ಮುಂದೆ ಹೇಗೆ ಜೀವನ….?!
ಹೊಸ ವರ್ಷದ ಕ್ಯಾಲೆಂಡರ್ ಈಗಷ್ಟೇ ತೂಗುಹಾಕಿದ್ದೇವೆ. ಕ್ಯಾಲೆಂಡರ್ ಮೇಲೆ ಪೆನ್ನಿನ ಗುರುತುಗಳು ಇನ್ನೂ ಮೂಡಿಲ್ಲ. ನಮ್ಮ ಭೂತ, ಅದಕ್ಕೂ ಹೆಚ್ಚಾಗಿ ಭವಿಷ್ಯದ ಬಗ್ಗೆ ಯೋಚಿಸಲು ಇದು ಸಕಾಲ. ಅದರಿಂದ ಒಂಚೂರು ಪ್ರಯೋಜನವಾಗಬಹುದೇನೋ?! ಮನುಷ್ಯನಿಗೆ ಈಗ ಏನುಂಟು, ಏನಿಲ್ಲ ಹೇಳಿ! ಕರೆಂಟೇ ತಲುಪದ ಊರುಗಳೇ ಇದ್ದ ಜಾಗದಲ್ಲಿ ಈಗ ಮೊಬೈಲ್ ನೆಟ್‌ವರ್ಕ್ ಇಲ್ಲದಿರುವ ಹಳ್ಳಿಗಳೇ ಕಡಿಮೆ. ಸೈಕಲ್ ಎಂದರೇನೇ ಕಣ್ಣಗಲಿಸಿ ನೋಡುತ್ತಿದ್ದ ನಾವೀಗ ಕಾರ್ ಬಂದರೂ ಕೇರ್ ಮಾಡುವುದಿಲ್ಲ. ಫೋನಿದ್ದರೆ ತಿಂಡಿ ಊಟಕ್ಕೆ ಯಾರ ಹಂಗಿಲ್ಲ. ಬರೆ ಎಂದರೆ ಬರೆಯುವ, ಓದು ಎಂದರೆ ಓದುವ ಎಐ ತಂತ್ರಜ್ಞಾನ. ಎಲ್ಲರೂ ಇಷ್ಟೊಂದು ಅದೃಷ್ಟವಂತರಲ್ಲದಿದ್ದರೂ, ಒಟ್ಟಾರೆಯಾಗಿ ಮನುಷ್ಯ ತಾನೊಂದು ಬುದ್ಧಿವಂತ ಪ್ರಾಣಿ ಎಂದು ಸಾಬೀತುಪಡಿಸಿದ್ದಾನೆ! ವೈದ್ಯಕೀಯ ಕ್ಷೇತ್ರದಲ್ಲಿ ಅದ್ಭುತ ಪ್ರಗತಿ , ಶಿಕ್ಷಣದಲ್ಲಿ ಡಿಜಿಟಲ್ ಕ್ರಾಂತಿ , ಸಂವಹನದಲ್ಲಿ ಮಿತಿಯಿಲ್ಲದ ವೇಗ - ಇದೆಲ್ಲವೂ ನಮ್ಮ ಜೀವನವನ್ನು ಹಿಂದೆಂದಿಗಿಂತಲೂ ಸುಲಭವಾಗಿಸಿದೆ. ಪ್ರತಿ ಸಮಸ್ಯೆಗೂ ಒಂದು ಆ್ಯಪ್ , ಪ್ರತಿ ಪ್ರಶ್ನೆಗೂ ಒಂದು ಸರ್ಚ್ ಎಂಜಿನ್ … ಹೀಗೆ ಈ ಕಣ್ಣಿಂದ ಇನ್ನೂ ಏನೇನೆಲ್ಲಾ ನೋಡುತ್ತೇವೋ! ಆದರೂ, ಹೊರಗೆಲ್ಲಾ ತಳುಕು-ಬಳುಕು, ಒಳಗೆ ಬರೀ ಹುಳುಕು ಎಂಬ ಮಾತು ಪೂರ್ತಿ ಅಲ್ಲವೆಂದಾದರೂ ಒಂದಷ್ಟು ಮಟ್ಟಿಗೆ ಸತ್ಯ. ಈಗ ಕಳೆದುಕೊಳ್ಳುತ್ತಿರುವುದರ ಬಗ್ಗೆ ನಾವು ಜಾಣ ಕುರುಡು ಪ್ರದರ್ಶಿಸುತ...