ಶಿಕ್ಷಕನಿಗೆ ಆತ್ಮತೃಪ್ತಿಯೇ ಆಸ್ತಿ...

ಆಗಷ್ಟೇ ಶಾಲೆಗೆ ಹೋಗಲು‌ ಆರಂಭಿಸಿರುವ ಮಗುವಿನ ಎದುರಲ್ಲಿ ಅದರ ಟೀಚರ್ ನ್ನು ದೂರುವ ಸಾಹಸ ಮಾಡದಿರಿ...ಏಕೆಂದರೆ ಕ್ಷಣಮಾತ್ರದಲ್ಲಿ ನೀವು ಅದರ ಪಾಲಿಗೆ ವಿಲನ್ ಆಗಿಬಿಡುತ್ತೀರಿ! ಟೀಚರ್ ಎಂಬುದು ಅದರ ಪಾಲಿಗೆ ಪರಮಜ್ಞಾನಿ...ಅದೇ ಪರಮ ಸತ್ಯ. ಮುಗ್ದತೆ, ಕ್ರಿಯಾಶೀಲತೆ, ನಂಬಿಕೆ, ಪ್ರೀತಿಯ ಮೂಲಕ ದೇವರೆಂಬ ಪಟ್ಟ ಗಳಿಸುವ ಮಕ್ಕಳ ಈ ಪ್ರೀತಿಗೆ ಯಾವುದೂ ಸಮವಲ್ಲ...

ಶಿಕ್ಷಕ ವೃತ್ತಿಗೆ ಇರುವ ಬೆಲೆಯೇ ನಮ್ಮನ್ನು ಅದರತ್ತ ಸೆಳೆದುಬಿಡುತ್ತದೆ. ಸರ್ವಸ್ವವನ್ನೂ ವೃತ್ತಿಗೆ ತೇಯುವ ಮನಸ್ಸು ಕೊಡುತ್ತದೆ. ಈಗ ಶಿಕ್ಷಕ ವೃತ್ತಿಯ ಬೆಲೆ ಕಡಿಮೆಯಾಗಿದೆ ಎಂಬುದು ಒಪ್ಪಲು ಸಾಧ್ಯವಿಲ್ಲ. ‌ಅದರ ಸ್ಥಾನವನ್ನು ಯಾರೂ ಆಕ್ರಮಿಸಲೂ ಸಾಧ್ಯವಿಲ್ಲ. ಆದರೂ ಕೆಲವೊಮ್ಮೆ ಶಿಕ್ಷಕನಿಗೆ ಇನ್ನೂ ಮೇಲಿನ ಸ್ಥಾನ ಸಿಗಬೇಕೆನಿಸುವುದು ಸಹಜ.

ಪುಟಾಣಿ ಕಂದಮ್ಮಗಳನ್ನು‌ ತಾಯಿಯಂತೆ ಪಾಲಿಸುವ ಅಂಗನವಾಡಿ ಪಾಲಕಿಯರಿಗೆ ದಕ್ಕುವುದಾದರೂ ಏನು ...ಆತ್ಮತೃಪ್ತಿ ಮಾತ್ರ. ಶಿಕ್ಷಕರಲ್ಲೂ ಅತಿಥಿ ಶಿಕ್ಷಕ‌ ಎಂಬ ಪರಿಕಲ್ಪನೆಯನ್ನು ಯಾರು ಸೃಷ್ಟಿಸಿದರೋ‌ ಏನೋ. ಅಂಗನವಾಡಿ ‌ಸಹಾಯಕಿಯರ ಸ್ಥಿತಿ ಕಾಲೇಜು ‌ಶಿಕ್ಷಕರಿಗೂ‌ ಬಂದುಬಿಟ್ಟಿದೆ. ಪಿಎಫ್ ಬಿಡಿ, ಕನಿಷ್ಠ ಗುರುತು ಚೀಟಿಯೂ ಇಲ್ಲದೆ ಕೆಲಸ ಮಾಡಬೇಕಾದ ಪರಿಸ್ಥಿತಿ. ಲೇಬರ್ ಲಾ ಎನ್ನುವುದಂತೂ‌ ದೂರದ ಬೆಟ್ಟ. ಕ್ಲಾಸ್ ಮಾಡಿದರಷ್ಟೇ ಕಾಂಚಾಣ ಕೈ ಸೇರುವುದು. ಹುಷಾರಿಲ್ಲ ಎಂದು ಮನೆಯಲ್ಲಿ ಕೂತರೇ ತಿಂಗಳ ಕೊನೆಯಲ್ಲಿ ಕೈ ಕಾಲಿ ಗ್ಯಾರಂಟಿ. ತುಂಬಿದ ಹೊಟ್ಟೆಗೆ ಹಸಿವು ತಿಳಿಯದು ಹಾಗೆಯೇ ಇವರ ಸಹಾಯಕ್ಕೂ ಯಾರೂ ಬರರು. ಜೊತೆಗೆ ಇನ್ನಷ್ಟು ಡಿಗ್ರಿಗಳನ್ನು ಸೇರಿಸಿಕೊಳ್ಳಬೇಕಾದ ಅನಿವಾರ್ಯತೆ. ಒಟ್ಟು ಸೇರಿ‌ ಹೋರಾಡೋಣ ಎಂದರೆ ಇದ್ದ ಕೆಲಸವೂ ಹೋದೀತು ಎಂಬ ಭಯ...

ಇದರ ಇದರ ನಡುವೆಯೂ ಕೆಲವರು 'ಶಿಕ್ಷಕರಲ್ಲಿ ವೃತ್ತಿಪರತೆ ಕಡಿಮೆಯಾಗಿದೆ' ಎಂದು‌ ಮೈಕ್ ಮುಂದೆ ಉಸುರುತ್ತಾರೆ! ಆದರೂ ಈ ಪರಿಸ್ಥಿತಿಯಿಂದ ವಿದ್ಯಾರ್ಥಿಗಳಿಗೆ ನಷ್ಟವಾಗದು. ಶಿಕ್ಷಕ ತನ್ನ ಆತ್ಮತೃಪ್ತಿಗಾದರೂ ತನ್ನ ವೃತ್ತಿ ನಿರ್ವಹಿಸಿಯೇ ತೀರುತ್ತಾನೆ...

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪ್ರೀತಿ ಎಂದರೇನು ಎಂದು ಈಗ ಅರಿತೆನು…

ಸಿಂಹಾವಲೋಕನಕ್ಕೊಂದು ಸಮಯ

ಬೇಸರದಲ್ಲಿ ಬರೆದದ್ದು…ಹೌದಾ?!