ಅಮ್ಮ… ನೀನು ಅರ್ಥವಾಗಿರುವೆ!

 


(Photo courtesy: udaypi.in)  

ಅಮ್ಮ ನೀನು ಈಗಷ್ಟೇ ಅರ್ಥವಾಗುತ್ತಿರುವೆ. ಪ್ರೀತಿಯೇನೋ ಇತ್ತು, ನಿನ್ನೊಳಗೆ ನನ್ನ ಪ್ರಪಂಚವಿತ್ತು. ಆದರೆ ನಿನ್ನ ಪ್ರಪಂಚವೇ ನಾನೆಂದು ಅರ್ಥವಾಗುತ್ತಿದೆ. ನನ್ನಿಂದ ಆ ನೋವು, ಸಂಕಟ ನೀನೂ ಅನುಭವಿಸಿದ್ದೆಯಲ್ಲಾ…ನಾನು ಕ್ಷಮಿಸು ಎಂದರೆ ಸಾಕೇ…?!

ನಿನಗೂ ಒಂದು ಮಗುವಾಗಲಿ, ತಿಳಿಯುತ್ತೆಎಂದು ಹೆತ್ತವರು ಹೇಳುವುದು ಬರೀ ಬಾಯ್ಮಾತು ಎಂದುಕೊಂಡಿದ್ದೆ.  ಈಗ ಅರ್ಥವಾಗುತ್ತಿದೆ. ಅಮ್ಮನಾಗುವುದು ಮರುಹುಟ್ಟು, ಹೊಸ ಜನ್ಮ …ಇಲ್ಲ ಶಬ್ದಗಳು ಸೋಲುತ್ತವೆ. ಏನೆಂದು ಕರೆಯಲಿ ಅದನ್ನು. ದೈಹಿಕ, ಮಾನಸಿಕ ತೊಳಲಾಟ, ಹೇಳಲಾಗದ ಸಂಕಟ, ಎಲ್ಲವನ್ನೂ ನೀನೂ ಸಹಿಸಿಕೊಂಡಿದ್ದೆಯಲ್ಲಾ…ಅದೆಲ್ಲವನ್ನೂ ಮೀರಿ ಎದ್ದುನಿಂತು ಹೊಸಜೀವ ಬೆಳೆಸಿದ ನಿನ್ನನ್ನು ಏನೆಂದು ಬಣ್ಣಿಸಲಿ? ಮತ್ತೆ ಶಬ್ದಗಳು ಸೋಲುತ್ತಿವೆ…

ʼಕರುಳಕುಡಿʼ…ಹೀಗೆಂದಾಗ ಅದೊಂದು ವರ್ಣನೆಯೆಂದೇ ಭಾವಿಸಿದ್ದೆ. ಆದರೆ ಕರುಳಬಳ್ಳಿಯಲ್ಲಿ ಹೊಸ ಜೀವ ಬೆಳೆಸುವ ಪರಿಗೆ ಚಮತ್ಕಾರ ಎನ್ನಲೇ? ಅಲ್ಲ ಅದೆಷ್ಟು ದಿನ, ಅದೆಷ್ಟು ನೋವು, ಅದೆಂತಹಾ ತಾಳ್ಮೆ…ಅದರಲ್ಲೂ ಅದೆಂತಾ ಸಂತೋಷ…ಹೌದು ಅದೊಂದು ಚಮತ್ಕಾರವೇ! ನರಕದಷ್ಟು ನೋವು ತಿಂದು ಸ್ವರ್ಗ ಪಡೆಯುವುದು ಬರೀ ಪ್ರಕೃತಿಯ ನಿಯಮವೇ? ಅದೆಲ್ಲಿಂದ ಬಂತು ನಿನಗಂತಾ ಶಕ್ತಿ?!

ʼಜೀವ ತೇಯುವುದುʼ…ಹಾ ಈಗ ಅರ್ಥವಾಗುತ್ತಿದೆ. ಕಣ್ಣಾರೆ ಕಾಣುತ್ತಿದ್ದೇನೆ… ನಿನಗೆ ಮೊದಲಿನಂತೆ ನಡೆಯಲಾಗುತ್ತಿಲ್ಲ. ಕೈ- ಕಾಲುಗಳು ನೋಯುತ್ತಿವೆ. ಆದರೂ ʼಒಂಚೂರು ಜಾಸ್ತಿ ತಿನ್ನುʼ, ʼಆರೋಗ್ಯ ಕೆಡಿಸ್ಕೋಬೇಡʼ ಅನ್ನೋ ನಿನ್ನ ʼಕಿರಿಕಿರಿʼ ಬಿಟ್ಟಿಲ್ಲವಲ್ಲಾ ನೀನು. ಅರ್ಥವಾಗುತ್ತಿದೆ… ನೀನದನ್ನು ಬಿಡಲಾರೆ ಎಂದು. ಏಕೆಂದರೆ ನೀನು ನನ್ನ ಅಮ್ಮನಲ್ಲವೇ…

ಹಾ…ನಾನೀಗ ಅಪ್ಪನಾಗಿದ್ದೇನೆ. ನನ್ನವಳ ನೋವು, ಖುಷಿಯಲ್ಲಿ ನಿನ್ನನ್ನು ಕಾಣುತ್ತಿದ್ದೇನೆ…ಅಮ್ಮ ನಿನ್ನನ್ನು ಕಡೆಗೂ ಅರ್ಥಮಾಡಿಕೊಂಡಿದ್ದೇನೆ, ತೀರಾ ತಡವಾಗುವ ಮೊದಲು…


Published in Vijaya Karnataka (click to read) 

 

 

 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪ್ರೀತಿ ಎಂದರೇನು ಎಂದು ಈಗ ಅರಿತೆನು…

ಸಿಂಹಾವಲೋಕನಕ್ಕೊಂದು ಸಮಯ

ಬೇಸರದಲ್ಲಿ ಬರೆದದ್ದು…ಹೌದಾ?!