ಅಮ್ಮನಿಗೆ ಯಾವತ್ತೂ ಅನುಮಾನ!
ಈ ಅಮ್ಮನಿಗೆ ಯಾವತ್ತೂ ಅನುಮಾನ…
ಯಾರು ಎತ್ತಿದರೂ ಅಂದಾಳು 'ಜೋಪಾನʼ
ಕೂಸು ಸೊಂಟದಲ್ಲಿದ್ದರೆ ಅದೆಂತಾ ಬಿಗುಮಾನ!
ಎಷ್ಟು ಅಲಂಕರಿಸಿದರೂ ಇಲ್ಲ ಸಮಾಧಾನ
ಯಾರ ದೃಷ್ಟಿ ತಾಕೀತೋ, ಮತ್ತೆ ಅನುಮಾನ!
ಆಕೆಯರಿಯಳೆ ಕಂದನ ಹಸಿವು- ಬಾಯರಿಕೆಯನ್ನ
ಕೂಸು ತೇಗಿದರಷ್ಟೇ ಆಕೆಗೆ ಸಮಾಧಾನ
ತಾನೆಂದಿಗೂ ಉಣ್ಣಳು ಬಿಟ್ಟು ಕರುಳ ಬಳ್ಳಿಯನ್ನ
ಅದೆಲ್ಲಿ ಸೊರಗೀತೋ, ಅಮ್ಮನಿಗೆ ಅನುಮಾನ
ಬಿಟ್ಟೇನೆಂದರೂ ಬಿಡಳು ಆಕೆ 'ಕಂದʼನನ್ನ
ಯಾರು ಬೈದಾರು, ಹೊಡೆದಾರು ಎಂಬ ಚಿಂತೆಯನ್ನ
ಹೇಳ್ವಳು ಕಳಬೇಡ, ಕೊಲಬೇಡ ಎಂಬ ಮಾತನ್ನ
ಕಾಣ್ವಳು ಕಂದನ ಭವಿಷ್ಯದ ಸಿಹಿಗನಸನ್ನ!
ʼಇದೆಂತಾ, ನಿಂಗೊತ್ತಿಲ್ಲ ಈ ಹೊಸ ಜಮಾನʼ
ʼಕಂದʼ ಬೈದೇ ಬಿಟ್ಟ ʼಹಳೆಯʼ ಅಮ್ಮನನ್ನ
ʼಏನೋ ಎರಡು ಮಾತಂದʼ, ಆಕೆಗಿಲ್ಲ ಅಸಮಧಾನ!
ಬಿಡಳಾಕೆ ʼಕಂದʼನೊಂದಿಗೆ ಮಾತನ್ನ
ʼಆಕೆʼ ಬಂದರೂ ಅಮ್ಮನಿಗೆ ಮತ್ತೆ ಅನುಮಾನ
ಬಿಡಳು ʼಕಂದನಿಗೆʼ ಎಲ್ಲಿ ಕುಂದಾದೀತು ಎಂಬ ಭಯವನ್ನ
ಕೊನೆಗೊಮ್ಮೆ ತುಸು ಬೇಸರ, ಜೊತೆಗೆ ನೋವಡಗಿದ ಮೌನ
ಆ ವಾತ್ಸಲ್ಯವೋ ಅದು ಸಾಗರ, ಅರಿತವರುಂಟೇ ಇದನ್ನ…
ಈ ಅಮ್ಮನಿಗೆ ಯಾವತ್ತೂ ಅನುಮಾನ…
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ