ತೀರ್ಥ ಕೊಡಲೂ ಮೆಷೀನು...!
ಇತಿಹಾಸ, ಪರಂಪರೆಯ ಬಗ್ಗೆ ಇಂಚಿಂಚೂ ಮಾಹಿತಿ ಸಂಗ್ರಹಿಸಿ 'ಇಲಿಯನ್ನು ಹುಲಿ' ಎಂಬಂತೆ ಬಿಂಬಿಸುವ ದೇಶಗಳ ಮಧ್ಯೆ ನಾವ್ಯಾಕೋ ಹಿಂದುಳಿಯುತ್ತಿದ್ದೇವೆ ಅನಿಸಿದ್ದು ಇತ್ತೀಚೆಗೆ ಕಾಲೇಜಿನಲ್ಲಿ ನಡೆದ ಇತಿಹಾಸ ಮತ್ತು ಪುರಾತತ್ವ ವಿಭಾಗದ ಕಾರ್ಯಕ್ರಮದಲ್ಲಿ.
ಅದರಲ್ಲೂ ಮುಖ್ಯ ಅತಿಥಿ ಇತಿಹಾಸ ಸಂಶೋಧಕ ಡಾ. ಪುಂಡಿಕಾಯ್ ಗಣಪಯ್ಯ ಭಟ್ಟರ ಮಾತಿನಲ್ಲಿ ವಿಷಾದದ ಛಾಯೆಯಿತ್ತು. ಅಭಿವೃದ್ಧಿ, ವಿಜ್ಞಾನದ ಹೆಸರಲ್ಲಿ ಇತಿಹಾಸವನ್ನು ಅಳಿಸುತ್ತಿರುವ ಬಗ್ಗೆ ಬೇಸರವಿತ್ತು.
ಅನೇಕರು ಅಮೂಲ್ಯ ಶಾಸನಗಳನ್ನು ಬೇಡದ ವಸ್ತುವೆಂಬಂತೆ ಮೂಲೆಗೆ ಎಸೆಯುತ್ತಿದ್ದಾರೆ. ಕೆತ್ತನೆಯಿರುವ ಕಲ್ಲುಗಳಂತೂ ಬಟ್ಟೆ ಒಗೆಯಲು, ತೋಡು ದಾಟಲು ಬಳಸಲ್ಪಡುತ್ತಿವೆ. ಕೆಲವೆಡೆ ದೇವಾಲಯಗಳಲ್ಲೂ ಚಪ್ಪಡಿಯಂತೆ ಹಾಕಲಾಗಿದೆ. ಹಾಗೇ ಬಿಟ್ಟರೆ ಏನೋ ಕೆಟ್ಟದಾಗಿ ಬಿಡುತ್ತದೆ ಎಂಬ ಮೂಢನಂಬಿಕೆಯೂ ಇದೆ ಎಂಬ ಮಾತು ಕಣ್ತೆರೆಸುವಂತಿತ್ತು.
ಧಾರ್ಮಿಕ ಆಚರಣೆಗಳಿಗೆ ವಿಜ್ಞಾನದ ಬಿಸಿ ಯಾವ ರೀತಿ ತಾಗಿದೆ ಎಂಬುದನ್ನು ವಿವರಿಸಲು ಕೊಟ್ಟ ಉದಾಹರಣೆಗಳು ಹಾಸ್ಯ ಎಂಬಂತೆ ಕಂಡರೂ ನಿಜಕ್ಕೂ ಗಂಭೀರ. ಜೀರ್ಣೋದ್ಧಾರದ ಹೆಸರಲ್ಲಿ ಮೂಲ ಸ್ವರೂಪವನ್ನು ಬದಲಿಸುವ ಬಗೆ, ದೇವರಿಗೆ ಪ್ಯಾಕೆಟ್ ಹಾಲು, ಪೂಜೆ ಮಾಡಲು- ಆರತಿ ಎತ್ತಲೂ- ತೀರ್ಥ ಕೊಡಲೂ ಮೆಷಿನ್ ಬಳಕೆ ವಿಜ್ಞಾನ ನಮ್ಮನ್ನು ನಿಯಂತ್ರಿಸುತ್ತಿರುವುದಕ್ಕೆ ಒಂದು ಉದಾಹರಣೆ ಅಷ್ಟೆ.
ನಮ್ಮ ದೇಶದ ಶ್ರೀಮಂತ ಇತಿಹಾಸ, ಪರಂಪರೆ ಮರೆತರೆ ಮುಂದಿನ ದಿನಗಳ ಅಪಾಯ ಎದುರಿಸಲು ನಮಗೆ ಸಾಧ್ಯವಾಗದು ಎಂಬುದಂತೂ ನಿಜ...
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ