ʼಸೂಪರ್ ಪವರ್ʼ ಬಲೂನಿಗೆ ಚುಚ್ಚಿದ ಕೊರೋನಾ ಸೂಜಿ
ಟಾರ್ಗೆಟ್ 2020… ಹೌದು, 21 ನೇ ಶತಮಾನದ ಆರಂಭದ ವರ್ಷಗಳಲ್ಲೇ ಹಲವು ಹೊಸತುಗಳ ಮೂಲಕ ಜಗತ್ತಿನ ಸೂಪರ್ ಪವರ್
ರಾಷ್ಟ್ರವಾಗಬೇಕು ಎಂಬ ಕನಸು ಭಾರತವೂ ಸೇರಿದಂತೆ ಹಲವು ರಾಷ್ಟ್ರಗಳಿಗಿತ್ತು.
ಶತ್ರು ರಾಷ್ಟ್ರಗಳ
ಸದ್ದಡಗಿಸಬಲ್ಲ ಅಣ್ವಸ್ತ್ರಗಳನ್ನು ತಯಾರಿಸುವ ಹಪಾಹಪಿ, ಜೈವಿಕ ಸಮರಕ್ಕೂ
ಒಳಗಿಂದಲೇ ಸಿದ್ಧತೆ, ಬಾಹ್ಯಾಕಾಶದಲ್ಲೂ ಏಕಸ್ವಾಮ್ಯ ತಯಾರಿಸುವ
ದುರಾಸೆ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಮೆಷಿನ್ ಲ್ಯಾಂಗ್ವೆಜ್ ಹೀಗೆ
ತಂತ್ರಜ್ಞಾನದ ನಾಗಾಲೋಟ… ಈ ನಡುವೆ
ವಿಶ್ವದಲ್ಲಿ ಅಪಾಯಕಾರಿ
ವೇಗದಲ್ಲಿ ಹೆಚ್ಚುತ್ತಿರುವ ಹಲವು ಬಗೆಯ ಮಾಲಿನ್ಯಗಳು, ಅರಣ್ಯನಾಶ, ವನ್ಯಜೀವಿಗಳ ಆರ್ತನಾದ
ಯಾವುದೂ ಕೇಳಲಿಲ್ಲ. ಆದರೆ ಕೊನೆಗೂ ಆಗಿದ್ದೇನು?
ದೌರ್ಜನ್ಯಗಳಿಂದ ಜರ್ಝರಿತಗೊಂಡ ಪ್ರಕೃತಿ, ಮನುಷ್ಯ ಮಾಡಿದ ಕೆಲಸಕ್ಕೆ ತಕ್ಕ ಶಾಸ್ತಿಯನ್ನೇ ಮಾಡಿದೆ. ಕೊರೋನಾ ಎಂಬ ಕಾಣದ ಶತ್ರು ಕೊಟ್ಟ ಏಟಿಕೆ, ಮನುಷ್ಯನಿಗೆ ತನ್ನ ಸ್ವಾರ್ಥ ತುಂಬಿದ, ಉಪಕಾರ ಸ್ಮರಣೆಯಿಲ್ಲದ, ಪರೋಪಕಾರ ಭಾವವಿಲ್ಲದ, ನಿಸರ್ಗದೊಂದಿಗೆ ಬಂಧವಿಲ್ಲದ, ಗೊತ್ತು ಗುರಿಯಿಲ್ಲದ ಜೀವನ ಅರಿವಿಗೆ ಬಂದಿದೆ. ಸಂಕಷ್ಟ ಕಾಲದಲ್ಲಿ ಕಂಡುಬಂದ ಯಾವತ್ತೂ ಕಲ್ಪಿಸಿಕೊಳ್ಳದಿದ್ದ ವೈರುಧ್ಯಗಳು ಇವೆಲ್ಲಕ್ಕೂ ಕನ್ನಡಿ ಹಿಡಿದಿವೆ.
ಇದು ಹಣಕ್ಕಾಗಿ ಏನು ಮಾಡಲು ಹೇಸದ ಕಾಲ. ಮನೆ, ಕಾರು, ಬಂಗಾರ, ಬಟ್ಟೆ ಎಲ್ಲದಕ್ಕೂ ಬೇಕು ದುಡ್ಡು. ಆದರೆ ಈ ಕೊರೋನಾ ದುಡ್ಡಿನ ಮದ ಇಳಿಸಿದೆ. ದುಡ್ಡಿಗಿಂತಲೂ ಬೆಲೆಬಾಳುವ ಸಂಬಂಧಗಳು ಇವೆ ಎಂಬುದು ಅರಿವಾಗುತ್ತಿದೆ. ನೋಟು ಹೆಕ್ಕಿದರೆ ಎಲ್ಲಿ ಕೊರೋನಾ ಬರುತ್ತೋ ಎಂಬ ಭಯ…ಎಂಥಾ ವೈಪರೀತ್ಯ!
ಆರೋಗ್ಯ, ಸಂಬಂಧಗಳನ್ನು ಪಣಕ್ಕಿಟ್ಟಾದರೂ ಅರ್ಥವಿಲ್ಲದ ದುಡಿಮೆ. ಕೊರೋನಾ ಕಾಲದ ಲಾಕ್ಡೌನ್ ಅನಿವಾರ್ಯವಾಗಿ ಬಿಡುವು ನೀಡಿತು. ಮನುಷ್ಯ ಸುತ್ತಲೂ ನೋಡತೊಡಗಿದ್ದಾನೆ. ತಾನು ಯಾರಿಗಾಗಿ, ಯಾಕಾಗಿ ದುಡಿಯುತ್ತಿದ್ದೇನೆ ಎಂದು ಯೋಚಿಸುತ್ತಿದ್ದಾನೆ. ಬಂಧು ಬಾಂಧವರು ನೆನಪಾಗಿದ್ದಾರೆ. ಬದುಕೇ ಬಿಡುವಾದಾಗ ಜೀವನ ಅರ್ಥವಾಗತೊಡಗಿದೆ.
ಹಣ, ಹೆಸರಿನ ಗುಂಗಿನಲ್ಲಿ ದೇವರು ʼಸರ್ವಪಾಪ ವಿನಾಶಕʼನಾಗಿದ್ದ. ಮಾಡೋದೆಲ್ಲ ಮಾಡಿ ಕೊನೆಗೆ ಗುಡಿಗೋಪುರ ಸುತ್ತುವುದು, ದೇವರ ಮೊರೆ ಹೋಗುವುದು. ಈಗ ಯಾರನ್ನೂ ಬಿಡದೆ ಕಾಡಿದ ಸಾಂಕ್ರಾಮಿಕ ರೋಗ ಮನುಷ್ಯನ ಭ್ರಮೆ ಕಳಚಿದೆ. ಪ್ರತಿ ಬಾರಿಯೂ ನಮ್ಮ ತಪ್ಪಿಗೆ ದೇವರನ್ನು ಹೊಣೆಯಾಗಿಸಲು ಸಾಧ್ಯವಿಲ್ಲ, ಶಿಸ್ತಿನ ಜೀವನ ಮಾತ್ರ ನಮ್ಮನ್ನು ಕಾಪಾಡಲು ಸಾಧ್ಯ ಎಂಬುದನ್ನು ಮನದಟ್ಟು ಮಾಡಿದೆ.
ಅನುಕೂಲಸ್ತರಿಗೆ ಲಾಕ್ಡೌನ್ ಸಮಯದಲ್ಲಿ ದೊಡ್ಡ ಚಿಂತೆಯಾಗಿದ್ದು ಮನೆಯಲ್ಲೇ ಇದ್ದು ಬೊಜ್ಜು ಬಂದರೆ ಎಂಬುದು. ಕೆಲವರು ʼಹೊಸʼ ಮಾರ್ಗೋಪಾಯಗಳನ್ನು ಜಾಲತಾಣಗಳಲ್ಲಿ ಹಂಚಿಕೊಂಡು ಹೀರೋಗಳಾಗಿದ್ದಾರೆ. ಇನ್ನೊಂದೆಡೆ ದೂರದೂರುಗಳಿಂದ ಕೆಲಸಕ್ಕಾಗಿ ನಗರಕ್ಕೆ ಬಂದ ಕಾರ್ಮಿಕರು, ದಿನಗೂಲಿ ನೌಕರರಿಗೆ ಒಂದೊತ್ತಿನ ಕೂಳು ಸಿಗುವುದೇ ಕಷ್ಟವಾಗಿದೆ.
ಹೊಸ ಪ್ರಯೋಗಕ್ಕೆ ಈ ಸಮಯವನ್ನೇ ಕಾಯುತ್ತಿದ್ದರೋ ಅನ್ನೋ ಹಾಗೆ ಪುರುಷರ ನಳಪಾಕ, ಮಹಿಳೆಯರ ಹೊಸ ಪ್ರಯೋಗಕ್ಕೆ ಲಾಕ್ಡೌನ್ ಸಾಕ್ಷಿಯಾಯಿತು. ಬಗೆಬಗೆಯ ಭಕ್ಷ್ಯಗಳು ವಾಟ್ಸಪ್, ಫೇಸ್ಬುಕ್ಗಳಲ್ಲಿ ರಾರಾಜಿಸತೊಡಗಿದವು. ಆದರೆ ಇನ್ನೂ ಹಲವರಿಗೆ ಸರ್ಕಾರ ಉಚಿತವಾಗಿ ಕೊಡುತ್ತಿದ್ದ ಹಾಲು, ದಾನಿಗಳು ನೀಡುತ್ತಿದ್ದ ಆಹಾರವೇ ಮೃಷ್ಟಾನ್ನವಾಯಿತು.
ಉಳ್ಳವರು ಸ್ಯಾನಿಟೈಸರ್, ಮಾಸ್ಕ್ ಕೊಂಡು ಬಳಸಿದರು. ಮನೆಯಿಂದ ಹೊರಬರದೆ ತಮ್ಮನ್ನು ತಾವು ರಕ್ಷಿಸಿಕೊಂಡರು. ಆದರೆ ವಲಸೆ ಕಾರ್ಮಿಕರು ಮನೆ ತಲುಪಲು ಕಾಯುತ್ತಿದ್ದರು. ಕೈ ಖಾಲಿಯಾಗಿ ಹೊಟ್ಟೆ ತುಂಬಿಸಿಕೊಳ್ಳುವುದೇ ಕಷ್ಟವಾಗಿತ್ತು. ಮಾಸ್ಕ್ ಬಿಡಿ ಮಾನ ಉಳಿಸಿಕೊಳ್ಳುವುದೇ ಸಮಸ್ಯೆಯಾಯಿತು.
ಕೆಲವರಿಗೆ ವೈರಾಣು ಹತ್ತಿಕ್ಕಲು ಆಗಾಗ ಕೈ ತೊಳೆಯುವ ಚಿಂತೆಯಾದರೆ, ಹಲವರಿಗೆ ಮೈ ತೊಳೆಯಲಾಗದ ಚಿಂತೆ. ಊರು ತಲುಪಲಾಗದೆ ಎಲ್ಲೆಲ್ಲೋ ಉಳಿದುಕೊಂಡವರಿಗೆ ಸ್ನಾನ ಕನಸಿನ ಮಾತಾಗಿತ್ತು. ಸಾರ್ವಜನಿಕ ಶೌಚಾಲಯಗಳೂ ಮುಚ್ಚಿದ್ದರಿಂದ ಪಡಿಪಾಟಲು ಪಡಬೇಕಾಯಿತು. ಕೆಲವರು ಟೈಂಪಾಸ್ ಚಾಲೆಂಜ್ಗಳಲ್ಲಿ ಬ್ಯುಸಿಯಾಗಿದ್ದರೆ, ಇವರಿಗೆ ಜೀವಂತವಾಗಿ ಊರು ತಲುಪುವುದೇ ಒಂದು ದೊಡ್ಡ ಛಾಲೆಂಜ್. ತಲುಪಿದರೂ ಅಸ್ಪೃಶ್ಯರಂತೆ ಬದುಕಬೇಕಾದ ಅನಿವಾರ್ಯ ಸ್ಥಿತಿ.
ʼದೊಡ್ಡಣ್ಣʼ ಅಮೇರಿಕಾದಲ್ಲಿ ಕೊವಿಡ್- 19 ನಿಂದ ಮೃತರಾದವರ ಸಂಖ್ಯೆ ಲಕ್ಷ ತಲುಪುತ್ತಿದೆ. ತಾನೇ ವಿಶ್ವವನ್ನು ಆಳಬೇಕೆಂದುಕೊಡಿರುವ ಚೀನಾ ವೈರಸ್ನ ಬಾಧೆ, ತನ್ನ ಮೇಲೆ ಜಗತ್ತು ಹೊರಿಸಿರುವ ಅಪವಾದದಿಂದಾಗಿ ಬಳಲಿದೆ. ಒಂದಂತೂ ನಿಜ, ಶಕ್ತಿ ಸಾಮರ್ಥ್ಯ, ಜಾತಿ-ಧರ್ಮ, ಆಸ್ತಿ ಅಂತಸ್ತು, ನಗರ- ಹಳ್ಳಿ ಹೀಗೆ ಹಲವು ರೀತಿಯಲ್ಲಿ ನಾವು ನಮ್ಮ ನಡುವೆ ಕಂದಕಗಳನ್ನು ಸೃಷ್ಟಿಕೊಂಡದ್ದು ಕೊವಿಡ್-19 ವೇಳೆ ಜಗಜ್ಜಾಹೀರಾಯಿತು. ಪ್ರಕೃತಿ ಕಲಿಸಿದ ಈ ಪಾಠವನ್ನು ಅರ್ಥಮಾಡಿಕೊಳ್ಳದಿದ್ದರೆ ಮುಂದೆ ಅವಕಾಶವೇ ಸಿಗದಿರಬಹುದು.
https://citizenlive.news/c-special/coronavirus-pandemic-taught-how-to-live-special-article-2020-2/
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ