ವಿದಾಯ ಕೂಟ…ಭಾವನೆಗಳ ಹೊಯ್ದಾಟ…



ಕಾಲೇಜು ಬಿಟ್ಟು ವಾರದ ಮೇಲಾಯಿತು. ವಿದ್ಯಾರ್ಥಿಗಳು ಬದಲಾವಣೆಗೆ ಒಗ್ಗಿಕೊಂಡಿರುತ್ತಾರೆ. ಭಾವನೆಗಳ ಭರದಲ್ಲಿ ವಿದಾಯ ಕೂಟದ ಮಾತಾಡಿರುತ್ತಾರೆ ಅಂದುಕೊಂಡೇ ಹೋಗಿದ್ದೆ. ಆದರೆ ನಿಜಸ್ಥಿತಿ ಹಾಗಿರಲಿಲ್ಲ…

ಪ್ರೀತಿಯ ವಿದ್ಯಾರ್ಥಿಗಳು (ಮಕ್ಕಳು) ತಮ್ಮ ಶಿಕ್ಷಕನಿಗೆ ವಿಶೇಷವಾಗಿ ವಿದಾಯ ಹೇಳಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು! ಕುಟುಂಬ ಸಮೇತ ಬನ್ನಿ ಎಂದು ಹೇಳಿದಾಗಲೂ ನನಗದು ಹೊಳೆದಿರಲಿಲ್ಲ. ಸಂತೋಷವೇ ಆದರೂ, ಭಾವನೆಗಳನ್ನು ಹಿಡಿದಿಟ್ಟುಕೊಳ್ಳಲೇಬೇಕಾದ ಸಂಕಟ ನನಗೆ. ನನಗಾಗಿ ಇಟ್ಟಿದ್ದ ಕುರ್ಚಿಯಲ್ಲಿ ಮೌನವಾಗಿ ಕುಳಿತೆ. ಬಲಭಾಗದಲ್ಲಿದ್ದ ಮನದನ್ನೆ ಅಶ್ವಿನಿಯ ಸ್ಥಿತಿಯೂ ಭಿನ್ನವಾಗಿರಲಿಲ್ಲ, ಮಗಳು ಪರ್ಣಿಕಾ ಅವಳದೇ ಪ್ರಪಂಚದಲ್ಲಿದ್ದಳು. ವಿದ್ಯಾರ್ಥಿಗಳ ಮುಖದಲ್ಲಿ ವಿಷಣ್ಣ ನಗೆಯಿತ್ತು. 

ವಿದ್ಯಾರ್ಥಿ ಅಕ್ಷಿತ್‌ ಕಾರ್ಯಕ್ರಮದ ಆಶಯಗಳನ್ನು ನನಗೂ ಅರ್ಥವಾಗುವಂತೆ ತಿಳಿಸಿದ್ದರು. ವಿಭಾಗದ ಮುಖ್ಯಸ್ಥರ ಪ್ರೀತಿಯ ಮನದಾಳದ ಮಾತುಗಳನ್ನು ಕೇಳಿ ಸಂತೋಷವಾಯಿತು. ಸಾರ್ಥಕತೆಯ ಭಾವನೆ ಮೂಡಿತು. ವಿದ್ಯಾರ್ಥಿಗಳ ಸರದಿ… ಕೆಲವರು ಮಾತನಾಡಿದರು… ಹಲವರಿಗೆ ಆಗಲಿಲ್ಲ. ಕೆಲವರು ಮಾತನಾಡಲು ಪ್ರಯತ್ನಿಸಿ ತಡವರಿಸಿದರು. ಇನ್ನೂ ಕೆಲವರು ನೆನಪುಗಳನ್ನು ಹೆಕ್ಕಿ ಅಂದುಕೊಂಡದ್ದಕ್ಕಿಂತ ಸ್ವಲ್ಪ ಹೆಚ್ಚೇ ಮಾತನಾಡಿದರು. ಬಳಿಕ ನನ್ನ ಸರದಿ…!  

ತುಂಬಾ ವಿಷಯಗಳನ್ನು ಹೇಳಬೇಕೆಂದುಕೊಂಡಿದ್ದೆ. ಏನು, ಹೇಗೆ, ಏಕೆ… ಯಾವುದೂ ಹೊಳೆಯಲಿಲ್ಲ. ಒಂದು ನೋಟ್‌ಮಾಡಿಕೊಂಡು ಹೋಗಿದ್ದರೂ ತಡವರಿಸಿದೆ. ಭಾವನೆಗಳ ಸಂಘರ್ಷ… ಬಿಡಬೇಕೆಂದರೂ ಬಿಡಲಾಗಲಿಲ್ಲ. ಹೇಗೋ ನಿಯಂತ್ರಿಸಿಕೊಂಡೆ. ಎಲ್ಲಾ ಕೆಲಸದೊತ್ತಡಗಳನ್ನು ಬದಿಗಿಟ್ಟು ಪ್ರೀತಿಯಿಂದ ಬಂದಿದ್ದ ಪ್ರಾಂಶುಪಾಲರು ನನ್ನ ತಾಕಲಾಟವನ್ನು ಅರ್ಥಮಾಡಿಕೊಂಡಿದ್ದರು. ಇವನು ಹೀಗಾದರೆ ಹೇಗೆ ಎಂಬ ಆತಂಕ ಅವರಿಗೆ ! 

ಭಾವನೆಗಳು ಕಷ್ಟ ನೀಡಿದರೂ ಅದರ ಬಗ್ಗೆ ನನಗೆ ಕೀಳರಿಮೆಯಿಲ್ಲ. ಭಾವನೆಗಳು ಮನುಷ್ಯನ ಸಹಜ ಗುಣ. ಶಿಕ್ಷಕ ಸಂತೋಷವಾಗಿರಬೇಕು. ಅವನಿಂದ ವಿದ್ಯಾರ್ಥಿಗಳು ಸ್ಫೂರ್ತಿ ಪಡೆಯುವಂತಿರಬೇಕು ಎಂಬ ಮಾತಿದೆ. ಅದು ಸತ್ಯವೂ ಹೌದು. ಆದರೆ ಶಿಕ್ಷಕ ಸ್ನೇಹಿತನಾಗಿರಬೇಕು, ಮನೆಯ ಹಿರಿಯ ಸದಸ್ಯನಂತಿರಬೇಕು. ಕೆಲವೊಮ್ಮೆ ಜೀವನದ ಕಠಿಣ ಸತ್ಯಗಳನ್ನೂ ವಿದ್ಯಾರ್ಥಿಗಳಿಗೆ ಹೇಳಬೇಕಾಗುತ್ತದೆ. ಅವರೊಂದಿಗೆ ಭಾವನಾತ್ಮಕ ಸಂಬಂಧವಿದ್ದರೆ ಮಾತ್ರ ನಿಜಕ್ಕೂ ಆತ ʼನಮ್ಮವನುʼ ಎಂದು ವಿದ್ಯಾರ್ಥಿಗಳಿಗೆ ಅನ್ನಿಸಬಹುದು. ಇದಕ್ಕೆ ಯಾವುದೇ ಶಾರ್ಟ್‌ಕಟ್‌ ಇಲ್ಲ. ವೃತ್ತಿ, ವಿದ್ಯಾರ್ಥಿಗಳ ಮೇಲೆ ಪ್ರೀತಿಯಿದ್ದರೆ ಇದು ಸಹಜವಾಗಿಯೇ ಆಗುತ್ತದೆ. 

ಬಳಿಕ ಮಾತನಾಡಿದ ಪ್ರಾಂಶುಪಾಲರಿಗೆ ನಾನೊಬ್ಬ ಭಾವಜೀವಿ ಎಂದು ತಿಳಿದಿತ್ತು. ಅವರ ಪ್ರತಿ ಮಾತನಲ್ಲೂ ಪ್ರೀತಿಯೊಂದಿಗೆ ಕಾಳಜಿ ಪ್ರತಿಫಲಿಸುತ್ತಿತ್ತು. ಆಗಾಗ ನನ್ನ ಮುಖವನ್ನು ನೋಡಿಯೇ ಮಾತನಾಡಿದರು! ಅವರು ನನ್ನಲ್ಲಿ ಒಳ್ಳೆಯ ಗುಣಗಳನ್ನು ಕಂಡಿದ್ದಾರೆ ಎಂದರೆ ಅದು ಅವರ ದೊಡ್ಡಗುಣ. ಸಂಸ್ಥೆ ಬಿಡುತ್ತಿರುವಾಗಲೂ ನನಗೆ ಎಲ್ಲಾ ರೀತಿಯಲ್ಲೂ ಒಳ್ಳೆಯದಾಗಲಿ ಎಂದು ಮನದುಂಬಿ ಹಾರೈಸುತ್ತಾರೆ ಎಂದರೆ ಅದಕ್ಕಿಂದ ಬೇರೇನು ಬೇಕು ನನಗೆ… 

ಇನ್ನೇನು ಒಂದು ಗ್ರೂಪ್‌ ಫೋಟೋ ತೆಗೆದುಕೊಂಡರಾಯಿತು ಅಂದುಕೊಂಡವನಿಗೆ ಅಚ್ಚರಿ ಕಾದಿತ್ತು. ವಿದ್ಯಾರ್ಥಿಗಳ ʼಮನದಾಳದ  ಮಾತುʼ ನಿಜಕ್ಕೂ ಮನದಾಳದ ಮಾತುಗಳೇ ಆಗಿದ್ದವು. ಪ್ರೀತಿಯ ಕೈಬರಹದಲ್ಲಿ ನಿಷ್ಕಲ್ಮಶ ಪ್ರೀತಿಯಿತ್ತು. ಅದರಲ್ಲೂ ಕೆಲ ತಿಂಗಳಷ್ಟೇ ಪಾಠ ಮಾಡಿದ ಮೊದಲ ವರ್ಷದ ವಿದ್ಯಾರ್ಥಿಗಳು ಅದೇನು ಒಳ್ಳೆಯತನ ಕಂಡರೋ… ವಾರಕ್ಕೊಮ್ಮೆ ಅಥವಾ ಎರಡು ಬಾರಿ ಸಿಗುವ  ಓಪನ್‌ಎಲೆಕ್ಟಿವ್‌ ವಿದ್ಯಾರ್ಥಿಗಳು ಕೂಡ ತಮ್ಮ ಮನದಾಳದ ಮಾತು ಬರೆದದ್ದು ನನ್ನನ್ನು ಮೂಕನನ್ನಾಗಿಸಿತು. 

ಜೊತೆಗೆ  ನನ್ನ ಹಳೆಯ ವಿಶೇಷ ಸಂದರ್ಭದ ಫೋಟೋಗಳನ್ನು ಸಂಗ್ರಹಿಸಿ ತಯಾರಿಸಿದ್ದ ರಿಂಗ್‌ಆಲ್ಬಂ ನಿಜಕ್ಕೂ ಹೃದಯಕ್ಕೆ ಹತ್ತಿರವಾಯಿತು. ಇಷ್ಟಲ್ಲದೆ ʼಲೀಫ್‌ಆರ್ಟ್‌ʼನಲ್ಲಿ ಬಿಡಿಸಿದ್ದ ನನ್ನ ಸುಂದರ ಚಿತ್ರವನ್ನು ತಂದು ಕೊಟ್ಟಾಗ ಅದು ಜೀವನದುದ್ದಕ್ಕೂ ಜೊತೆಗಿರುವ ಉಡುಗೊರೆ ಅನ್ನಿಸಿಬಿಟ್ಟಿತ್ತು. ಇದನ್ನೆಲ್ಲಾ ನಿಜಕ್ಕೂ ನಿರೀಕ್ಷಿಸಿರಲಿಲ್ಲ. ಇದೆಲ್ಲದರ ಹಿಂದೆ ಅಂತಿಮ ವರ್ಷದ ವಿದ್ಯಾರ್ಥಿಗಳ ವಿಶೇಷ ಶ್ರಮ ಇಣುಕುತ್ತಿತ್ತು. ಎಲ್ಲಾ ಮುಗಿಯಿತು ಅಂದುಕೊಂಡಾಗ ಕೇಕ್‌ ಒಂದನ್ನು ತಂದು ಮುಂದಿಟ್ಟರು! ಏನೂ ನಿರೀಕ್ಷಿಸದವನಿಗೆ ಈ ಪ್ರೀತಿ ಸಿಕ್ಕರೆ ಏನಾಗಬಹುದು?!  

ಫೋಟೋ ಸೆಷನ್‌ ಬೇಗ ಮುಗಿಯಲಿಲ್ಲ! ಕೊನೆಗೆ ಎಲ್ಲರೂ ಶುಭ ಹಾರೈಸಿ ಹೊರಟರು. ʼಆಗಾಗ ಬರುತ್ತಿರಿʼ, ʼಯಾವುದೇ ಸಹಾಯ ಬೇಕಿದ್ದರೂ ಕೇಳಿʼ… ಎಂಬ ಮಾತುಗಳು ಮನಸ್ಸಿನಲ್ಲಿವೆ. ಇದೆಲ್ಲಾ ಬೇಕಿತ್ತಾ ಎಂದು ಸಹೋದ್ಯೋಗಿಯಾಗಿದ್ದ ಡಾ. ಸೌಮ್ಯ ಅವರನ್ನು ಕೇಳಿದಾಗ, ʼವಿದ್ಯಾರ್ಥಿಗಳೇ ಎಲ್ಲಾ ಮಾಡಿದ್ದಾರೆ, ನನ್ನ ಪಾತ್ರವಿಲ್ಲʼ ಎಂದುಬಿಟ್ಟರು. ಜೊತೆಗೆ ಅವರೂ, ಹಿರಿಯಣ್ಣನಂತಿರುವ ಪ್ರವಾಸೋದ್ಯಮ ವಿಭಾಗದ ಡಾ. ಶ್ರೀರಾಜ್‌ ಅವರೂ ವಿಶೇಷ ಉಡುಗೊರೆ ನೀಡಿ ಬೀಳ್ಕೊಟ್ಟರು. 

ಜೀವನ ಬಲು ಸುಂದರ. ಅದು ಅವಕಾಶಗಳ ಜೊತೆಗೆ ಅಚ್ಚರಿಗಳನ್ನು ಕೊಡುತ್ತಲೇ ಇರುತ್ತದೆ. ಬಯಸಿದ್ದೆಲ್ಲವನ್ನೂ ಕೊಟ್ಟ ಪ್ರೀತಿಯ ಗವರ್ನಮೆಂಟ್‌ ಕಾಲೇಜು ಅಥವಾ ವಿಶ್ವವಿದ್ಯಾನಿಲಯ ಕಾಲೇಜಿಗೆ ನಾನೇನು ಕೊಡಬಲ್ಲೆ ಎಂದು ತಿಳಿಯುತ್ತಿಲ್ಲ. ಎಲ್ಲರಿಗೂ ಋಣಿಯಾಗಿರಬಲ್ಲೆನಷ್ಟೇ… ಇದೇ ಪ್ರಶ್ನೆಯನ್ನು ಪ್ರಾಂಶುಪಾಲೆ ಡಾ. ಅನಸೂಯ ರೈ ಅವರನ್ನು ಕೇಳಿದಾಗ, ʼನೀನು ಏನನ್ನು ಉತ್ತಿದ್ದೀಯೋ ಅದನ್ನೇ ಪಡೆಯುತ್ತಿರುವೆʼ ಎಂದರು. 

ಹೌದಾದರೆ ಇನ್ನು ಬೇರೇನು ಬೇಕು…

















ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪ್ರೀತಿ ಎಂದರೇನು ಎಂದು ಈಗ ಅರಿತೆನು…

ಸಿಂಹಾವಲೋಕನಕ್ಕೊಂದು ಸಮಯ

ಬೇಸರದಲ್ಲಿ ಬರೆದದ್ದು…ಹೌದಾ?!