ಮರೆಯಬೇಡ ಮಗಳೇ…
ಮಗಳೇ ಮರೆಯಬೇಡ… ಎಂದಿಗೂ ಮರೆಯಬೇಡ. ನಿನ್ನ ಬರುವಿಕೆಯಲ್ಲಿ ಅದೆಷ್ಟು ಖುಷಿ ಕಂಡಿದ್ದೇನೆ ಎಂದು ಬರೆದು ತೋರಿಸಲಾರೆ, ನಿನ್ನ ʼಮಗಳೇʼ ಎಂದು ಕರೆದೇ ನಾ ಪಡುವ ಸಂತಸ ಸಾಗರದಷ್ಟು. ಸಂಭ್ರಮ ಪಟ್ಟಿದ್ದೇನೆ ಎಣೆಯಿಲ್ಲದಷ್ಟು. ಅಸೂಯೆ ಪಡುವಷ್ಟು…
ಆ ನಿನ್ನ ಮೊದಲ ಅಳು ನನ್ನಲ್ಲಿ ನಗು ಮೂಡಿಸಿದ್ದು ಸತ್ಯ. ʼನಿಮಗೆ ಮಗಳು
ಹುಟ್ಟಿದ್ದಾಳೆʼ ಎಂದ ವೈದ್ಯರು, ಆಗ ನನಗಾದ ರೋಮಾಂಚನ, ಆ ಖುಷಿಯನ್ನು ಹಂಚಿಕೊಳ್ಳಲೂ ಬರದೇ ಪರದಾಡಿ ಕಣ್ಣೀರಾದ ಕ್ಷಣ.
ಎಂದಿಗೂ ಮರೆಯಾರೆ. ನೀನು ನಿನ್ನಮ್ಮನ ಜೊತೆಗೆ ನನಗೂ ಹೊಸ ಜೀವ ನೀಡಿರುವೆ… ಮಗಳೇ, ಮರೆಯಬೇಡ.
ಅದೆಷ್ಟು ಮಂದಿ ಕೇಳಿದರು, ʼಮಗಳು ಹೇಗಿದ್ದಾಳೆʼ ಎಂದು. ಖುಷಿಯಿಂದ
ಬೀಗಿದ್ದೇನೇ ಹೊರತು ಬೇಸರವೇ ಆಗಲಿಲ್ಲವಲ್ಲಾ…ʼನಿನ್ನ ಮಹಾರಾಣಿ ಹೇಗಿದ್ದಾಳೆʼ ಎಂದಾಗಲಂತೂ
ಕೆಲ ಕ್ಷಣ ನಾನೇ ಮಹಾರಾಜನಾಗಿರುತ್ತಿದ್ದೆ! ನಿನ್ನಣ್ಣನ ಮೇಲಿನ ಪ್ರೀತಿ ಬೆಟ್ಟದಷ್ಟಾದರೂ ನಿನಗೇನೂ
ಕಡಿಮೆಯಿಲ್ಲ ಮಗಳೇ…ಅದಕ್ಕಿಂತಲೂ ತುಸು ಹೆಚ್ಚೇ ಪಾಲು ನಿನಗೆ!
ಅದೇನೇ ಬೇಸರ, ನೋವು, ಒತ್ತಡ…ನಿನ್ನ ಕಂಡಾಕ್ಷಣ ಮರೆಯಾಗುತ್ತದೆ ಮಂಜಿನಂತೆ.
ನಿನ್ನ ಪ್ರತಿ ನೋಟ, ಆಟ, ಕಾಟವೂ ಅದೆಷ್ಟು ಚೆಂದ. ಜೀವನದಲ್ಲಿ ಅದೆಂತದ್ದೋ ಹುರುಪು. ನೆನಪಿದೆ ನನಗೆ…ಅದೆಷ್ಟು
ಜವಾಬ್ದಾರಿಗಳು ನನಗೆ. ನಾ ಮಾಡಬಲ್ಲೆ. ಪ್ರೀತಿಯಂತೂ ಕೊಡಬಲ್ಲೆ ಪ್ರಾಣದಷ್ಟು. ನೆನಪಿರಲಿ ಮಗಳೇ…
ʼಮಹಾರಾಣಿಯಂತೆ
ಬಾಳುʼ…ಹೌದು ನನಗೂ ಹಾಗೇ ಅನಿಸುತ್ತಿದೆ. ಜೀವನ ಬಲುಕಷ್ಟ ಮಗಳೇ…ಎಷ್ಟು ಏಗಿದರೂ
ಇದು ಸುಕ್ಕಿನಂತೆ…ಮತ್ತಷ್ಟು ಗಂಟುಗಳು. ನಿನ್ನ ಅರ್ಥಮಾಡಿಕೊಳ್ಳುವವರಿಲ್ಲ, ನೀ ಅರ್ಥಮಾಡಿಕೊಳ್ಳಲಾರೆ.
ನಿನ್ನ ಮುಗ್ದ ನಗು ಎಲ್ಲವನ್ನೂ ನೆನಪಿಸುತ್ತಿದೆ…ಭಯವಾಗುತ್ತಿದೆ. ಅದಿರಲಿ, ನಾನಿಲ್ಲವೇ ಮಗಳೇ…
ನೆನಪಿರಲಿ ಮಗಳೇ…ಈಗಲೇ ಹೇಳಿಬಿಡುತ್ತೇನೆ. ನನಗೇನೂ ಬೇಡ ನಿನ್ನಿಂದ.
ಆದರೆ ನೀ ರಾಣಿಯಾಗು. ನನ್ನ ಖುಷಿಯ ನೂರ್ಪಾಲು ನಿನಗಿರಲಿ. ನಿನ್ನ ಕಣ್ಣೀರು ಬರೀ ಕನಸಾಗಲಿ. ಸಾಧಿಸು…ಧೈರ್ಯಗೆಡಬೇಡ.
ಬಿದ್ದರೆ ತುಳಿಯುವವರೇ ಇಲ್ಲಿ. ಎದ್ದು ಗೆದ್ದು ಬಾ. ಹಕ್ಕಿಯಂತೆ ಹಾರಾಡು…ಆದರೆ, ಮರೆಯಬೇಡ ಮಗಳೇ,
ನನ್ನ- ನನ್ನಾಕೆಯ ಮರೆಯಬೇಡ…
Published in Vijaya Karnataka.com (click to read)
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ