಜೈನ ಮತದವರಿಗೂ ಇದೊಂದು ವಿಶೇಷ ಕ್ಷೇತ್ರ. ಜೈನ ತೀರ್ಥಂಕರ ಶ್ರೀ ಚಂದ್ರನಾಥ ಸ್ವಾಮಿ ಬಸದಿ ಧರ್ಮಸ್ಥಳದಲ್ಲಿದೆ. ರತ್ನಗಿರಿ ಬೆಟ್ಟದ ಮೇಲೆ ಸ್ಥಾಪಿತವಾಗಿರುವ ಭಗವಾನ್ ಬಾಹುಬಲಿಯ ಏಕಶಿಲಾ ಪ್ರತಿಮೆಯೂ ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದು. 39 ಅಡಿ ಎತ್ತರದ ಪ್ರತಿಮೆಯನ್ನು, 13 ಅಡಿ ಎತ್ತರದ ಪೀಠದ ಮೇಲೆ ಪ್ರತಿಷ್ಠಾಪಿಸಲಾಗಿದೆ. ಇದರ ತೂಕ ಸುಮಾರು 170 ಟನ್‌ಗಳು. 

ಅಂದಿನ ಧರ್ಮಾಧಿಕಾರಿ ರತ್ನವರ್ಮ ಹೆಗ್ಗಡೆಯವರ ಇಚ್ಛೆಯಂತೆ, ಕಾರ್ಕಳದಲ್ಲಿ ಶಿಲ್ಪಿ ರೆಂಜಾಳ ಗೋಪಾಲಕೃಷ್ಣ ಶೆಣೈ ಮಾರ್ಗದರ್ಶನದಲ್ಲಿ ಈ ಪ್ರತಿಮೆಯನ್ನು ಕೆತ್ತಲಾಗಿದೆ. 1973ರಲ್ಲಿ ಕೆತ್ತನೆ ಪೂರ್ಣಗೊಂಡು 1982ರಲ್ಲಿ ಪ್ರತಿಷ್ಠಾಪಿಸಲಾಯಿತು ಎಂದು ಇತಿಹಾಸ ಹೇಳುತ್ತದೆ. ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕ ಅಪಾರ ಸಂಖ್ಯೆಯ ಜೈನ ಮತಾವಲಂಬಿಗಳನ್ನು ಸೆಳೆಯುತ್ತದೆ.

ಧರ್ಮಸ್ಥಳದಲ್ಲಿ ಪ್ರತಿ ವರ್ಷ ನಡೆಯುವ ಸರ್ವಧರ್ಮ ಸಮ್ಮೇಳನ ಇಲ್ಲಿನ ಮತ್ತೊಂದು ವಿಶೇಷ. ಇದು ಇಂದು ನಿನ್ನೆ ಆರಂಭಿಸಿದ್ದಲ್ಲ. 1932-33ರ ಅವಧಿಯಲ್ಲಿ ಮಂಜಯ್ಯ ಹೆಗ್ಗಡೆಯವರ ಕಾಲದಲ್ಲಿ ಆರಂಭವಾದ ಈ ನಿಜಾರ್ಥದ ಸರ್ವಧರ್ಮ ಸಮ್ಮೇಳನ, ಜೈನ ಧರ್ಮದ 'ಅನೇಕಾಂತವಾದ' (ಬಹುಮುಖಿ ಸತ್ಯ) ತತ್ವದಡಿ, ಎಲ್ಲಾ ಧರ್ಮಗಳಲ್ಲಿ ಮಾನವೀಯತೆಯೊಂದೇ ಗುರಿ ಎಂಬ ಸತ್ಯವನ್ನು ಸಾರುವ ಉದ್ದೇಶದಿಂದ ನಡೆಯುತ್ತಿದೆ. ಪ್ರತಿವರ್ಷ ಧರ್ಮಸ್ಥಳದ ಲಕ್ಷ ದೀಪೋತ್ಸವದ ಸಂದರ್ಭದಲ್ಲಿ ಈ ಸರ್ವಧರ್ಮ ಸಮ್ಮೇಳನ ನಡೆಯುತ್ತದೆ. 2025ರಲ್ಲಿ 93ನೇ ಸರ್ವಧರ್ಮ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ರಾಜಕೀಯ, ವಿವಾದಗಳಿಂದ ಮುಕ್ತವಾಗಿ ನಡೆಯುತ್ತಿರುವ ಈ ಮಾದರಿ ಸಮ್ಮೇಳನ ಸಾಹಿತ್ಯ ಸಂಗೀತ ಪ್ರಿಯರಿಗೂ ರಸದೌತಣ.

ಧರ್ಮಸ್ಥಳ ದಾನ ಧರ್ಮಕ್ಕೆ ಹೆಸರುವಾಸಿ. ಪ್ರತಿನಿತ್ಯ ಸುಮಾರು ಹತ್ತು ಸಾವಿರ ಭಕ್ತರಿಗೆ ಉಚಿತ ಅನ್ನದಾನ ನಡೆಯುತ್ತಿದೆ. ಶಿಕ್ಷಣ, ಆರೋಗ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲೂ ದಾನ ಪರಂಪರೆ ಮುಂದುವರಿದಿದೆ. ಅದರಲ್ಲೂ ಉಚಿತ ಸಾಮೂಹಿಕ ವಿವಾಹ, ಗ್ರಾಮೀಣಾಭಿವೃದ್ಧಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳು ಸಾಕಷ್ಟು ಹೆಸರು ಮಾಡಿವೆ. ಇಲ್ಲೆಲ್ಲಾ ಸರ್ವಧರ್ಮದ ಜನರನ್ನು ಸಮಭಾವದಿಂದ ಕಾಣಲಾಗುತ್ತಿದೆ. ಶ್ರೀ ಕ್ಷೇತ್ರ ಈ ನಿಟ್ಟಿನಲ್ಲಿ ಮಾದರಿ ಎಂದರೆ ಅತಿಶಯೋಕ್ತಿ ಖಂಡಿತಾ ಅಲ್ಲ.

ಗುರುಪ್ರಸಾದ್‌ ಟಿ.ಎನ್‌


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕೊಟ್ಟಷ್ಟೂ ಹೆಚ್ಚುವ ಸಂತೋಷ!

ಎಮೋಜಿ : ಸಂಸ್ಕೃತಿಗಳಾಚೆಗೆ ಹೃದಯಗಳನ್ನು ಬೆಸೆಯುವ ಸಾರ್ವತ್ರಿಕ ಭಾಷೆ

ಬೇಸರದಲ್ಲಿ ಬರೆದದ್ದು…ಹೌದಾ?!