ಅರಿವಿನಾಚೆಯ ಇರುವು: ಮಾನಸಿಕ ಆರೋಗ್ಯದ ಮಹತ್ವ
ರಜಾ ದಿನ ಬೆಳ್ಳಂಬೆಳಗ್ಗೆ ಎದ್ದು ಆಟದ ಮೈದಾನದಲ್ಲಿ ಆಡುವ ಮಕ್ಕಳ ಕಣ್ಣಲ್ಲಿ ಅದೆಂಥಾ ಉತ್ಸಾಹ. ಅವರ ನಗು, ಗದ್ದಲ, ತುಂಟಾಟವನ್ನು ನೋಡಿದಾಗಲೇ ಮನಸ್ಸಿಗೆ ಆಹ್ಲಾದವಾಗುತ್ತದೆ. ಅದೇ, ಶಾಲೆಯಿಂದ ಮರಳಿದ ತಕ್ಷಣ ಕೈಯಲ್ಲಿ ಮೊಬೈಲ್ ಫೋನ್ ಹಿಡಿದು ಕುಳಿತುಕೊಳ್ಳುವ ಮಕ್ಕಳನ್ನೊಮ್ಮೆ ನೋಡಿ. ಆ ಸಂಭ್ರಮ ಇಲ್ಲಿ ಕಾಣಿಸುವುದಿಲ್ಲ. ಅವರು ಕುಳಿತಿದ್ದರೂ ಸುಸ್ತಾದಂತೆ ಕಾಣುತ್ತಾರೆ. ಇದು ನಮ್ಮ ಮಾನಸಿಕ ಸ್ಥಿತಿಯ ಪ್ರಾಮುಖ್ಯತೆಯನ್ನು ತೋರಿಸುತ್ತದೆ. ಮಾನಸಿಕ ಆರೋಗ್ಯ ಎಂದಾಕ್ಷಣ ಅಂದು ಮಾನಸಿಕ ಕಾಯಿಲೆ ಇಲ್ಲದಿರುವುದು ಎಂದಲ್ಲ. ಅದು ನಮ್ಮ ಮಾನಸಿಕ ಮತ್ತು ಭಾವನಾತ್ಮಕ ಯೋಗಕ್ಷೇಮಕ್ಕೆ ಸಂಬಂಧಿಸಿದ ವಿಚಾರ.
ನಾವು ಹೆಚ್ಚಾಗಿ ದೈಹಿಕ ಆರೋಗ್ಯದ ಬಗ್ಗೆ ಯೋಚಿಸುತ್ತೇವೆ. ಆದರೆ, ಮಾನಸಿಕ ಆರೋಗ್ಯ ಮತ್ತು ದೈಹಿಕ ಆರೋಗ್ಯ ಎರಡೂ ನಮಗೆ ಮುಖ್ಯ. ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯದ ಬಗ್ಗೆಯೂ ನಾವು ಗಮನ ಹರಿಸಬೇಕು. ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಆತ್ಮವಿಶ್ವಾಸ, ಸಂತೋಷ ಮತ್ತು ಯಶಸ್ಸಿಗೆ ಅಡಿಪಾಯ. ಆಧುನಿಕ ಜೀವನಶೈಲಿಯಲ್ಲಿ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗಿವೆ.
ಮಾನಸಿಕ ಆರೋಗ್ಯ ಎಂದರೇನು?
ಮಾನಸಿಕ ಆರೋಗ್ಯ ಎಂದರೆ ನಮ್ಮ ದೈನಂದಿನ ಜೀವನದ ಸವಾಲುಗಳನ್ನು ಎದುರಿಸಲು, ಒತ್ತಡವನ್ನು ನಿರ್ವಹಿಸಲು, ಸಮಾಜದಲ್ಲಿ ಸಹಜವಾಗಿ ಭಾಎಲ್ಲರೊಂದಿಗೆ ಬೆರೆಯಲು ಮತ್ತು ನಮ್ಮ ಸಾಮರ್ಥ್ಯಗಳನ್ನು ಅರಿತುಕೊಳ್ಳಲು ಸಹಾಯ ಮಾಡುವ ಒಂದು ಸ್ಥಿತಿ. ಇದು ನಮ್ಮ ಯೋಚನೆ, ಭಾವನೆ, ಮತ್ತು ವರ್ತನೆಗಳ ಮೇಲೆ ಪ್ರಭಾವ ಬೀರುತ್ತದೆ.
ಮಾನಸಿಕ ಆರೋಗ್ಯದ ಮಹತ್ವ
ಆರೋಗ್ಯಕರ ಮಾನಸಿಕ ಸ್ಥಿತಿ, ಸಕಾರಾತ್ಮಕವಾಗಿ ಯೋಚಿಸಲು, ಸಂಬಂಧಗಳನ್ನು ಕಾಪಾಡಿಕೊಳ್ಳಲು, ಮತ್ತು ನಮ್ಮ ಗುರಿಗಳನ್ನು ಸಾಧಿಸಲು ಅನುವು ಮಾಡಿಕೊಡುತ್ತದೆ. ಆದರೆ, ಒಬ್ಬ ವ್ಯಕ್ತಿ ದೈಹಿಕವಾಗಿ ಆರೋಗ್ಯವಾಗಿದ್ದರೂ ಮಾನಸಿಕವಾಗಿ ಅಸ್ವಸ್ಥನಾಗಿದ್ದರೆ, ಆತನ ಸೃಜನಶೀಲತೆ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ, ಮತ್ತು ಭಾವನಾತ್ಮಕ ಸ್ಥಿರತೆ ಕುಗ್ಗುತ್ತದೆ. ಇದರಿಂದ ಕೆಲಸದ ಸ್ಥಳದಲ್ಲಿ, ವೈಯಕ್ತಿಕ ಸಂಬಂಧಗಳಲ್ಲಿ ಮತ್ತು ಸಾಮಾಜಿಕ ಜೀವನದಲ್ಲಿ ಹಲವು ತೊಂದರೆಗಳು ಉಂಟಾಗಬಹುದು. ಇದು ಕ್ರಮೇಣ ಆತನ ದೈಹಿಕ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು.
ಮಕ್ಕಳು- ವಯಸ್ಕರಿಗೆ ಮಾನಸಿಕ ಆರೋಗ್ಯ ಏಕೆ ಮುಖ್ಯ?
ಮಕ್ಕಳಲ್ಲಿ ಮಾನಸಿಕ ಆರೋಗ್ಯದ ಸಮಸ್ಯೆಗಳು ಅವರ ಕಲಿಕೆ, ಸಾಮಾಜಿಕ ಬೆಳವಣಿಗೆ ಮತ್ತು ಭವಿಷ್ಯದ ಮೇಲೆ ಪರಿಣಾಮ ಬೀರುತ್ತವೆ. ಮಕ್ಕಳಲ್ಲಿ ಕಂಡುಬರುವ ಭಯ, ಖಿನ್ನತೆ, ಮತ್ತು ಒತ್ತಡದಂತಹ ಸಮಸ್ಯೆಗಳು ಶೈಕ್ಷಣಿಕವಾಗಿ ಮತ್ತು ಭಾವನಾತ್ಮಕವಾಗಿ ಹಿಂದುಳಿಯುವಂತೆ ಮಾಡಬಹುದು. ಮಕ್ಕಳು ನಿಶ್ಚಿತ ಗುರಿಯೆಡೆಗೆ ಹೆಜ್ಜೆ ಹಾಕಲು ಬೇಕಾದ ನಿರ್ಣಾಯಕ ಆತ್ಮವಿಶ್ವಾಸದ ಕೊರತೆ ಎದುರಿಸಬಹುದು.
ವಯಸ್ಕರ ವಿಷಯಕ್ಕೆ ಬಂದರೆ, ಮಾನಸಿಕ ಆರೋಗ್ಯ ಅವರ ವೃತ್ತಿಜೀವನ, ಕುಟುಂಬ ಜೀವನ, ಮತ್ತು ಸಾಮಾಜಿಕ ಸಂಬಂಧಗಳ ಮೇಲೆ ಪ್ರಭಾವ ಬೀರುತ್ತದೆ. ಒತ್ತಡ ಮತ್ತು ಆತಂಕ, ವ್ಯಕ್ತಿಗಳ ಸಾಮರ್ಥ್ಯ ಅಥವಾ ಉತ್ಪಾದಕತೆಯನ್ನು ಕುಗ್ಗಿಸಬಹುದು. ದೀರ್ಘಕಾಲಿಕ ಖಿನ್ನತೆ ಕೆಲಸವನ್ನೇ ಬಿಡುವ ಹಂತಕ್ಕೆ ಕೊಂಡೊಯ್ಯಬಹುದು. ಈ ಎಲ್ಲಾ ಬೆಳವಣಿಗೆಗಳು ಆತನ ಸಾಮಾಜಿಕ ಸ್ಥಾನಮಾನದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ವೈಯಕ್ತಿಕ ಜೀವನವೂ ಕದಡಿಹೋಗಬಹುದು. ಆತ ದೈಹಿಕವಾಗಿ ಆರೋಗ್ಯವಾಗಿದ್ದರೂ ಅದು ಪ್ರಯೋಜನಕ್ಕೆ ಬಾರದಿರಬಹುದು. ಬೆಂಗಳೂರಿನ ಹೆಸರಾಂತ ಮನೋವೈದ್ಯ ಡಾ. ಕೆ.ಆರ್. ಉಮೇಶ್,"ಮಾನಸಿಕ ಆರೋಗ್ಯ ಜೀವನದ ಅಡಿಪಾಯ. ಇದು ಸರಿಯಿಲ್ಲದಿದ್ದರೆ ಜೀವನದ ಎಲ್ಲಾ ಹಂತಗಳೂ ಪರಿಣಾಮ ಎದುರಿಸುತ್ತವೆ," ಎಂದು ಹೇಳುತ್ತಾರೆ.
ಮಾನಸಿಕ ಆರೋಗ್ಯಕ್ಕೆ ಇರುವ ಅಪಾಯಗಳು
ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನಶೈಲಿ ನೇರವಾಗಿ ನಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ತಂತ್ರಜ್ಞಾನದ ಅತಿಯಾದ ಬಳಕೆ, ಸಾಮಾಜಿಕ ಮಾಧ್ಯಮಗಳ ಪ್ರಭಾವ, ಸ್ಪರ್ಧಾತ್ಮಕ ವೃತ್ತಿಜೀವನ, ಮತ್ತು ಕುಟುಂಬದಲ್ಲಿನ ಸಂಬಂಧಗಳ ಹದಗೆಡುವಿಕೆ, ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ನಿದ್ದೆಯ ಕೊರತೆ, ಅನಾರೋಗ್ಯಕರ ಆಹಾರ ಪದ್ಧತಿ, ಮತ್ತು ವ್ಯಾಯಾಮದ ಕೊರತೆಯೂ ಒತ್ತಡ ಮತ್ತು ಆತಂಕಕ್ಕೆ ಕಾರಣವಾಗಬಹುದು. ಇದೆಲ್ಲದರ ನಡುವೆ ಹಲವಾರು ಕಾರಣಗಳಿಂದ ನಾವು ಕೂಡು ಕುಟುಂಬ ಪದ್ಧತಿಯನ್ನು ಬಿಟ್ಟು, ವಿಭಜಿತ ಕುಟುಂಬದೆಡೆಗೆ ಮುಖ ಮಾಡುತ್ತಿದ್ದೇವೆ.
ಸಾಮಾನ್ಯವಾಗಿ ಕಂಡುಬರುವ
ಮಾನಸಿಕ ಆರೋಗ್ಯ ಸಮಸ್ಯೆಗಳು
ಮಾನಸಿಕ ಆರೋಗ್ಯ ಸಮಸ್ಯೆಗಳಲ್ಲಿ ಹಲವು
ವಿಧಗಳಿವೆ. ಅವುಗಳಲ್ಲಿ ಪ್ರಮುಖವಾದವುಗಳು:
- ಖಿನ್ನತೆ: ಇದು ದೀರ್ಘಕಾಲದ ಬೇಸರ, ಉತ್ಸಾಹದ ಕೊರತೆ, ಮತ್ತು ಬಲಹೀನತೆಯಿಂದ ಕೂಡಿದ ಒಂದು ಸ್ಥಿತಿ.
- ಆತಂಕ: ಇದು ಅತಿಯಾದ ಚಿಂತೆ, ಭವಿಷ್ಯದ ಬಗ್ಗೆ ಭಯ,
ಮತ್ತು ದೈಹಿಕ ಲಕ್ಷಣಗಳಾದ ಹೃದಯ
ಬಡಿತ ಮತ್ತು ಉಸಿರಾಟದ ತೊಂದರೆಗೆ ಕಾರಣವಾಗುತ್ತದೆ.
- ದ್ವಿಧ್ರುವಿ ಅಸ್ವಸ್ಥತೆ (Bipolar disorder): ಇದು ಅತಿಯಾದ ಸಂತೋಷ ಮತ್ತು ಖಿನ್ನತೆಯ ನಡುವಿನ
ಭಾವನಾತ್ಮಕ ಬದಲಾವಣೆಯ ಸ್ಥಿತಿ.
- ಪೋಸ್ಟ್-ಟ್ರಾಮ್ಯಾಟಿಕ್ ಸ್ಟ್ರೆಸ್ ಡಿಸಾರ್ಡರ್ (PTSD): ಇದು ಯಾವುದೋ ಆಘಾತಕಾರಿ ಘಟನೆಯ ನಂತರ ಉಂಟಾಗುವ ಆತಂಕದ
ಸ್ಥಿತಿ.
- ಆಬ್ಸೆಸಿವ್ ಕಂಪಲ್ಸಿವ್ ಡಿಸಾರ್ಡರ್ (OCD): ಇದು ಅತಿಯಾದ ಆಲೋಚನೆ ಮತ್ತು ಮರುಕಳಿಸುವ ಕೆಲವೊಂದು ವರ್ತನೆಗಳಿಗೆ ಕಾರಣವಾಗುತ್ತದೆ.
ಮಾನಸಿಕ ಆರೋಗ್ಯ ಸಮಸ್ಯೆಯ ಲಕ್ಷಣಗಳೇನು?
ಮಾನಸಿಕ ಆರೋಗ್ಯ ಸಮಸ್ಯೆಗಳು ದೈಹಿಕವಾಗಿಯೂ ಕೆಲವು ಲಕ್ಷಣಗಳನ್ನು ತೋರಿಸುತ್ತವೆ. ಉದಾಹರಣೆಗೆ, ತಲೆನೋವು, ಹೊಟ್ಟೆ ನೋವು, ಮತ್ತು ನಿದ್ರಾಹೀನತೆ. ಇತರ ಪ್ರಮುಖ ಲಕ್ಷಣಗಳೆಂದರೆ, ಕಡಿಮೆಯಾಗದ ದುಃಖ-ಬೇಸರ ಅಥವಾ ಖಿನ್ನತೆ, ಹಿಂಜರಿಕೆ, ಸಾಮಾಜಿಕ ಚಟುವಟಿಕೆಗಳಿಂದ ದೂರವಿರುವುದು, ಹಸಿವು ಅಥವಾ ನಿದ್ರೆಯ ಕ್ರಮದಲ್ಲಿ ಬದಲಾವಣೆ, ಅತಿಯಾದ ಕೋಪ, ಆಕ್ರಮಣಶೀಲತೆ ಮತ್ತು ತನ್ನ ಬಗ್ಗೆ ಕೀಳುಮಟ್ಟದ ಭಾವನೆ. ಇದು ಕ್ಷಣಿಕವಾದರೆ ಸಮಸ್ಯೆಯಿಲ್ಲ, ಆದರೆ ಮುಂದುವರಿದರೆ ಮಾನಸಿಕ ಸಮಸ್ಯೆಯಿದೆ ಎಂದೇ ಅರ್ಥ.
ಮಾನಸಿಕ ಆರೋಗ್ಯ ಸಮಸ್ಯೆ ಎದುರಾದಾಗ ಏನು
ಮಾಡಬೇಕು?
ಮೊದಲನೆಯದಾಗಿ, ಮಾನಸಿಕ ಆನಾರೋಗ್ಯದ ಸಮಸ್ಯೆಯ ಲಕ್ಷಣಗಳು ಕಂಡುಬಂದಾಗ ನಿಜವಾದ ಸಮಸ್ಯೆಯೇನು ಮತ್ತು ಅದಕ್ಕೆ ಕಾರಣವೇನು ಎಂಬುದನ್ನು ಗುರುತಿಸುವುದು ಮುಖ್ಯ. ಬಳಿಕ ಒಬ್ಬ ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸುವುದು ಒಳ್ಳೆಯದು.
ಮನೋವೈದ್ಯರೆಂದರೆ ಮಾನಸಿಕ ಅಸ್ವಸ್ಥತೆಗಳನ್ನು ಗುರುತಿಸುತ್ತಾರೆ, ಮತ್ತು ಅದಕ್ಕೆ ಸೂಕ್ತ ಚಿಕಿತ್ಸೆ ನೀಡುತ್ತಾರೆ. ಅಗತ್ಯಬಿದ್ದರೆ ಔಷಧಿಯನ್ನೂ ಕೊಡುತ್ತಾರೆ. ಮಾನಸಿಕ ಅನಾರೋಗ್ಯವನ್ನು ಮೀರಲು ಹೆಚ್ಚಿನ ಸಂದರ್ಭಗಳಲ್ಲಿ ಔಷಧಗಳಿಗಿಂತಲೂ ಇತರ ವಿಧಾನಗಳು ಹೆಚ್ಚು ಫಲಕಾರಿಯಾಗಿರುತ್ತವೆ.
ಖಿನ್ನತೆಯಂತಹ ಸಮಸ್ಯೆಗಳಲ್ಲಿ ಸೈಕೋಥೆರಪಿಸ್ಟ್ಗಳು ಮಾತುಕತೆಯ ಮೂಲಕ ಮಾನಸಿಕ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತಾರೆ. ಕೌನ್ಸಿಲರ್ಸ್ ಅಥವಾ ಆಪ್ತ ಸಮಾಲೋಚಕರು ಸಮಸ್ಯೆಯ ಮೂಲವನ್ನು ಪತ್ತೆಹಚ್ಚಿ ವ್ಯಕ್ತಿಗೆ ಅದನ್ನು ಮೀರಿ ಯೋಚಿಸಲು, ತಪ್ಪು ಭಾವನೆಗಳನ್ನು ಹೋಗಲಾಡಿಸಲು ಒಬ್ಬ ಆಪ್ತ ಸ್ನೇಹಿತನಂತೆ ನೆರವಾಗುತ್ತಾರೆ. ಕೆಲವೊಮ್ಮೆ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವವರು ಅದರ ಹಿಂದಿರುವ ಕಾರಣವನ್ನು ಮನೆಯವರೊಂದಿಗೆ ಹಂಚಿಕೊಳ್ಳುವುದಿಲ್ಲ, ಅಥವಾ ಕುಟುಂಬದವರಿಗೆ ಅವರೊಂದಿಗೆ ಸಾವಧಾನದಿಂದ ವ್ಯವಹರಿಸುವ ವ್ಯವಧಾನವೇ ಇರುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಆಪ್ತ ಸಮಾಲೋಚಕರು ನೆರವಾಗುತ್ತಾರೆ. ಅವರು ಮಾನಸಿಕ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಯ ಜೀವನವನ್ನು ಮತ್ತೆ ಹಳಿಗೆ ತರಬಲ್ಲರು.
ತಪ್ಪು ಭಾವನೆ ಮತ್ತು ಕೀಳರಿಮೆಗಳು
ಮೈಸೂರಿನ ಮನೋವೈದ್ಯ ಡಾ. ಸುಧೀರ್ ಕುಮಾರ್, "ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಯಾವುದೇ ದೈಹಿಕ ಅನಾರೋಗ್ಯದಂತೆಯೇ ಚಿಕಿತ್ಸೆ ಪಡೆದುಕೊಳ್ಳಬಹುದು. ಸಮಯಕ್ಕೆ ಸರಿಯಾದ ಸಹಾಯ ಪಡೆದರೆ ಸಂಪೂರ್ಣ ಚೇತರಿಕೆ ಸಾಧ್ಯ,” ಎನ್ನುತ್ತಾರೆ.
ಆದರೆ ಮಾನಸಿಕ ಆರೋಗ್ಯ ಸಮಸ್ಯೆಗಳ ಕುರಿತು ಹಲವು ತಪ್ಪು ಕಲ್ಪನೆಗಳು ನಮ್ಮ ಸಮಾಜದಲ್ಲಿರುವುದೇ ಅದರ ಪರಿಹಾರಕ್ಕಿರುವ ಮೊದಲ ಅಡ್ಡಿ. ಮಾನಸಿಕ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರನ್ನು ಅವರು ಯಾವತ್ತೂ ಆರೋಗ್ಯವಂತರಾಗಲು ಸಾಧ್ಯವಿಲ್ಲ ಎನ್ನುವುದು, ಹುಚ್ಚರು ಎಂದು ಕರೆಯುವುದು ಅಮಾನವೀಯ. ತಪ್ಪು ಕಲ್ಪನೆಗಳು, ಅದರಲ್ಲೂ ಹತ್ತಿರದ ಸಂಬಂಧಿಕರೇ ಇದನ್ನು ಅರ್ಥಮಾಡಿಕೊಳ್ಳದಿರುವುದು ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸುತ್ತವೆ. ಇಂತಹ ಕೀಳುಮಟ್ಟದ ಭಾವನೆಗಳು ವ್ಯಕ್ತಿ ಚಿಕಿತ್ಸೆ ಪಡೆಯಲು ಹಿಂಜರಿಯುವಂತೆ ಮಾಡುತ್ತವೆ.
ಮಾನಸಿಕ ಆರೋಗ್ಯದ ಬಗ್ಗೆ ಬಹಿರಂಗವಾಗಿ ಮಾತನಾಡುವುದು, ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಈ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. "ಒಬ್ಬ ವ್ಯಕ್ತಿ ಖಿನ್ನತೆಯಿಂದ ಬಳಲುತ್ತಿದ್ದರೂ, ಆತ ತನ್ನ ಕುಟುಂಬವನ್ನು ಮುನ್ನಡೆಸಬಹುದು, ಅಥವಾ ತನ್ನ ಕೆಲಸವನ್ನು ಮುಂದುವರಿಸಬಹುದು. ಮಾನಸಿಕ ಸಮಸ್ಯೆಗಳು ದೈಹಿಕ ಸಮಸ್ಯೆಗಳಷ್ಟೇ ಸಹಜವಾದವು," ಎನ್ನುತ್ತಾರೆ ಪ್ರಸಿದ್ಧ ಮನೋವೈದ್ಯ ಡಾ. ಸಿ. ಆರ್. ಚಂದ್ರಶೇಖರ್.
ಪರಿಹಾರವೇನು? ಜೀವನಶೈಲಿಯಲ್ಲಿ ಬದಲಾವಣೆ ಬೇಕೇ?
ಮಾನಸಿಕ ಆರೋಗ್ಯವನ್ನು ಸುಧಾರಿಸಿಕೊಳ್ಳಲು ಜೀವನಶೈಲಿಯಲ್ಲಿ ಕೆಲ ಬದಲಾವಣೆಗಳನ್ನು ಮಾಡಿಕೊಳ್ಳಬಹುದು.
- ದೈಹಿಕ ಚಟುವಟಿಕೆಗಳು ಒತ್ತಡವನ್ನು ಕಡಿಮೆ ಮಾಡಿ
ಮನಸ್ಸನ್ನು ಶಾಂತಗೊಳಿಸುತ್ತವೆ.
- ಆರೋಗ್ಯಕರ ಆಹಾರಪದ್ಧತಿ ಅಥವಾ ಪೌಷ್ಟಿಕ ಆಹಾರ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ.
- ಉತ್ತಮ ನಿದ್ರೆ, ಅಂದರೆ ಕನಿಷ್ಠ ದಿನಕ್ಕೆ 8 ಗಂಟೆಗಳ ನಿದ್ರೆ ಮನಸ್ಸಿಗೆ ವಿಶ್ರಾಂತಿ ನೀಡುತ್ತದೆ.
- ಸ್ನೇಹಿತರು ಮತ್ತು ಕುಟುಂಬದೊಂದಿಗೆ ಬೆರೆಯುವುದು ಮಾನಸಿಕವಾಗಿ ಸದೃಢರಾಗಲು ಸಹಾಯ ಮಾಡುತ್ತದೆ.
- ಧ್ಯಾನ ಮತ್ತು ಯೋಗ ಮನಸ್ಸನ್ನು ಶಾಂತವಾಗಿಡಲು ಮತ್ತು ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಸಾಮಾಜಿಕ ಮಾಧ್ಯಮಗಳ ಬಳಕೆಯನ್ನು ಸೀಮಿತಗೊಳಿಸುವುದು, ಪ್ರಕೃತಿಯೊಂದಿಗೆ ಸಮಯ ಕಳೆಯುವುದು, ಹವ್ಯಾಸಗಳು ಮತ್ತು ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು, ಮತ್ತು ಸಕಾರಾತ್ಮಕ ಚಿಂತನೆಯನ್ನು ಬೆಳೆಸಿಕೊಳ್ಳುವುದು ಮಾನಸಿಕ ಯೋಗಕ್ಷೇಮಕ್ಕೆ ಸಹಕಾರಿ.
ನಮ್ಮ ಆರೋಗ್ಯವು ನಮ್ಮ ಕೈಯಲ್ಲಿದೆ.
ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು, ಸಹಾಯಕ್ಕಾಗಿ
ಮುಂದೆ ಬರುವುದು ಮತ್ತು ನಮ್ಮ ಮತ್ತು ನಮ್ಮ ಸುತ್ತಲಿನ ಜನರ ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ
ವಹಿಸುವುದು ನಮ್ಮೆಲ್ಲರ ಕರ್ತವ್ಯ. ಒಳ್ಳೆಯ ಮಾನಸಿಕ ಆರೋಗ್ಯವಿರುವಾಗ ಮಾತ್ರ ನಾವು ಜೀವನದ ಎಲ್ಲಾ
ಸವಾಲುಗಳನ್ನು ಎದುರಿಸಲು ಮತ್ತು ಸಂತೋಷದಿಂದ ಬದುಕಲು ಸಾಧ್ಯ. ಅರಿವಿನಾಚೆಯ ಬದುಕು, ಮಾನಸಿಕ ಆರೋಗ್ಯಕ್ಕೆ ಒತ್ತುಕೊಟ್ಟಾಗ ಮಾತ್ರ ಸಂಪೂರ್ಣವಾಗುತ್ತದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ