ಕೊಟ್ಟಷ್ಟೂ ಹೆಚ್ಚುವ ಸಂತೋಷ!

ಘಟನೆ 1:

ಅದು ಮಧ್ಯಾಹ್ನದ ಬಿಸಿಲು. ಊಟದ ಹೊತ್ತಾದ್ದರಿಂದ ಮಂಗಳೂರು ನಗರದ ಕಂಕನಾಡಿ ಟ್ರಾಫಿಕ್‌ ಸಿಗ್ನಲ್‌ ಬಳಿ ವಾಹನಗಳು ಸಾಲುಗಟ್ಟಿದ್ದವು. ವಾಹನ ಸವಾರರ ಮುಖದಲ್ಲಿ ಎಲ್ಲಿಗೋ ತಲುಪುವ ಧಾವಂತ, ಅನಿವಾರ್ಯವಾಗಿ ಕಾಯಬೇಕಾದಾಗ ಅಸಹನೆ ಕಾಣುತ್ತಿತ್ತು. ಬೆಳ್ಳಿ ಕೂದಲು ಹೊತ್ತ ಮುದಿಜೀವವೊಂದು ಪ್ರತಿ ವಾಹನದ ಬಳಿಯೂ ಬಂದು ಕೈಚಾಚುತ್ತಿತ್ತು. ಯಾರೂ ಕಾಸು ಬಿಚ್ಚುತ್ತಿರಲಿಲ್ಲ.

ಅಷ್ಟರಲ್ಲಿ ನನ್ನ ಎದುರಿಗಿದ್ದ ದೊಡ್ಡ ಕಾರೊಂದರಲ್ಲಿದ್ದ ವ್ಯಕ್ತಿ ನಗುಮುಖದಲ್ಲೇ ಆ ಅಜ್ಜಿಗೆ ಒಂದು ನೋಟು ಕೈಗಿತ್ತರು. ಅಪರೂಪ ಎಂಬಂತೆ, ಕೆಲವು ನಿಮಿಷ ಪ್ರೀತಿಯಿಂದ ಮಾತನಾಡಿಸಿದರು. ಸಹಜವಾಗಿಯೇ ಅಜ್ಜಿಗೆ ಆಶ್ಚರ್ಯ, ಖುಷಿ. ಆಕೆಯದ್ದೋ ಹೊಟ್ಟೆ ಪಾಡು. ಆದರೆ ದುಡ್ಡು ಕೈಗಿತ್ತ ಆ ವ್ಯಕ್ತಿಯ ಮುಖದಲ್ಲಿ ಹೊಟ್ಟೆ ತುಂಬಿದಷ್ಟು ಸಂತೋಷ!

ಘಟನೆ 2:

ಅದೊಂದು ದೊಡ್ಡ ಮನೆ. ಯಾವುದಕ್ಕೂ ಕಡಿಮೆಯಿರಲಿಲ್ಲ. ಆದರೆ ಮನೆಯಲ್ಲಿದ್ದ ಇಳಿವಯಸ್ಸಿನ ವ್ಯಕ್ತಿಗೆ ಖಾಯಿಲೆಗಳು, ಮಾತ್ರೆಗಳೇ ಸ್ನೇಹಿತರಾಗಿದ್ದವು. ಅದಕ್ಕಾಗಿ ಅಡುಗೆ ಮನೆಗೆ ಹೋಗಿ ನೀರು ತೆಗೆದುಕೊಳ್ಳುವುದೇ ಅವರಿಗೊಂದು ಸಾಹಸ. ಅವತ್ತೂ ನಿಧಾನವಾಗಿ ಅಡುಗೆ ಮನೆಗೆ ಹೋಗುವ ಸಾಹಸ ಆರಂಭಿಸಿದರು. ಆಶ್ಚರ್ಯ! ಮುದ್ದಿನ ಮೊಮ್ಮಗಳು ನೀರು ತಂದು ಕೈಗಿತ್ತಳು. ನೀರು ಸಿಕ್ಕಿದೆ, ಅದೂ ಮೊಮ್ಮಗಳು ಕೊಟ್ಟಿದ್ದಾಳೆ. ಅಜ್ಜನಿಗೋ ಮಹದಾನಂದ. ಆ ಮುದ್ದು ಮಗುವಿನ ಮುಖದಲ್ಲಿ ಅದೆಂತದ್ದೋ ಸಂತೋಷ. ಅದು ಚಾಕಲೇಟು ಕೈಗಿತ್ತರೂ ಕಾಣದು.

ಘಟನೆ 3:

ಆ ಸಾಕು ನಾಯಿಗೆ ಮನೆ ಕಾಯುವುದಷ್ಟೇ ಕೆಲಸ. ಆದರೆ ಹೊಟ್ಟೆಗೇನಾದರೂ ಬೇಕಲ್ಲಾ…ಅವತ್ತು ಯಜಮಾನ ಮನೆಯಲ್ಲಿಲ್ಲ. ಹೊಟ್ಟೆಯೂ ತುಂಬಿಲ್ಲ. ಮೂಲೆಯಲ್ಲಿ ತೆಪ್ಪಗೆ ಮಲಗಿಕೊಂಡಿತ್ತು. ಆಗ ಯಾರೋ ಮಾತನಾಡಿದ ಸದ್ದು, ಹೌದು ಮನೆಯೊಡೆಯ. ನಾಯಿಗಾದ ಸಂತೋಷ ಅಷ್ಟಿಷ್ಟಲ್ಲ. ಓಡಿ ಆತನ ಮೈಗೆ ಹಾರಿ ಮೈಯೆಲ್ಲಾ ನೆಕ್ಕಿತು. ದಣಿದಿದ್ದ ಅವನಿಗೆ ಖುಷಿಯಲ್ಲಿ ಸುಸ್ತೆಲ್ಲಾ ಮಾಯವಾದಂತಾಯಿತು. ಇನ್ನೂ ಇಬ್ಬರ ಹೊಟ್ಟೆಯೂ ಖಾಲಿಯೇ ಇತ್ತು!

ಘಟನೆ 4:

ಹೊಸ ದುಬಾರಿ ಕಾರು ಮನೆಗೆ ತಂದ ಖುಷಿಯಲ್ಲಿದ್ದ ಯಜಮಾನರಿಗೆ ಸಿಟ್ಟು ನೆತ್ತಿಗೇರಿತ್ತು. ಮಗ ಹೇಳದೇ ಕಾರು ತೆಗೆದುಕೊಂಡು ಹೋಗಿ ಕಾರಿಗೊಂದು ಗೆರೆ ಮಾಡಿಕೊಂಡು ಬಂದಿದ್ದಾನೆ. ಕೋಟಿ ಬಾಳುವ ಕಾರು… ಸ್ವಲ್ಪ ರಿಲ್ಯಾಕ್ಸ್‌ ಮಾಡಿಕೊಳ್ಳುವ ಎಂದು ಒಳಗೊಳಗೆ ಬುಸುಗುಡುತ್ತಲೇ ಟಿವಿಯ ಬಳಿ ಬಂದರು. ಅಲ್ಲೊಬ್ಬ ಖಾವಿಧಾರಿ ಮಾತನಾಡುತ್ತಿದ್ದರು. ಅವರೂ ಕೋಟ್ಯಧೀಶರಂತೆ. ಎಲ್ಲವನ್ನೂ ಬಿಟ್ಟು ಸನ್ಯಾಸಿಯಾಗಿದ್ದಾರಂತೆ. ಮಹಾ ಕುಂಭಮೇಳಕ್ಕೆ ಬಂದು ಗಂಗೆಯಲ್ಲಿ ಮಿಂದು ಬದುಕು ಸಾರ್ಥಕವಾಯಿತು ಎನ್ನುತ್ತಿದ್ದರು. ಅವರ ಮುಖದಲ್ಲಿ ಅದೆಂಥಾ ಸಂತೋಷ…ಬಣ್ಣಿಸಲೂ ಸಾಧ್ಯವಿಲ್ಲ. ಯಜಮಾನರೂ ಏನೋ ಯೋಚಿಸುತ್ತಿದ್ದರು!

ಬದುಕಲೊಂದು ನೆಪವೇ ಈ ಸಂತೋಷ. ಅದರ ಮೂಲ ಮಾತ್ರ ನಿಗೂಢ! ಇದನ್ನು ಕೊಂಡುಕೊಳ್ಳಲಂತೂ ಸಾಧ್ಯವಿಲ್ಲ, ಕಂಡುಕೊಳ್ಳಬಹುದಷ್ಟೇ. ಈ ಕಂಡುಕೊಳ್ಳುವುದು ಎಂದರೇನು, ಕಂಡುಕೊಳ್ಳುವುದು ಎಲ್ಲಿ, ಹೇಗೆ… ಹೀಗೆ ಸಾಲು ಸಾಲು ಪ್ರಶ್ನೆಗಳು!

ಸಂತೋಷವೆಂದರೇನು ಎಂದರೆ ಆಕಾಶದ ವ್ಯಾಖ್ಯಾನ ಕೇಳಿದಂತೆ! ಒಬ್ಬೊಬ್ಬರದೂ ಒಂದೊಂದು ಉತ್ತರ. ಪ್ರತಿಯೊಬ್ಬನಿಗೂ ಅವನ ಉತ್ತರವೇ ಸರಿ. ವಿಶೇಷವೆಂದರೆ,  ಪ್ರಶ್ನೆಗೆ ಉತ್ತರ ಗೊತ್ತಿಲ್ಲ ಎನ್ನುವವರಿಲ್ಲ. ಹಸುಗೂಸಿನಿಂದ ಹಿಡಿದು ಹಿರಿಜೀವವೂ ತನ್ನದೇ ಬಗೆಯಲ್ಲಿ ಆಕಾಶವನ್ನು ಬಣ್ಣಿಸುತ್ತದೆ. ಇಲ್ಲಿ ಎಲ್ಲರ ಉತ್ತರವೂ ಸರಿಯೇ! ಸಂತೋಷವೆಂಬ ವ್ಯಾಖ್ಯಾನವೂ ಹಾಗೆಯೇ…

ಸಂತೋಷ ಎಲ್ಲಿದೆ?

ಅದು ಕಾಣುವ ಕಣ್ಣುಗಳಲ್ಲಿದೆ. ಅನುಭವಿಸುವ ಮನಸ್ಸುಗಳಲ್ಲಿದೆ. ನಮ್ಮಲ್ಲಿ ಕೆಲವರಿಗೆ ಪಡೆಯುವುದರಲ್ಲಿ  ಖುಷಿ, ಇನ್ನೂ ಕೆಲವರಿಗೆ ಕೊಡುವುದರಲ್ಲಿ ಖುಷಿ. ಕೆಲವರಿಗೆ ಕಾಯಿಸುವುದೇ ಸಂತೋಷ, ಇನ್ನೂ ಕೆಲವರಿಗೆ ಕಾಯುವುದರಲ್ಲಿ ಸಂತೋಷ. ಹಲವರಿಗೆ ಇತರರ ಕಷ್ಟ ನೋಡುವುದರಲ್ಲಿ, ಕೊಡುವುದರಲ್ಲಿ ಅದೆಂತದ್ದೋ ಮಹದಾನಂದ! ವ್ಯತಿರಿಕ್ತವಾಗಿ ಕೆಲವರಿಗೆ ಇತರರ ಕಷ್ಟ ಪರಿಹರಿಸುವುದರಲ್ಲೇ ಆನಂದ…

ಮನಸ್ಸಿನ ನಿಯಂತ್ರಣವೆಂಬ ಅಡಿಪಾಯ

ಮನಸ್ಸನ್ನು, ಹುಚ್ಚು ಮನಸ್ಸು ಎನ್ನುತ್ತೇವೆ. ಅದು ಚಂಚಲ. ಹಾಗಾದರೆ ಈ ಮನಸ್ಸನ್ನು ನಿಯಂತ್ರಿಸುವುದಾದರೂ ಹೇಗೆ, ಆ ಮೂಲಕ ಸಂತೋಷವನ್ನೂ ಸಾಧಿಸುವುದಾದರೂ ಹೇಗೆ ಎಂಬ ಪ್ರಶ್ನೆ ಉದ್ಭವಿಸುವುದು ಸಹಜವೇ. ಅದೊಂದು ಯೋಗಾಯೋಗ ಅನ್ನಬಹುದು. ಕೆಲವೊಮ್ಮೆ ನಮ್ಮಲ್ಲಿನ ಸಂಸ್ಕಾರಗಳು ಹುಟ್ಟಿನಿಂದಲೇ ಬಂದಿರುತ್ತವೆ. ಆತ್ಮವನ್ನು ನಂಬುವ ನಾವು ಅದು ನಾವು ಪೂರ್ವಜನ್ಮದ ಸತ್ಕರ್ಮದ ಫಲ ಎಂದು ನಂಬುತ್ತೇವೆ. ಕೆಲವೊಮ್ಮೆ ನಮ್ಮ ಹಿರಿಯರು ನಮಗೆ ಉತ್ತಮ ಸಂಸ್ಕಾರಗಳನ್ನು ಕಲಿಸುತ್ತಾರೆ. ಅದು ಬದುಕನ್ನು ಹೆಚ್ಚು ಅರ್ಥಮಾಡಿಕೊಳ್ಳಲು ನೆರವಾಗುತ್ತವೆ.

ಬದುಕನ್ನು ಅರ್ಥಮಾಡಿಕೊಳ್ಳುವುದು

ಈ ಬದುಕನ್ನು ಅರ್ಥಮಾಡಿಕೊಳ್ಳುವುದು ಎಂದರೇನು ಎಂಬುದು ಇನ್ನೊಂದು ಪ್ರಶ್ನೆ! ಬದುಕು ಬಲುಸುಂದರ ಅಥವಾ ಲೈಫ್‌ ಈಸ್‌ ಬ್ಯೂಟಿಫುಲ್‌ ಎಂದು ನಾವು ಬಣ್ಣಿಸುತ್ತೇವೆ. ಹಾಗೆಂದು ಬದುಕೊಂದು  ಹೂವಿನ ಹಾಸಲ್ಲ. ಕಷ್ಟ ಮತ್ತು ಸುಖ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅದಕ್ಕೇ ಹೇಳಿರುವುದು, ಸುಖವೆಂದರೆ ಹಿಗ್ಗಬೇಡ, ಕಷ್ಟ ಬಂದರೆ ಕುಗ್ಗಬೇಡ ಎಂಬುದು. ಇದು ಸಹಜ, ಈ ಸತ್ಯವನ್ನು ಜೀರ್ಣಿಸಿಕೊಂಡಾಗಲಷ್ಟೇ ಬದುಕು ಸುಂದರವಾಗಿರಲು ಸಾಧ್ಯ.

ಇದು ಸಂತೋಷಕ್ಕೂ ಅನ್ವಯವಾಗುತ್ತದೆ. ನೀವು ಯಾವ ದೇವರನ್ನು ಎಷ್ಟೇ ಬೇಡಿಕೊಂಡರೂ ಸುಖ ಖಾಯಂ ಆಗುವುದಿಲ್ಲ. ದುಃಖ ಬೆನ್ನಿಗೇ ಇರುತ್ತದೆ. ಹೀಗ್ಯಾಕೆ ಎಂಬ ಪ್ರಶ್ನೆ ಉದ್ಭವಿಸಬಹುದು. ಇದೇ ಜಗದ ನಿಯಮ ಎಂಬ ಉತ್ತರದಲ್ಲಿ ಎಲ್ಲವೂ ಅಡಗಿದೆ. ಸೃಷ್ಟಿಕರ್ತ ಯಾರಿಗೂ ಅನ್ಯಾಯ ಮಾಡುವುದಿಲ್ಲ. ಎಲ್ಲವೂ ಎಲ್ಲರಿಗೂ ಸಮಾನವಾಗಿದೆ. ಕೆಲವೊಮ್ಮೆ ನಮ್ಮ ಪೂರ್ವ ಜನ್ಮದ ಫಲಾಫಲಗಳನ್ನು ಅನುಭವಿಸಬಹುದಷ್ಟೇ.

ಸಂತೋಷದ ʼಸಾಧನೆʼ

ಸಂತೋಷದ ಸಾಧನೆ ಬದುಕನ್ನು ಅರ್ಥಮಾಡಿಕೊಳ್ಳುವುದರಿಂದ ಆರಂಭವಾಗುತ್ತದೆ. ಜೀವನದಲ್ಲಿ ಯಾವತ್ತೂ ನಮಗಾಗಿ ಸಂತೋಷ ಕಾದಿರುತ್ತದೆ ಅಂದುಕೊಂಡರೆ ಅದು ಭ್ರಮೆಯಷ್ಟೇ. ಜಗತ್ತು ನಮಗೆ ಸಂತೋಷ ಕೊಡಲೆಂದು ಇರುವುದಿಲ್ಲ. ಇತರರು ನಮ್ಮ ಮನಸ್ಸಿಗೆ ಸಿಹಿಯೆನಿಸುವ ಮಾತುಗಳನ್ನೇ ಆಡುವುದಿಲ್ಲ. ಕೆಲವರು ಇದನ್ನು ಅರ್ಥಮಾಡಿಕೊಳ್ಳಲು ಸೋಲುತ್ತಾರೆ. ಸಂತೋಷ ಮತ್ತು ದುಃಖ ಎರಡೂ ಕ್ಷಣಿಕ ಮತ್ತು ಎಲ್ಲರಿಗೂ ಇರುವಂತದ್ದು ಎಂಬುದನ್ನು ಅರಿಯದೆ ಅವಸರದ ನಿರ್ಧಾರಕ್ಕೆ ಬರುತ್ತಾರೆ. ಇತರರು ಸರಿಯಿಲ್ಲ ಎಂದು ಕೆಲವರು ದೂರಿದರೆ ಹಲವರ ಪ್ರಕಾರ ಈ ಸೃಷ್ಟಿಯೇ ಸರಿಯಿಲ್ಲ!

ನಿರೀಕ್ಷೆಯೆಂಬ ನೋವಿನ ಮೂಲ

ಸಂತೋಷದಿಂದ ಇದ್ದು ಬದುಕನ್ನು ಆನಂದಿಸುವವರನ್ನೊಮ್ಮೆ ಸೂಕ್ಷ್ಮವಾಗಿ ಗಮನಿಸಿ. ಅವರಿಗೆ ಪರಮಾತ್ಮ ಸಂತೋಷವನ್ನೇ ಕೊಟ್ಟುಬಿಟ್ಟಿದ್ದಾನೆ ಎಂದಲ್ಲ. ಅಂತವರಲ್ಲಿ ಹೆಚ್ಚಿನವರು ನೋವು ಕೊಡುವ ದೊಡ್ಡ ನಿರೀಕ್ಷೆಗಳನ್ನು ಇಟ್ಟುಕೊಂಡಿರುವುದಿಲ್ಲ. ಹಾಗೆಂದು, ಅವರದ್ದು ಗೊತ್ತುಗುರಿಯಿಲ್ಲದ ಬದುಕು ಎಂದಲ್ಲ. ಆದರೆ ಅವರ ಬಳಿ ಗುರಿ ತಪ್ಪಿದರೆ ಮತ್ತೊಂದು ಆಯ್ಕೆ ಇರುತ್ತದೆ. ಉದಾಹರಣೆಗೆ, ಹಳ್ಳಿಯಲ್ಲಿ ಹುಟ್ಟಿದ ವ್ಯಕ್ತಿಯೊಬ್ಬ ಕಷ್ಟಪಟ್ಟು ಓದಿ ಎಂಜಿನಿಯರ್‌ ಆಗಿರುತ್ತಾನೆ. ಇನ್ನೇನು ದೊಡ್ಡ ಹುದ್ದೆಗೇರುತ್ತೇನೆ ಎಂದು ಕನಸು ಕಾಣುವಾಗಲೇ, ಹಳ್ಳಿಯಲ್ಲಿರುವ ತನ್ನ ಹೆತ್ತವರನ್ನು ನೋಡಿಕೊಳ್ಳುವ ಜವಾಬ್ದಾರಿ ಅವನ ಹೆಗಲೇರುತ್ತದೆ. ಬದುಕಿನ ಹಾದಿ ಬದಲಾಗುತ್ತದೆ. ಆ ಕ್ಷಣದಲ್ಲಿ ಕೊಂಕು ಮಾತುಗಳು ನೋಯಿಸಬಹುದು. ಆರ್ಥಿಕ ಪರಿಸ್ಥಿತಿ ಹಳಿತಪ್ಪಬಹುದು. ಆದರೆ ವಾಸ್ತವವನ್ನು ಅರ್ಥಮಾಡಿಕೊಂಡು ಮುನ್ನಡೆಯುವುದೇ ಅತ್ಯುತ್ತಮ ಆಯ್ಕೆ. ನೆನಪಿಡಿ, ಸಂತೋಷ- ದುಃಖ ಎಲ್ಲವೂ ನಮ್ಮ ದೃಷ್ಟಿಕೋನದಲ್ಲಿದೆ.

ದೃಢ ನಿರ್ಧಾರ ಮತ್ತು ಸಂತೋಷ

ಇತರರ ಮಾತು ಕೇಳಬೇಕು, ಅದರಲ್ಲೂ ಹೆತ್ತವರ, ಗುರುಗಳ, ನಮ್ಮ ಒಳಿತನ್ನು ಬಯಸುವವರ ಮಾತು ಕೇಳಿದರೆ ನಾವು ಖಿನ್ನತೆಗೊಳಗಾಗುವುದು ತಪ್ಪುತ್ತದೆ. ಎಷ್ಟೇ ಕಷ್ಟದಲ್ಲೂ ಎದಗುಂದದೆ ಮುನ್ನಡೆಯಲು ಸಾಧ್ಯವಾಗುತ್ತದೆ. ಆದತೆ ಇತರರ ಮಾತನ್ನು ತೀರಾ ಗಂಭೀರವಾಗಿ ತೆಗೆದುಕೊಳ್ಳುವುದೂ, ನಮ್ಮನ್ನು ಇತರರ ಜೊತೆ ಹೋಲಿಸಿಕೊಳ್ಳುವುದು ನಮಗೆ ಉರುಳಾಗಬಹುದು. ಇತರರು ನಮ್ಮ ನಿರ್ಧಾರದ ಬಗ್ಗೆ ಹಗುರವಾಗಿ ಮಾತನಾಡಬಹುದು, ನಮ್ಮ ಗುರಿ ತಲುಪಲು ಸಾಧ್ಯವೇ ಇಲ್ಲ ಎನ್ನಬಹುದು, ಆದರೆ ಕೆಲವೊಮ್ಮೆ ಇವನ್ನೆಲ್ಲಾ ಕೇಳಿ ಬಿಡಬೇಕಾಗಬಹುದು. ಇಲ್ಲವಾದರೆ ನಮ್ಮ ಸಂತೋಷ ನಾಶವಾಗುವುದು ಮಾತ್ರವಲ್ಲ, ನಮ್ಮ ಜೀವನವೇ ಮುಳುಗಬಹುದು. ಇಲ್ಲಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ನಮ್ಮ ನಿರ್ಧಾರದ ಮೇಲೆ ಆತ್ಮವಿಶ್ವಾಸವಿದ್ದರೆ ಸಾಕು.

ಇತರರ ಮಾತಿಗೆ ಮಣೆ ಹಾಕಿದ್ದರೆ ಹಾರೆಕ್ಕಳ ಹಜಬ್ಬರಂತಹ ಬುಟ್ಟಿಯಲ್ಲಿ ಕಿತ್ತಳೆ ಮಾರುತ್ತಿದ್ದ ವ್ಯಕ್ತಿ ಶಾಲೆ ನಿರ್ಮಿಸಲು ಸಾಧ್ಯವಾಗುತ್ತಿತ್ತೇ, ʼಬದುಕಿರುವ ದೇವರುʼ ಎಂದೇ ಜನರು ಪ್ರೀತಿಯಿಂದ ಕರೆಯುವ ಸಮಾಜ ಸೇವಕ ಈಶ್ವರ ಮಲ್ಪೆ ತಮ್ಮ ಜೀವನದ ಬಗ್ಗೆ ಯೋಚಿಸದೆ ಅಷ್ಟೊಂದು ಜನರ ಜೀವನ ರಕ್ಷಿಸಲು ಸಾಧ್ಯವಾಗುತ್ತಿತ್ತೇ? ಇವರೆಲ್ಲಾ ಇತರರ ಸಂತೋಷದಲ್ಲಿ ಖುಷಿ ಕಾಣುವ ಪುಣ್ಯಾತ್ಮರು. ಕೆಲವೊಮ್ಮೆ ಸಂತೋಷಕ್ಕೆ ಯಾವುದೇ ಸೆಲೆಯಿರುವುದಿಲ್ಲ. ನಾವೇ ಸೃಷ್ಟಿಸಿಕೊಳ್ಳಬೇಕಾಗುತ್ತದೆ. ಅದಕ್ಕಾಗಿ ನಾವು ಇತರರ ಮೇಲೆ ಅವಲಂಭಿಸಿದರೆ ಸಂತೋಷಕ್ಕಿಂತ ಹೆಚ್ಚಾಗಿ ದುಃಖವೇ ಸಿಗುತ್ತದೆ.

ಮಾಡುವ ಕೆಲಸದಲ್ಲಿ ಸಂತೋಷ

ಇಷ್ಟಾದರೂ ಕೆಲವೊಮ್ಮೆ ಕೊರಗು ಕಾಡಬಹುದು. ಉದಾಹರಣೆಗೆ, ನಿಮಗೆ ಬ್ಯಾಡ್ಮಿಂಟನ್‌ ಆದರೆ ಪ್ರಾಣ, ಅದಕ್ಕೆ ಬೇಕಾದ ಜ್ಞಾನ, ಕೌಶಲ್ಯಗಳೂ ಇವೆ. ಆದರೆ ಯಾವುದೋ ಅಪಘಾತದಿಂದ ಕೈಗಳು ಸ್ವಾಧೀನ ಕಳೆದುಕೊಂಡುಬಿಟ್ಟರೆ… ಪರಿಸ್ಥಿತಿಯನ್ನು ಕಲ್ಪಿಸಿಕೊಳ್ಳಿ.  ನಾವಂದುಕೊಂಡಂತೆ ಬದುಕಲು ಆಗುವುದಿಲ್ಲ ಎಂಬುದು ಕಣ್ಣೆದುರು ಇರುವ ಕಹಿ ಸತ್ಯ. ಆಗ  ಮಾಯಾಮೃಗವನ್ನು ಬೆನ್ನಟ್ಟುವ ಬದಲು ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಬದುಕುವುದೇ ಬುದ್ಧಿವಂತಿಕೆ. ಇದರಿಂದ ನಾವು ಸಂತೋಷ ಕಾಣುವುದು ಮಾತ್ರವಲ್ಲ, ಇತರರಿಗೂ ನಾವು ಹೊರೆಯಾಗುವುದು ತಪ್ಪುತ್ತದೆಯಲ್ಲವೇ?

ಕೊರಗನ್ನು ನಿಭಾಯಿಸುವುದು ಹೇಗೆ?

ಕಣ್ಣು ಒರೆಸುವ ಕೈಗಳು ಇಲ್ಲದಿದ್ದಾಗ, ನೋವಿಗೆ ಹೆಗಲಾಗುವವರು ಯಾರೂ ಇಲ್ಲದಾದಾಗ ಕೆಲವೊಮ್ಮೆ ಸಂತೋಷದ ಸಾಧನೆ ಕಷ್ಟ ಎನಿಸಬಹುದು. ಆದರೆ ನೀವು ಗಮನಿಸಿರಬಹುದು, ವ್ಯಾಪಾರಿಯೊಬ್ಬ ದೇವರನ್ನು ನೆನೆದು ಕೆಲಸ ಆರಂಭಿಸುತ್ತಾನೆ. ತಾನು ಶ್ರಮ ಹಾಕಿದರೂ, ಫಲಾಫಲವನ್ನು ದೇವರಿಗೆ ಬಿಡುತ್ತಾನೆ. ದಿನದ ಗಳಿಕೆಯನ್ನು ದೇವರೇ ನನಗೆ ನೀಡಿದ್ದಾನೆ ಎಂದು ಆತನನ್ನು ನೆನೆದು ಸಂತೃಪ್ತಿಯಿಂದ ಬದುಕುತ್ತಾನೆ. ಸಂತೋಷವಾಗಿರಲು ಎಷ್ಟೊಂದು ಚೆಂದದ ಉಪಾಯ ಅಲ್ಲವೇ? ಕೆಲವರಂತೂ ತಮಗೆ ಖುಷಿ ಕೊಡುವ ಕೆಲಸವನ್ನಷ್ಟೇ ಮಾಡುತ್ತಾರೆ…

ಮೋಸ, ಅನ್ಯಾಯ, ಕಳ್ಳತನ ಮೊದಲಾದವುಗಳು ಕೆಲವರಿಗೆ ಸಂತೋಷ ನೀಡಬಹುದು. ಆದರೆ, ಅದು ಕೇವಲ ಕ್ಷಣಿಕ. ಬಳಿಕ ಅವು ಜೀವನ ಪರ್ಯಂತ ನಾವು ತಪ್ಪಿತಸ್ಥ ಭಾವನೆಯಿಂದ ಕೊರಗುವಂತೆ ಮಾಡುತ್ತವೆ. ಇಲ್ಲದಿರುವುದನ್ನು ನೆನದು ಬಾಳುವುದಕ್ಕಿಂತ ಇರುವುದರಲ್ಲಿ ತೃಪ್ತಿ ಪಡುವುದೇ ಜೀವನ ಎನ್ನುವುದು ಇದಕ್ಕೇ. ನಮ್ಮೊಳಗೇ ಇರುವ ಸಂತೋಷವನ್ನು ಎಲ್ಲೋ ಹುಡುಕಿದರೆ ಹೇಗೆ? ಅಲ್ಲವೇ.

ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರಿಂದ ಮೆಚ್ಚುಗೆ ರೂಪದ ಆಶೀರ್ವಾದ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬೇಸರದಲ್ಲಿ ಬರೆದದ್ದು…ಹೌದಾ?!

ಮಣಭಾರ ಒಯ್ಯಬೇಕು, ಬೆಟ್ಟವನ್ನೂ ಏರಬೇಕು ಎಂದರೆ ಆಗದು!