ಧರ್ಮರಾಯನಿಗೆ ಕೆಟ್ಟವರೇ ಸಿಗಲಿಲ್ಲವಂತೆ…!



“ಧರ್ಮರಾಯನಿಗೆ ಒಮ್ಮೆ ಕೆಟ್ಟ ಮನುಷ್ಯನನ್ನು ಹುಡುಕಿ ತರಲು ಹೇಳಲಾಯಿತಂತೆ. ಆದರೆ ಖಾಲಿ ಕೈಯಲ್ಲಿ ವಾಪಸಾದ ಆತ ಕೆಟ್ಟವರು ಯಾರೂ ಸಿಗಲಿಲ್ಲ ಎಂದನಂತೆ. ಇದರರ್ಥ ನಮ್ಮ ಮನಸ್ಸು ಧನಾತ್ಮಕ ಯೋಚನೆ ಹೊಂದಿದ್ದರೆ ನಾವು ಪ್ರಪಂಚದಲ್ಲಿ ಅದೆಷ್ಟೋ ಒಳ್ಳೆಯವರನ್ನು ಕಾಣಲು ಸಾಧ್ಯ ಎಂಬುದಾಗಿದೆ”

ಮಂಗಳೂರು ವಿಶ್ವವಿದ್ಯಾನಿಲಯದ 38 ನೇ ಘಟಿಕೋತ್ಸವದಲ್ಲಿ ಸಾಧಕರನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ವಿದೇಶಾಂಗ ವ್ಯವಹಾರ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ವಿ. ಮುರಳೀಧರನ್‌ ಈ ಮಾತನ್ನು ಹೇಳಿದ್ದು ಸಮಯೋಚಿತವೇ ಆಗಿದ್ದು. ಹೊಸ ಕನಸುಗಳನ್ನು ಬೆನ್ನತ್ತಿ ಹೊರಟ ಮನಸುಗಳಿಗೆ ಸಚಿವರ ಮಾತು ನೀರೆರೆಯುವಂತಿತ್ತು. ಸಾಧನೆಯ ಹಾದಿಯಲ್ಲಿ ನೆರವಾಗುವ ಹೆತ್ತವರ ಮತ್ತು ಗುರುಹಿರಿಯರ ನೆನಪು ಸದಾ ಇರಲಿ ಎಂದು ಕಿವಿಮಾತು ಹೇಳಿದ ಅವರು ವಿವೇಕಾನಂದರ ಉಕ್ತಿಗಳ ಮೂಲಕ ನಮ್ಮ ದೇಶದ ಸಾಧನೆ ಮತ್ತು ವಿದ್ಯೆಯ ನಿಜವಾದ ಉದ್ದೇಶವನ್ನು ಜಾಗರೂಕಗೊಳಿಸುವ ಪ್ರಯತ್ನ ಮಾಡಿದರು.

ಭರತ ಭೂಮಿಯ ಬಗ್ಗೆ ಹೆಮ್ಮೆಯಿರಲಿ…
ತಕ್ಷಶಿಲೆಯಲ್ಲಿ ಜಗತ್ತಿನ ಅತ್ಯಂತ ಪುರಾತನ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದ ಕೀರ್ತಿ ಭಾರತದ್ದು. 2700 ವರ್ಷಗಳ ಹಿಂದೆ 64 ವಿಭಾಗಗಳ ಮೂಲಕ 20,000 ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡಲಾಗುತ್ತಿತ್ತು ಎಂಬುದು ಅದ್ಭುತ ಸಂಗತಿ. ಶ್ರೀಮಂತ ಇತಿಹಾಸ ಹೊಂದಿರುವ ದೇಶ ನಾಟ್ಯಶಾಸ್ತ್ರ, ಗಣಿತ, ವಿಜ್ಞಾನ, ತಂತ್ರಜ್ಞಾನದಲ್ಲಿ ಜಗತ್ತು ಮೆಚ್ಚುವ ಸಾಧನೆ ಮಾಡಿದೆ. ಹಾಲು, ತರಕಾರಿಯ ಉತ್ಪಾದನೆಯಲ್ಲಿ ಜಗತ್ತಿನಲ್ಲೇ ಮೊದಲ ಸ್ಥಾನದಲ್ಲಿರುವ ನಾವು ಪ್ರತಿವರ್ಷ 100 ಬಿಲಿಯನ್‌ ಡಾಲರ್‌ ಮೊತ್ತದ ಸಾಫ್ಟವೇರ್‌, ಸೇವೆಗಳನ್ನು ಮಾರುತ್ತೇವೆ. ಭಾರತ ಜಗತ್ತಿನಲ್ಲೇ ಅತ್ಯಂತ ದೊಡ್ಡ ರಸ್ತೆ, ರೈಲ್ವೇ ಸಂಪರ್ಕ, ಪೋಸ್ಟಲ್‌ ಸೌಲಭ್ಯಗಳನ್ನು ಹೊಂದಿದೆ. ಭಾಹ್ಯಾಕಾಶ ಕ್ಷೇತ್ರದಲ್ಲೂ ನಮ್ಮ ಸಾಧನೆ ದೊಡ್ಡದು. ಇಷ್ಟೇ ಅಲ್ಲದೆ, 2025 ರ ವೇಳೆಗೆ ಭಾರತ ಅತ್ಯಂತ ಹೆಚ್ಚು ಯುವಜನರನ್ನು ಹೋದಿರುವ ದೇಶವಾಗಲಿದೆ, ಎಂದರು.

ಶಿಕ್ಷಣದಲ್ಲಿ ಬೇಕು ಹೊಸತನ…
ನಮ್ಮ ಶಿಕ್ಷಣ ಬದಲಾದ ಕಾಲಕ್ಕೆ ತಕ್ಕಂತೆ ಪ್ರಸ್ತುತವಾಗಿರಬೇಕು ಮತ್ತು ಈ ನವೀಕರಣವನ್ನು ನಾವು ನಮ್ಮ ಶ್ರೀಮಂತ ಇತಿಹಾಸವನ್ನು ದೃಷ್ಟಿಯಲ್ಲಿರಿಸಿಕೊಂಡು ಮಾಡಬೇಕು. ಶಿಕ್ಷಣ ನಮ್ಮ ಮೆದುಳಿಗೆ ತುಂಬುವ, ಜೀರ್ಣವಾಗದ ಮಾಹಿತಿಯಲ್ಲ. ಮನುಷ್ಯತ್ವವನ್ನು ಮತ್ತು ನಮ್ಮ ನಡತೆ, ಗುಣಗಳನ್ನು ಬೆಳೆಸುವಂತಾಗಬೇಕು. ನಡತೆಯಿಲ್ಲದ ವಿದ್ಯೆ ಅಪಾಯ ತಂದಿಡುವುದೇ ಹೆಚ್ಚು. ವಿದ್ಯಾರ್ಥಿಗಳು ಬೆಲೆಬಾಳುವುದಕ್ಕಿಂತ, ಮೌಲ್ಯಯುತವಾಗಿರುವುದು ಮುಖ್ಯ. ಪದವಿಪೂರ್ವ ಶಿಕ್ಷಣ ಹೆಚ್ಚು ಮುಕ್ತವಾಗಿರಬೇಕು. ನೇರವಾಗಿ ವ್ಯಕ್ತಿಯನ್ನು ಉದ್ಯೋಗಕ್ಕೆ ಹಚ್ಚುವ ಪ್ರವೃತ್ತಿ ಸಧ್ಯದಲ್ಲೇ ಮರೆಯಾಗಲಿದೆ, ಎಂದರು.

ವಿವೇಕಾನಂದರ ವಾಣಿ…
ವಿವೇಕಾನಂದರು ಅಮೆರಿಕಾಕ್ಕೆ ಭೇಟಿ ನೀಡಿದ್ದರು, ಆದರೆ ಅದು ಹೊತನ್ನು ಕಲಿಯಲು ಅಲ್ಲ, ಬದಲಾಗಿ ಭಾರತದ ನೈಜ ಶ್ರೀಮಂತಿಕೆಯನ್ನು ಸಾರಿ ಹೇಳಲು. “ನಿಮ್ಮ ದೌರ್ಬಲ್ಯವನ್ನು ಕಿತ್ತೊಗೆಯಿರಿ. ನಿಮ್ಮ ದೇಹ ಮತ್ತು ಮನಸ್ಸಿಗೆ ಹೇಳಿಕೊಳ್ಳಿ ನೀವು ಸಮರ್ಥರೆಂದು. ನಿಮ್ಮಲ್ಲಿ ನಂಬಿಕೆ ಮತ್ತು ಆಶಾವಾದವಿರಲಿ. ನಮ್ಮ ಭಾರತೀಯತೆಯಿಂದ ಯಾವತ್ತೂ ಹಿಂದೆಗೆಯಬೇಡಿ. ಯಾವತ್ತೂ ಭಾರತೀಯರು ಮತ್ತೊಂದು ಜನಾಂಗದಂತೆ ಇದ್ದರೆ ಚೆನ್ನಾಗಿತ್ತು ಎಂದು ಯೋಚಿಸಬೇಡಿ,” ಎಂಬ ವಿವೇಕಾನಂದರ ಮಾತನ್ನು ಮುರಳೀಧರನ್‌ ಉಲ್ಲೇಖಿಸಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಸಭಾಂಗಣದ ಆವರಣದಲ್ಲಿ ನಿರ್ಮಿಸಲಾಗಿರುವ ಸೈನಿಕ ಸ್ಮಾರಕವನ್ನು ಕೇಂದ್ರ ಸಚಿವ ಮುರಳೀಧರನ್‌ ಗುರುವಾರ ಉದ್ಘಾಟಿಸಿದರು. ಕುಲಪತಿ ಪ್ರೊ. ಪಿ.ಎಸ್‌. ಯಡಪಡಿತ್ತಾಯ ಮೊದಲಾದವರು ಉಪಸ್ಥಿತರಿದ್ದರು.


“ಮಿತಿಯೇ ಇಲ್ಲದ ಭವಿಷ್ಯ ನಿಮ್ಮ ಮುಂದಿದೆ. ಪುಟಿದೇಳುವ ಆಶಾವಾದ, ಒಳ್ಳೆಯ ಯೋಚನೆ, ಕೆಲಸಗಳು ನಿಮ್ಮನ್ನು ಯಾವತ್ತಿಗೂ ಕಾಪಾಡುತ್ತವೆ”- ಸ್ವಾಮೀ ವಿವೇಕಾನಂದ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪ್ರೀತಿ ಎಂದರೇನು ಎಂದು ಈಗ ಅರಿತೆನು…

ಸಿಂಹಾವಲೋಕನಕ್ಕೊಂದು ಸಮಯ

ಬೇಸರದಲ್ಲಿ ಬರೆದದ್ದು…ಹೌದಾ?!