ಸರಳ ಬದುಕು … ಜೀವನ ಬಲುಸುಂದರ


"ನಾವು ಜೀವನವನ್ನು ಎಷ್ಟು ಸರಳಗೊಳಿಸಿಕೊಳ್ಳುತ್ತೇವೆಯೋ ಅಷ್ಟು ಲೋಕದ ನಿಯಮಗಳು ಕಡಿಮೆ ಸಂಕೀರ್ಣ ಎಂದೆನಿಸುತ್ತವೆ." - ಹೆನ್ರಿ ಡೇವಿಡ್ ಥೋರೋ

ಬದುಕಿನ ವ್ಯಾಖ್ಯಾನ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಾ ಹೋಗುತ್ತದೆ. ಸಾಮಾನ್ಯ ಅರ್ಥದಲ್ಲಿ ಅದನ್ನು ಅತಿಮಾನುಶ ಶಕ್ತಿಯೊಂದು ನಮಗೆ ನೀಡುವ ಉಡುಗೊರೆ ಎನ್ನಬಹುದೇನೋ. ಜೇಡಿ ಮಣ್ಣಿನಂತಾದ್ದು. ಅದನ್ನು ಮೂರ್ತಿಯಾಗಿಸುವುದು ಅಥವಾ ಕೆಸರಾಗಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ. 

ಬದುಕು ಕಷ್ಟವೇ?

ಬದುಕು ಅಥವಾ ಜೀವನದ ಬಗ್ಗೆ ಮಾತನಾಡುವಾಗ ಅದು ಅಂದುಕೊಂಡಂತಲ್ಲಾ, ಕಷ್ಟಗಳು ಬರುತ್ತವೆ ಎಂದೆಲ್ಲಾ ಮಾತನಾಡುತ್ತೇವೆ.  ಹಾಗಾದರೆ ಜೀವನವೆಂಬುದು ಅಷ್ಟೊಂದು ಕಷ್ಟವಾ? ಕತ್ತಲು ಬೆಳಕು ಬರುವಂತೆ, ಬೇಸಿಗೆ ಮುಗಿದು ಮಳೆಗಾಲ ಬರುವಂತೆ ಇದೂ ಕೂಡ. ಇಲ್ಲಿಯೂ ಕಷ್ಟಗಳ ನಂತರ ಸುಖವೂ ಇದೆ, ಸೋಲುಗಳ ನಂತರ ಗೆಲುವಿನ ನಗುವೂ ಇರುತ್ತದೆಯಲ್ಲವೇ? 

ಬಹುಶಃ ಬದುಕು ಎಂದ ಕೂಡಲೇ ಕಷ್ಟಗಳ ಬಗ್ಗೆ ಮಾತನಾಡಲೂ ಒಂದು ಕಾರಣವಿರಬಹುದು. ಅದು ವ್ಯಕ್ತಿಯೊಬ್ಬನನ್ನು ಅಥವಾ ಮಕ್ಕಳನ್ನು ಮುಂದೆ ಬರಬಹುದಾದ ಸಂಕಷ್ಟಗಳಿಗೆ ಮಾನಸಿಕವಾಗಿ ಸಿದ್ಧಪಡಿಸುವುದು. ಅಪ್ಪ-ಅಮ್ಮನ ಮುದ್ದು, ತುಂಟಾಟದ ಬಾಲ್ಯದಿಂದ ಬದಲಾಗುವ ಬದುಕಿನ ಸೂಚನೆ ಕೊಡುವುದು. 

ಆದರೂ ಒಮ್ಮೊಮ್ಮೆ ನಾವು ನಮ್ಮ ನೀವನವನ್ನು ಕಷ್ಟಗಳ ಸಂಕೋಲೆ ಎಂಬ ಭ್ರಮೆಯಲ್ಲೇ ಬದುಕುತ್ತೇವೆ… ಅರ್ಥಾತ್‌ ಜೇಡಿ ಮಣ್ಣಿನ ಉಂಡೆಯನ್ನು ಮೂರ್ತಿಯಾಗಿಸುವ ಬದಲು ಕೆಸರು ಮಾಡಿಕೊಳ್ಳುತ್ತೇವೆ. ಆ ಕೆಸರನ್ನು ತೊಳೆದುಕೊಳ್ಳಲು ಉಳಿದ ಸಮಯವನ್ನೆಲ್ಲಾ ವ್ಯರ್ಥ ಮಾಡುತ್ತೇವೆ. ಒಮ್ಮೆ ಮಾತ್ರ ಸಿಗುವ ಉಡುಗೊರೆಯನ್ನು ಕೈಯಾರೆ ಹಾಳುಮಾಡಿಕೊಳ್ಳುತ್ತೇವೆ. 

ಯಾಕೆ ಹೀಗೆ?   

ಉತ್ತರ ಸರಳ. ಬದುಕು ನಮ್ಮ ಕೈಯಲ್ಲಿದೆ ಎಂಬ ಸತ್ಯವನ್ನು ನಾವು ಮರೆಯುವುದು. ಬದುಕನ್ನು ತೀರಾ ಸರಳ ಅಥವಾ ತೀರಾ ಜಠಿಲ ಎಂದುಕೊಳ್ಳುವುದು, ಎರಡೂ ಸಮಸ್ಯೆಯೇ. ಇದಕ್ಕೆ ಉದಾಹರಣೆ ನಾವೇ ಆಗಿರಬಹುದು, ಅಥವಾ ನಮ್ಮ ಬಂಧುಗಳು, ನೆರೆಹೊರೆಯವರು, ಸೆಲೆಬ್ರಿಟಿಗಳು ಯಾರೂ ಆಗಿರಬಹುದು. 

ಕೆಲವರನ್ನು ನೋಡಿ, ವಯಸ್ಸಿಗೇ ಬರುತ್ತಲೇ ಕಲ್ಪನಾ ಲೋಕದಲ್ಲಿ ವಿಹರಿಸಲಾರಂಭಿಸುತ್ತಾರೆ. ಕೈಯಲ್ಲಿ ಕಾಸಿದ್ದರಂತೂ ಕೇಳುವುದೇ ಬೇಡ. ಅವರು ಸಮಾಜ ಬಿಡಿ, ಕುಟುಂಬವನ್ನೇ ಮರೆತು, ಯಾರ ಮಾತನ್ನೂ ಕೇಳದೆ ದುಶ್ಚಟಗಳ ದಾಸರಾಗಿಬಿಡುತ್ತಾರೆ. ಸಹಜವಾಗಿಯೇ ಅನಾರೋಗ್ಯ ಕಾಡುತ್ತದೆ. ಇವರು ಯಾವತ್ತೂ ಬದುಕನ್ನು ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ಗಂಭೀರ ಎಂದು ಗೊತ್ತಾದಾಗ ತಡವಾಗಿಬಿಟ್ಟಿರುತ್ತದೆ. ಅಮೂಲ್ಯವಾದ ಜೀವನವನ್ನು ಕೈಯಾರೆ ಹಾಳುಮಾಡಿಕೊಳ್ಳುವುದು ಎಂದರೆ ಇದೇ. 

ಬದುಕು ಅಂದ್ರೆ ರೂಲ್ಸು!

ನೀವು ಕೆಲವರನ್ನು ಅಥವಾ ಕೆಲವು ಕುಟುಂಬಗಳನ್ನು ನೋಡಿರುತ್ತೀರಿ, ಜೀವನವನ್ನು ಭಯಂಕರ ಗಂಭೀರವಾಗಿ ತೆಗೆದುಕೊಂಡವರು. ಅವರು ಬೆಳಿಗ್ಗಿನಿಂದ ರಾತ್ರೆ ಮಲಗುವವರೆಗೂ ತಾವೇ ನೂರಾರು ಕಟ್ಟುಪಾಡುಗಳನ್ನು ಹಾಕಿಕೊಂಡಿರುತ್ತಾರೆ. ಅದಕ್ಕೂ ಮಿಗಿಲಾಗಿ ಮನೆಯ ಇತರರ ಮೇಲೂ ಹೇರಿರುತ್ತಾರೆ. ಊಟ ತಿಂಡಿ, ಕೂರುವುದು- ನಡೆಯುವುದು- ನೋಡುವುದು, ಮಾತು, ಉಡುಪು ಎಲ್ಲದಕ್ಕೂ ಕಟ್ಟುಪಾಡು. ಯಾರೂ ಮಾತು ಮೀರುವಂತಿಲ್ಲ. ಶಿಸ್ತೇನೋ ಹೌದು…ಆದರೆ ಇಂತಹ ಜೀವನವನ್ನು ನೋಡುವಾಗಲೇ ಉಸಿರುಗಟ್ಟಿದಂತಾಗುತ್ತದೆ. ಇನ್ನು ಬದುಕಿದರೆ? ಸ್ವಾತಂತ್ರ್ಯ ಇದ್ದಾಗ ಅರಳುವ ಕ್ರಿಯಾಶೀಲತೆ, ಕಲೆ, ಅಥವಾ ಇನ್ಯಾವುದೋ ಪ್ರತಿಭೆ ಇಲ್ಲಿ ಕಮರುತ್ತದೆ. ಅರಳಿದರೂ ಅದರ ವ್ಯಾಪ್ತಿ ಸೀಮಿತವಾಗಿರುತ್ತದೆ. 

ಬೇರೆಯವರಿಗಾಗಿ ಬದುಕುವವರು! 

ಇದನ್ನು ತಮಾಷೆ ಎನ್ನಬೇಕೋ, ದುರಾದೃಷ್ಟ ಎನ್ನಬೇಕೋ ತಿಳಿಯದು. ಆದರೆ ಒಂದು ವರ್ಗದ ಜನ (ನಾವೂ ಆಗಿರಬಹುದು!) ತಮಗಿಂತ ಹೆಚ್ಚಾಗಿ ಇತರರಿಗಾಗಿ ಬದುಕುತ್ತಾರೆ. ಅವರು ಏನು ಹೇಳುತ್ತಾರೇನೋ, ಇವರು ಏನಂದುಕೊಳ್ಳುತ್ತಾರೇನೋ ಎಂಬುದೇ ಇವರ ಸಮಸ್ಯೆ! ಹೋಗಲಿ, ಸೆಲೆಬ್ರಿಟಿಗಳಿಗೆ ಲಕ್ಷಾಂತರ ಅಭಿಮಾನಿಗಳಿರುತ್ತಾರೆ. ಅವರು ಕೂತರೂ, ನಿಂತರೂ ಅದು ಬೇಗನೆ ʼಬ್ರೇಕ್‌ʼ ಆಗಿಬಿಡುತ್ತದೆ. ಹಾಗಾಗಿ ಇತರರ ಮುಂದೆ ಹೇಗೆ ಕಾಣಿಸಿಕೊಳ್ಳಬೇಕು ಎಂಬುದೂ ಮುಖ್ಯವೇ. ಆದರೆ ನಮ್ಮ- ನಿಮ್ಮಂತವರಿಗೆ? ಸಮಾಜದ ಮುಂದೆ ವಿಲಕ್ಷಣವಾಗಿರಬಾರದು ಎಂಬುದನ್ನು ಬಿಟ್ಟರೆ ನಮ್ಮ ಜೀವನ ನಮಗೆ ಮುಖ್ಯ. ಆದರೂ ಇತರರ ಚಿಂತೆ ಏಕೆ… ಯಾರು ಏನೇ ಅಂದುಕೊಳ್ಳಲಿ, ವ್ಯಂಗ್ಯವಾಡಲಿ, ನಮ್ಮ ಜೀವನವಷ್ಟೇ ನಮಗೆ ಮುಖ್ಯವಲ್ಲವೇ. ಅದರಲ್ಲೂ ಊಟ- ತಿಂಡಿ ತಿನ್ನಲೂ ಇತರರ ಹಂಗ್ಯಾಕೆ? ನಮ್ಮ ಹೊಟ್ಟೆ ನಮ್ಮದು. 

ಹಾಗಾದರೆ ಬದುಕು ಸುಲಭವೇ?

"ಸಣ್ಣ ವಿಷಯಗಳನ್ನು ಆನಂದಿಸಿ, ಒಂದು ದಿನ ನೀವು ಹಿಂತಿರುಗಿ ನೋಡಬಹುದು ಮತ್ತು ಅವುಗಳು ದೊಡ್ಡ ವಿಷಯಗಳು ಅನ್ನಿಸಬಹುದು." - ರಾಬರ್ಟ್ ಬ್ರಾಲ್ಟ್

ಹೌದು, ಅಲ್ಲ ಇವೆರಡೂ ಇಲ್ಲಿ ಉತ್ತರವಲ್ಲ! ಆದರೆ ಬದುಕು ನಮ್ಮ ಕೈಯಲ್ಲಿಗೆ ಎಂಬುದು ಸತ್ಯವಲ್ಲವೇ… ಇದರರ್ಥ ಜೀವನ ಎಂದರೆ ನಾವಂದುಕೊಂಡಂತೆ, ನಾವು ಜೀವಿಸಿದಂತೆ. ಇದು ಸುಲಭವೂ ಅಲ್ಲ ಕಷ್ಟವೂ ಅಲ್ಲ. ಎಲ್ಲವೂ ನಮ್ಮ ಕೈಯಲ್ಲಿದೆ. 

ಸರಳತೆಯೇ ಸಂತೋಷದ ಮೂಲತತ್ವ, ಎನ್ನುತ್ತಾರೆ ಲೇಖಕ ಸೆಡ್ರಿಕ್ ಬ್ಲೆಡ್ಸೋ. ಹುಟ್ಟು- ಸಾವು, ಕಷ್ಟ-ಸುಖ ಇಷ್ಟನ್ನು ನಮ್ಮ ಹಣೆಯಲ್ಲಿ ಬರೆದಾಗಿರುವಾಗ ಇರುವ ಸಮಯವನ್ನು ಬುದ್ಧಿವಂತಿಕೆಯಿಂದ ಬಳಸಿಕೊಳ್ಳುವುದು ಮುಖ್ಯವಲ್ಲವೇ… ಈ ಬುದ್ಧಿವಂತಿಕೆಯಲ್ಲಿ ಅತ್ಯಂತ ಪ್ರಮುಖವಾದುದು ಬ್ಲೆಡ್ಸೋ ಹೇಳಿರುವ ಸರಳತೆ. ಬದುಕೆಂಬ ನೂಲಲ್ಲಿ ಸುಕ್ಕಾದಾಗ ತಾಳ್ಮೆಯಿಂದ ಬಿಡಿಸುವುದೇ ಈ ಬುದ್ಧಿವಂತಿಕೆ.. 

ಸರಳತೆಯೆಂದರೆ ನಿರ್ಲಕ್ಷ್ಯವಲ್ಲ. ಬದುಕನ್ನು ನಿರ್ಲಕ್ಷಿಸದೆ, ಅದರ ಬೆಲೆಯನ್ನು ಅರ್ಥಮಾಡಿಕೊಂಡು, ನಮ್ಮ ಇತಿಮಿತಿಯೊಳಗೆ ಇರುವುದು. ಇತರರಿಗೆ ಹೊರೆಯಾಗದಂತೆ, ಆದಷ್ಟು ಸಹಾಯ ಮಾಡುತ್ತಾ, ಇರುವುದರಲ್ಲಿ ನೆಮ್ಮದಿ ಕಂಡುಕೊಳ್ಳುವುದು. ಇನ್ನಷ್ಟು ಬಿಡಿಸಿ ಹೇಳೂವುದಾದರೆ…

ತಾಳ್ಮೆ: ಮೊದಲನೆಯದಾಗಿ ಸಿಟ್ಟು ಮಾಡಿಕೊಳ್ಳದಿರುವುದು ಅತ್ಯುತ್ತಮ. ಸಿಟ್ಟು ಬಂತು ಎನಿಸಿದಾಗ, ಕೆಲ ಕ್ಷಣ ಮೌನವಾಗಿದ್ದರೆ ನಾವು ವಾಸ್ತವಕ್ಕೆ ಬಂದು ಸಿಟ್ಟು ಕರಗಿ ಹೋಗುತ್ತದೆ. ಸಿಟ್ಟು ಬಂದಾಗ ನಮ್ಮ ಜುಟ್ಟನ್ನು ಅದರ ಕೈಗೆ ಕೊಟ್ಟರೆ ಅದು ನಮ್ಮನ್ನು ಬೇಕಾದಂತೆ ಆಡಿಸುವುದು ಸಹಜ. ಆಗ ʼಆಗಬಾರದ್ದೆಲ್ಲಾʼ ಆಗಿಬಿಡುತ್ತದೆ. ನಮ್ಮ ನಡುವೆ ನಡೆಯುದ ಅದೆಷ್ಟೋ ಘಟನೆಗಳಿಗೆ, ಅಪರಾಧಗಳಿಗೆ ಮೂಲ ಕಾರಣ ಸಿಟ್ಟು. 

ಯೋಚನೆ: ಸರಳತೆಯೆಂದರೆ ಯೋಚನೆಯಿಲ್ಲದೆ ಇದ್ದುಬಿಡುವುದು ಎಂದಲ್ಲ. ನಮ್ಮಲ್ಲನೇಕರ ಜೀವನ ಶೈಲಿ ʼಗಾಳಿ ಬಂದೆಡೆ ತೂರಿಕೊಳ್ಳುವುದುʼ ಎಂಬಂತೆ. ಒಳ್ಳೆಯದೇ. ಆದರೆ ಯಾವುದೇ ಯೋಜನೆ- ಬೇಕಾದ ಯೋಚನೆ ಇಲ್ಲದಿರುವುದು ನಮ್ಮನ್ನು ಸಂಕಷ್ಟಕ್ಕೆ ದೂಡಬಹುದು. ನಮ್ಮ ಇತಿಮಿತಿಯೊಳಗೆ ಒಂದು ಯೋಜನೆ ಹಾಕಿಕೊಂಡು, ಸಣ್ಣದೊಂದು ಗುರಿಯನ್ನಿಟ್ಟುಕೊಂಡು ಬದುಕುವುದು ಒಳ್ಳೆಯದು. 

ಕೆಲಸದ ಮೇಲೆ ಗಮನ: ನಮ್ಮ ಕೆಲಸಕ್ಕಿಂತಲೂ ಅಂತೆ-ಕಂತೆಗಳೆಂದರೆ ಅದೇನೋ ಆಸಕ್ತಿ. ಬೇರೊಬ್ಬರ ಬಗ್ಗೆ ಸಂಭಾಷಣೆಯಾಗುತ್ತಿದ್ದರೆ ನಮ್ಮ ಕಿವಿ ನಿಟ್ಟಗಾಗುತ್ತದೆ. ಅದರಲ್ಲೂ ಬೇರೊಬ್ಬರ ದುರ್ಗುಣಗಳ ಮಾತಾದರೆ ಮತ್ತೂ ಆಸಕ್ತಿ. ಇದು ನಮ್ಮ ಕೆಲಸವನ್ನು ಹಾಳುಗೆಡವುತ್ತದೆ. ಸಮಯ ವ್ಯರ್ಥವಾಗುತ್ತದೆ, ಜೊತೆಗೆ ಹೆಸರೂ ಕೆಡುತ್ತದೆ. 

ಸಾಮಾಜಿಕ ಜಾಲತಾಣಗಳು: ಇದು ಹೊಸ ಸಮಸ್ಯೆ. ಮಕ್ಕಳು, ಯುವಕ- ಯುವತಿಯರನ್ನು ಹೆಚ್ಚಾಗಿ ಕಾಡುವ ಸಮಸ್ಯೆಯೆಂದರೆ ಅತಿಯಾದ ಮೊಬೈಲ್‌ ಬಳಕೆ. ಅದರಲ್ಲೂ ಸಾಮಾಜಿಕ ಮಾಧ್ಯಮಗಳ ದಾಸರಾಗುವುದು. ಇದರಿಂದ ಆಗುವ ಸಮಸ್ಯೆಗಳು, ನಷ್ಟಗಳು ಹಲವು. ಆರೋಗ್ಯ ಸಮಸ್ಯೆಯಿಂದ ಹಿಡಿದು, ನಮ್ಮ ಸಮಯ ವ್ಯರ್ಥವಾಗುವಿಕೆ, ದೈಹಿಕ ಮಾನಸಿಕ ಒತ್ತಡ, ಕೌಟುಂಬಿಕ ವ್ಯವಸ್ಥೆಯ ಮೇಲೆ ಪರಿಣಾಮ, ದ್ವೇಷದ ಮನೋಭಾವ ಹೀಗೆ ಒಂದೆರಡಲ್ಲ. ಸರಳ ಜೀವನಶೈಲಿಯಲ್ಲಿ ಈ ಮೊಬೈಲ್‌, ನವಮಾಧ್ಯಮಗಳು ಎಲ್ಲಿರಬೇಕೋ ಅಲ್ಲಿದ್ದರೇನೇ ಚೆಂದ. 

ದುಡ್ಡಿನ ಮೋಹ: ಹಣವಿಲ್ಲದೆ ಬದುಕುವುದು ಕಷ್ಟ ಎಂಬುದು ಸುಳ್ಳಲ್ಲ. ಆದರೆ ಹಣ ಸಂಪಾದನೆಯೇ ಜೀವನದ ಉದ್ದೇಶವಾದರೆ? ಸಹಜವಾಗಿಯೇ ಆಗ ಹಣ ಮುಖ್ಯವಾಗುತ್ತದೆಯೇ ಹೊರತು ಅದಕ್ಕಾಗಿ ಅನುಸರಿಸುವ ಮಾರ್ಗವಲ್ಲ. ಅದೆಷ್ಟೋ ಜನ ಅಪರಾಧ ಜಗತ್ತಿಗೆ ಕಾಲಿಡುವುದೇ ತಮ್ಮ, ತಮ್ಮವರ ಹಣದ ಲಾಲಸೆಯಿಂದ. ಹಣದ ವ್ಯಾಮೋಹ ನೆಮ್ಮದಿ ಕೆಡಿಸುತ್ತದೆ. ಹಣ ಮೋಹವಿದ್ದರೆ ಎಷ್ಟು ಸಂಪಾದಿಸಿದರೂ ಸಾಲುವುದಿಲ್ಲ. ವೈಭವೊಪೇತ ಜೀವನಶೈಲಿ ಬಯಸಿ ನೆಮ್ಮದಿ ಕಳೆದುಕೊಂಡವರು ಅದೆಷ್ಟೋ ಮಂದಿ. ಹಣಕ್ಕಾಗಿ ಬಂಧುಬಾಂಧವರನ್ನು ಮರೆತು ಕೊನೆಗೆ ಒಂಟಿ ಜೀವನ ಸಾಗಿಸುವವರೆಷ್ಟೋ. 

ಪರಸ್ಪರರ ಬಗ್ಗೆ ಗೌರವ: ಯಾವತ್ತೂ ಸಮಾಜದಲ್ಲಿ ಪರಸ್ಪರರ ಬಗ್ಗೆ ಗೌರವ ಇದ್ದಾಗ ಅಲ್ಲಿ ಋಣಾತ್ಮಕ ಯೋಚನೆಗಳಿಗೆ ಅವಕಾಶವಿರುವುದಿಲ್ಲ. ಅದು ವ್ಯಕ್ತಿಗಳ ನಡುವಿನ, ಸಮುದಾಯಗಳ ನಡುವಿನ ಪ್ರೀತಿ, ನಂಬಿಕೆಯನ್ನು ಹೆಚ್ಚಿಸುತ್ತದೆ. ಜೊತೆಗೆ, ನಮ್ಮನ್ನು ಯಾರೊಂದಿಗೂ ಕಲ್ಪಿಸಿಕೊಳ್ಳುವುದಿಲ್ಲ. ಕಲ್ಪಿಸಿಕೊಳ್ಳಲು ಆರಂಭಿಸಿದರೆ ನಮ್ಮ ನೆಮ್ಮದಿಗೆ ಭಂಗ ಬಂದಿತೆಂದೇ ಅರ್ಥ. ನಮಗೆ ನಮ್ಮ ಜೀವನ ಮುಖ್ಯ, ಅವರಿಗೆ ಅವರ ಜೀವನ. 

ಏಕಾಂತ: ಆಧುನಿಕ ಜೀವನಶೈಲಿಯಲ್ಲಿ ನಾವೆಲ್ಲರೂ ಬ್ಯುಸಿಯಾಗಿಬಿಟ್ಟಿದ್ದೇವೆ. ಎಷ್ಟೆಂದರೆ ಮಾತನಾಡಲಾಗದಷ್ಟು, ಯಾರನ್ನೂ ಹೊಗಳದಷ್ಟು, ನಮ್ಮವರ ಬಗ್ಗೆ ಕಾಳಜಿವಹಿಸದಷ್ಟು, ಅದಿರಲಿ, ನಮ್ಮ ಬಗ್ಗೆಯೇ ಯೋಚಿಸದಷ್ಟು! ಹಾಗಾದರೆ ನಮ್ಮ ಶ್ರಮ, ಟೆನ್ಷನ್‌, ಸಂಪಾದನೆ ಯಾಕಾಗಿ?! ದಿನದಲ್ಲಿ ಸ್ವಲ್ಪ ಹೊತ್ತಾದರೂ ಏಕಾಂತದಲ್ಲಿರೋಣ. ನಮ್ಮ ಬಗ್ಗೆ, ನಮ್ಮವರ ಬಗ್ಗೆ ಚಿಂತಿಸುವಷ್ಟು, ಜೀವನದಲ್ಲಿ ನಾವು ಎತ್ತ ಸಾಗುತ್ತಿದ್ದೇವೆ ಎಂದು ಯೋಚಿಸುವಷ್ಟು. ಏಕಾಂತವೆಂದರೆ ಸಮಯದ ವ್ಯರ್ಥ ಅಲ್ಲವೇ ಅಲ್ಲ. 

ನಕ್ಕು ಹಗುರಾಗೋಣ: ಒಮ್ಮೆ ಯೋಚಿಸಿ. ನಾವು ಜೀವನದಲ್ಲಿ ಒಮ್ಮೊಮ್ಮೆ ಎಷ್ಟು ವ್ಯಸ್ಥರಾಗಿಬಿಡುತ್ತೇವೆ ಎಂದರೆ ನಗುವುದನ್ನೇ ಮರೆಯುವಷ್ಟು! ನಗು ನಮ್ಮನ್ನು ಹಗುರಾಗಿಸುತ್ತದೆ. ನಮ್ಮ ವ್ಯಕ್ತಿತ್ವಕ್ಕೆ ಕಳೆ ತಂದುಕೊಡುತ್ತದೆ. ಎಲ್ಲರನ್ನೂ ಆಕರ್ಷಿಸುತ್ತದೆ. ನಕ್ಕರೆ ನಾವು ಕಳೆದುಕೊಳ್ಳುವುದೇನೂ ಇಲ್ಲ. ನಕ್ಕರೆ ಯಾರಾದರೂ ಆಡಿಕೊಂಡಾರು ಅನಿಸಿದರೆ ಇನ್ನೊಮ್ಮೆ ಸುಮ್ಮನೆ ನಕ್ಕುಬಿಡಿ. ಅಷ್ಟೇ! 

ಇತರರೆಡೆಗೆ ಕಾಳಜಿ: ನಾವು ನಮಗಿಂತ ಅನುಕೂಲವಂತರನ್ನು ನೋಡಿ ಕೊಂಕು ಮಾತನಾಡುತ್ತೇವೆ, ಇಲ್ಲವೇ ನಾವು ಅವರಿಗೆ ಸಮವಲ್ಲ ಎಂದು ನೊಂದುಕೊಳ್ಳುತ್ತೇವೆ. ಎಂಥಾ ಮೂರ್ಖತನ. ಇನ್ನೊಮ್ಮೆ ನಮ್ಮ ಸಮಾಜವನ್ನು ಗಮನಿಸೋಣ. ನಮ್ಮಷ್ಟೂ ಅನುಕೂಲವಿಲ್ಲದವರು, ಯಾರದೋ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿರುವವರು, ಧಿಕ್ಕುದೆಸೆಯಿಲ್ಲದವರನ್ನೊಮ್ಮೆ ನೋಡೋಣ. ಅವರನ್ನು ನೋಡಿದರೆ ನಾವೆಷ್ಟು ಅದೃಷ್ಟಶಾಲಿಗಳು, ಭಗವಂತ ನಮಗೆ ಎಷ್ಟೆಲ್ಲಾ ಕೊಟ್ಟಿದ್ದಾನೆ ಎಂದು ಅನಿಸದೆ ಇರುವುದಿಲ್ಲ. ಅವರಿಗಾಗಿ ನಮ್ಮ ಮನಸ್ಸಿನಲ್ಲೊಂದು ಜಾಗವಿರಲಿ. ಸಹಾಯ ಮಾಡೋಣ, ಸಾಧ್ಯವಾಗದಿದ್ದರೆ ತೊಂದರೆಯಂತೂ ಕೊಡದಿರೋಣ. 

ಸರಳತೆಗೂ ಒಂದು ದಿನ

ಹೆನ್ರಿ ಡೇವಿಡ್ ಥೋರೋ (ಜುಲೈ 12, 1817 - ಮೇ 6, 1862) ಲೇಖಕ, ನಿಸರ್ಗಪ್ರಿಯ, ತತ್ವಜ್ಞಾನಿ ಮತ್ತು ಇತಿಹಾಸಕಾರ… ಹೀಗೆ ಹಲವು ವೃತ್ತಿ, ಹವ್ಯಾಸಗಳೊಂದಿಗೆ ಬದುಕು ನಡೆಸಿದವರು. ಅವರ ಪುಸ್ತಕ, ವಾಲ್ಡೆನ್, ನೈಸರ್ಗಿಕ ಪರಿಸರದಲ್ಲಿ ಸರಳವಾದ ಜೀವನದ ಬಗ್ಗೆ ಬೆಳಕು ಚೆಲ್ಲುತ್ತದೆ. ಅವರ ಜನ್ಮದಿನವನ್ನು ಸರಳತೆಯ ದಿನ ಎಂದು ಆಚರಿಸಲಾಗುತ್ತದೆ. ಅವರು ಸರಳ ಜೀವನಕ್ಕೆ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ. 

ನಾವೆಲ್ಲರೂ ಮಂಗಳ ಗ್ರಹಕ್ಕೆ ಏಣಿ ಹಾಕಲು ಸಾಧ್ಯವಿಲ್ಲ. ಹಾಗಾಗಿ ಇತಿಮಿತಿಯೊಳಗೆ ಬದುಕೋಣ.  

ಎಲ್ಲದರ ಬಗ್ಗೆಯೂ ಯೋಚಿಸಲು ಸಾಧ್ಯವಿಲ್ಲ, ಅಗತ್ಯವಿಲ್ಲದವುಗಳನ್ನು ಮನಸ್ಸಿಂದ ತೆಗೆದುಹಾಕೋಣ

ಉದ್ವೇಗ ಬೇಡ. ಕೊಂಡುಕೊಳ್ಳುವಿಕೆಗೆ ಮಿತಿ ಇರಲಿ. 

ಸಮಯ ವ್ಯರ್ಥ ಮಾಡುವ, ಯಾರಿಗೂ ಉಪಯೋಗವಿಲ್ಲದ ಕೆಲಸಗಳಿಗೆ ಬ್ರೇಕ್‌ ಹಾಕಿ. 

ಅಮೂಲ್ಯ ಜೀವನಕ್ಕೆ ಸರಳತೆ ಒಂದು ಅರ್ಥ ಕಲ್ಪಿಸಿಕೊಡಬಲ್ಲುದು. ಚಿಂತೆ ಮಾಡುತ್ತಲೇ ಚಿತೆಯೇರುವ ಬದಲು ಎಲ್ಲವನ್ನೂ ಸಹಜವಾಗಿ ಸ್ವೀಕರಿಸೋಣ. ಗೆದ್ದಾಗ ಹಿಗ್ಗದೆ, ಸೋತಾಗ ಕುಗ್ಗದೆ, ಎಲ್ಲವನ್ನೂ ಸಮಚಿತ್ತದಿಂದ ಸ್ವೀಕರಿಸದರೆ ಬದುಕು ಒಂದು ಸುಂದರ ಚಿತ್ರವಾಗುವುದರಲ್ಲಿ ಅನುಮಾನವಿಲ್ಲ. ಜೀವನ ಅದೆಷ್ಟು ಸುಂದರ ಎಂದು ಅರಿಯಲು ಸರಳತೆಯ ಮಾರ್ಗ ಅನುಸರಿಸೋಣ. 



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪ್ರೀತಿ ಎಂದರೇನು ಎಂದು ಈಗ ಅರಿತೆನು…

ಸಿಂಹಾವಲೋಕನಕ್ಕೊಂದು ಸಮಯ

ಬೇಸರದಲ್ಲಿ ಬರೆದದ್ದು…ಹೌದಾ?!