ಮಕರ ಸಂಕ್ರಾಂತಿ: ಒಂದು ಹಬ್ಬ, ಹತ್ತಾರು ವೈವಿಧ್ಯ
ಭಾರತದಲ್ಲಿ, ವಿಶೇಷವಾಗಿ ಹಿಂದೂ ಧರ್ಮೀಯರಿಗೆ ವರ್ಷವಿಡೀ ಹಬ್ಬಗಳು. ಪ್ರತಿಯೊಂದು ಹಬ್ಬಕ್ಕೂ ಅರ್ಥಪೂರ್ಣ ಹಿನ್ನೆಲೆಯಿದೆ, ಆಚರಣೆಯ ವಿಧಾನ, ನಂಬಿಕೆಗಳೂ ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತವೆ. ಇಂತಹ ಹಬ್ಬಗಳಲ್ಲಿ ಮಕರ ಸಂಕ್ರಾಂತಿ ಅಥವಾ ಮಕರ ಸಂಕ್ರಮಣಕ್ಕೆ ವಿಶೇಷ ಸ್ಥಾನವಿದೆ. ವಿಶೇಷವೆಂದರೆ ಮಕರ ಸಂಕ್ರಾಂತಿಯನ್ನು ದೇಶದೆಲ್ಲೆಡೆ ಆಚರಿಸಲಾಗುತ್ತದೆ. ಇಲ್ಲೂ ಆಚರಣೆಯ ಹೆಸರುಗಳು, ವಿಧಾನಗಳು ಮಾತ್ರ ವಿಭಿನ್ನ!
ಸೂರ್ಯದೇವನು ಒಂದು ರಾಶಿಚಕ್ರದಿಂದ ಇನ್ನೊಂದಕ್ಕೆ ಪ್ರವೇಶಿಸಿದಾಗ ಅದನ್ನು 'ಸಂಕ್ರಾಂತಿ' ಎಂದು ಕರೆಯಲಾಗುತ್ತದೆ. ಅದರಲ್ಲೂ ನಮ್ಮಲ್ಲಿ ಮಕರ ಸಂಕ್ರಮಣ ಹಾಗೂ ಕರ್ಕಾಟಕ ಸಂಕ್ರಮಣಗಳಿಗೆ ಪ್ರಾಮುಖ್ಯತೆ ಹೆಚ್ಚು. ಇವೆರಡು ಆಯನ ಸಂಕ್ರಾಂತಿಗಳು. ಉತ್ತರಾಯಣ ಮತ್ತು ದಕ್ಷಿಣಾಯಣ ಈ ಎರಡು ಸಂಕ್ರಮಣದ ಸಂದರ್ಭದಲ್ಲಿ ಶುರುವಾಗುತ್ತದೆ. ಮಕರ ಸಂಕ್ರಮಣದ ಸಂದರ್ಭದಲ್ಲಿ ಉತ್ತರಾಯಣ ಪುಣ್ಯಕಾಲ ಆರಂಭವಾಗುತ್ತದೆ. ದೇವತಾ ಕಾರ್ಯಗಳಿಗೆ, ಶುಭ ಕಾರ್ಯಗಳಿಗೆ ಸೂಕ್ತವಾದ ಮಂಗಳಕರವಾದ ಸಮಯ ಎಂಬ ನಂಬಿಕೆಯಿದೆ
ಮಕರ ಸಂಕ್ರಾಂತಿ ಸೂರ್ಯನ ಪಥ ಬದಲಾವಣೆಯನ್ನು ಆಧರಿಸಿ ಆಚರಿಸುವ ಹಬ್ಬ.
ಸೂರ್ಯದೇವ ಮಕರ ರಾಶಿಗೆ ಪ್ರವೇಶಿಸುವ ಹಬ್ಬವೇ ಮಕರ ಸಂಕ್ರಾಂತಿ. ಇಲ್ಲಿಂದ ಆರು ತಿಂಗಳು ಉತ್ತರಾಯಣ ಪುಣ್ಯಕಾಲ. ಹಿಂದೂ ಧರ್ಮದಲ್ಲಿ ಮಕರ ಸಂಕ್ರಾಂತಿಗೆ ಅದರದ್ದೇ ಆದ ಮಹತ್ವವಿದೆ. ಮಕರ ಸಂಕ್ರಾಂತಿ ಧಾರ್ಮಿಕ ಮಹತ್ವವಲ್ಲದೆ, ವೈಜ್ಞಾನಿಕ, ಆಯುರ್ವೇದ ಮತ್ತು ಖಗೋಳ ಮಹತ್ವವನ್ನೂ ಪಡೆದುಕೊಂಡಿದೆ.
ಮಕರ ಸಂಕ್ರಾಂತಿಯ ದಿನ ಪವಿತ್ರ ಸ್ನಾನಕ್ಕೆ ಹೆಚ್ಚಿನ ಮಹತ್ವವಿದೆ. ಅಂದು ಸಾಕಷ್ಟು ಮಂದಿ ಪವಿತ್ರ ನದಿಗಳಲ್ಲಿ ಸ್ನಾನ ಮಾಡಿ ಹಬ್ಬವನ್ನು ಆಚರಿಸುತ್ತಾರೆ. ಗಂಗಾ, ಯಮುನಾ, ಗೋದಾವರಿ, ಕಾವೇರಿ, ಕೃಷ್ಣ, ನರ್ಮದಾ ಮುಂತಾದ ಪವಿತ್ರ ನದಿಗಳಲ್ಲಿ ಸ್ನಾನ ಮಾಡಿದರೆ ವಿಶೇಷ ಎಂಬ ನಂಬಿಕೆಯಿದೆ. ಅಂದರೆ ಇದು ಶುದ್ಧೀಕರಣದ ಸಂಕೇತ. ದೇಹವಷ್ಟೇ ಅಲ್ಲ, ಮನಸ್ಸನ್ನೂ ಶುದ್ಧೀಕರಿಸುವ ಸಂಕೇತವೇ ಈ ಸ್ನಾನ. ಇದು ಎಲ್ಲಾ ಕಲ್ಮಶಗಳನ್ನು ತೊಡೆದು ಹಾಕುತ್ತದೆ ಎಂಬ ನಂಬಿಕೆಯಿಂದ ಆಸ್ತಿಕರು ಪ್ರತಿ ವರ್ಷ ಹಬ್ಬದ ದಿನ ತಪ್ಪದೇ ಪವಿತ್ರ ಸ್ನಾನ ಮಾಡುತ್ತಾರೆ.
ಮಕರ ಸಂಕ್ರಾಂತಿ, ನಮ್ಮ ಪೂರ್ವಜರನ್ನು ನೆನಪಿಸಿಕೊಳ್ಳಲು ಶುಭಸಮಯ ಎನ್ನಲಾಗುತ್ತದೆ. ಅವರಿಗೆ ಗೌರವ ಸಲ್ಲಿಸಲು ಇದು ಉತ್ತಮ ದಿನ. ಹೀಗಾಗಿ, ಈ ದಿನ ಸಾಕಷ್ಟು ಮಂದಿ ತರ್ಪಣ ಸೇರಿದಂತೆ ಹಿರಿಯನ್ನು ಗೌರವಿಸುವ ಹಲವು ಕೈಂಕರ್ಯಗಳನ್ನು ಕೈಗೊಳ್ಳುತ್ತಾರೆ. ತಮ್ಮ ಹಿರಿಯರು ತಿಳಿದೋ- ತಿಳಿಯದೆಯೋ ಮಾಡಿದ ಪಾಪಕಾರ್ಯಗಳಿಗೆ ಕ್ಷಮೆ ಕೇಳುತ್ತಾರೆ. ಅವರೆಲ್ಲರಿಗೂ ಚಿರಶಾಂತಿ ಸಿಗಲಿ ಅಥವಾ ಸ್ವರ್ಗ ಪ್ರಾಪ್ತಿಯಾಗಲಿ ಎಂದು ಪ್ರಾರ್ಥಿಸಲಾಗುತ್ತದೆ.
ರವಿಯಿಲ್ಲದೆ ನರನಿಲ್ಲ. ಭೂಮಿಯ ಮೇಲಿರುವ ಸಕಲ ಚರಾಚರಗಳಿಗೂ ಅವನೇ ಆಧಾರ. ಇದೇ ಕಾರಣದಿಂದ ಹಿಂದೂ ಧರ್ಮದಲ್ಲಿ ಸೂರ್ಯನಿಗೆ ಸೂರ್ಯದೇವನೆಂದೇ ಹೇಳುತ್ತೇವೆ. ಆತನಿಗೆ ದೇವರ ಸ್ಥಾನವಿದೆ.
ಮಕರ ಸಂಕ್ರಮಣದ ವಿಶೇಷ ಸಂದರ್ಭದಲ್ಲಿ ಸೂರ್ಯನನ್ನೂ ಬಗೆಬಗೆಯಾಗಿ ಪೂಜಿಸುವ ಕ್ರಮವಿದೆ. ಹಬ್ಬದಂದು ಸೂರ್ಯನಿಗೆ ಅರ್ಘ್ಯ ಸಮರ್ಪಿಸುವ, ಸೂರ್ಯ ನಮಸ್ಕಾರ ಮಾಡುವ ಸಂಪ್ರದಾಯವಿದೆ. ಈ ಮೂಲಕ ಸೂರ್ಯನ ಅನುಗ್ರಹವನ್ನು ಬೇಡಿಕೊಳ್ಳುವ ಜೊತೆಗೆ, ನಮ್ಮ ಇರುವಿಕೆಗೆ ಕಾರಣಕರ್ತನಾದ ಸೂರ್ಯನಿಗೆ ಧನ್ಯವಾದ ಹೇಳಲಾಗುತ್ತದೆ. ಈ ದಿನ ರೈತರು ಕೃಷಿಗೆ ಬಳಸುವ ಉಪಕರಣಗಳನ್ನು ಪೂಜಿಸುತ್ತಾರೆ. ಜತೆಗೆ, ಉತ್ತಮ ಇಳುವರಿಗಾಗಿ ಸೂರ್ಯದೇವನನ್ನು ಪ್ರಾರ್ಥಿಸುತ್ತಾರೆ.
ಮಕರ ಸಂಕ್ರಾಂತಿಯ ಹಬ್ಬದ ಸಂದರ್ಭದಲ್ಲಿ ʼಎಳ್ಳು ಬೆಲ್ಲ ಸವಿದು ಒಳ್ಳೆಯ ಮಾತಾಡುʼ ಎಂಬ ಮಾತಿದೆ. ಎಳ್ಳು ಮತ್ತು ಬೆಲ್ಲಕ್ಕೆ ಈ ಹಬ್ಬದಂದು ಎಲ್ಲಿಲ್ಲದ ಮಹತ್ವ. ಜನರು ಎಳ್ಳು ಮತ್ತು ಬೆಲ್ಲದಿಂದ ಮಾಡಿದ ಸಿಹಿ ತಿಂಡಿಗಳನ್ನು ಪರಸ್ಪರ ಹಂಚಿಕೊಳ್ಳುವುದು ವಾಡಿಕೆ. ಇದರ ಹಿಂದೆಯೂ ಒಂದು ವೈದ್ಯಕೀಯ ಕಾರಣವಿದೆ. ಈ ಪದಾರ್ಥಗಳು ಶೀತ ಹವಾಮಾನದ ಸಮಯದಲ್ಲಿ ದೇಹವನ್ನು ಬೆಚ್ಚಗಾಗಿಸುತ್ತವೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.
ಈ ಹಬ್ಬದ ಸಂದರ್ಭದಲ್ಲಿ ದಾನಕ್ಕೂ ಹೆಚ್ಚಿನ ಮಹತ್ವವಿದೆ. ವಿಶೇಷವಾಗಿ ಕಂಬಳಿ ದಾನ ಮಾಡಿದರೆ ಉತ್ತಮ ಎಂಬ ನಂಬಿಕೆಯಿದೆ. ಯಾಕೆಂದರೆ, ಇದು ನಿರಾಶ್ರಿತರಿಗೆ ಶೀತ ಗಾಳಿಯಿಂದ ರಕ್ಷಣೆ ನೀಡುತ್ತದೆ. ಈ ಹಬ್ಬದ ಸಂದರ್ಭದಲ್ಲಿ ಜನ ಅಸಹಾಯಕರಿಗೆ, ನಿರ್ಗತಿಕರಿಗೆ ಆಹಾರ ಸೇರಿದಂತೆ ಇತರ ವಸ್ತುಗಳನ್ನು ದಾನ ಮಾಡಿ ಹಬ್ಬವನ್ನು ಆಚರಿಸುತ್ತಾರೆ. ಹೀಗಾಗಿ, ಈ ಹಬ್ಬದ ಆಚರಣೆಯ ನೆಪದಲ್ಲಿ ದಾನ ಮಾಡುವ ಪ್ರವೃತ್ತಿಯೂ ಹೆಚ್ಚುತ್ತದೆ. ಇದಕ್ಕಿಂತ ಅರ್ಥಪೂರ್ಣ ಆಚರಣೆ ಇರಲಾರದೇನೋ.
ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಗಾಳಿಪಟ ಹಾರಿಸುವ ಅಭ್ಯಾಸವಿದೆ. ಈ ಗಾಳಿಪಟ ಹಾರಿಸುವ ಆಚರಣೆಯ ಹಿಂದೆ ಧಾರ್ಮಿಕ ಮತ್ತು ವೈಜ್ಞಾನಿಕ ಕಾರಣ ಇದೆ. ಅದರ ಜತೆಗೆ, ಇದು ಒಗ್ಗಟ್ಟು, ಖುಷಿಯ ಜೀವನದ ಸಂಕೇತ ಕೂಡಾ ಹೌದು. ಸೂರ್ಯನ ಬೆಳಕು ದೇಹಕ್ಕೆ ಬಲು ಒಳ್ಳೆಯದು. ಸೂರ್ಯನ ಕಿರಣಗಳು ವಿಟಮಿನ್ ಡಿ ಯ ಮೂಲ. ಇದೇ ಕಾರಣದಿಂದ ಮಕರ ಸಂಕ್ರಾಂತಿಯ ಹಬ್ಬದಂದು ಗಾಳಿಪಟ ಹಾರಿಸುವುದಕ್ಕೆ ಮಹತ್ವವಿದೆ. ಅದೂ ಅಲ್ಲದೆ, ಯಾವುದೇ ಭೇದವಿಲ್ಲದೆ ಜನರು ಗಾಳಿಪಟವನ್ನು ಹಾರಿಸಿ, ಸಿಹಿ ತಿಂಡಿಗಳನ್ನು ವಿನಿಮಯ ಮಾಡಿಕೊಂಡು ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಾರೆ. ಇದರಿಂದ ಜನರಲ್ಲಿ ಒಗ್ಗಟ್ಟಿನ ಭಾನೆಯೂ ಮೂಡುತ್ತದೆ.
ಅವರವರ ಭಾವಕ್ಕೆ ಅವರವರ ಭಕುತಿಗೆ…
ಖಿಚಡಿ ಹಬ್ಬ: ಮಕರ ಸಂಕ್ರಮಣಕ್ಕೆ ಖಿಚಡಿ ಹಬ್ಬ ಎಂಬ ಜನಪ್ರಿಯ ಹೆಸರೂ ಇದೆ. ಖಿಚಡಿ ಇಲ್ಲದ ಸಂಕ್ರಾಂತಿ ಎಂದರೆ ಬಣ್ಣಗಳಿಲ್ಲದೆ ಹೋಳಿಯಂತೆ ಎಂಬ ಮಾತಿದೆ. ಖಿಚಡಿ ಎಂದರೆ ಉದ್ದು ಮತ್ತು ಅಕ್ಕಿಯಿಂದ ತಯಾರಿಸಬಹುದಾದ ಒಂದು ಸರಳ ಸಿಹಿ ಭಕ್ಷ್ಯ. ಇದು ಸುಲಭವಾಗಿ ಜೀರ್ಣವಾಗುವುದರ ಜೊತೆಗೆ ದೇಹಕ್ಕೆ ಹೇರಳವಾಗಿ ಪ್ರೊಟೀನ್, ಕೊಬ್ಬು, ಕಬ್ಬಿಣ, ಪೋಲಿಕ್ ಆಮ್ಲ, ಜೀವಸತ್ವಗಳನ್ನು ಒದಗಿಸುತ್ತದೆ. ಹೀಗಾಗಿ ವೈದ್ಯಕೀಯವಾಗಿಯೂ ಇದಕ್ಕೆ ಮಹತ್ವವಿದೆ.
ಉತ್ತರ ಪ್ರದೇಶ: ಉತ್ತರ ಪ್ರದೇಶದ ಮಕರ ಸಂಕ್ರಾಂತಿಯನ್ನು ಇದೇ ಹೆಸರಿನಿಂದ ಕರೆಯಲಾಗುತ್ತದೆ ಮತ್ತು ಕೆಲವು ನಗರಗಳಲ್ಲಿ ಕಿಚಡಿ ಹಬ್ಬ ಎನ್ನಲಾಗುತ್ತದೆ. ಎಳ್ಳು ಲಾಡು, ಗಜಕಂಡ್ ನೆಲಗಡಲೆ, ಬೆಲ್ಲದ ಗಜಕ್ ಕೂಡ ಈ ದಿನ ತಿಂದು ಸಂಭ್ರಮಿಸುತ್ತಾರೆ.
ಪಂಜಾಬ್-ಹರಿಯಾಣ: ಮಕರ ಸಂಕ್ರಾಂತಿಯನ್ನು ಪಂಜಾಬ್ ಮತ್ತು ಹರಿಯಾಣದಲ್ಲಿ ಮಾಘಿ ಎಂದು ಆಚರಿಸಲಾಗುತ್ತದೆ. ಆದಾಗ್ಯೂ, ಪಂಜಾಬ್ ನಲ್ಲಿ ಇದನ್ನು ಲೋಹ್ರಿ ಎಂದೂ ಕರೆಯಲಾಗುತ್ತದೆ. ಇಲ್ಲಿ ಈ ಹಬ್ಬವನ್ನು ಬಣ್ಣಗಳು ನೃತ್ಯ, ಸಂಗೀತ ಹಾಗೂ ದೀಪೋತ್ಸವಗಳ ಮೂಲಕ ಆಚರಿಸಲಾಗುತ್ತದೆ. ಇಲ್ಲಿನ ಮಕ್ಕಳು ಮನೆ ಮನೆಗೆ ಹೋಗಿ ಲೂಟಿ (ಪಾಪ್ಕಾರ್ನ್, ಕಡಲೆಕಾಯಿ, ಬೆಲ್ಲ ಹೀಗೆ ಸಿಹಿ ತಿಂಡಿಗಳು) ಸಂಗ್ರಹಿಸುತ್ತಾ ದುಲ್ಹಭಟ್ಟಿ ಹಾಡುತ್ತಾರೆ. ಸಂಜೆ ಎಲ್ಲೆಡೆಯೂ ದೀಪ ಬೆಳಗಿ ದೀಪದ ಸುತ್ತಲೂ ಭಾಂಗ್ರಾ ನೃತ್ಯ ಮಾಡುತ್ತಾರೆ.
ರಾಜಸ್ಥಾನ ಮತ್ತು ಗುಜರಾತ್: ಗುಜರಾತ್ನಲ್ಲಿ ಮಕರ ಸಂಕ್ರಾಂತಿ ಉತ್ತರಾಯಣ ಎಂದೇ ಪ್ರಸಿದ್ಧಿ. ಇಲ್ಲಿನ ಹಬ್ಬದ ಆಚರಣೆಯ ಪ್ರಮುಖ ಅಂಶ ಗಾಳಿಪಟ ಹಾರಿಸುವುದು. ಲಕ್ಷಾಂತರ ಗುಜರಾತಿಗಳು ತಮ್ಮ ಬಾಲ್ಕನಿ, ಟೆರೆಸ್ನಿಂದ ಗಾಳಿಪಟ ಹಾರಿಸುವ ಮೂಲಕ ಆಕಾಶದಲ್ಲಿ ಬಣ್ಣದ ಚಿತ್ತಾರ ಮೂಡುವಂತೆ ಮಾಡುತ್ತಾರೆ. ಅಲ್ಲದೆ ಬಗೆಬಗೆಯ ಭಕ್ಷ್ಯಗಳನ್ನು ತಯಾರಿಸಿ ಸವಿಯುತ್ತಾರೆ. ಈ ಹಬ್ಬದಂದು ಚಿಕ್ಕಿ, ಉಂಧಿಯು, ಜಿಲೇಬಿಯಂತಹ ವಿಶೇಷ ಖಾದ್ಯಗಳನ್ನೂ ತಯಾರಿಸಲಾಗುತ್ತದೆ.
ತಮಿಳುನಾಡು: ತಮಿಳುನಾಡಿನಲ್ಲಿ ಮಕರ ಸಂಕ್ರಾಂತಿಯನ್ನು ʼಪೊಂಗಲ್ʼ ಎಂದು ಕರೆಯುತ್ತಾರೆ. ತಮಿಳುನಾಡಿನಲ್ಲಿ ಮಕರ ಸಂಕ್ರಾಂತಿ ಆಚರಣೆ ಬಹಳ ವಿಶೇಷ. ಅನಾದಿಕಾಲದಿಂದಲೂ ಇಲ್ಲಿ ಪೊಂಗಲ್ ಅನ್ನು ಬಹಳ ಸಂಭ್ರಮದಿಂದ ಆಚರಿಸುತ್ತಿದ್ದರು. ಇಲ್ಲಿ ಪೊಂಗಲ್ ಅನ್ನು ನಾಲ್ಕು ದಿನಗಳ ಕಾಲ ಆಚರಿಸುತ್ತಾರೆ. ವಿಶಾಲವಾದ ಬಯಲು ಅಥವಾ ಅಂಗಳದಲ್ಲಿ ಒಲೆ ಇರಿಸುವ ಮೂಲಕ ಮಡಿಕೆಯಲ್ಲಿ ಪೊಂಗಲ್ ತಯಾರಿಸುತ್ತಾರೆ. ಇದು ತಮಿಳು ತಿಂಗಳಾದ ಮಾರ್ಗಜಿಯ ಕೊನೆಯ ದಿನ ಆರಂಭಗೊಂಡು ತಮಿಳು ತಿಂಗಳ ಥಾಯ್ನ ಮೂರನೇ ದಿನ ಕೊನೆಗೊಳ್ಳುತ್ತದೆ.
ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ಜನರು ತಿಲಗುಡಿ ತಿಲ ಲಡ್ಡೂಗಳನ್ನು ತಯಾರಿಸುತ್ತಾರೆ ಮತ್ತು ಅದನ್ನು ಕುಟುಂಬದ ಸದಸ್ಯರು ಮತ್ತು ಸ್ನೇಹಿತರಿಗೆ ಹಂಚುತ್ತಾರೆ. ಅವರು ಒಬ್ಬರಿಗೊಬ್ಬರು ನಮಸ್ಕರಿಸುತ್ತಾರೆ ಮತ್ತು ತಿಲ ಅಂದರೆ ಎಳ್ಳಿನ ಲಾಡುಗಳನ್ನು ಸ್ವೀಕರಿಸಿ ಮತ್ತು ಸಿಹಿ ಮಾತುಗಳನ್ನಾಗಿ ಎಂಬ ಅರ್ಥದಲ್ಲಿ ಹಬ್ಬದಾಚರಣೆ ನಡೆಯುತ್ತದೆ.
ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದಲ್ಲಿ ಮಕರ ಸಂಕ್ರಾಂತಿಯನ್ನು ಗಂಗಾಸಾಗರದಲ್ಲಿ ಪವಿತ್ರ ಸ್ನಾನ ಮಾಡುವ ಮೂಲಕ ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿಯವರೆಗೂ ಗಂಗಾಸಾಗರ ಮೇಳವನ್ನು ಆಯೋಜಿಸಲಾಗಿದೆ. ಮಕರ ಸಂಕ್ರಾಂತಿಯನ್ನು ಇಲ್ಲಿ ಪೌಶ್ ಸಂಕ್ರಾಂತಿಯೆಂದೂ ಕರೆಯಲಾಗುತ್ತದೆ. ಈ ಸುಗ್ಗಿ ಹಬ್ಬವನ್ನು ಪೌಶ್ ಪರ್ಬನ್ ಎಂದು ಆಚರಿಸಲಾಗುತ್ತದೆ. ಹೊಸದಾಗಿ ಕೊಯ್ಲು ಮಾಡಿದ ಭತ್ತ ಮತ್ತು ಖರ್ಜೂರದ ಸಿರಪ್ ಅನ್ನು 'ಖೆಜುರೆರ್ ಗುರ್' ಮತ್ತು 'ಪಾಟಲಿ' ರೂಪದಲ್ಲಿ 'ಪಿತಾ' ಎಂದು ಕರೆಯಲಾಗುವ ವಿವಿಧ ಸಾಂಪ್ರದಾಯಿಕ ಬಂಗಾಳಿ ಸಿಹಿತಿಂಡಿಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇದನ್ನು ಅಕ್ಕಿ ಹಿಟ್ಟು, ತೆಂಗಿನಕಾಯಿ, ಹಾಲು ಮತ್ತು 'ಇದನ್ನು ಬಳಸಿ ಉತ್ಪಾದಿಸಲಾಗುತ್ತದೆ. ಖೆಜುರೆರ್ ಗುರ್' (ಖರ್ಜೂರ ಬೆಲ್ಲ). ಇಲ್ಲಿ ಮಕರ ಸಂಕ್ರಾಂತಿಗೆ ಲಕ್ಷ್ಮೀದೇವಿಯನ್ನು ಪೂಜಿಸುತ್ತಾರೆ. ಮೂರು ದಿನಗಳ ಕಾಲ ಹಬ್ಬ ನಡೆಸಲಾಗುತ್ತದೆ.
ಒಡಿಶಾ - ಒರಿಸ್ಸಾದಲ್ಲಿ ಮಕರ ಸಂಕ್ರಾಂತಿ ಆರಂಭವಾಗುವುದು ಇಲ್ಲಿನ ಜನರು ಕೊಳ ಅಥವಾ ಪವಿತ್ರ ನದಿಗಳಲ್ಲಿ ಸ್ನಾನ ಮಾಡುವ ಮೂಲಕ. ಇವರು ಮಕಲ ಚೌಲ ಅಥವಾ ಹೊಸದಾಗಿ ಕೊಯ್ಲ ಮಾಡಿದ ಅಕ್ಕಿ, ಬಾಳೆಹಣ್ಣು, ತೆಂಗಿನಕಾಯಿ, ಬೆಲ್ಲ, ಎಳ್ಳು, ಕುಡುಬು ಹೀಗೆ ಇವನ್ನೆಲ್ಲಾ ದೇವರಿಗೆ ನೈವೇದ್ಯ ಮಾಡುತ್ತಾರೆ. ಒಡಿಶಾದ ಮಯೂರ್ಭಂಜ್, ಸುಂದರ್ಗಢ್ ಮತ್ತು ಕಿಯೋಂಜಾರ್ ಜಿಲ್ಲೆಗಳಲ್ಲಿ ಶೇ 40 ರಷ್ಟು ಆದಿವಾಸಿಗಳಿದ್ದಾರೆ. ಭುಯಾನ್ ಬುಡಕಟ್ಟು ಜನರು ದೀಪೋತ್ಸವವನ್ನು ಬೆಳಗಿಸಿ, ನೃತ್ಯ ಮಾಡಿ ಮತ್ತು ಮಕರ ಸಂಕ್ರಾಂತಿಯನ್ನು ಆಚರಿಸುತ್ತಾರೆ. ಅದು ಅವರ ಹೊಸ ವರ್ಷವನ್ನು ಸೂಚಿಸುತ್ತದೆ. ಅವರು ಮಾಘಯಾತ್ರ ಎಂಬ ಮೆರವಣಿಗೆಗಳನ್ನು ನಡೆಸುತ್ತಾರೆ. ಈ ದಿನ ಸೂರ್ಯನು ತನ್ನ ಪಥ ಬದಲಿಸುವ ಕಾರಣ ಇಲ್ಲಿನ ಕೋನಾರ್ಕ್ ದೇವಾಲಯದಲ್ಲಿ ಸೂರ್ಯನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಪಶ್ಚಿಮ ಒಡಿಶಾದಲ್ಲಿ ಆತ್ಮಿಯ ಸ್ನೇಹಿತದೊಂದಿಗೆ ತಮ್ಮ ಬಾಂಧವ್ಯ ಹೆಚ್ಚಿಸುವ ದಿನವನ್ನಾಗಿ ಇದನ್ನು ಆಚರಿಸಲಾಗುತ್ತದೆ. ಆ ಕಾರಣಕ್ಕೆ ಇವರು ಮಕರ ಬಾಸಿಬಾ ಎಂದು ಕರೆಯುತ್ತಾರೆ.
ಕೇರಳ - ಕೇರಳದಲ್ಲಿ ಮಕರ ಸಂಕ್ರಾಂತಿಯನ್ನು ಮಕರ ವಿಳಕ್ಕು ಎಂದು ಆಚರಿಸಲಾಗುತ್ತದೆ. ಮಕರ ಜ್ಯೋತಿಯನ್ನು ವೀಕ್ಷಿಸಲು ದಕ್ಷಿಣ ಭಾರತದಾದ್ಯಂತ ಜನರು ಶಬರಿಮಲೆಗೆ ಆಗಮಿಸುತ್ತಾರೆ. ಶಬರಿಮಲೆ ದೇಗುಲದ ಸ್ವಾಮಿ ಸ್ವಾಮಿ ಅಯಪ್ಪನನ್ನು ಜನರು ಪೂಜಿಸುತ್ತಾರೆ. ಮಕರ ಸಂಕ್ರಾಂತಿಯಂದು ಕೇರಳದ ಶಬರಿಮಲೆಯಲ್ಲಿ ಕಾಣುವ ಮಕರಜ್ಯೋತಿಗೆ ಹೆಚ್ಚಿನ ಪ್ರಾಧಾನ್ಯತೆ ಇದೆ. ಅಯ್ಯಪ್ಪ ವೃತಾಧಾರಿಗಳಾದ ಜನರು ಶಬರಿಮಲೆಗೆ ತೆರಳಿ ತಮ್ಮ ಸ್ವಾಮಿಯ ಪಾದಕ್ಕೆರಗಿ ಮಕರ ಜ್ಯೋತಿಯ ದರ್ಶನವನ್ನು ಪಡೆದರೆ ಜನ್ಮ ಸಾರ್ಥಕವಾಗುವುದೆಂಬ ನಂಬಿಕೆ ಯಿಂದಾಗಿ ಲಕ್ಷೋಪಲಕ್ಷ ಜನರು ಈ ಜ್ಯೋತಿಯ ದರ್ಶನಕ್ಕಾಗಿ ವರ್ಷಂಪ್ರತಿ ಶಬರಿಮಲೆ ಸನ್ನಿಧಾನಕ್ಕಾಗಮಿಸುತ್ತಾರೆ. "ಮಕರ ವಿಳಕ್ಕು"ಎಂದು ಕರೆಯಲ್ಪಡುವ ಈ ಜ್ಯೋತಿಯು ಶಬರಿಮಲೆಯ ಬೆಟ್ಟದಿಂದ ಮೂರು ಬಾರಿ ಗೋಚರವಾಗುತ್ತದೆ.
ಅಸ್ಸಾಂ: ಭೋಗಾಲಿ ಬಿಹು ಎಂದೂ ಕರೆಯಲ್ಪಡುವ ಮಾಗ್ ಬಿಹು ಅಸ್ಸಾಮಿಯ ಸುಗ್ಗಿ ಹಬ್ಬವಾಗಿದೆ. ಇದು ಮಾಘ ತಿಂಗಳು ಅಂದರೆ ಜನವರಿ-ಫೆಬ್ರುವರಿ) ತಿಂಗಳ ಕೊಯ್ಲಿನ ಋತುವಿನ ಮುಕ್ತಾಯವನ್ನು ಸೂಚಿಸುತ್ತದೆ. ಹಬ್ಬ ಅಂಗವಾಗಿ ಆಚರಣೆಗಳು ಹಾಗೂ ದೀಪೋತ್ಸವ ಕೂಡ ನಡೆಯುತ್ತದೆ. ಇಲ್ಲಿನ ಯುವಕರು ಬಿಹು ಸಮಯದಲ್ಲಿ ಬಿದಿರು, ಎಲೆ ಹಾಗೂ ಹುಲ್ಲಿನಿಂದ ಮೆಜಿ ಎಂದು ಕರೆಯುವ ಮನೆಗಳನ್ನು ನಿರ್ಮಿಸುತ್ತಾರೆ. ಮರುದಿನ ಆ ಗುಡಿಸಲುಗಳನ್ನು ಸುಡುವ ಮೂಲಕ ಹಬ್ಬದ ವಿಶೇಷ ಖಾದ್ಯಗಳನ್ನು ಸವಿಯುತ್ತಾರೆ. ಇಲ್ಲಿನ ಸ್ಥಳೀಯ ಸಾಂಪ್ರದಾಯಿಕ ಕಲೆಗಳಾದ ಟೆಕೇಲಿ ಭೋಂಗಾ (ಮಡಕೆ ಒಡೆಯುವುದು) ಮತ್ತು ಎಮ್ಮೆ ಕಾಳಗ ಕೂಡ ಹಬ್ಬದ ಭಾಗವಾಗಿದೆ.
ಆಂಧ್ರ ಪ್ರದೇಶ: ಮಕರ ಸಂಕ್ರಾಂತಿಯನ್ನು ಎಲ್ಲಾ ರೈತರು ಮೂರು ದಿನಗಳ ಕಾಲ ಆಚರಿಸುತ್ತಾರೆ. ಜನರು ಹಳೆಯ ವಸ್ತುಗಳನ್ನು ದೀಪೋತ್ಸವಕ್ಕೆ (ಭೋಗಿ) ಹಾಕುತ್ತಾರೆ. ತಮ್ಮ ಮನೆಯನ್ನು ರಂಗೋಲಿ ವಿನ್ಯಾಸದಿಂದ ಅಲಂಕರಿಸುತ್ತಾರೆ, ಪ್ರಾರ್ಥನೆ ಸಲ್ಲಿಸುತ್ತಾರೆ. ತೆಲುಗು ಕ್ಯಾಲೆಂಡರ್ ಪ್ರಕಾರ, ಇದನ್ನು ಪೌಷಾದ ಕೃಷ್ಣ ಸಪ್ತಮಿಯಂದು ಆಚರಿಸಲಾಗುತ್ತದೆ.
ತ್ರಿಪುರ: ತ್ರಿಪುರಾ ಸಂಕ್ರಾಂತಿಯನ್ನು ಹ್ಯಾಂಗ್ರೈ ಎಂದು ಆಚರಿಸುತ್ತಾರೆ. ಅದ್ಧೂರಿ ಹಬ್ಬದಾಚರಣೆಯ ಭಾಗವಾಗಿ ಅವರು ಕೇಕ್, ಸಾಂಪ್ರದಾಯಿಕ ಭಕ್ಷ್ಯಗಳು ಮತ್ತು ಪಾನೀಯಗಳನ್ನು ತಯಾರಿಸುತ್ತಾರೆ ಮತ್ತು ತಮ್ಮ ಸಂಬಂಧಿಕರು ಮತ್ತು ಸ್ನೇಹಿತರನ್ನು ಮನೆಗೆ ಆಹ್ವಾನಿಸುತ್ತಾರೆ.
ಹಿಮಾಚಲ ಪ್ರದೇಶ: ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಮಕರ ಸಂಕ್ರಾಂತಿಯನ್ನು ಮಾಘ ಸಾಜಿ ಎಂದು ಕರೆಯಲಾಗುತ್ತದೆ. ಇಲ್ಲಿನ ಜನರಿಗೆ ಇದು ಮಾಘ ಮಾಸದ ಆರಂಭದ ದಿನವಾಗಿದೆ. ಇದನ್ನು ಮಾಘ ಸಾಜಿಯಂದೂ ಕರೆಯಲಾಗುತ್ತದೆ. ಈ ದಿನ ಬೆಳಿಗ್ಗೆ ಬೇಗ ಎದ್ದು ಕೊಳ, ನದಿಗಳಲ್ಲಿ ಸ್ನಾನ ಮಾಡಲಾಗತುತ್ತದೆ. ಇಲ್ಲಿನ ಜನರು ತಮ್ಮ ನೆರೆಹೊರೆಯವರನ್ನು ಭೇಟಿ ಮಾಡುವ ಮೂಲಕ ಹಬ್ಬ ಆಚರಿಸುತ್ತಾರೆ. ಹಾಡು, ನಾಟಿ (ಜನಪದ ನೃತ್ಯ) ದೊಂದಿಗೆ ಉತ್ಸವ ಕೊನೆಗೊಳ್ಳುತ್ತದೆ.
ಕರ್ನಾಟಕದಲ್ಲಿ ಸಂಕ್ರಾಂತಿಗೆ ಸಂಬಂಧಪಟ್ಟ ಆಚರಣೆಗಳಲ್ಲಿ ಮುಖ್ಯವಾಗಿ ಕಂಡುಬರುವುದು "ಎಳ್ಳು ಬೆಲ್ಲ". ಮನೆಯಲ್ಲಿ ಎಳ್ಳ್ಳು ಬೆಲ್ಲವನ್ನು ತಯಾರಿಸಿ ಸುತ್ತಲಿನ ಮನೆಗಳಿಗೆ "ಎಳ್ಳು ಹಂಚುವುದು" ಸಂಕ್ರಾಂತಿಯ ಸಂಪ್ರದಾಯ. ಎಳ್ಳಿನ ಜೊತೆಗೆ ಸಕ್ಕರೆ ಅಚ್ಚುಗಳು, ಹಣ್ಣು ಮತ್ತು ಕಬ್ಬಿನ ತುಂಡುಗಳನ್ನು ಸಹ ಬೀರುವುದುಂಟು.ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿದ ಬೆಲ್ಲ, ಒಣ ಕೊಬ್ಬರಿ, ಹುರಿಗಡಲೆ, ಸಿಪ್ಪೆ ತೆಗೆದ ಕಡಲೇಕಾಯಿ ಬೀಜ ಹಾಗೂ ಹುರಿದ ಬಿಳಿ ಎಳ್ಳನ್ನು ಸೇರಿಸಿ "ಎಳ್ಳು ಬೆಲ್ಲ" ತಯಾರಿಸಲಾಗುತ್ತದೆ.
ಕರ್ನಾಟಕದ ರೈತರು ಈ ಹಬ್ಬವನ್ನು ಸುಗ್ಗಿ ಎಂದೂ ಕರೆಯುತ್ತಾರೆ. ಹೆಣ್ಣುಮಕ್ಕಳು (ಮಕ್ಕಳು ಮತ್ತು ಹದಿಹರೆಯದವರು) ಹೊಸ ಬಟ್ಟೆಗಳನ್ನು ಧರಿಸಿ ಒಂದು ತಟ್ಟೆಯಲ್ಲಿ ಎಳ್ಳುಬೆಲ್ಲದೊಂದಿಗೆ ಹತ್ತಿರದ ಜನರನ್ನು ಮತ್ತು ಸಂಬಂಧಿಗಳನ್ನು ಭೇಟಿಯಾಗಿ ಎಳ್ಳುಬೆಲ್ಲವನ್ನು ವಿನಿಮಯ ಮಾಡಿಕೊಳ್ಳುತ್ತಾರೆ. "ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡೋಣ" ಎಂದು ಹೇಳಿಕೊಳ್ಳುತ್ತಾರೆ. ಪ್ಲೇಟ್‌ಗಳಲ್ಲಿ ಕಬ್ಬಿನ ತುಂಡು ಮತ್ತು ಸಕ್ಕರೆ ಅಚ್ಚುಗಳನ್ನು ವಿವಿಧ ಆಕಾರಗಳಲ್ಲಿ ಜೋಡಿಸುತ್ತಾರೆ.
ಕರ್ನಾಟಕದ ಕೆಲವು ಭಾಗಗಳಲ್ಲಿ, ಹೊಸದಾಗಿ ಮದುವೆಯಾದ ಮಹಿಳೆಯರು ತನ್ನ ಮದುವೆಯ ಮೊದಲ ವರ್ಷದಿಂದ ಐದು ವರ್ಷಗಳ ಕಾಲ ಬಾಳೆಹಣ್ಣುಗಳನ್ನು ಮುತ್ತೈದೆಯರಿಗೆ ಕೊಡುವ ಸಂಪ್ರದಾಯ ಇದೆ. ಬಾಳೆಹಣ್ಣುಗಳ ಸಂಖ್ಯೆಯನ್ನು ಪ್ರತಿವರ್ಷ ಐದರಿಂದ ಹೆಚ್ಚಿಸಲಾಗುತ್ತದೆ. ಉತ್ತರ ಕರ್ನಾಟಕದಲ್ಲಿ, ಸಮುದಾಯದ ಸದಸ್ಯರೊಂದಿಗೆ ಗಾಳಿಪಟ ಹಾರಿಸುವ ಸಂಪ್ರದಾಯವಿದೆ. ಮಹಿಳೆಯರು ಗುಂಪು ಗುಂಪಾಗಿ ರಂಗೋಲಿಯನ್ನು ಬಿಡಿಸುವುದು ಸಂಕ್ರಾಂತಿಯ ಸಮಯದ ಮತ್ತೊಂದು ಜನಪ್ರಿಯ ಪದ್ಧತಿ. ಕರ್ನಾಟಕದ ಮಂಡ್ಯ ಮತ್ತು ಮೈಸೂರು ಜಿಲ್ಲೆಗಳ ʼಕಿಚ್ಚು ಹಾಯಿಸೋದುʼ ಸಂಕ್ರಾಂತಿ ಹಬ್ಬದ ಇನ್ನೊಂದು ಆಕರ್ಷಣೆ. ರೈತರು ತಮ್ಮ ಜಾನುವಾರುಗಳನ್ನು ಬಣ್ಣಬಣ್ಣದ ಬಟ್ಟೆಗಳು ಮತ್ತು ಆಭರಣಗಳಿಂದ ಅಲಂಕರಿಸುತ್ತಾರೆ ಮತ್ತು ನಂತರ ಸಂಗೀತ ಮತ್ತು ಡ್ರಮ್ಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿಸುತ್ತಾರೆ. ಮೆರವಣಿಗೆಯ ನಂತರ, ಎತ್ತುಗಳನ್ನು ಬೆಂಕಿಯ ಮೇಲೆ ಹಾಯಿಸುತ್ತಾರೆ. ಇದು ಗ್ರಾಮ ಮತ್ತು ಜನರಿಗೆ ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ.
ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಸ್ಥಾನಕ್ಕೆ ಸಾವಿರಾರು ಮಂದಿ ಭಕ್ತರು ಸಂಕ್ರಾಂತಿಯಂದು ಭೇಟಿ ನೀಡುತ್ತಾರೆ. ಕೆಂಪೇಗೌಡರಿಂದ 16 ನೇ ಶತಮಾನದಲ್ಲಿ ನಿರ್ಮಿಸಲಾದ ಈ ದೇವಾಲಯವು ಬೆಂಗಳೂರಿನ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ ಮತ್ತು ಸಾಕಷ್ಟು ಭಕ್ತರನ್ನು ಆಕರ್ಷಿಸುವ ವಾಸ್ತುಶಿಲ್ಪಕ್ಕೆ ಹೆಸರಾಗಿದೆ. ಈ ದೇವಾಲಯದಲ್ಲಿ ಪ್ರತಿ ವರ್ಷ ಮಕರ ಸಂಕ್ರಾಂತಿಯಂದು ಮಾತ್ರ ಸೂರ್ಯನ ಕಿರಣಗಳು ಗರ್ಭಗುಡಿಯೊಳಗೆ ಶಿವಲಿಂಗದ ಮೇಲೆ ಬೀಳುತ್ತವೆ.
ವರ್ಷದ ಮೊದಲ ಹಬ್ಬ ಮಕರ ಸಂಕ್ರಮಣವನ್ನು ಎಲ್ಲರೂ ಶುಭ ಸಂಕೇತ ಎಂಬಂತೆ ಆಚರಿಸುತ್ತಾರೆ. ಭಕ್ತಿ, ನಂಬಿಕೆಯಿಂದ ದೇವಾಲಯಗಳಿಗೆ ಭೇಟಿ ನೀಡಿ ಜನರು ವಿವಿಧ ಸೇವೆಗಳನ್ನು ಸಲ್ಲಿಸುತ್ತಾರೆ. ಒಟ್ಟಿನಲ್ಲು ಸುಗ್ಗಿ, ಸಂಭ್ರಮ, ಸಂತೋಷ, ವೈವಿಧ್ಯತೆಯ ಸಂಕೇತ ಎಂದೇ ಹೇಳಬಹುದು. ವಿಶೇಷವಾಗಿ ರೈತ ಸಮುದಾಯ ಉತ್ಸಾಹದಿಂದ ಆಚರಿಸುವ ಹಬ್ಬಗಳಲ್ಲಿ ಸಂಕ್ರಾಂತಿಯೂ ಒಂದು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ