ಮಳೆಮೋಡ ಮತ್ತು ಕಾಮನಬಿಲ್ಲು...
ಮಳೆಮೋಡ ಬಂದಾಗಲೇ
ಕಾಮನಬಿಲ್ಲು ಕಾಣಿಸುವುದು ಎಂಬ ಮಾತಿದೆ. ಬದುಕಿನಲ್ಲಿ ಕತ್ತಲು ಕವಿದಾಗಲೇ ನಾವು ಅವಕಾಶಗಳ ಬಾಗಿಲು
ತೆರೆಯುತ್ತದೆ. ಆದರೂ ಪ್ರತಿ ಕ್ಷಣವೂ ಹೊಸತು ಎಂದಿರುವಾಗ ಕಳೆದು ಹೋದ 2018, ನನಗೆ ಒಂದು ವರ್ಷ ಅದೆಷ್ಟು
ದೀರ್ಘ ಎಂಬುದನ್ನು ತೋರಿಸಿಕೊಟ್ಟಿತು. ಜೀವನದಲ್ಲೇ ಮರೆಯಲಾಗದ ಕಹಿ ಗಳಿಗೆಯಾಗಿಬಿಟ್ಟಿತು.
ಯಕ್ಷಗಾನ, ಫೋಟೋಗ್ರಫಿ
ಎಂದು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಖುಷಿಯಾಗಿದ್ದ ನನ್ನನ್ನು ಚಿಂತಾಜನಕ ಸ್ಥಿತಿಗೆ ತಲುಪಿಸಲು
ಒಂದು ಭೀಕರ ರಸ್ತೆ ಅಪಘಾತ ಸಾಕಾಗಿತ್ತು. “ಶ್ರೀನಿವಾಸ ಪ್ರಸಾದನಿಗೆ ಹೀಗಾಯಿತೇ...” ಎಂದು ಸಹೃದಯರು
ಮರುಗಿದ್ದರು. ನನ್ನ ರಕ್ಷಕರೇನೋ, ನಿಜ ಸ್ಥಿತಿಯ ಬಗ್ಗೆ ಹೇಳಿದರೆ ಏನಾಗಿಬಿಡುತ್ತದೋ ಎಂಬ ಭಯದಿಂದ
‘ಜ್ವರ’ ಎಂದಷ್ಟೇ ಹೇಳುತ್ತಿದ್ದರು. ಅದೇನೇ ಇರಲಿ, ನನಗಂತೂ ಈ ಘಟನೆಯಿಂದ ಜೀವನದ ನಿಜವಾದ ಅರ್ಥ ತಿಳಿದುಕೊಳ್ಳಲು
ಸಾಧ್ಯವಾಯಿತು.
ಬದುಕು ವಿಶಾಲ...
ಒಮ್ಮೊಮ್ಮೆ ನನಗೆ
ಈ ಘಟನೆಯ ಕುರಿತು ಬೇಸರಕ್ಕಿಂತ ಸಂತೋಷವೇ ಆಗುತ್ತದೆ! ಆ ಘಟನೆಯ ಬಳಿಕ ಅದೆಷ್ಟೋ ಮಂದಿ ನನಗೆ ಹತ್ತಿರವಾದರು.
ನನ್ನೆಲ್ಲಾ ಅಧ್ಯಾಪಕರ ಪ್ರೋತ್ಸಾಹವನ್ನು ಶಬ್ದಗಳಲ್ಲಿ ಬಣ್ಣಿಸಲಾಗದು. ನಾನು ಗುಣಮುಖನಾಗಲು ಒಂದು
ರೀತಿಯಲ್ಲಿ ಅವರೇ ಕಾರಣ. ಆಗಾಗ ಭೇಟಿಯಾಗುತ್ತಿದ್ದ ಸ್ನೇಹಿತರು ಧೈರ್ಯ ತುಂಬುತ್ತಿದ್ದರು. ನನ್ನ ಆರೋಗ್ಯ
ವೃದ್ಧಿಯಲ್ಲಿ ಡಾಕ್ಟರ್‍ಗಳ ಪ್ರಯತ್ನಕ್ಕೆ ಋಣಿಯಾಗಿರಲೇಬೇಕು. ನನ್ನ ರಕ್ಷಕರು ಪಟ್ಟ ಕಷ್ಟವಂತೂ ಆಕಾಶದಷ್ಟು.
ಇದನ್ನೆಲ್ಲಾ ನೋಡಿದ
ನನ್ನ ಮನಸ್ಸಲ್ಲಿ ಮೂಡಿದ ಭಾವನೆಯೊಂದೇ, ಅದು ಎಲ್ಲರ ಶ್ರಮಕ್ಕೊಂದು ಅರ್ಥ ಕಲ್ಪಿಸಬೇಕು, ಸಂತಸದಿಂದಿರಬೇಕು
ಎಂಬುದು. ಕಾಲೇಜು ಜೀವನಕ್ಕೆ ಮರಳಿರುವ ನನಗೆ, ನನ್ನ ಪ್ರೀತಿಯ ಕಾಲೇಜಿನಲ್ಲಿ, ಅಧ್ಯಾಪಕರ ಜೊತೆ ಇನ್ನೂ
ಒಂದು ವರ್ಷ ಕಳೆಯಬಹುದಲ್ಲವೇ ಎಂದು ಖುಷಿಯಾಗುತ್ತಿದೆ. ಆದು ಹೋದ ದಿನಗಳಿಗೆ ಮರುಗಿ ಪ್ರಯೋಜನವಿಲ್ಲ,
ಆದರೆ ಬರುವ ದಿನಗಳಿಗೆ ತಯಾರಿರಬೇಕು ಎಂಬ ಜೀವನದ ಸಾರವನ್ನು ಈ ಘಟನೆ ಕಲಿಸಿದೆ...
- ಶ್ರೀನಿವಾಸ ಪ್ರಸಾದ್. ಎಸ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ