ನಾನು….ಆಗಿದ್ದೆ!


ನಾನು ಕೈಯೊಳ ಹೂವಾಗಿದ್ದೆ

ಎಲ್ಲರ ಕನಸಿನ ಕೂಸಾಗಿದ್ದೆ,

ಅದೆಷ್ಟೊ ಮುದ್ದಾದ ಹೆಸರು ಪಡೆದಿದ್ದೆ

ಹೌದು…ನಾನು ಹಾಗಿದ್ದೆ!

 

ಎಷ್ಟೊಂದು ಚೆಂದವಾಗಿದ್ದೆ

ಕೆಂಪು ಅಂಗಿಯೊಳು ಕನಸ ಕಂಡಿದ್ದೆ

ಹಾಡಿದ್ದೆ, ಆಡಿದ್ದೆ, ಎಲ್ಲರನು ಕಾಡಿದ್ದೆ

ಹೌದು ಮೊದಮೊದಲು ಹಾಗಿದ್ದೆ!

 

ಬೆಳೆದಿದ್ದೆ, ಮೊಳಕೆಯೊಳು ಒಂಚೂರು ಬಳಲಿದ್ದೆ

ಕಾದಿದ್ದೆ, ಕತ್ತಲೊಳು ಕಣ್ಣೀರ ಸುರಿಸಿದ್ದೆ

ಕಾಲದಲ್ಲಿ ಲೀನವಾಗಬೇಕೆಂದಿದ್ದೆ

ಹೌದು ನಾನು ಹಾಗೂ ಇದ್ದೆ!

 

ಅತ್ತರೂ, ಹುಚ್ಚು ಕನಸ ಕಂಡಿದ್ದೆ  

ಆದರೂ ಗೊತ್ತಿಲ್ಲದೇ ಖಾಲಿಯಾಗಿದ್ದೆ!

ಏನೋ ಆಗಬೇಕೆಂದಿದ್ದೆ, ದಾರಿ ಹುಡುಕಿದ್ದೆ

ಹೌದು ನಾನು ಆಗ ಹಾಗಿದ್ದೆ!

 

ಹಾ…ನಾನು ನಗುವಿನರಸನಾಗಿದ್ದೆ

ಹೇಗೆ ಬಂತೋ ಆ ನಗು ತಿಳಿಯದಾಗಿದ್ದೆ

ಮುಗ್ಧನೋ, ಮೂರ್ಖನೋ ಆಗಿದ್ದೆ!

ಹೌದು ನಾನು ಹೇಗೇಗೋ ಇದ್ದೆ!

 

ಹೌದೌದು, ನಾನು ಅದೃಷ್ಟವಂತನಾಗಿದ್ದೆ

ನಿಜಪ್ರೀತಿಯಲಿ ಗೆದ್ದಿದ್ದೆ,

ನಲ್ಲೆಯನು, ಎಲ್ಲವನೂ ಪಡೆದಿದ್ದೆ

ಎಷ್ಟೊಂದು ಅದೆಷ್ಟೊಂದು ಖುಷಿಯಾಗಿದ್ದೆ!

 

ಬದುಕ ಬಲ್ಲವನಾಗಿದ್ದೆ… ಆದರೆ

ತೂತು ಬಲೂನಿನಂತಿದ್ದೆ, ಎಷ್ಟೆಂದು ಗಾಳಿ ತುಂಬಿಸಲಿ

ಊದಿದ್ದೆ, ಒಳಗೊಳಗೆ ಖಾಲಿಯಾಗುತ್ತಲೇ ಇದ್ದೆ

ಹೌದು ನಾನು ಹಾಗಾದೆ!

 

ಎಲ್ಲಾ ಉಳ್ಳವನಲ್ಲಾ ನಾನು, ಆಗಸಕೇ ಏರುತಲಿದ್ದೆ

ಮರೆತಿದ್ದೆ, ಹೌದು ಮರೆತೇ ಹೋಗುತಲಿದ್ದೆ

ಬಹಳ ದೂರ ಬಂದಿದ್ದೆ, ಆದರೆ ಒಬ್ಬನೇ ಸಾಗಲಾರಂಬಿಸಿದೆ

ಹಾ, ಹೌದು ನಾನು ಹಾಗಿದ್ದೆ!

 

ಹೌದಲ್ಲಾ…ನಾನು ಬದುಕ ಬಲ್ಲವನಾಗಿದ್ದೆ

ಯೋಚಿಸುತ್ತಿದ್ದೆ ಯೋಚಿಸಲಾರದಂತಿದ್ದೆ

ಯಾಕೋ ಒಂಚೂರು ಹೆದರಿದ್ದೆ

ಹೌದು ನಾನು ಹಾಗೇ ಇದ್ದೆ!

 

ಹೌದು, ಮರೆತಿದ್ದೆ, ಮುಂದಿನ ದಾರಿ ಮರೆತಿದ್ದೆ

ಎಲ್ಲವೂ ಹೋಯಿತೋನೋ ಎಂಬ ಭ್ರಾಂತಿಯಲಿದ್ದೆ

ಎಲ್ಲರೂ ಬಿಟ್ಟು ಹೊರಟರೋ ಎಂಬಂತಿದ್ದೆ

ಒಂಚೂರು ಹೆದರಿದ್ದೆ…ಹೌದು ಹಾಗಿದ್ದೆ!

 

ಮೊದಲ ಬಾರಿಗೆ ಎಲ್ಲವನೂ ಕಂಡಿದ್ದೆ

ಅಲ್ಲಿ ನಾನಿದ್ದೆ, ನಾನೊಬ್ಬನೇ ಇದ್ದೆ

ನನ್ನವರಿದ್ದರೂ ನಾನೊಬ್ಬನೇ ಇದ್ದೆ

ಹೌದಲ್ಲ…ಯಾಕೋ ಹಾಗಿದ್ದೆ!

 

ನನ್ನ ಮೂಲೆಗೇ ನಾನೇ ಅರಸನಾಗಿದ್ದೆ

ನನ್ನ ಮಾತ್ರೆಗೆ ಪಾತ್ರೆಗೆ ನಾನೇ ಒಡೆಯನಾಗಿದ್ದೆ

ಮತ್ತೆ ಮೌನವಾದೆ, ಮಾತಿಗೆ ಅರ್ಥವಿಲ್ಲದಂತಾದೆ

ಹಾ…ನಾನು ಹಾಗಿದ್ದೆ!

 

ಹಾ…ನಾನು ಅಪ್ಪನಂತಾದೆ!

ಹಳೆಯ ಚಿತ್ರಗಳ ಹೀರೋ ನಾನಾಗಿದ್ದೆ

ಅರೆಬರೆ ನೆನಪುಗಳಲ್ಲಿ ಏನೋ ಕಂಡು ನಕ್ಕಿದ್ದೆ

ಹೌದು ನಾನು ಹಾಗಾದೆ!

 

ಹಾಗಿದ್ದೆ, ಹೀಗೆದ್ದೆ ಎಂದೆಲ್ಲಾ ಹೇಳಬೇಕೆಂದಿದ್ದೆ,

ಕಾದೆ…ಕೇಳುವ ಕಿವಿಗಾಗಿ ಕಾದೆ

ಇಲ್ಲ, ಇಲ್ಲ, ಯಾರೂ ಕೇಳುವವರಿಲ್ಲ, ಕೊಸರಾಡಿದ್ದೆ

ಹೌದು ನಾನು ಯಾಕೆ ಹೀಗಾದೆ!

 

ನನ್ನ ನಗು- ಅಳುವಿಗೆ ನಾನೇ ಪ್ರೇಕ್ಷಕನಾಗಿದ್ದೆ

ಸಿಟ್ಟು- ಸೆಡರು,ಊಹೂಂ ಬೇಡವಾಗಿದ್ದೆ

ಎಲ್ಲರೂ ನೆನಪಾದರು, ಎಲ್ಲರೂ ಬರಿಯ ನಗುವಾದರು

ಕೊನೆಯ ಪುಟದಲ್ಲಿದ್ದರು, ಪಾಪ ಎಂದರು

 

ಅರ್ಧ ಪುಟವಿತ್ತು, ಅಲ್ಲಿ ಏನು ಮಾಡಬೇಕಿತ್ತು?

ಗೊತ್ತಾಗಲಿಲ್ಲ, ಇದು ತೀರಾ ತಡವಾಯಿತು

 

ಹೌದು …ನಾನು ಬರೀ ಆಗಿದ್ದೆ!

 

 ಹೃದಯನಾಥ 😇

 

 

 

 

 

 

 

 

 

 

 

 

 

 

 

 

 

 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕೊಟ್ಟಷ್ಟೂ ಹೆಚ್ಚುವ ಸಂತೋಷ!

ಬೇಸರದಲ್ಲಿ ಬರೆದದ್ದು…ಹೌದಾ?!

ಮಣಭಾರ ಒಯ್ಯಬೇಕು, ಬೆಟ್ಟವನ್ನೂ ಏರಬೇಕು ಎಂದರೆ ಆಗದು!