ಭರವಸೆಯಿರಲಿ…ಬದುಕು ಅದೆಷ್ಟು ಸುಂದರ

 

(Courtesy: yourhappyplaceblog.com) 


ಆಚೆಯಿಂದ ಅಮ್ಮ ಮಾತನಾಡುತ್ತಿದ್ದಳು. ಈ ಬಾರಿ ಮಳೆಯೇ ನಿಲ್ಲುತ್ತಿಲ್ಲ. ಕಾಫಿ ತೋಟದಲ್ಲಿ ಒಂದು ಒಣ ಎಲೆಯೂ ಕಾಣುತ್ತಿಲ್ಲ. ಎಲ್ಲೆಲ್ಲೂ ಹಚ್ಚಹಸಿರು. ಯಾರಿಗೂ ನೀರಿಲ್ಲದಾಗಿಲ್ಲ......ಆದರೆ ತೋಟಕ್ಕೆ ಕಾಲಿಡಲಾಗುತ್ತಿಲ್ಲ. ಕಳೆ ಮೊಣಕಾಲಷ್ಟು ಬೆಳೆದಿದೆ…ಹೀಗೆ...

ಹೌದಲ್ಲಾ, ಈ ಬಾರಿ ಇನ್ನೂ ಮಳೆ ಬರುತ್ತಿದೆ. ದಿನಾ ಗುಡುಗು ಸಿಡಿಲು ಜೊತೆಗೆ ಮಳೆಯ ಸಿಂಚನ. ಇದೆಂಥಾ ಬೇಸಗೆ ಎನ್ನುವಷ್ಟು. ಮಳೆ ಮೋಡ ಕವಿದಿದೆ. ಕತ್ತಲು ಆವರಿಸಿದೆ, ಕಾಮನಬಿಲ್ಲೂ ಕಾಣದಷ್ಟು. ಹೌದು, ಕಾಲವಂತೂ ಬದಲಾಗಿದೆ. ಕಳೆಯೂ ಸಾಕಷ್ಟು ಬೆಳೆದಿದೆ. ಹೇಗಪ್ಪಾ ನಿವಾರಿಸುವುದು ಎಂಬಷ್ಟು. ಆದರೆ ನಿವಾರಿಸಲೇಬೇಕಲ್ಲಾ, ಕಳೆಯೇ ಬೆಳೆಯ ಮೀರಬಾರದಲ್ಲಾ…

ಕೊರೋನಾ…ಇದ್ಯಾಕೆ ಬಂತು?! ಮುಖಕ್ಕೆ ಮುಂಡಾಸು ತೊಟ್ಟುಕೊಂಡು ತಿರುಗುವುದು, ಹತ್ತಿರದವರಾದರೂ ದೂರ ಕಾಯ್ದುಕೊಳ್ಳುವುದು, ಆಗೀಗ ಕೈ ಉಜ್ಜುಜ್ಜಿ ತೊಳೆಯುವುದು, ಯಾರನ್ನು ನೋಡಿದರೂ ಅನುಮಾನ, ಬೇಟಿಯಿಲ್ಲ, ಮಾತಿಲ್ಲ-ಕಥೆಯಿಲ್ಲ… ಎರಡ್ಮೂರು ವರ್ಷ ಹಳೆಯ ಗ್ರೂಪ್‌ ಫೋಟೋಗಳನ್ನು ಆಸೆಗಣ್ಣಿನಿಂದ ನೋಡುವುದು. ಎಫ್‌ಬಿಗೆ, ವಾಟ್ಸಪ್‌ಗೆ ಅಪ್ಲೋಡು ಮಾಡುವುದು…ಇದೆಂಥಾ ತಮಾಷೆ!

ಯಾವ ತಪ್ಪಿಗೆ ಈ ನೋವು. ಹೆತ್ತ ಮಕ್ಕಳನ್ನು ಕಳೆದುಕೊಂಡು ಗೋಳಾಡುವ ತಾಯಿ, ಅಪ್ಪ- ಅಮ್ಮನನ್ನು ಕಳೆದುಕೊಂಡರೂ ʼಅವರಿನ್ನೂ ಬರುತ್ತಾರೆʼ ಎಂದು ಗೊಡ್ಡು ಭರವಸೆಯಲ್ಲಿರುವ ಮಗು, ಪತಿಯ ಹೆಣಕ್ಕಾಗಿ ತಾಳಿ ಅಡವಿಡುವ ಹೆಣ್ಮಗಳು, ಹೈಟೆಕ್‌ ಆಸ್ಪತ್ರೆಯಲ್ಲಿ ವಿಲವಿಲ ಒದ್ದಾಡಿ ಸಾಯುತ್ತಿರುವವರು, ಬೀದಿ ಹೆಣವಾಗುತ್ತಿರುವ ವೃದ್ಧರು, ಮಣ್ಣು ಮಾಡಲು ಜಾಗವಿಲ್ಲ, ಸಂಗಾತಿಗಳೂ ಹತ್ತಿರ ಬರುತ್ತಿಲ್ಲ. ದೀಪಾವಳಿಯ ಸಾಲು ದೀಪಗಳಲ್ಲ ಇವು, ಸುಡುತ್ತಿರುವ ಹೆಣಗಳು. ಇದೆಂಥಾ ದುಸ್ಥಿತಿ.

ಆಳುವವರ ಅರ್ಥವಾಗದ ನೀತಿಗಳು. ಕರ್ಫ್ಯೂ, ಲಾಕ್‌ಡೌನ್‌, ಪೊಲೀಸರ ಏಟುಗಳು. ಒಪ್ಪೊತ್ತಿನ ಊಟಕ್ಕೆ ಪರದಾಟ. ಅಸಹಾಯಕ ನೋಟ. ಹೇಳುವವರಿಲ್ಲ, ಕೇಳುವವರಿಲ್ಲ. ನಮ್ಮವರು ಯಾರೂ ಇಲ್ಲ. ಆದರೆ ಕಾಲ ಯಾರಿಗೂ ಕಾಯದು. ನೆನಪಿರಲಿ, ಕಳೆಯೇ ಬೆಳೆಯ ಮೀರಬಾರದಲ್ಲಾ…

ಹೌದು, ನಮ್ಮವರಿಗಾಗಿ ಪ್ರೀತಿ, ಸಂಬಂಧಗಳೆಂಬ ಬೆಳೆ ಬೆಳೆಸೋಣ. ಕಷ್ಟಕಾಲ ನಮ್ಮ ನಿಜವಾದ ಪ್ರೀತಿ, ಸ್ನೇಹ, ಸಂಬಂಧಗಳನ್ನು ಪರೀಕ್ಷೆಗೆ ಒಡ್ಡುತ್ತದೆ ಎಂಬ ಮಾತು ಅದೆಷ್ಟು ಸತ್ಯ. ಎಲ್ಲಿ ಹೋದರು ನಿಮ್ಮನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವವರು? ಎಲ್ಲಿವೆ ಆ ಬಿಟ್ಟಿರಲಾರದ ಸಂಬಂಧಗಳು? ಎಲ್ಲಿದ್ದಾರೆ ನಿಮ್ಮ ಫೇಸ್ಬುಕ್‌ ಫ್ರೆಂಡ್ಗಳು…ಹ್ಹಾ…ಜಡಿಮಳೆ ಕಸಕಡ್ಡಿಗಳನ್ನು ತೊಳೆದುಹಾಕುವಂತೆ ನಿಮ್ಮದೀಗ ಹೊಸ ಬದುಕು. ಕಳೆ ಮಾಯವಾಗಿದೆ, ಬೆಳೆ ಬೆಳೆಯುವ ಕೆಲಸವಾಗಬೇಕಿದೆ.

ಕಾಯೋಣ ಇನ್ನೊಂದಷ್ಟು ದಿನ…ಹಸಿವು, ನೆಮ್ಮದಿ, ನಿದ್ದೆಗೆಟ್ಟು ಕಾಯೋಣ. ಕಾಲ ಯಾರಿಗೂ ಕಾಯುವುದಿಲ್ಲ. ಕರಿಮುಗಿಲು ಸರಿದು ಕಾಮನಬಿಲ್ಲು ಬಂದೀತು. ಕತ್ತಲು ಕಳೆದು ಬೆಳಕು ಮೂಡೀತು. ಪ್ರೀತಿ, ಸಂಬಂಧದ ನಡುವೆ ಭರವಸೆಯ ಬೆಸುಗೆಯಿರಲಿ. ದೇವರ ಸೃಷ್ಟಿಯ ಮೇಲೆ ನಂಬಿಕೆಯಿರಲಿ. ಭ್ರಮೆ ಬೇಡ, ವಾಸ್ತವದ ಅರಿವಿರಲಿ. ಆಸೆ ಬೇಡ, ಅಲ್ಪದರಲ್ಲೇ ಸಂತೃಪ್ತಿಯಿರಲಿ. ಇತರರಿಗಾಗಿ ಒಂದು ಪಾಲಿರಲಿ. ಬೇಸರ, ದುಃಖ ಯಾವತ್ತೂ ಕ್ಷಣಿಕ. ಬದುಕು ಅದೆಷ್ಟು ಸುಂದರ…

ಜಿಪಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪ್ರೀತಿ ಎಂದರೇನು ಎಂದು ಈಗ ಅರಿತೆನು…

ಸಿಂಹಾವಲೋಕನಕ್ಕೊಂದು ಸಮಯ

ಬೇಸರದಲ್ಲಿ ಬರೆದದ್ದು…ಹೌದಾ?!