ಬದುಕೆಂಬ ಬುಗುರಿಗೆ ಶಿವನೆಂಬ ಚಾಟಿ…



ಹಿಡಿಯಲು ಸಾಧ್ಯವಿಲ್ಲವೇನೋ ಎಂಬಷ್ಟು ವೇಗದಲ್ಲಿ ಕಾಲಚಕ್ರ ಓಡುತ್ತಿದೆ. ಅದರ ಹಿಂದೆ ಓಡುವ ಭರದಲ್ಲಿ ನಾವು ಯಾವುದನ್ನೂ ಗಮನಿಸುತ್ತಿಲ್ಲ. ದಿನಕ್ಕೆ 24 ಗಂಟೆಗಳೂ ಸಾಲುತ್ತಿಲ್ಲವೇನೋ ಎಂಬಂತೆ ಓಡುತ್ತಿದ್ದೇವೆ. ಹಿಂದಕ್ಕೂ ತಿರುಗದೆ, ಮುಂದೆಯೂ ನೋಡದೆ ನಮ್ಮವರನ್ನು, ನಮ್ಮನ್ನೂ ಬಿಟ್ಟು! 

ಹಾಗಾದರೆ ನಾವು ನಿಜಕ್ಕೂ ಏನು ಮಾಡುತ್ತಿದ್ದೇವೆ? ಕೆಲವರು ನಾವ್ಯಾರಿಗೂ ಕಮ್ಮಿಯಿಲ್ಲದಂತೆ ಬದುಕಬೇಕು ಎನ್ನುತ್ತಾರೆ, ಇನ್ನೂ ಕೆಲವರು ಬದುಕಿ ಸಾಧಿಸಬೇಕು ಎನ್ನುತ್ತೇವೆ. ಅದೆಂತಾ ಬದುಕು, ಎಂತಹ ಸಾಧನೆ? ಆಧುನಿಕತೆ ಸೃಷ್ಟಿಸಿರುವ ಭ್ರಮಾಲೋಕದಲ್ಲಿ ಬದುಕುತ್ತಿರುವ ನಾವು ಹೇಳುವ ನೆಪಗಳೇ ಇವು?! ಸತ್ಯವನ್ನು ಕೇಳಿಸಿಕೊಳ್ಳಲು, ಒಪ್ಪಿಕೊಳ್ಳಲು ನಾವ್ಯಾರೂ ಸಿದ್ಧರಿಲ್ಲ!

ಕಾಲಚಕ್ರದ ಹಿಂದೆ ಗೊತ್ತುಗುರಿಯಲ್ಲದೆ ಓಡುತ್ತಿದ್ದೇವೆ ಎಂಬ ಸತ್ಯ ನಮಗೀಗ ಬೇಡ. ವಿಜ್ಞಾನ- ತಂತ್ರಜ್ಞಾನದಲ್ಲಿ ಆದ ಆಗಾಧ ಬೆಳವಣಿಗೆ ನಮ್ಮ ಜೀವನಶೈಲಿಯನ್ನು ಬದಲಾಯಿಸಿರುವುದೇನೋ ಹೌದು. ಎಲ್ಲರ ತಿಳುವಳಿಕೆ, ಅವಕಾಶಗಳು ಹೆಚ್ಚಿವೆ. ಸ್ಪರ್ಧೆಯೂ ಹೆಚ್ಚಿದೆ. ಹಣ, ಹೆಸರು ಸಂಪಾದಿಸುವ ಆಸೆ ಎಲ್ಲರಿಗೂ ಇದೆ. ಅವನಂತೆ ನಾನಾಗಬೇಕು ಎಂಬ ಹುಚ್ಚು ಓಟದಲ್ಲಿ ತಾನು, ತನ್ನವರು ಗಣನೆಗೆ ಸಿಗುತ್ತಿಲ್ಲ. 

ಅರ್ಥವಿಲ್ಲದ ಕನಸನ್ನು ಬೆನ್ನಟ್ಟುವವರಿಗೆ ಸಂಬಂಧಗಳು ಬೇಡವಾಗುತ್ತವೆ, ಇಲ್ಲವೇ ಸಿಗದಾಗುತ್ತವೆ. ಮುಗ್ಧತೆ, ಸೂಕ್ಷ್ಮತೆ ಮರೆಯಾಗಿ ಅಂಟಿಕೊಳ್ಳುವ ಅಹಂಕಾರ ನಮ್ಮನ್ನು ಎಲ್ಲರೂ ಇದ್ದರೂ ಒಂಟಿಯಾಗಿಸುತ್ತದೆ. ನಮ್ಮ ಗೆಲುವನ್ನು ಸಂಭ್ರಮಿಸುವವರು, ದುಃಖಕ್ಕೆ ಹೆಗಲಾಗುವವರು ಇಲ್ಲದಿದ್ದರೆ ಏನಿದ್ದರೇನಂತೆ… ʼನಮ್ಮವರುʼ ಇಲ್ಲದಿದ್ದಾಗ ಎಲ್ಲರನ್ನೂ, ಕೊನೆಗೇ ಸಮಾಜವನ್ನೇ ನಮ್ಮವರನ್ನಾಗಿಸಿಕೊಳ್ಳುವ ವ್ಯರ್ಥ ಪ್ರಯತ್ನ ಮಾಡುತ್ತೇವೆ. ಹೇಳಿಕೊಳ್ಳಲಾಗದ ನೋವು, ಚಡಪಡಿಕೆಯ ಮಧ್ಯೆ ಎಲ್ಲವೂ ನಗಣ್ಯವಾಗಿಬಿಡುತ್ತದೆ. 

ಯಾರೂ ಇಲ್ಲದಿದ್ದಾಗ ನಮ್ಮವರಾಗುವವರು ಯಾರು? ಏನೀ ಸಮಸ್ಯೆಗೆ ಪರಿಹಾರ? ʼನಮ್ಮತನʼ ಬಿಡಲಾಗದ ನಮ್ಮ ಸಮಸ್ಯೆಯನ್ನು ಕೇಳಿ ಅದಕ್ಕೊಂದು ಪರಿಹಾರ ಕೊಡುವ ತಾಳ್ಮೆ, ಅಗತ್ಯ ಯಾರಿಗಿದೆ. ಇಲ್ಲ, ಹಣಕ್ಕೆ ಆ ಶಕ್ತಿಯಲ್ಲ. ಆಪ್ತ ಸಮಾಲೋಚಕರು ತಮ್ಮದೊಂದು ಪ್ರಯತ್ನ ಮಾಡಿಯಾರು. ಆದರೆ ಕೂಪದಲ್ಲಿರುವ ನಮ್ಮನ್ನು ಕಾಪಾಡುವ ಶಕ್ತಿ ಅವರಿಗೂ ಇಲ್ಲ. ಆಗ ನಮ್ಮನ್ನು ಕಾಪಾಡುವ ಶಕ್ತಿಯಿರುವುದು ಆ ಶಿವ ಅಥವಾ ಅಂತಹದೊಂದು ಶಕ್ತಿಗೆ ಮಾತ್ರ!

ಹೌದು, ಇದು ವಿಚಿತ್ರವೆನಿಸಿದರೂ ಸತ್ಯ. ಯುವಜನತೆ ದೇವರು, ಆಚಾರ-ವಿಚಾರಗಳನ್ನು ಮರೆಯುತ್ತಿದ್ದಾರೆ ಎಂಬ ಭಾವನೆಯಿತ್ತಾದರೂ ಹಾಗೇನೂ ಆಗುತ್ತಿಲ್ಲ. ನಂಬುವ ದೇವರು- ದೈವ ಬೇರೆಯಾಗಿರಬಹುದು, ಆಚರಣೆ ಭಿನ್ನವಾಗಿರಬಹುದು. ದೇವಸ್ಥಾನ, ಚರ್ಚು, ಮಸೀದಿಗಳಿಗೆ ಹೋಗದೇ ಇರಬಹುದು. ಆದರೆ, ನಮ್ಮೊಳಗೊಂದು ನಂಬಿಕೆಯಿದೆ. ಆ ನಂಬಿಕೆಯ ಮೇಲೆ ನಾವು ಹೆಚ್ಚೆಚ್ಚು ಅವಲಂಬಿತರಾಗುತ್ತಿದ್ದೇವೆ! 

ʼರಜಾ ದಿನಗಳನ್ನು ಕಳೆಯಲುʼ ಎಂದೇ ಹೇಳಿಕೊಂಡರೂ, ನಾವು ತೀರ್ಥಕ್ಷೇತ್ರಗಳನ್ನು, ಧಾರ್ಮಿಕ ಸ್ಥಳಗಳ ಭೇಟಿ ನಿಲ್ಲಿಸಿಲ್ಲ. ಹಬ್ಬ ಹರಿದಿನಗಳ ಆಚರಣೆಯನ್ನು ಒಂದಷ್ಟು ಮಟ್ಟಿಗಾದರೂ ಮಾಡೋಣ ಎಂಬ ಮನಸ್ಸಿದೆ. ಟೇಪ್‌ರೆಕಾರ್ಡರ್‌ಇಲ್ಲದಿದ್ದರೂ ಮೊಬೈಲ್‌ನಲ್ಲಾದರೂ ಭಕ್ತಿ ಗೀತೆಗಳನ್ನು, ಪ್ರಾರ್ಥನೆಗಳನ್ನು ಕೇಳುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಯೂ ಟ್ಯೂಬ್‌ನಲ್ಲಿ ಧಾರ್ಮಿಕ, ಆಧ್ಯಾತ್ಮಿಕ ವಿಡಿಯೋಗಳಿಗೆ ಇರುವಷ್ಟು ಬೇಡಿಕೆ ಇನ್ಯಾವುದಕ್ಕೂ ಇಲ್ಲ. ಆ ಶಿವನ, ದೇವನ ಮಹಿಮೆ ನೋಡಿ!  

ಮುಳುಗುವವನಿಗೆ ಹುಲ್ಲುಕಡ್ಡಿಯ ಆಶ್ರಯ ಸಿಕ್ಕಿದಂತೆ ಎಂಬ ಮಾತಿನಂತೆ, ಒತ್ತಡದ ಜೀವನದಲ್ಲಿ ಮಾನಸಿಕವಾಗಿ ಒಂಟಿಯಾದವನಿಗೆ ಅಗೋಚರ ಶಕ್ತಿಯೇ ಸ್ಪೂರ್ತಿಯಾಗಿಬಿಡುತ್ತದೆ. ಮನೋಸ್ಥೈರ್ಯದ ಮೂಲವಾಗುತ್ತದೆ. ಅದೇ ಅವನಿಗೆ ಸ್ನೇಹಿತ, ಬಂಧು- ಬಳಗ ಎಲ್ಲವೂ… ಜಾತಿ, ಧರ್ಮಗಳನ್ನು ಮೀರಿದ ಅವ್ಯಕ್ತ ಬಂಧವೊಂದು ಅಲ್ಲಿರುತ್ತದೆ. ಇಲ್ಲಿ ಶೈಕ್ಷಣಿಕ ಅರ್ಹತೆ, ಸ್ಥಾನಮಾನವೂ ನಗಣ್ಯ. ಕೋಟಿ ಸಂಪಾದಿಸುವವನೂ ಇಲ್ಲಿ ಮನಃಶಾಂತಿಗಾಗಿ ಆ ಸರ್ವಶಕ್ತ ಅಥವಾ ಶಿವನ ಮೊರೆಹೋಗುತ್ತಾನೆ. 

ಆಗುವುದೆಲ್ಲಾ ಒಳ್ಳೆಯದಕ್ಕೇ ಅಲ್ಲವೇ? ಮನೋಸ್ಥೈರ್ಯದ ಜೊತೆಗೆ ಶಿವನೆಂಬ ನಂಬಿಕೆ, ನಂಬಿಕೆಯಿಂದ ಹುಟ್ಟುವ ಭಯ ನಮ್ಮನ್ನು ನಿಯಂತ್ರಿಸುತ್ತದೆ. ಯಾವುದೋ ವಿಷಯಕ್ಕೆ ಕೊರಗುತ್ತಾ, ಸಿಗಲಾರದ್ದನ್ನು ಹುಡುಕುತ್ತಾ, ಕಳೆದು ಹೋದದ್ದರ ಬಗ್ಗೆ ಚಿಂತಿಸುತ್ತಾ ಜೀವನ ವ್ಯರ್ಥ ಮಾಡಿಕೊಳ್ಳುವ ಬದಲು ಆ ಸರ್ವಶಕ್ತನನ್ನೇ ನಮ್ಮ ಸ್ಪೂರ್ತಿಯಾಗಿಸಿಕೊಳ್ಳೋಣ. ಈ ಬದುಕೆಂಬ ಬಣ್ಣದ ಬುಗುರಿಗೆ ಶಿವನೇ ಚಾಟಿಯಾಗಲಿ. ಇದರಿಂದ ನಮಗೇ ಲಾಭ ಹೊರತು ಕಳೆದುಕೊಳ್ಳುವುದೇನೂ ಇಲ್ಲವಲ್ಲ! 

gp






 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪ್ರೀತಿ ಎಂದರೇನು ಎಂದು ಈಗ ಅರಿತೆನು…

ಸಿಂಹಾವಲೋಕನಕ್ಕೊಂದು ಸಮಯ

ಬೇಸರದಲ್ಲಿ ಬರೆದದ್ದು…ಹೌದಾ?!