ನೆಟ್‌- ಒಂದು ಪರೀಕ್ಷೆ, ಹಲವು ಪ್ರಯೋಜನಗಳು

ವಿಶ್ವವಿದ್ಯಾನಿಲಯ ಅನುದಾನ ಆಯೋಗದ (ಯುಜಿಸಿ) ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೆಟ್‌) ಯನ್ನು ಭಾರತೀಯ ವಿಶ್ವವಿದ್ಯಾನಿಲಯಗಳು ಹಾಗೂ ಕಾಲೇಜುಗಳಲ್ಲಿ ʼಸಹಾಯಕ ಪ್ರಾಧ್ಯಾಪಕʼ ಮತ್ತು ʼಜೂನಿಯರ್‌ ರಿಸರ್ಚ್‌ ಫೆಲೋಶಿಪ್ ಮತ್ತು ಸಹಾಯಕ ಪ್ರಾಧ್ಯಾಪಕ' ಗೆ ಭಾರತೀಯ ಪ್ರಜೆಗಳ ಅರ್ಹತೆಯನ್ನು ನಿರ್ಧರಿಸಲು ನಡೆಸಲಾಗುತ್ತದೆ. 

ಯುಜಿಸಿ- ನೆಟ್‌ ಪರೀಕ್ಷೆಯನ್ನು ವರ್ಷದಲ್ಲಿ ಎರಡು ಬಾರಿ (ಜೂನ್‌ ಮತ್ತು ಡಿಸೆಂಬರ್‌) ನಡೆಸಲಾಗುತ್ತದೆ. 2018 ರವರೆಗೆ ನೆಟ್‌ ಪರೀಕ್ಷೆಯಲ್ಲಿ ಅಭ್ಯರ್ಥಿ ಮೂರು ಪೇಪರ್‌ಗಳಿಗೆ ಉತ್ತರಿಸಬೇಕಾಗಿತ್ತು. 2019 ರ ನಂತರ ಅದನ್ನು ಎರಡು ಪೇಪರ್‌ ಮಾಡಲಾಗಿದೆ. ಪರೀಕ್ಷೆಯಲ್ಲಿ ಎರಡೂ ಪೇಪರ್‌ಗಳು ವಸ್ತು ನಿಷ್ಠ ಮಾದರಿಯ ಬಹು ಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿರುತ್ತವೆ. 

ನೆಟ್ ಅನ್ನು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್ಟಿಎ) ಡಿಸೆಂಬರ್ 2018 ರಿಂದ ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ) ಮೋಡ್ನಲ್ಲಿ ನಡೆಸುತ್ತಿದೆ. ಎರಡು ಪರೀಕ್ಷೆಗಳನ್ನು ಮೂರು ಗಂಟೆಗಳ ಕಾಲ ನಡೆಸಲಾಗುತ್ತದೆ. ಪೇಪರ್‌ -1 ಮತ್ತು ಪೇಪರ್‌-2 ರ ನಡುವೆ ಯಾವುದೇ ವಿರಾಮ ಇರುವುದಿಲ್ಲ. ಮೂರು ಗಂಟೆಗಳ ಕಾಲ ಸತತವಾಗಿ ಈ ಪರೀಕ್ಷೆಯನ್ನು ನಡೆಸಲಾಗುತ್ತದೆ. 

ಪೇಪರ್‌ -1 ಎಲ್ಲಾ ಅಭ್ಯರ್ಥಿಗಳಿಗೂ ಈ ಪರೀಕ್ಷೆ ಕಡ್ಡಾಯವಾಗಿರುತ್ತದೆ. ಪೇಪರ್-1 ರಲ್ಲಿ ಸಾಮನ್ಯ ಜ್ಞಾನದ ಬಗ್ಗೆ ಹೆಚ್ಚು ಪ್ರಶ್ನೆಗಳನ್ನ ಕೇಳಲಾಗುತ್ತದೆ. ಅಭ್ಯರ್ಥಿಯ ಚಿಂತನೆ, ತಾರ್ಕಿಕತೆ, ಬೌದ್ಧಿಕ ಸಾಮರ್ಥ್ಯ, ಬೋಧನಾ ಮಟ್ಟ, ಸಂಶೋಧನೆ, ಮಾಹಿತಿ ಮತ್ತು ತಂತ್ರಜ್ಞಾನ ಅಭಿವೃದ್ಧಿ ಮತ್ತು ಪರಿಸರ ಹಾಗೂ ಉನ್ನತ ಶಿಕ್ಷಣ ವ್ಯವಸ್ಥೆಗಳ ಕುರಿತಂತೆ ಪ್ರಶ್ನೆಗಳನ್ನ ಕೇಳಲಾಗುತ್ತದೆ. ಪತ್ರಿಕೆ-1 ರಲ್ಲಿ 50 ಪ್ರಶ್ನೆಗಳಿದ್ದು, ಒಂದು ಸರಿ ಉತ್ತರಕ್ಕೆ ಎರಡು ಅಂಕಗಳನ್ನ ನೀಡಲಾಗುತ್ತದೆ. ಒಟ್ಟು 100 ಅಂಕಗಳಿರುತ್ತವೆ.

ಇನ್ನೂ ಪೇಪರ್‌- 2 ರಲ್ಲಿ ಅಭ್ಯರ್ಥಿಯು ಆಯ್ದುಕೊಂಡ ಐಚ್ಛಿಕ ವಿಷಯದ ಮೇಲೆ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಪೇಪರ್‌ -2 ರ ಪ್ರಶ್ನೆ ಪತ್ರಿಕೆ ಸ್ನಾತಕೋತ್ತರ ಪದವಿಯಲ್ಲಿ ಓದಿದ ವಿಷಯಾಧಾರಿತವಾಗಿರುತ್ತದೆ. ಎನ್‌ಇಟಿ ಪೇಪರ್‌-2, 100 ಪ್ರಶ್ನೆಗಳಿದ್ದು, ಪ್ರತಿಯೊಂದು ಪ್ರಶ್ನೆಗೂ ಎರಡು ಅಂಕಗಳನ್ನು ನೀಡಲಾಗುತ್ತದೆ. ಒಟ್ಟು 200 ಅಂಕಗಳ ಪರೀಕ್ಷೆಯಾಗಿದ್ದು, ಎರಡು ಗಂಟೆ ಕಾಲಾವಕಾಶ ಇರುತ್ತದೆ

ಅರ್ಹತೆಯೇನು?

ಸಾಮಾನ್ಯ ಅಭ್ಯರ್ಥಿಯು ತನ್ನ ಸ್ನಾತಕೋತ್ತರ ಪದವಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಶೇ. 55 ಅಂಕಗಳನ್ನು ಮತ್ತು ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ, ಕೆನೆಪದರಕ್ಕೆ ಸೇರದ ಇತರೆ ಹಿಂದುಳಿದ ಸಮುದಾಯಗಳು, ತೃತೀಯ ಲಿಂಗಿಗಳು ಮತ್ತು ವಿಕಲಚೇತನರು ಶೇ. 50 ಅಂಕಗಳನ್ನು ಪಡೆದಿರಬೇಕು. ನೆಟ್‌ನಲ್ಲಿ ಜೂನಿಯರ್‌ ರಿಸರ್ಚ್‌ ಫೆಲೋಶಿಪ್‌ ಪರೀಕ್ಷೆಗೆ ಅರ್ಹತೆ ಪಡೆಯಲು ಅಭ್ಯರ್ಥಿಯ ವಯಸ್ಸಿನ ಗರಿಷ್ಠ ಮಿತಿ 31 ವರ್ಷ, ಆದರೆ ಸಹಾಯಕ ಪ್ರಾಧ್ಯಾಪಕ ಪರೀಕ್ಷೆಗೆ ಇಂತಹ ಯಾವುದೇ ಮಿತಿಯಿಲ್ಲ. ಅಭ್ಯರ್ಥಿ ಎಷ್ಟು ಬಾರಿ ಬೇಕಾದರೂ ಪರೀಕ್ಷೆ ಬರೆಯಬಹುದು, ಆದರೆ ಭಾರತೀಯ ಪ್ರಜೆಗಳಿಗೆ ಮಾತ್ರ ಇಲ್ಲಿ ಅವಕಾಶ. 

ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ, ಹಿಂದುಳಿದ ಸಮುದಾಯಗಳು, ತೃತೀಯ ಲಿಂಗಿಗಳು, ವಿಕಲಚೇತನರು, ಮಹಿಳಾ ಅಭ್ಯರ್ಥಿಗಳು, ಸ್ನಾತಕೋತ್ತರ ಪದವಿಯ ವಿಷಯದಲ್ಲಿ ಸಂಶೋಧನೆಯ ಅನುಭವವುಳ್ಳವರಿಗೆ, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದವರಿಗೆ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ರಿಯಾಯಿತಿ ಸಿಗಲಿದೆ.  

ಸ್ನಾತಕೋತ್ತರ ಪದವಿ ಪಡೆದವರಲ್ಲದೆ, ಈ ಕೆಳಗಿನ ವಿಶೇಷ ಸಂದರ್ಭಗಳಲ್ಲಿ ಅಭ್ಯರ್ಥಿಗಳು ನೆಟ್‌ ಬರೆಯಲು ಅರ್ಹತೆ ಪಡೆಯುತ್ತಾರೆ:

ಸ್ನಾತಕೋತ್ತರ ಅಥವಾ ತತ್ಸಮಾನ ಪದವಿ ಕಲಿಯುತ್ತಿದ್ದರೆ.

ಈಗಾಗಲೇ ಸ್ನಾತಕೋತ್ತರ ಪದವಿಯ (ಅಂತಿಮ ವರ್ಷ) ಅರ್ಹತಾ ಪರೀಕ್ಷೆ ಬರೆದಿದ್ದರೆ 

ಅರ್ಹತಾ ಪರೀಕ್ಷೆ ಅನಿವಾರ್ಯ ಕಾರಣಗಳಿಂದ ತಡವಾಗಿದ್ದರೆ

ಅಭ್ಯರ್ಥಿಗೆ ಸಿಎ/ಸಿಎಸ್‌/ಐಸಿಡಬ್ಲ್ಯೂಎ ಅರ್ಹತೆಯಿದ್ದರೆ 


ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನೆಟ್‌ ಬರೆಯಲು ತಾತ್ಕಾಲಿಕ ಅರ್ಹತೆ ದೊರೆತರೂ ಅದಕ್ಕೆ ನಿಜವಾದ ಅರ್ಹತೆಯ ಮುದ್ರೆ ಬೀಳುವುದು ಅವರು ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕವಷ್ಟೇ 

ನೆಟ್‌ ಏಕೆ ಬೇಕು?

ನೆಟ್‌ ಅಥವಾ ಸೆಟ್‌ (ಸ್ಟೇಟ್‌ ಎಲಿಜಿಬಿಲಿಟಿ ಟೆಸ್ಟ್‌) ಗಳು ವಿಶ್ವವಿದ್ಯಾನಿಲಯಗಳು/ಕಾಲೇಜುಗಳು/ಇತರ ಸಂಸ್ಥೆಗಳಲ್ಲಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಕನಿಷ್ಠ ಮಾನದಂಡವಾಗಿವೆ. ಸೆಟ್‌  ಅಥವಾ ಕರ್ನಾಟಕದಲ್ಲಿ ಕೆ-ಸೆಟ್‌ ಉತ್ತೀರ್ಣರಾದ ಅಭ್ಯರ್ಥಿಗಳು ಆಯಾ ರಾಜ್ಯದಲ್ಲಿನ ವಿಶ್ವವಿದ್ಯಾನಿಲಯಗಳು/ ಕಾಲೇಜುಗಳಲ್ಲಿ ಮಾತ್ರ ನೇಮಕಾತಿ ಪ್ರಕ್ರಿಯೆಯಲ್ಲಿ ಪರಿಗಣಿಸಲ್ಪಡುತ್ತಾರೆ.  ನೆಟ್‌ ಉತ್ತೀರ್ಣರಾದವರಿಗೆ ಈ ನಿಬಂಧನೆ ಅನ್ವಯಿಸುವುದಿಲ್ಲ. ಇಷ್ಟಲ್ಲದೆ, ಸಂಶೋಧನೆಯಲ್ಲಿ ಆಸಕ್ತರು ನೆಟ್‌ ಉತ್ತೀರ್ಣರಾಗಿದ್ದರೆ ಆಯ್ಕೆಯ ವೇಳೆ ಅಂತವರಿಗೆ ಹೆಚ್ಚಿನ ಆಧ್ಯತೆ ನೀಡಲಾಗುತ್ತದೆ. ನೆಟ್‌- ಜೆಆರ್‌ಎಫ್‌ ಪಾಸಾಗಿದ್ದರೆ ಅಂತವರು ಪೂರ್ಣಕಾಲಿಕ ಸಂಶೋಧನೆಯ ವೇಳೆ ಉತ್ತಮ ಮೊತ್ತದ ಫೆಲೋಶಿಪ್‌ (ಶಿಷ್ಯವೇತನ) ಪಡೆಯಲು ಅರ್ಹರಾಗಿರುತ್ತಾರೆ. 

ನೆಟ್‌ ಉತ್ತೀರ್ಣರಾದವರಿಗೆ ಸಾರ್ವಜನಿಕ ವಲಯದಲ್ಲಿಯೂ ಉದ್ಯೋಗ ಗಿಟ್ಟಿಸಿಕೊಳ್ಳುವ ಅವಕಾಶವಿದೆ. ಈ ಕೆಳಗಿನ ಸಾರ್ವಜನಿಕ ವಲಯದ ಸಂಸ್ಥೆಗಳು ವರ್ಷದಲ್ಲಿ ಎರಡು ಬಾರಿ ನೆಟ್‌ (ಜೆಆರ್‌ಎಫ್‌) ಉತ್ತೀರ್ಣರಾದವನ್ನು ವಿವಿಧ ಜವಾಬ್ದಾರಿಗಳಿಗಾಗಿ ನೇಮಕ ಮಾಡಿಕೊಳ್ಳುತ್ತವೆ. 

ಇಂಡಿಯನ್‌ ಆಯ್ಲ್‌ ಕಾರ್ಪೊರೇಷನ್‌ ಲಿಮಿಟೆಡ್‌ (IOCL) 

ಭಾರತ್‌ ಹೆವಿ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ (BHEL)

ನ್ಯಾಷನಲ್‌ ಥರ್ಮಲ್‌ ಪವರ್‌ ಕಾರ್ಪೊರೇಷನ್‌ ಲಿಮಿಟೆಡ್‌ (NTPC)

ಪವರ್‌ ಗ್ರಿಡ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ ಲಿಮಿಟೆಡ್‌ (PGCIL) 

ನೇವಲ್‌ ಮೆಟೀರಿಯಲ್‌ ರಿಸರ್ಚ್‌ ಲ್ಯಾಬೊರೇಟರಿ (NMRL)

ಆಯ್ಲ್‌ ಆಂಡ್‌ ನ್ಯಾಚುರಲ್‌ ಗ್ಯಾಸ್‌ ಕಾರ್ಪೊರೇಷನ್‌ (ONGC)

ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ (BEL)

ಹಿಂದೂಸ್ತಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ (HPCL)

ಆಯ್ಲ್‌ ಇಂಡಿಯಾ ಲಿಮಿಟೆಡ್‌ (OIL)

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಆಸಕ್ತರು https://www.ugc.ac.in/jobportal/  ಗೆ ಭೇಟಿ ನೀಡಬಹುದು. 

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಮತ್ತು ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯಗಳ ಈ ಕೆಳಗಿನ ಫೆಲೋಶಿಪ್‌ಗಳಿಗೆ ಅಭ್ಯರ್ಥಿಗಳ ಆಯ್ಕೆಯನ್ನು ಯುಜಿಸಿ-ನೆಟ್‌ ಮೂಲಕ ಮಾಡಲಾಗುತ್ತದೆ:

ನ್ಯಾಷನಲ್‌ ಫೆಲೋಶಿಪ್‌ ಫಾರ್‌ ಶೆಡ್ಯೂಲ್ಡ್‌ ಕಾಸ್ಟ್‌ ಸ್ಟೂಡೆಂಟ್ಸ್‌ (NFSC)

ನ್ಯಾಷನಲ್‌ ಫೆಲೋಶಿಪ್‌ ಫಾರ್‌ ಅದರ್‌ ಬ್ಯಾಕ್‌ವರ್ಡ್‌ ಕ್ಲಾಸಸ್‌ (NFOBC)

ಮೌಲಾನಾ ಆಜಾದ್‌ ನ್ಯಾಷನಲ್‌ ಫೆಲೋಶಿಪ್‌ ಫಾರ್‌ ಮೈನಾರಿಟಿ ಸ್ಟೂಡೆಂಟ್ಸ್‌ (MANF)

ಯುಜಿಸಿ ನೆಟ್‌ ನಲ್ಲಿ ಯಶಸ್ಸು ಗಳಿಸಲು ಯಾವುದೇ ಸಿದ್ಧಸೂತ್ರಗಳಿಲ್ಲ. ದೃಢ ನಿಶ್ಚಯದೊಂದಿಗೆ ಪರೀಕ್ಷೆ ಬರೆಯಲು ಬೇಕಾದ ಅರ್ಹತೆ, ಅದರ ಪ್ರಯೋಜನಗಳನ್ನು ಅರಿತುಕೊಳ್ಳುವುದು, ಕಳೆದ ಕೆಲ ವರ್ಷಗಳ ಪ್ರಶ್ನೆ ಪತ್ರಿಕೆಗಳು- ಉತ್ತರಗಳನ್ನು ಅಭ್ಯಸಿಸುವುದರಿಂದ ಇತರರಿಗಿಂತ ನೀವು ಮೇಲುಗೈ ಸಾಧಿಸುವ ಅವಕಾಶಗಳು ಹೆಚ್ಚಿರುತ್ತವೆ.  





 








 

 

 

 

 



 

 

 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬೇಸರದಲ್ಲಿ ಬರೆದದ್ದು…ಹೌದಾ?!

ಮಣಭಾರ ಒಯ್ಯಬೇಕು, ಬೆಟ್ಟವನ್ನೂ ಏರಬೇಕು ಎಂದರೆ ಆಗದು!

ಕೊಟ್ಟಷ್ಟೂ ಹೆಚ್ಚುವ ಸಂತೋಷ!