ಮನೆಯಲೊಂದು ಮನೆಯ ಕಟ್ಟಿ…


ಪುಟ್ಟದೊಂದು ಜುಟ್ಟು, ಉದ್ದ ಬಾಲದೊಂದಿಗೆ ಗುಬ್ಬಿಯಂತೆ ಆಕರ್ಷಕ ಸದ್ದು ಮಾಡುವ ಪುಟಾಣಿ ಹಕ್ಕಿ ಅದ್ಯಾವ ನಂಬಿಕೆಯ ಮೇಲೆ ಆ ನಿರ್ಧಾರಕ್ಕೆ ಬಂತೋ ಏನೋ… ಅದು ಅದರ ಬದುಕಿನ ಅನಿವಾರ್ಯತೆಯೂ ಆಗಿದ್ದೀತು.

ಅಂತೂ ಎತ್ತರದಲ್ಲಿದ್ದರೂ ನಮ್ಮ ಮನೆಗೆ ಬಂದು ಕಿಟಕಿಯ ಪರದೆಯ ಮೇಲೆ ಇದ್ದಕ್ಕಿದ್ದಂತೆ ತನ್ನದೊಂದು ಮನೆ ಕಟ್ಟಲು ಶುರುವಿಟ್ಟುಕೊಂಡಿತ್ತು. ಅದ್ಯಾಕೋ ಏನೋ ಕೆಲವು ಕಡ್ಡಿ ಜೋಡಿಸಿದ ನಂತರ ಕೆಲಸ ನಿಲ್ಲಿಸಿಬಿಟ್ಟಿತ್ತು. ಆ ಕಡ್ಡಿಗಳನ್ನು ಗುಡಿಸಿ ಬಿಸಾಡಿದ್ದೂ ಆಯಿತು. ಆದರೆ, ಕೆಲವು ದಿನಗಳ ನಂತರ ಕೆಲಸ ಮತ್ತೆ ಆರಂಭ. ಈ ಭಾರಿ ಕೆಲಸ ನಿಲ್ಲಲಿಲ್ಲ.

ನಾವೋ, ನಮ್ಮ ಜೊತೆ ಅದೊಂದು ಬದುಕು ಕಟ್ಟಿಕೊಂಡರೆ ನಮಗೇನು ನಷ್ಟ ಎಂದು ಅಡ್ಡಿ ಮಾಡಲಿಲ್ಲ. ಕಿಟಕಿ, ಪರದೆ ಮುಟ್ಟಲಿಲ್ಲ. ತುಂಟ ಮಗನಿಗೂ, 'ಅದು ನಮ್ಮ ಫ್ರೆಂಡ್.‌ ತಂಟೆ ಮಾಡಿದರೆ ಓಡಿ ಹೋದೀತುʼ ಎಂದು ಹೇಳಿ ಒಂದು ಬಂಧ ಬೆಸೆದುಬಿಟ್ಟೆ. ಕೆಲವೇ ಕಡ್ಡಿಗಳಿದ್ದ ಜೋಡಿ ಹಕ್ಕಿಗಳ ಗೂಡು ಕೆಲವೇ ದಿನಗಳಲ್ಲಿ ಸುಸಜ್ಜಿತ ʼಮನೆʼ ಯಾಯಿತು.

ಮನೆಯಾದ ನಂತರ ಗೂಡಲ್ಲೇ ವಾಸ ಆರಂಭಿಸಿದ ಹೆಣ್ಣು ಹಕ್ಕಿಗೆ ಗಂಡಿನಿಂದ ಎಲ್ಲಾ ಸಹಕಾರ ಸಿಗುತ್ತಿತ್ತು. ರಾತ್ರಿಯೂ ಹೊಸ ಮನೆಯಲ್ಲೇ ವಾಸ ಆರಂಭವಾಯಿತು. ನಮ್ಮ ಮಾತು, ಶಬ್ದಗಳೂ ಅದಕ್ಕೆ ಅಭ್ಯಾಸವಾಯಿತೇನೋ. ಇದ್ದ ಕೊಂಚ ಭಯ ಹೋಗಿ ಅದೇನೋ ಆಪ್ತತೆ ಮನೆಮಾಡಿತು. ಮುಂಜಾನೆದ್ದು ಜೋಡಿಯ ಸಂಭಾಷಣೆ ಕೇಳುವುದು ನಮಗೂ ರೂಢಿಯಾಯಿತು. ಗೂಡಲ್ಲಿ ಚಿಕ್ಕದೆರಡು ಮೊಟ್ಟೆ ಕಂಡಾಗ ಏನೋ ಒಂದು ಪುಳಕ.

ತಿಂಗಳಾಗುತ್ತಾ ಬಂತು. ಕುತೂಹಲ ತಾಳಲಾರದೆ ತಾಯಿ ಹಕ್ಕಿ ಹೊರಹೋದಾಗ ಗೂಡನ್ನು ಇಣುಕಿ ನೋಡಿದೆ. ಮಾಂಸದ ಮುದ್ದೆಯಂತಿದ್ದ ಮರಿಜೀವವೊಂದಿತ್ತು. ಆದರೆ ಇನ್ನೊಂದು ಮೊಟ್ಟೆ ಏನಾಯಿತು ಎಂದು ತಿಳಿಯಲಿಲ್ಲ. ದಿನವೂ ಮರಿಯ ಪೋಷಣೆಯಲ್ಲಿ ಆ ಜೋಡಿಗಳು ತೋರಿಸುತ್ತಿದ್ದ ಕಾಳಜಿ, ಆ ಅರ್ಥವಾಗದ ಸಂಭಾಷಣೆ ನಮಗೆ ಸುಪ್ರಭಾತವಾಯಿತು.


ಮರಿಜೀವವೂ ಸದ್ದು ಮಾಡತೊಡಗಿತು. ಕೊನೆಗೊಂದು ದಿನ ಮರಿಗೆ ಹಾರಾಟ ಹೇಳಿಕೊಡುವ ಕೆಲಸವನ್ನು ತಾಯಿ ಆರಂಭಿಸಿಯೇಬಿಟ್ಟಿತ್ತು. ಮನೆಯೊಳಗೆಲ್ಲಾ ಹಾರಾಟ ಸದ್ದು. ನೆಲ ಕುಟುಕಿ ಆಹಾರ ತಿನ್ನಲು, ರೆಕ್ಕೆಯನ್ನು ಶುಚಿಗೊಳಿಸಲು ತಾಯಿ ಹೇಳಿಕೊಡುತ್ತಿದ್ದ ರೀತಿ ಅದೆಂತಾ ಚೆಂದ. ನಾಲ್ಕನೇ ಮಹಡಿಯಿಂದ ಕೆಳಗೆ ಹಾರಿದರೆ ಎಲ್ಲಿ ಅಪಾಯವಾದೀತು ಎಂದು ಆ ಜೋಡಿ, ನಾವು ಕಾದಿದ್ದೂ ಆಯಿತು.

ಆದರೆ ಕೂತಲ್ಲಿ ಕೂರದ ಮರಿ ಕೆಳಗೆ ದುಮುಕಿಯೇಬಿಟ್ಟಿತು. ಜೊತೆಗೆ ಜೋಡಿ ಹಕ್ಕಿಗಳೂ ಹೋದವು. ಮತ್ತೆ ಮತ್ತೆ ಗೂಡಿಗೆ ಬಂದು ನೋಡುತ್ತಿದ್ದವು. ಸದ್ದು ಮಾಡುತ್ತಿದ್ದವು. ಹಾಗಾದರೆ ಮರಿ ಅವಕ್ಕೆ ಸಿಗಲಿಲ್ಲವೇ…ಬೇರೆಡೆ ಹೊಸ ಬದುಕು ಆರಂಭಿಸಿತೇ, ನಮಗೂ ತಿಳಿಯಲಿಲ್ಲ. ಅವುಗಳ ಸಂಭಾಷಣೆಯಿಲ್ಲದೆ, ಏನೋ ಖಾಲಿ ಎನಿಸುತ್ತಿದೆ. ತೆರೆದ ಕಿಟಕಿ ತೆರೆದೇ ಇದೆ. ತಾಯಿಯ ಭೇಟಿಯೂ ಮುಂದುವರಿದಿದೆ.

ಬದುಕು ಯಾರಿಗೂ ಕಷ್ಟ, ನೋವುಗಳಿಂದ ರಿಯಾಯಿತಿ ನೀಡುವುದಿಲ್ಲ… ಆದರೆ ಅದ್ಯಾವತ್ತೂ ಸುಂದರ  





ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪ್ರೀತಿ ಎಂದರೇನು ಎಂದು ಈಗ ಅರಿತೆನು…

ಸಿಂಹಾವಲೋಕನಕ್ಕೊಂದು ಸಮಯ

ಬೇಸರದಲ್ಲಿ ಬರೆದದ್ದು…ಹೌದಾ?!