ಎಮೋಜಿ : ಸಂಸ್ಕೃತಿಗಳಾಚೆಗೆ ಹೃದಯಗಳನ್ನು ಬೆಸೆಯುವ ಸಾರ್ವತ್ರಿಕ ಭಾಷೆ


ಪ್ರೀತಿ, ಕೋಪ, ಸಂತೋಷ, ದುಃಖ, ದ್ವೇಷ, ಅಸೂಯೆ… ಹೀಗೆ ಮನುಷ್ಯ ಜೀವನದಲ್ಲಿ ಈ ಭಾವನೆಗಳು ನಿರ್ವಹಿಸುವ ಪಾತ್ರ ತುಂಬಾ ದೊಡ್ಡದು. ವಿವಿಧ ಹಂತಗಳಲ್ಲಿ ಮನಸ್ಸಲ್ಲಿ ಮೂಡುವ ಭಾವನೆಗಳು ಮತ್ತು ಅದಕ್ಕೆ ನಾವು ಪ್ರತಿಕ್ರಿಯಿಸುವ ರೀತಿ ನಿರ್ಣಾಯಕವಾಗಿರುತ್ತದೆ. ನಮ್ಮಲ್ಲಿ ಹಲವರು ಭಾವನೆಗಳನ್ನು ಒಂದಲ್ಲಾ ಒಂದು ರೀತಿಯಲ್ಲಿ ವ್ಯಕ್ತಪಡಿಸುವ ವಿಧಾನ ಕಂಡುಕೊಂಡಿರುತ್ತೇವೆ. ನಗು- ಅಳು, ಮಾತು-ಮೌನ….ಹೀಗೆ. ಕೆಲವೊಮ್ಮೆ ಭಾವನೆಗಳನ್ನು ಹುದುಗಿಟ್ಟುಕೊಂಡು ಸಂಕಟಪಡುವುದೂ ಇದೆ!    

ವೇಗದ ಡಿಜಿಟಲ್ ಯುಗದಲ್ಲಿ ಯಾವುದಕ್ಕೂ ಸಮಯ ಕಡಿಮೆ. ಭಾವನೆಗಳನ್ನು ವ್ಯಕ್ತಪಡಿಸುವುದು, ಅದಕ್ಕೆ ಸ್ಪಂದಿಸುವುದು ಎಲ್ಲವೂ ಅರ್ಜೆಂಟಾಗಿ ಆಗಬೇಕು! ಇನ್ನೊಂದು ಪ್ರಮುಖ ವಿಷಯವೆಂದರೆ ಜಗತ್ತೇ ಒಂದು ಹಳ್ಳಿಯಾಗುತ್ತಿರುವಾಗ, ನಮ್ಮ ಭಾವನೆ ಭಾಷೆ, ಗಡಿಗಳ ಮಿತಿಗಳನ್ನು ದಾಟಿ ಎಲ್ಲರಿಗೂ ಅರ್ಥವಾಗಬೇಕು.

ಹೀಗಿರುವಾಗ, ಎರಡು ಚುಕ್ಕೆಗಳು ಮತ್ತು ಕೆಳಕ್ಕೆ ಬಾಗಿರುವ ಒಂದು ರೇಖೆಯಿರುವ ಸರಳ ಹಳದಿ ವೃತ್ತವೂ ಭಾವನೆಗಳನ್ನು ವ್ಯಕ್ತಪಡಿಸಬಲ್ಲದು. ಮಾತಿನಲ್ಲಿ ಹೇಳಲಾಗದ ಭಾವನೆಯನ್ನೂ ಕೂಡ… ಅದಕ್ಕಾಗಿ ಈ ಎಮೋಜಿಗಳಿಗೂ ಒಂದು ದಿನವಿದೆ. ಪ್ರತಿ ಜುಲೈ 17ರಂದು, ವಿಶ್ವ ಎಮೋಜಿ ದಿನವನ್ನು ಆಚರಿಸಲಾಗುತ್ತದೆ.  ಮಾನವ ಸಂವಹನದಲ್ಲಿ ಹೊಸ ಕ್ರಾಂತಿಗೆ ಕಾರಣವಾದ ಈ ಕಿರು ಕಲಾಕೃತಿಗಳು ಭಾವನೆಗಳ ಸಾರ್ವತ್ರಿಕ ಭಾಷೆಯಾಗಿವೆ.

ಉದಾಹರಣೆಗೆ, ಯಾವುದಾದರೂ ಸಾಮಾಜಿಕ ಮಾಧ್ಯಮದಲ್ಲಿ, ನಿಮಗೆ ಅರ್ಥವಾಗದ ಭಾಷೆಯಲ್ಲಿ ಯಾರೋ ಟಿಪ್ಪಣಿ ಬರೆದು ಒಂದು ಚೆಂದದ ವೀಡಿಯೋ ಕಳಿಸಿರುತ್ತಾರೆ ಎಂದಿಟ್ಟುಕೊಳ್ಳೋಣ. ನಿಮಗೆ ಆ ವೀಡಿಯೋ ತುಂಬಾ ಇಷ್ಟವಾಗುತ್ತದೆ ಮತ್ತು ಅದಕ್ಕೊಂದು ಮೆಚ್ಚುಗೆ ಸೂಚಿಸಬೇಕು ಎಂದೂ ಅಂದುಕೊಳ್ಳುತ್ತೀರಿ, ಆದರೆ ಭಾಷೆ ಗೊತ್ತಿಲ್ಲ! ಹೀಗಿದ್ದಾಗ ಒಂದು ಥಂಬ್ಸ್‌ ಅಪ್‌, ಹೃದಯ, ಹೂಗುಚ್ಛ ಶಬ್ದಗಳೇ ಇಲ್ಲದೆ ನಿಮ್ಮ ಭಾವನೆಯನ್ನು ತಲುಪಿಸುತ್ತದೆ. ನಿಮ್ಮ ಸಂತೋಷ, ಭಾಷಾ ತಡೆಗಳು, ಸಾಂಸ್ಕೃತಿಕ ಭಿನ್ನತೆಗಳು ಮತ್ತು ಭೌಗೋಳಿಕ ಗಡಿಗಳನ್ನು ಮೀರಿ ಹೋಗುತ್ತದೆ. ಇದು ಎಮೋಜಿಯ ಮಾಯಾಜಾಲ.

ಡಿಜಿಟಲ್ ಆಚರಣೆಯ ಜನನ

ವಿಶ್ವ ಎಮೋಜಿ ದಿನವನ್ನು ಜುಲೈ 17, 2014ರಂದು ಎಮೋಜಿಪೀಡಿಯಾದ ಸಂಸ್ಥಾಪಕ ಜೆರೆಮಿ ಬರ್ಗ್ ಘೋಷಿಸಿದರು. ಆದರೆ ಜುಲೈ 17 ಕ್ಕೇ ಏಕೆ? ʼನ್ಯೂಯಾರ್ಕ್ ಟೈಮ್ಸ್ʼ ಪ್ರಕಾರ, ಜುಲೈ 17 ಎಂಬುದು ʼಕ್ಯಾಲೆಂಡರ್ʼ ಎಮೋಜಿಯಲ್ಲಿ ಮೊದಲು ತೋರಿಸಲ್ಪಟ್ಟ ದಿನಾಂಕ, ಆದ್ದರಿಂದ ಬರ್ಗ್‌ ಈ ದಿನವನ್ನು ಆಯ್ಕೆ ಮಾಡಿದರು ಎನ್ನಲಾಗುತ್ತದೆ. ಆಪಲ್ ಕಂಪೆನಿ ಮೊದಲ ಬಾರಿಗೆ ಮ್ಯಾಕ್‌ವರ್ಲ್ಡ್ ಎಕ್ಸ್‌ಪೋದಲ್ಲಿ ತನ್ನ ಐಕ್ಯಾಲ್‌ಗಾಗಿ ಉಲ್ಲೇಖವಾಗಿ ಬಳಸಿತು, ಹೀಗೆ ʼಹಾಗೇ ಸುಮ್ಮನೆʼ ಆರಂಭವಾದ ಈ ವಿಶ್ವ ಎಮೋಜಿ ದಿನ, ಈಗ ಒಂದು ಜಾಗತಿಕ ವಿದ್ಯಮಾನ!

ಎಮೋಜಿ ಎಲ್ಲಿಂದ ಬಂತು?

ಎಮೋಜಿಗಳ ನಿಜವಾದ ಅರ್ಥವೇನೆಂಬುದನ್ನು ತಿಳಿಯಲು ನಾವು 1990ರ ದಶಕದ ಕೊನೆಯ ಜಪಾನ್‌ಗೆ ಹೋಗಬೇಕು. ಆ ಸಮಯದಲ್ಲಿ ಅಲ್ಲಿ ಡಿಜಿಟಲ್ ಸಂವಹನದಲ್ಲಿ ಒಂದು ಸದ್ದಿಲ್ಲದ ಕ್ರಾಂತಿಯಾಗುತ್ತಿತ್ತು. 1999ರಲ್ಲಿ, ಜಪಾನೀಸ್ ಟೆಲಿಕಾಂ NTT DOCOMO ಮೊಬೈಲ್ ಫೋನ್‌ಗಳು ಮತ್ತು ಪೇಜರ್‌ಗಳಿಗಾಗಿ ಮೂಲ 176 ಎಮೋಜಿಗಳನ್ನು (e ಎಂದರೆ "ಚಿತ್ರ" ಮತ್ತು moji ಎಂದರೆ "ಅಕ್ಷರ") ಬಿಡುಗಡೆ ಮಾಡಿತು.

ಈ ಆವಿಷ್ಕಾರದ ಹಿಂದಿನ ಮಾಸ್ಟರ್‌ಮೈಂಡ್ ಶಿಗೆತಕ ಕುರಿತಾ, ಒಬ್ಬ ಡಿಸೈನರ್. ಅವರ ಚಿಂತನೆಯಿಂದಾಗಿ ಡಿಜಿಟಲ್‌ ರೂಪದಲ್ಲಿ ನಾವು ನಮ್ಮನ್ನು ವ್ಯಕ್ತಪಡಿಸುವ ರೀತಿ ಶಾಶ್ವತವಾಗಿ ಬದಲಾಯಿತು. ಅವರು ಎಮೋಜಿಗಳನ್ನು ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ರಚಿಸಿದ್ದರು. ಜಪಾನೀಸ್ ಟೆಲಿಕಾಂ ದೈತ್ಯ NTT DoCoMo ಅಭಿವೃದ್ಧಿಪಡಿಸಿದ ಮೊಬೈಲ್ ಇಂಟರ್ನೆಟ್ ವ್ಯವಸ್ಥೆಯಲ್ಲಿ ಸಂವಹನವನ್ನು ಸುಲಭಗೊಳಿಸುವುದು ಅದರ ಉದ್ದೇಶವಾಗಿತ್ತು. ಇಮೇಲ್‌ ಇದ್ದರೂ ದು 250 ಅಕ್ಷರಗಳಿಗೆ ಸೀಮಿತವಾಗಿತ್ತು. ಆದ್ದರಿಂದ ಎಮೋಜಿಗಳ ಬಳಕೆ ಆರಂಭವಾಯಿತು.

ಶಿಗೆತಕ ಕುರಿತಾ, 12 × 12 ಪಿಕ್ಸೆಲ್ ಗ್ರಿಡ್‌ನಲ್ಲಿ ವಿನ್ಯಾಸಗೊಳಿಸಿದ ಎಮೋಜಿಗಳು ಮೊದಲಿಗೆ ಮೊಬೈಲ್ ಫೋನ್‌ಗಳ ವಿಶ್ಯುವಲ್‌ ಇಂಟರ್ಫೇಸ್‌ ಅನ್ನು ಉತ್ತಮಪಡಿಸಿದವು. ಆಸಕ್ತಿದಾಯಕ ವಿಷಯವೆಂದರೆ, ಅವರು ಯುವಕ-ಯುವತಿಯರಿಗಾಗಿ NTT DoCoMo ಪೇಜರ್‌ನಲ್ಲಿ ಬಳಸಲಾದ ಹೃದಯಾಕಾರದ ಪಿಕ್ಟೋಗ್ರಾಮ್‌ನಂತಹ ಮೊದಲ ಕೆಲವು ಎಮೋಜಿಗಳಲ್ಲಿ ಒಂದನ್ನು ರಚಿಸಿದ ತಂಡದ ಭಾಗವಾಗಿದ್ದರು. ಇದು ನಂತರ ʼಕೆಂಪು ಹೃದಯʼ ಎಮೋಜಿಯಾಗಿ ಜನಪ್ರಿಯವಾಯಿತು.

ಇತ್ತೀಚಿನ ಸಂಶೋಧನೆಯೊಂದು, 1997 ರಲ್ಲಿ ಸಾಫ್ಟ್‌ಬ್ಯಾಂಕ್‌ ರಚಿಸಿದ 90 ಎಮೋಜಿಗಳು, 1999ರಲ್ಲಿ ಡೊಕೊಮೊ ಬಿಡುಗಡೆ ಮಾಡಿದ 176 ಎಮೋಜಿಗಳಿಗಿಂತ ಮೊದಲಿನವು ಎಂಬುದನ್ನು ಬಹಿರಂಗಪಡಿಸಿದೆ. ಹೀಗೆ ಎಮೋಜಿ ಕ್ರಾಂತಿ ಒಮ್ಮಿಂದೊಮ್ಮೆಗೆ ಸಂಭವಿಸಲಿಲ್ಲ. ಇದಕ್ಕೂ ಹಳೆಯ ಬೇರುಗಳಿರುವುದು ಗೊತ್ತಾಗಿದೆ.

ಜಾಗತಿಕ ಎಮೋಜಿ ಕ್ರಾಂತಿ: ಟ್ರೆಂಡ್‌ಗಳು

ಎಮೋಜಿಗಳು ವಯಸ್ಸು, ಸಂಸ್ಕೃತಿ ಮತ್ತು ಭಾಷೆಯನ್ನು ಮೀರಿ ವಿಕಾಸಗೊಂಡಿವೆ. ಇಂದಿನ ಎಮೋಜಿ ಲ್ಯಾಂಡ್‌ಸ್ಕೇಪ್ ಕುರಿತಾ ಅವರ ಮೂಲ 12x12 ಪಿಕ್ಸೆಲ್ ವಿನ್ಯಾಸಗಳಿಗಿಂತ ತೀರಾ ಭಿನ್ನವಾಗಿದೆ. ಆಧುನಿಕ ಎಮೋಜಿಗಳು ಸಂಕೀರ್ಣ, ವೈವಿಧ್ಯಮಯವಾಗಿದ್ದು, ನಮ್ಮ ಬದಲಾಗುತ್ತಿರುವ ಜಗತ್ತಿಗೆ ಕನ್ನಡಿಯಂತೆ ನಿರಂತರವಾಗಿ ಬದಲಾಗುತ್ತಿವೆ.

ಎಮೋಜಿ ಬಳಕೆಯ ಟ್ರೆಂಡ್‌ಗಳು, ಮನುಷ್ಯನ ವರ್ತನೆ ಮತ್ತು ಸಾಂಸ್ಕೃತಿಕ ವಿಕಾಸದ ಒಳನೋಟವೂ ಹೌದು. ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪ್ರತಿದಿನ ಶತಕೋಟಿಗೂ ಅಧಿಕ ಎಮೋಜಿಗಳನ್ನು ಬಳಸಲಾಗುತ್ತಿದೆ. "ಕಣ್ಣಲ್ಲಿ ನೀರು ಬರುವಷ್ಟು ನಗುವ ಮುಖ" ಅತಿ ಜನಪ್ರಿಯ ಎಮೋಜಿಗಳಲ್ಲಿ ಒಂದಾಗಿದೆ. ಆದರೆ ಸರಳ ಅಭಿವ್ಯಕ್ತಿಗಳನ್ನು ಮೀರಿ, ಎಮೋಜಿಗಳು ಕಥೆ ಹೇಳುವುದು, ಮಾರ್ಕೆಟಿಂಗ್, ಮತ್ತು ರಾಜತಾಂತ್ರಿಕ ಸಂವಹನಕ್ಕೂ ಸಾಧನಗಳಾಗಿವೆ!

ಆಸ್ಪತ್ರೆಯಲ್ಲೂ ಎಮೋಜಿ!

ಎಮೋಜಿ ಎಂದರೆ ಅಲರ್ಜಿ ಎಂಬಂತಿದ್ದ ಕಾರ್ಪೊರೇಟ್ ಸಂವಹನಗಳಲ್ಲಿ ಎಮೋಜಿಗಳು ತಮ್ಮ ಸ್ಥಾನ ಕಂಡುಕೊಂಡಿವೆ, ಎಮೋಜಿಗಳನ್ನು ಒಳಗೊಂಡ ಇಮೇಲ್‌ಗಳು ಹೆಚ್ಚಿನ ಪ್ರತಿಕ್ರಿಯೆ ಪಡೆಯುತ್ತವೆ ಎಂದು ಅಧ್ಯಯನಗಳು ತೋರಿಸಿವೆ. ಶೈಕ್ಷಣಿಕ ಸಂಸ್ಥೆಗಳು ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳಲು ಎಮೋಜಿಗಳನ್ನು ಬಳಸುತ್ತವೆ, ಆರೋಗ್ಯ ಸೇವಾ ಪೂರೈಕೆದಾರರು ರೋಗಿಗಳಿಗೆ ಅವರ  ಪರಿಸ್ಥಿತಿ ಮತ್ತು ಭಾವನೆಗಳನ್ನು ಉತ್ತಮವಾಗಿ ಸಂವಹನ ಮಾಡಲು ಎಮೋಜಿಗಳನ್ನು ಬಳಸುತ್ತಿದ್ದಾರೆ.

ವೈವಿಧ್ಯತೆಯ ಚಳವಳಿ ಎಮೋಜಿಗಳ ಅಭಿವೃದ್ಧಿಯ ಮೇಲೆ ಗಮನಾರ್ಹ ಪರಿಣಾಮ ಬೀರಿದೆ. ವಿವಿಧ ಚರ್ಮದ ಟೋನ್‌ಗಳು, ಲಿಂಗ ಪ್ರಾತಿನಿಧ್ಯ ಮತ್ತು ಒಗ್ಗಟ್ಟಿನ ಚಿಹ್ನೆಗಳ ಪರಿಚಯ ನಮ್ಮ ಜಾಗತಿಕ ಸಮಾಜದ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ. ಈ ವಿಕಾಸ, ಎಮೋಜಿ ಕೇವಲ ಸಂವಹನ ಸಾಧನಗಳಾಗಿ ಮಾತ್ರವಲ್ಲ, ನಮ್ಮ ಸಾಮಾಜಿಕ ಪ್ರಗತಿಯ ಕನ್ನಡಿಯಾಗಿಯೂ ಕಾರ್ಯನಿರ್ವಹಿಸುತ್ತದೆ.

ಎಮೋಜಿ ನಮ್ಮ ಜೀವನದಲ್ಲಿ ಏಕೆ ಮುಖ್ಯ?

ಡಿಜಿಟಲ್ ಜಗತ್ತಿನಲ್ಲಿ, ಎಮೋಜಿಗಳು ಭಾವನಾತ್ಮಕ ಆಧಾರಗಳಾಗಿ ಕಾರ್ಯನಿರ್ವಹಿಸುತ್ತವೆ. ಭೌತಿಕವಾಗಿ ದೂರದಲ್ಲಿದ್ದರೂ ಸಂಬಂಧವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ಎಮೋಜಿಗಳು ಭಾವನೆಗಳನ್ನು ಚಿತ್ರಗಳೊಂದಿಗೆ ಸಂಕೇತಿಸುತ್ತವೆ. ಅವು ವ್ಯಂಗ್ಯ, ಹಾಸ್ಯದ ಮೂಲಕ ಭಾವನೆಯನ್ನು ವ್ಯಕ್ತಪಡಿಸುತ್ತವೆ ಮತ್ತು ಸಂದೇಶಗಳೊಂದಿಗೆ ಸೇರಿ, ಧ್ವನಿ ಅಥವಾ ಆಂಗಿಕ ಭಾಷೆಯನ್ನು ಸೂಚಿಸಲು ಶಕ್ತವಾಗಿವೆ.

ಎಮೋಜಿಗಳ ಆಕಾರದ ಪರಿಣಾಮ- ಸಾಮರ್ಥ್ಯ ಕಡಿಮೆಯಲ್ಲ. ಡಿಜಿಟಲ್ ಸಂವಹನದ ಸಂಶೋಧನೆಯ ಪ್ರಕಾರ, ಎಮೋಜಿಗಳಿಲ್ಲದ ಟೆಕ್ಸ್ಟ್‌ ಮೆಸೇಜ್‌ಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳುವ ಸಾಧ್ಯತೆಯಿರುತ್ತದೆ. ಇದು ಗೊಂದಲ ಅಥವಾ ಸಂಘರ್ಷಕ್ಕೂ ಕಾರಣವಾಗಬಹುದು. ಎಮೋಜಿಗಳು ಸಂದರ್ಭ ಮತ್ತು ಭಾವನಾತ್ಮಕ ಸೂಕ್ಷ್ಮತೆಯನ್ನು ತಲುಪಿಸುತ್ತವೆ. ಇದು ಮೆಸೇಜ್‌ನಲ್ಲಿ ಸಾಧ್ಯವಾಗುವುದಿಲ್ಲ. ಅವು ಕಠಿಣ ಸಂದೇಶಗಳನ್ನು ಮೃದುವಾಗಿ ಹೇಳಲು, ಉತ್ಸಾಹ, ಸಹಾನುಭೂತಿ ಸೇರಿದಂತೆ ಕೆಲವೊಂದು ಸಂಕೀರ್ಣ ಭಾವನೆಗಳನ್ನು ವ್ಯಕ್ತಪಡಿಸಲು ಸಹಾಯ ಮಾಡುತ್ತವೆ. ಲ್ಲಿ ದೀರ್ಘ ವಿವರಣೆಗಳ ಅಗತ್ಯವಿರುವುದಿಲ್ಲ.

ಡಿಜಿಟಲ್ ಭಾವನೆಗಳ ಹಿಂದಿನ ವಿಜ್ಞಾನ!

ಎಮೋಜಿಗಳು ಜನರಲ್ಲಿ ಭಾವನಾತ್ಮಕ ಸ್ಪಂದನೆಗೆ ಕಾರಣವಾಗುತ್ತವೆ. ಇದರಿಂದ ನಾವು ಡಿಜಿಟಲ್ ಸಂವಹನದಲ್ಲಿ ಹೆಚ್ಚು ತೊಡಗಿಕೊಳ್ಳುತ್ತೇವೆ. ನರವಿಜ್ಞಾನದ ಅಧ್ಯಯನಗಳ ಪ್ರಕಾರ, ನಮ್ಮ ಮೆದುಳು ಎಮೋಜಿಗಳಿಗೆ, ಮುಖದ ಭಾವನೆಗಳಿಗೆ ಸ್ಪಂದಿಸುವ ರೀತಿಯಲ್ಲೇ ಪ್ರತಿಕ್ರಿಯಿಸುತ್ತದೆ. ಭಾವನೆಗಳನ್ನು ಗುರುತಿಸುವುದು, ಸಹಾನುಭೂತಿ ಮೊದಲಾದ ನರಮಾರ್ಗಗಳು ಸಕ್ರಿಯವಾಗುತ್ತವೆಯಂತೆ. ಇದಕ್ಕೇ ನೋಡಿ, ನಮ್ಮ ಸಂದೇಶಕ್ಕೆ ಒಂದು ಥಂಬ್ಸ್‌ ಅಪ್‌ ಸಿಕ್ಕರೂ ನಮಗೆ ಅಷ್ಟೊಂದು ಸಂತೋಷವಾಗುವುದು!

ಎಮೋಜಿಗಳು ಭಾವನಾತ್ಮಕ ಅಭಿವ್ಯಕ್ತಿಯಂತಹ ನಮ್ಮ ಮೂಲಭೂತ ಅಗತ್ಯಗಳನ್ನು ಪೂರೈಸುತ್ತವೆ. ನಮ್ಮ ಅನಲಾಗ್ ಭಾವನೆಗಳು ಮತ್ತು ಡಿಜಿಟಲ್ ಸಂವಹನಗಳ ನಡುವೆ ಸೇತುವೆ ನಿರ್ಮಿಸುತ್ತವೆ. ಎಮೋಜಿಗಳ ಸಾಂಸ್ಕೃತಿಕ ವ್ಯಾಖ್ಯಾನ, ಮನುಷ್ಯನ ಸಂಕೀರ್ಣವಾದರೂ ಸುಂದರ ಭಾವನೆಯನ್ನು ಹೊರಹಾಕುತ್ತದೆ. ನಗುಮುಖ ಸಾರ್ವತ್ರಿಕವೆಂದು ತೋರಿದರೂ, ವಿವಿಧ ಸಂಸ್ಕೃತಿಗಳು, ವಿವಿಧ ಎಮೋಜಿಗಳ ತೀವ್ರತೆ, ಸೂಕ್ತತೆ ಅಥವಾ ಅರ್ಥವನ್ನು ತಮ್ಮದೇ ರೀತಿಯಲ್ಲಿ ವ್ಯಾಖ್ಯಾನಿಸಬಹುದು.

ಭಾವನಾತ್ಮಕ ಅಭಿವ್ಯಕ್ತಿಯ ಭವಿಷ್ಯ

ಪ್ರತಿ ಜುಲೈ 17 ರಂದು ನಾವು ವಿಶ್ವ ಎಮೋಜಿ ದಿನವನ್ನು ಆಚರಿಸುವಾಗ, ನಾವು ಕೇವಲ ನಮ್ಮ ತೆರೆಯ ಚೆಂದದ ಗುರುತುಗಳನ್ನು ಆಚರಿಸುತ್ತಿಲ್ಲ, ಬದಲಾಗಿ ನಾವು ಮಾನವ ಸಂವಹನದಲ್ಲಿ ಒಂದು ಮೂಲಭೂತ ಬದಲಾವಣೆಯನ್ನು ಗುರುತಿಸುತ್ತಿದ್ದೇವೆ. ಎಮೋಜಿಗಳು ಭಾವನಾತ್ಮಕ ಅಭಿವ್ಯಕ್ತಿಯನ್ನು ಜನಪ್ರಿಯಗೊಳಿಸಿವೆ, ಭಾಷೆಯ ತಡೆಗಳನ್ನು ಮೀರಿದ ಸಂಪರ್ಕಗಳನ್ನು ಸೃಷ್ಟಿಸಿವೆ ಮತ್ತು ಹೇಳಲಾಗದ ಭಾವನೆಗಳಿಗೆ ಧ್ವನಿಯಾಗಿವೆ.

ಶಿಗೆತಕ ಕುರಿತಾ ಅವರ 176 ಪಿಕ್ಸೆಲ್‌ಗಳಿಂದ ಇಂದಿನ ವಿಶಾಲ ಆನಿಮೇಟೆಡ್ ಅಭಿವ್ಯಕ್ತಿಗಳವರೆಗೆ, ಎಮೋಜಿಗಳು ಕಿರಿದಾದ ಚಿಹ್ನೆಗಳಾದರೂ ದೊಡ್ಡ ಅರ್ಥ ಹೊಂದಿರುತ್ತವೆ ಎಂದು ಸಾಬೀತುಪಡಿಸಿವೆ. ತಾಂತ್ರಿಕ ಪ್ರಗತಿಯ ಹಾದಿಯಲ್ಲಿ ಅರ್ಥಮಾಡಿಕೊಳ್ಳಬೇಕು, ಸಂಪರ್ಕಿಸಬೇಕು ಮತ್ತು ಇತರರೊಂದಿಗೆ ನಮ್ಮ ಭಾವನೆಗಳನ್ನು ಹಂಚಿಕೊಳ್ಳಬೇಕು ಎಂಬ ನಮ್ಮ ಅತ್ಯಂತ ಮೂಲಭೂತ ಮಾನವ ಅಗತ್ಯವನ್ನು ನಾವು ಎಂದಿಗೂ ಕಳೆದುಕೊಳ್ಳಬಾರದು ಎಂದು ಅವು ನಮಗೆ ನೆನಪಿಸುತ್ತವೆ.

ನಾವು ನಮ್ಮ ಭಾವನೆಗಳನ್ನು ಸಾಗರಗಳಾಚೆ ಕ್ಷಣಮಾತ್ರದಲ್ಲಿ ಕಳುಹಿಸಬಹುದಾದ ಜಗತ್ತಿನಲ್ಲಿ, ಎಮೋಜಿಗಳು ಮಾನವ ಭಾವನೆಯ ಪುಟ್ಟ ರಾಯಭಾರಿಗಳೆನಿಸುತ್ತವೆ. ಕೆಲವೊಮ್ಮೆ ಇವು, ಒಂದು ಚಿತ್ರ ನಿಜವಾಗಿಯೂ ಸಾವಿರ ಪದಗಳಿಗೆ ಸಮಾನವಾಗಿರುತ್ತದೆ ಎಂದು ಸಾಬೀತುಪಡಿಸುತ್ತವೆ. ಈ ಬಾರಿ ವಿಶ್ವ ಎಮೋಜಿ ದಿನ ಆಚರಿಸುವಾಗ, ಪ್ರತಿ ಎಮೋಜಿಯ ಹಿಂದೆ ಒಂದು ಮಾನವ ಹೃದಯವಿದೆ ಎಂಬುದನ್ನು ನೆನಪಿಡಿ. ಅದು ನಮಗೇನೋ ಹೇಳಬಯಸುತ್ತದೆ, ನಮ್ಮಿಂದ ಏನನ್ನೋ ಕೇಳಬಯಸುತ್ತದೆ… ಅಥವಾ ಮೌನವಾಗಿ ನಮ್ಮೊಂದಿಗೆ ಇರಬಯಸುತ್ತದೆ….☺

 


ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕೊಟ್ಟಷ್ಟೂ ಹೆಚ್ಚುವ ಸಂತೋಷ!

ಬೇಸರದಲ್ಲಿ ಬರೆದದ್ದು…ಹೌದಾ?!

ಮಣಭಾರ ಒಯ್ಯಬೇಕು, ಬೆಟ್ಟವನ್ನೂ ಏರಬೇಕು ಎಂದರೆ ಆಗದು!