ಹೆಮ್ಮೆ, ಭಾವನಾತ್ಮಕ ಕ್ಷಣಗಳ ಸಮ್ಮಿಲನ ಭಾರತೀಯ ಸೇನಾ ದಿನ
ದೇಶ ಕಾಯುವ ಯೋಧ, ಹೊಟ್ಟೆ ತುಂಬಿಸುವ ರೈತ ಯಾವತ್ತೂ ನಮ್ಮ ಆಸ್ತಿ…
ನಿಸ್ವಾರ್ಥ ಯೋಧರ ಮಾತು ಬಂದಾಗ ಅಗ್ರ ಪಂಕ್ತಿಯಲ್ಲಿ ಕಾಣಿಸಿಕೊಳ್ಳುವವರು ನಮ್ಮ ನಾಡಿದ ಹೆಮ್ಮೆಯ ಯೋಧ, ಭಾರತೀಯ ಸೇನೆಯ ಮೊದಲ ಕಮಾಂಡರ್ ಇನ್ ಚೀಫ್ ಕೋದಂಡೇರ ಮಾಡಪ್ಪ ಕಾರ್ಯಪ್ಪ (ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ). ಕೊಡಗಿನ ಶನಿವಾರಸಂತೆಯ ಕಾರ್ಯಪ್ಪನವರು ಹುದ್ದೆಯನ್ನು ʼಅಲಂಕರಿಸಲಿಲ್ಲʼ, ಬದಲಾಗಿ ಆ ಹುದ್ದೆಗೆ ಘನತೆ, ಗೌರವ ತಂದುಕೊಟ್ಟರು. ಅವರಿಂದ ಪ್ರೇರಣೆ ಪಡೆದು ಈಗಲು ಯುವಕರು ಸೇನೆ ಸೇರುತ್ತಿದ್ದಾರೆ ಎಂದರೆ ಅವರ ಪ್ರಭಾವ ಎಷ್ಟಿದೆಯೆಂದು ನಾವೇ ಅಂದಾಜಿಸಬಹುದು.
ಕಾರ್ಯಪ್ಪನವರನ್ನು ಜನವರಿ 15, 1949 ರಲ್ಲಿ ಭಾರತದ ಮೊದಲ ಕಮಾಂಡರ್ ಇನ್ ಚೀಫ್ ಎಂದು ಘೋಷಿಸಲಾಯಿತು. ಅವರು ಬ್ರಿಟಿಷ್ ಕಮಾಂಡಿಂಗ್ ಜನರಲ್ ಸರ್ ಫ್ರಾನ್ಸಿಸ್ ಬಟ್ಟರ್ ಅವರ ಸ್ಥಾನವನ್ನು ತುಂಬಬೇಕಿತ್ತು. ಇದರೊಂದಿಗೆ ದೊಡ್ಡ ಜವಾಬ್ದಾರಿಯೊಂದು ಅವರ ಹೆಗಲೇರಿತ್ತು. ಸ್ವಾತಂತ್ರ್ಯಾ ನಂತರ ಬ್ರಿಟಿಷರು ಬಿಟ್ಟು ಹೋದ ಭಸೇನೆಯನ್ನು ಅವರು ಸಂಪೂರ್ಣವಾಗಿ ಭಾರತೀಯ ಸೇನೆಯಾಗಿ ಬದಲಾಯಿಸಬೇಕಿತ್ತು. ಈ ಸವಾಲನ್ನು ದಿಟ್ಟತನದಿಂದ ಸ್ವೀಕರಿಸಿದ ಕಾರ್ಯಪ್ಪ ಗಾರ್ಡ್ ಬ್ರಿಗೇಡ್ (1949. 1958 ರಿಂದ ಗಾರ್ಡ್ಸ್ ಬ್ರಿಗೇಡ್) ಮತ್ತು ಪ್ಯಾರಾಚೂಟ್ ರೆಜಿಮೆಂಟ್ (1952) ಎಂಬ ಎರಡು ಹೊಸ ಘಟಕಗಳನ್ನು ಸ್ಥಾಪಿಸಿದರು. ಸೇನೆಯಲ್ಲಿ ಎಲ್ಲಾ ಜಾತಿ, ಸಮುದಾಯಗಳಿಗೆ ಅವಕಾಶ ನೀಡಿದ ಕಾರ್ಯಪ್ಪ ಅಪಾರ ಮೆಚ್ಚುಗೆಗೆ ಪಾತ್ರವಾದರು.
ಕಾರ್ಯಪ್ಪ ಬ್ರಿಟಿಷರಿಂದ ಜವಾಬ್ದಾರಿ ತೆಗೆದುಕೊಂಡು ಭಾರತೀಯ ಸೇನೆಯ ರಚನೆಗೆ ಅಡಿಗಲ್ಲು ಹಾಗಿದ ಜನವರಿ 15 ರ ದಿನವನ್ನು ಈಗಲೂ ʼಭಾರತೀಯ ಸೇನಾ ದಿನʼವಾಗಿ ಪ್ರತಿ ವರ್ಷ ಆಚರಿಸಲಾಗುತ್ತದೆ. ಇದು ವಸಾಹತುಶಾಹಿ-ಯುಗದ ಬ್ರಿಟಿಷ್ ಸೇನೆ ಹೊಸದಾಗಿ ರೂಪುಗೊಂಡ ಭಾರತ ಗಣರಾಜ್ಯಕ್ಕೆ ಸೇವೆ ಸಲ್ಲಿಸುವ ಮತ್ತು ರಕ್ಷಿಸುವ ರಾಷ್ಟ್ರೀಯ ಸೈನ್ಯಕ್ಕೆ ಪರಿವರ್ತನೆಯಾದುದನ್ನು ಸೂಚಿಸುತ್ತದೆ.
ಈಗ ಭಾರತೀಯ ಸೇನೆ ದೇಶದ ಸಾರ್ವಭೌಮತ್ವವನ್ನು ರಕ್ಷಿಸುವಲ್ಲಿ ಮತ್ತು ತನ್ನ ಗಡಿಯೊಳಗೆ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಭಯೋತ್ಪಾದನೆ ನಿಗ್ರಹ, ಬಂಡಾಯ ನಿಗ್ರಹ, ಮತ್ತು ಮಾನವೀಯ ಕಾರ್ಯಗಳು ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ಇದು ತನ್ನ ಶೌರ್ಯ ಮತ್ತು ವೃತ್ತಿಪರತೆಗೆ ಹೆಸರುವಾಸಿಯಾಗಿದೆ. ಜೊತೆಗೆ ಭಾರತೀಯ ಸೇನೆ ಮತ್ತು ಅದರ ಪಾತ್ರದ ಬಗ್ಗೆ ಸಾರ್ವಜನಿಕರಲ್ಲಿ, ವಿಶೇಷವಾಗಿ ಯುವಕರಲ್ಲಿ ಜಾಗೃತಿ ಮೂಡಿಸಲು ಈ ದಿನ ಒಂದು ಅವಕಾಶವಾಗಿದೆ.
ಈ ಬಾರಿ 76 ನೇ ಭಾರತೀಯ ಸೇನಾ ದಿನವನ್ನು ದೇಶಾದ್ಯಂತ ವಿವಿಧ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳೊಂದಿಗೆ ಸಂಭ್ರಮದಿಂದ ಆಚರಿಸಲಾಗುತ್ತದೆ. ದೇಶದ ರಾಜಧಾನಿ ನವದೆಹಲಿಯಲ್ಲಿ ಈ ದಿನ ಮುಂಜಾನೆ ಸೇನಾ ಪರೇಡ್ ಮೈದಾನದಲ್ಲಿ ಭಾರತೀಯ ಸೇನೆಯಿಂದ ಭವ್ಯವಾದ ಸೇನಾ ಪಥಸಂಚಲನ ನಡೆಯುತ್ತದೆ. ಪರೇಡ್ ವಿವಿಧ ರೆಜಿಮೆಂಟ್‌ಗಳು, ಪಡೆಗಳು ಮತ್ತು ಶಸ್ತ್ರಾಸ್ತ್ರಗಳನ್ನು ಒಳಗೊಂಡಂತೆ ಭಾರತೀಯ ಸೇನೆಯ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ. ಕಮಾಂಡರ್-ಇನ್-ಚೀಫ್ ಆಗಿ ಭಾರತದ ರಾಷ್ಟ್ರಪತಿಗಳು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಗೌರವ ವಂದನೆ ಸ್ವೀಕರಿಸಲಿದ್ದಾರೆ.
ಭಾರತೀಯ ಸೇನಾ ದಿನ ರಾಷ್ಟ್ರವನ್ನು ರಕ್ಷಿಸುವ ಸಂದರ್ಭದಲ್ಲಿ ಬಲಿದಾನ ಮಾಡಿದ ವೀರ ಸೈನಿಕರಿಗೆ ಗೌರವ ಸಲ್ಲಿಸುವ ಸಂದರ್ಭವೂ ಹೌದು. ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿ ಅವರ ಅಪಾರ ಕೊಡುಗೆ ಮತ್ತು ತ್ಯಾಗಕ್ಕಾಗಿ ಅವರ ಕುಟುಂಬಗಳನ್ನು ಗೌರವಿಸಲಾಗುತ್ತದೆ. ಇದೇ ವೇಳೆ ಕರ್ತವ್ಯದಲ್ಲಿ ಅಸಾಧಾರಣ ಧೈರ್ಯ ಮತ್ತು ಶೌರ್ಯ ಪ್ರದರ್ಶಿಸಿದ ವೀರ ಸೈನಿಕರನ್ನು ಗುರುತಿಸಿ ಗೌರವಿಸುವ ಸಂದರ್ಭ ಈ ಸೇನಾ ದಿನ. ಶೌರ್ಯ ಪ್ರಶಸ್ತಿಗಳಾದ ಪರಮವೀರ ಚಕ್ರ, ಅಶೋಕ ಚಕ್ರ, ಮತ್ತು ಇತರ ಮಿಲಿಟರಿ ಗೌರವಗಳನ್ನು ಅರ್ಹ ಯೋಧರಿಗೆ ಅವರ ಅಸಾಮಾನ್ಯ ಶೌರ್ಯಕ್ಕಾಗಿ ನೀಡಲಾಗುತ್ತದೆ.
ಭಾರತೀಯ ಸೇನಾ ದಿನವು ಸಶಸ್ತ್ರ ಪಡೆಗಳನ್ನು ವೃತ್ತಿಜೀವನವಾಗಿ ಪರಿಗಣಿಸಲು ಯುವಕರನ್ನು ಪ್ರೇರೇಪಿಸಲು ಮತ್ತು ರಾಷ್ಟ್ರದ ರಕ್ಷಣೆಗೆ ಕೊಡುಗೆ ನೀಡಲು ಪ್ರೇರೇಪಿಸುವ ಒಂದು ವೇದಿಕೆ. ಭಾರತೀಯ ಸೇನೆ ತನ್ನ ವೈವಿಧ್ಯಮಯ ಚಟುವಟಿಕೆಗಳು ಮತ್ತು ವೈಯಕ್ತಿಕ ಮತ್ತು ವೃತ್ತಿಪರ ಬೆಳವಣಿಗೆಗೆ ಇರುವ ಅವಕಾಶಗಳು, ಮತ್ತು ಆಧುನಿಕ ಉಪಕರಣಗಳನ್ನು ಪ್ರದರ್ಶಿಸುತ್ತದೆ.
ಭಾರತೀಯ ಸೇನೆಯ ಬಗ್ಗೆ ಒಂದಿಷ್ಟು
ವಿಶ್ವದ ಅತೀ ದೊಡ್ಡ ಸೇನಾಪಡೆಗಳಲ್ಲಿ ಒಂದಾಗಿರುವ ಭಾರತೀಯ ಸೇನೆ ಈಗ ವೃತ್ತಿಜೀವನದ ಆಕರ್ಷಕ ಆಯ್ಕೆಯೂ ಆಗಿದೆ. ಉತ್ತರದಲ್ಲಿ ಹಿಮಾಲಯ ಪರ್ವತ ಶ್ರೇಣಿ, ದಕ್ಷಿಣದಲ್ಲಿ ಸಮುದ್ರ ತೀರ- ದ್ವೀಪಗಳು, ಪೂರ್ವದಲ್ಲಿ ದಟ್ಟ ಕಾಡು, ಪಶ್ವಿಮದಲ್ಲಿ ಮರಳುಗಾಡನ್ನು ಹೊಂದಿರುವ ನಮ್ಮ ದೇಶವನ್ನು ರಕ್ಷಿಸುವ ಜವಾಬ್ದಾರಿ ಹೊತ್ತಿರುವ ಭಾರತೀಯ ಸೇನೆಯ ಮೂರು ಪ್ರಮುಖ ಶಾಖೆಗಳ ಜೊತೆಗೆ, ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF), ಗಡಿ ಭದ್ರತಾ ಪಡೆ (BSF), ಮತ್ತು ಅಸ್ಸಾಂ ರೈಫಲ್ಸ್ ನಂತಹ ಹಲವಾರು ಅರೆಸೈನಿಕ ಪಡೆಗಳು ದೇಶದ ಆಂತರಿಕ ಭದ್ರತೆ ಮತ್ತು ಪ್ರತಿದಾಳಿ ಕಾರ್ಯಾಚರಣೆಗಳಲ್ಲಿ ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತವೆ.
ಸೇನೆಯೆಂದರೆ ಯುದ್ಧವೇ ಆಗಿರಬೇಕಿಲ್ಲ ಎಂಬುದಕ್ಕೆ ಭಾರತೀಯ ಸೇನೆಯೇ ಉದಾಹರಣೆ. ಹಲವು ದಶಕಗಳಿಂದ ಭಾರತೀಯ ಸೇನೆ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಪ್ರಮುಖ ಭಾಗವಾಗಿದೆ. ಈ ಮೂಲಕ ಜಾಗತಿಕವಾಗಿ ಶಾಂತಿ ಸ್ಥಾಪನೆ ಮಾಡಲು ಭಾರತೀಯ ಸೇನೆಯ ಕೊಡುಗೆ ದೊಡ್ಡದು. ಯಾವ ದೇಶದ ಮೇಲೂ ವಿನಾಕಾರಣವಾಗಿ ದಾಳಿ ಮಾಡದೆ, ದಾಳಿಗೆ ತಕ್ಕ ಪ್ರತಿದಾಳಿ ಮಾಡುವ ಮೂಲಕ ಭಾರತೀಯ ಸೇನೆ ಯುದ್ಧದ ಬದಲು ಶಾಂತಿ ಸ್ಥಾಪನೆಗೆ ಯಾವತ್ತೂ ಆದ್ಯತೆ ನೀಡಿದೆ.
ಭಾರತೀಯ ಸೇನೆ ಸೇರಬೇಕೆಂಬ ಆಕಾಂಕ್ಷೆ ಹಲವರಲ್ಲಿದ್ದರೂ ಸೇನೆ ಸೇರಲು ಕೆಲವು ಅರ್ಹತೆಗಳು ಇರಬೇಕಾಗುತ್ತವೆ. ಮುಖ್ಯವಾಗಿ ಅಭ್ಯರ್ಥಿ ಭಾರತೀಯ ನಾಗರಿಕರಾಗಿರಬೇಕು, ವಯಸ್ಸಿನ ಅವಶ್ಯಕತೆಗಳನ್ನು ಪೂರೈಸಬೇಕು ಮತ್ತು ಅಗತ್ಯ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರಬೇಕು. ದೈಹಿಕ ಸಾಮರ್ಥ್ಯ ಮತ್ತು ವೈದ್ಯಕೀಯ ಮಾನದಂಡಗಳೂ ತುಂಬಾ ಮುಖ್ಯ. ಆಕಾಂಕ್ಷಿಗಳಿಗೆ ಸಾಮಾನ್ಯವಾಗಿ ಲಿಖಿತ ಪರೀಕ್ಷೆಯಿರುತ್ತದೆ. ಬಳಿಕ ದೈಹಿಕ ಸಾಮರ್ಥ್ಯ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ಮತ್ತು ಸಂದರ್ಶನಗಳಿರುತ್ತವೆ. ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದವರಷ್ಟೇ ಮುಂದಿನ ಹಂತಕ್ಕೆ ಅವಕಾಶ ಪಡೆಯುತ್ತಾರೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ದೇಶದ ವಿವಿದೆಡೆ ನಿರ್ದಿಷ್ಟ ಅಕಾಡೆಮಿಗಳು ಕಠಿಣ ತರಬೇತಿ ನೀಡುತ್ತವೆ. ಭಾರತೀಯ ಸೇನೆಯಲ್ಲಿ ವೃತ್ತಿಜೀವನದ ಪ್ರಗತಿ ಸಂಪೂರ್ಣವಾಗಿ ಅರ್ಹತೆ, ಕಾರ್ಯಕ್ಷಮತೆ ಮತ್ತು ನಿಗದಿತ ಮಾನದಂಡಗಳ ನೆರವೇರಿಕೆಯನ್ನು ಆಧರಿಸಿದೆ. ಭಾರತೀಯ ಸೇನೆಗೆ ಸೇರುವುದರಿಂದ ದೇಶ ಸೇವೆಯ ಅವಕಾಶದೊಂದಿಗೆ ಸ್ಪರ್ಧಾತ್ಮಕ ಸಂಬಳ, ಭತ್ಯೆಗಳು, ವೈದ್ಯಕೀಯ ಸೌಲಭ್ಯಗಳು, ಸಬ್ಸಿಡಿ ಸಹಿತ ವಸತಿ, ಪಿಂಚಣಿ ಯೋಜನೆಗಳು, ಕ್ಯಾಂಟೀನ್ ಸೌಲಭ್ಯಗಳು, ವಿಮಾ ರಕ್ಷಣೆ ಮತ್ತು ವಿದೇಶಿ ಪೋಸ್ಟಿಂಗ್ಗಳು ಮತ್ತು ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿ ಭಾಗವಹಿಸುವುದೂ ಸೇರಿದಂತೆ ಹಲವು ಸೌಲಭ್ಯ, ಅವಕಾಶಗಳು ದೊರೆಯುತ್ತದೆ. ಕಠಿಣ ತರಬೇತಿ, ವೃತ್ತಿಪರತೆಯೊಂದಿಗೆ ಕ್ರೀಡೆ, ಮನೋರಂಜನೆಗೂ ಸಮಾನ ಅವಕಾಶವಿದೆ.
ಭಾರತೀಯ ಸೇನಾ ದಿನವು ಭಾರತೀಯ ಸೇನೆಯ ಪಾತ್ರ ಮತ್ತು ಜವಾಬ್ದಾರಿಗಳ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸಲು ಅವಕಾಶವನ್ನು ಒದಗಿಸುತ್ತದೆ. ಇದು ಸಾರ್ವಜನಿಕರಲ್ಲಿ ದೇಶಭಕ್ತಿ ಮತ್ತು ಸಶಸ್ತ್ರ ಪಡೆಗಳ ಬಗ್ಗೆ ಹೆಮ್ಮೆ, ಕೃತಜ್ಞತೆಯ ಭಾವವನ್ನು ಬೆಳೆಸುವ ಗುರಿ ಹೊಂದಿದೆ.
ಕಳೆದ ವರ್ಷ 75ನೇ ಭಾರತೀಯ ಸೇನಾ ದಿನವನ್ನು ಮೊದಲ ಬಾರಿಗೆ ರಾಷ್ಟ್ರ ರಾಜಧಾನಿ ನವದೆಹಲಿಯಿಂದ ಹೊರಗೆ ಅಂದರೆ ಬೆಂಗಳೂರಿನಲ್ಲಿ ಸೇನಾ ದಿನವನ್ನು ಆಯೋಜನೆ ಮಾಡಲಾಗಿತ್ತು. ಸುಮಾರು ಐದುನೂರು ಯೋಧರಿಂದ ಆಕರ್ಷಕ ಪಥ ಸಂಚಲನ ನಡೆದಿತ್ತು. ಟಿ-90 ಟ್ಯಾಂಕ್ಗಳು, 155 ಎಂ.ಎಂ ಬೊಫೋರ್ಸ್ ಗನ್ ಸೇರಿದಂತೆ ಸೇನೆಯ ಸಾಮರ್ಥ್ಯ ಬಿಂಬಿಸುವ ಯುದ್ಧ ಟ್ಯಾಂಕ್ಗಳು, ರೇಡಾರ್ಗಳ ಪ್ರದರ್ಶನ ಗಮನ ಸೆಳೆದಿತ್ತು.
ಈ ಬಾರಿಯೂ ಜನವರಿ 15, ಹೆಮ್ಮೆಯ ಜೊತೆಗೆ ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಗಲಿದೆ. ಈ ದಿನಾಚರಣೆ ನಮ್ಮೊಳಗೆ ದೇಶಪ್ರೇಮವನ್ನು ಬಡಿದೆಬ್ಬಿಸಿದರೆ ಅದೇ ಸಾರ್ಥಕ, ಅದೇ ನಮ್ಮ ಯೋಧರಿಗೆ ಸಲ್ಲಿಸುವ ನಿಜವಾದ ಗೌರವ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ