ಭಾವ ಬಂಧನದೊಳಗೆ ಒಂಬತ್ತು ವರುಷ …
ನಿನ್ನ ಪ್ರೇಮದ ಪರಿಯ
ನಾನರಿಯೆ ಕನಕಾಂಗಿ…
ಹೌದು, ವರ್ಷ ಒಂಬತ್ತಾದರೂ ನಿನ್ನ ಪ್ರೀತಿಯ ಪರಿಯ ನಾನಿನ್ನೂ ಅರಿತಿಲ್ಲ. ಅದು ಸಾಗರದಂತೆ ಮಿತಿಯಿಲ್ಲದ್ದು, ಜೀವಾನಿಲದಂತೆ ಸ್ವಾರ್ಥವಿಲ್ಲದ್ದು ಎಂಬುದನ್ನಷ್ಟೇ ಬಲ್ಲೆ. ಹಾಗಾದರೆ ಈ ಪ್ರೀತಿಗೆ ನಾನು ಅರ್ಹನೇ, ಇದಕ್ಕೆ ಪ್ರತಿಯಾಗಿ ನಾನೇನು ಕೊಡಬಲ್ಲೆ ಎಂಬ ಯೋಚನೆ ಹಲವು ಬಾರಿ ಕಾಡಿದ್ದಿದೆ. ಉತ್ತರವೂ ದೊರೆತಿದೆ…ಇದಕ್ಕೆ ಬೇಕಿರುವುದೂ ಬರೀ ಪ್ರೀತಿಯಷ್ಟೇ…
ಪ್ರೀತಿಯನ್ನು ಹಗುರ ಮಾತುಗಳಿಂದ ಹಂಗಿಸುವಾಗ ಯಾಕೋ ನಮ್ಮ ಪ್ರೀತಿಯ ಬಗ್ಗೆ ಸಾರಿ ಹೇಳಬೇಕು ಅನಿಸುತ್ತದೆ. ಹಾಗಂತ ಪ್ರೀತಿ ನನಗೇನೂ ಹೊಸದಾಗಿರಲಿಲ್ಲ. ಒಂದು ಸಾಂತ್ವಾನದ ನುಡಿಯಿಲ್ಲದೆ, ತಮ್ಮವರಿಲ್ಲದೆ ನೊಂದ ಅದೆಷ್ಟೋ ಜೀವಗಳಿರುವ ಈ ಜಗದಲ್ಲಿ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ಅಪ್ಪ-ಅಮ್ಮ, ಅಣ್ಣ-ಅತ್ತಿಗೆ, ಬಂಧುಮಿತ್ರರನ್ನು ಪಡೆಯಲು ನಾನೆಷ್ಟು ಅದೃಷ್ಟ ಮಾಡಿದ್ದೆ. ಆದರೆ ನೀನಿಲ್ಲದೆ ನಾನು ಹೇಗಿರುತ್ತಿದ್ದೆ, ಜೀವನ ಅದೆಷ್ಟು ಅಪೂರ್ಣವಾಗಿರುತ್ತಿತ್ತು ಎಂಬ ಕಲ್ಪನೆಯೇ ನನ್ನನ್ನು ವಿಸ್ಮಿತನನ್ನಾಗಿಸುತ್ತದೆ…
ಹೌದು, ನನಗೆ ಜೀವನದಲ್ಲಿ ಇದಕ್ಕಿಂದ ದೊಡ್ಡ ವರ ಇನ್ನೇನು ಬೇಕು. ಉದ್ಯೋಗ ಬಿಟ್ಟು ಮತ್ತೆ ಓದಲೆಂದು ಬಂದಿದ್ದು ನಮ್ಮಿಬ್ಬರ ಭೇಟಿಗೆ ಆ ದೇವರೇ ಸೃಷ್ಟಿಸಿದ ನೆಪವೇ?! ಪ್ರೀತಿ-ಪ್ರೇಮ ಎಂಬ ಬಗ್ಗೆ ಆಸಕ್ತಿಯೇ ಇಲ್ಲದ ನಾನು “ಬದುಕಿದರೇ ಇವಳ ಜೊತೆಯೇ” ಎಂಬ ನಿರ್ಧಾರ ಮಾಡಿದ್ದಾದರೂ ಹೇಗೆ! ನಿನ್ನ ಮೇಲಿದ್ದ ಪ್ರೀತಿಯನ್ನು ಯಾರದೋ ಕಥೆ ಎಂಬಂತೆ ಹಂಚಿಕೊಳ್ಳುವ ಧೈರ್ಯ ನನಗೆ ಬಂದಿದ್ದಾದರೂ ಎಲ್ಲಿಂದ…ಪ್ರೀತಿ ಪಡೆಯಲು ಹೋಗಿ ಸ್ನೇಹವನ್ನೂ ಕಳೆದುಕೊಂಡರೆ ಎಂಬ ಅಂಜಿಕೆಯಲ್ಲೇ ಮಾಡಿದ ಆ ಪ್ರೇಮ ನಿವೇದನೆ, ನಾಲ್ಕು ತಿಂಗಳ ಬಳಿಕ, ಆ ಫೆಬ್ರವರಿ 11 ರಂದು ನೀನು ಕೊಟ್ಟ ಒಪ್ಪಿಗೆ ಎಲ್ಲವೂ ಅದ್ಭುತ, ದೈವೇಚ್ಛೆ ಅನಿಸುತ್ತದೆ!
ಈ ಒಂಬತ್ತು
ವರ್ಷಗಳಲ್ಲಿ ಜೀವನವೇನೂ ಹೂವಿನ ಹಾದಿಯಾಗಿರಲಿಲ್ಲ. ನಿರ್ಧಾರ ಮಾಡಿಯಾಗಿತ್ತು, ಮತ್ತದು
ಗಟ್ಟಿಯಾಗಿತ್ತು. ನಮ್ಮಿಬ್ಬರಿಗೂ ಅದು ಜೀವನದ ಆರಂಭವಷ್ಟೇ. ಕಲ್ಲು- ಮುಳ್ಳುಗಳ ಹಾದಿ ಸವೆಸುವುದು
ಸಾಕಷ್ಟು ಕಷ್ಟವಿತ್ತು. ಅನಿರೀಕ್ಷಿತ ಬೆಳವಣಿಗೆಗಳು, ಬೇಡವೆಂದರೂ ತೆಗೆದುಕೊಳ್ಳಲೇಬೇಕಾಗಿದ್ದ ನಿರ್ಧಾರಗಳು
ನಮ್ಮಿಬ್ಬರ ಆತ್ಮಸ್ಥೈರ್ಯವನ್ನೇ ಪರೀಕ್ಷಿಸಿದವು. ಆದರೆ ನಮ್ಮಿಬ್ಬರ ಪ್ರೀತಿಯ ಬಲದ ಮುಂದೆ
ಕಷ್ಟಗಳು ಸೋತವು. ಪ್ರತಿ ಕ್ಷಣದಲ್ಲೂ ಜೊತೆಯಾಗಿ ನಿಂತ ನೀನು, ಸುಖಕ್ಕಿಂತ ದುಃಖದಲ್ಲೇ ಹೆಚ್ಚು
ಪಾಲಿರಲಿ ಎಂಬ ನಿನ್ನ ಅಮೂಲ್ಯ ಪ್ರೀತಿಯನ್ನು ಇಂದಿಗೂ ಅರಿಯದಾಗಿದ್ದೇನೆ…
ನನಗೆ ತಿಳಿದಿದೆ. ನಾವಿನ್ನೂ ಕ್ರಮಿಸಬೇಕಾದ ದೂರ ಸಾಕಷ್ಟಿದೆ. ಆದರೆ ನನಗೀಗ ಧೈರ್ಯವಿದೆ. ಮತ್ತು ಆ ಧೈರ್ಯ ನೀನೇ ಆಗಿರುವೆ!. ಸುಖ- ದುಃಖದಲ್ಲಿ ಸದಾ ನೀನಿರುವೆ, ನನ್ನ ಮಾತು- ಮೌನ ಎರಡನ್ನೂ ನೀನು ಮತ್ತು ನೀನಷ್ಟೇ ಅರ್ಥ ಮಾಡಿಕೊಳ್ಳಬಲ್ಲೆ. ನೀನ್ಯಾವತ್ತೂ ನನ್ನ ಮೇಲೆ ನಿನ್ನ ನಿರೀಕ್ಷೆಯ ಭಾರ ಹೊರಿಸಿಲ್ಲ. ನನ್ನ ಸಂತೋಷದಲ್ಲೇ ಸುಖಿಯಾಗಿರುವ ನಿನಗೆ ನಾನು ಏನು ತಾನೆ ಕೊಡಬಲ್ಲೆ. ಒಂದಂತೂ ಹೇಳಬಲ್ಲೆ. ನಿನ್ನ ಜೊತೆ ನಾನಿದ್ದೇನೆ, ನಿನ್ನ ಪುಟ್ಟ ನಿರೀಕ್ಷೆಗಳನ್ನು ಈಡೇರಿಸಲು ನನ್ನ ಕೈಲಾದದ್ದನ್ನು ಮಾಡಬಲ್ಲೆ…ನಿನಗೂ ಬೇಕಿರುವುದು ಇಷ್ಟೇ ತಾನೇ…
ಪ್ರೀತಿ ಮತ್ತು ಜ್ಞಾನ ಹಂಚಿದಷ್ಟೂ ಹೆಚ್ಚುತ್ತದೆಯಂತೆ. ನಿನ್ನ ಪ್ರೀತಿಗೂ ಈಗ ನಾನೊಬ್ಬನೇ ವಾರಸುದಾರನಲ್ಲ ಎಂದು ತಿಳಿದಿದೆ, ನಮ್ಮಿಬ್ಬರು ಪುಟಾಣಿಗಳೂ ನನ್ನಂತೇ ಅದೃಷ್ಟಶಾಲಿಗಳು! ಈ ಪ್ರೀತಿ ಬಾಳು ಬೆಳಗಲಿ. ಒಂಬತ್ತು ತೊಂಬತ್ತಾಗಲಿ!
ನೆನಪಿರಲಿ, ಸದಾ ನಿನ್ನೊಳಿದೆ ನನ್ನ ಮನಸು…
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ