ಪ್ರೇಮಿಗಳ ದಿನ ಫೆಬ್ರವರಿ 14 ಅಲ್ಲವೇ ಅಲ್ಲ!
ನಿಜವಾಗ್ಲೂ ಈ ವ್ಯಾಲೆಂಟೈನ್ಸ್ ಡೇ, ಅರ್ಥಾತ್ ಪ್ರೇಮಿಗಳ ದಿನ ಅಂದರೆ ಏನು, ಯಾಕೆ ಬಂತು, ಯಾವಾಗ್ಲಿಂದ ಬಂತು ಅನ್ನೋದರ ಬಗ್ಗೆ ಸಿಕ್ಕಾಪಟ್ಟೆ ಕನ್ಫ್ಯೂಷನ್‌ಇದೆ! ಆದ್ರೆ ನಂಗೆ ಮಾತ್ರ ಯಾವ ಕನ್ಫ್ಯೂಷನ್ನೂ ಇಲ್ಲ. ಫೆಬ್ರವರಿ 14 ಅಲ್ಲಲ್ಲ, ಫೆಬ್ರವರಿ 11 ಕ್ಕೆ ಬರೋ ನನ್ನ ʼಪ್ರೇಮಿಗಳ ದಿನʼಕ್ಕೆ ಕಾರಣವೂ ಇದೆ, ಅದರ ಹಿಂದೆ ಸಾಕಷ್ಟು ನೆನಪುಗಳೂ ಇವೆ!
ಒಂದು 12 ವರ್ಷಗಳ ಹಿಂದೆ, ಅದು ಫೆಬ್ರವರಿ 11 ನೇ ತಾರೀಖು. ಮಂಗಳೂರಿನ ಕದ್ರಿಯ ಪಿಜಿಯಲ್ಲಿ ನನ್ನ ದಿನ ಯಾವತ್ತಿನಂತೇ ಆರಂಭವಾಗಿತ್ತು. ಅದೇ ತಿಂಡಿ, ಕೆಲಸ, ಊಟ, ಒಂದಷ್ಟು ಮಾತು ಮತ್ತು ಅದೇ ನಿರಾಸೆಯೊಂದಿಗೆ ದಿನ ಮುಗಿಯುತ್ತದೆ ಎಂದೇ ನಾನು ಭಾವಿಸಿದ್ದೆ. ಆದರೆ ಅದು ಇಳಿಸಂಜೆ 7.30- 8 ಗಂಟೆಯ ಹೊತ್ತಿರಬಹುದು. ಮೊಬೈಲ್‌ರಿಂಗಣಿಸಿತು. ಹೌದು ಅದು ಆಕೆಯ ಕರೆ. ನನಗದು ತುಂಬಾ ವಿಶೇಷ. ಆದರೆ ಮಾತು ಯಾಕೋ ಗಂಭೀರವಿತ್ತು. ದೃಢ ನಿರ್ಧಾರವೊಂದು ಮನಸ್ಸಿನಲ್ಲಿದೆ ಎಂಬುದನ್ನು ಮಾತೇ ಸೂಚಿಸುತ್ತಿತ್ತು.
ನನಗೋ ಸೆಖೆಯಿಲ್ಲದಿದ್ದರೂ ಮೈ ಬೆವರಿದ ಅನುಭವ. ಏನೋ ಆತಂಕ. ಕಾರಣ ಹಿಂದಿನ ವರ್ಷ ಅಕ್ಟೋಬರ್‌ನಲ್ಲಿ ನಾನಾಕೆಗೆ ಪ್ರೇಮ ನಿವೇದನೆ ಮಾಡಿದ್ದೆ. ನನ್ನ ಮನಸ್ಸಿನ ನಿರ್ಧಾರವೇನೋ ಬಲವಾಗಿತ್ತು. ಆದರೆ ಹೇಳೋದು ಹೇಗೆ ಎಂಬುದು ತಿಳಿದಿರಲಿಲ್ಲ. ದಿನಾ ಭೇಟಿಯಾದರೂ, ಪುಕ್ಕಲನಂತೆ, ಸೈಬರ್‌ಸೆಂಟರ್‌ನಿಂದ ಇಷ್ಟುದ್ದದ ಇ-ಮೇಲ್‌ಒಂದನ್ನು ಗೊತ್ತಿದ್ದ ಇಂಗ್ಲಿಷ್‌ನಲ್ಲಿ ಕಳಿಸಿದ್ದೆ. ಅದು ನಿಜಕ್ಕೂ ವಿಚಿತ್ರವಾದ ಪ್ರೇಮ ನಿವೇದನೆ. ಅದು ಯಾರನ್ನೂ ಇಂಪ್ರೆಸ್‌ಮಾಡಲು ಸಾಧ್ಯವೇ ಇಲ್ಲ! ಹಾಗಾದರೆ ಅದು ಆಕೆಯನ್ನೂ ಪ್ರಭಾವಿಸೀತೇ? ಗೊತ್ತಿಲ್ಲ! ಆದರೆ ಮನಸ್ಸಿನಲ್ಲಿದ್ದದ್ದನ್ನು ಚೆನ್ನಾಗಿ ಯೋಚಿಸಿಯೇ ಬರೆದಿದ್ದೆ.
ನಾಲಕ್ಕು ತಿಂಗಳುಗಳಾದರೂ ಉತ್ತರ ಬಂದಿರಲಿಲ್ಲ. ಈಗ… ಏನು ಹೇಳಬಹುದು ಆಕೆ… ನನ್ನ ಪೆಂಡಿಂಗ್‌ಪ್ರೇಮ ನಿವೇದನೆಯನ್ನು ಪಕ್ಕಕ್ಕೆ ತಳ್ಳಿಬಿಟ್ಟರೆ? ಅವಳು ಯಾವ ಪರಿಸ್ಥಿತಿಯಲ್ಲಿ ಇರಬಹುದು… ಅವಳೇನಾದರೂ ನಿರಾಕರಿಸಿಬಿಟ್ಟರೆ? ನನ್ನ ಸ್ನೇಹವನ್ನೂ ತೊರೆದರೆ? ಅದೊಂದು ನಾನು ಕಲ್ಪಿಸಿಕೊಳ್ಳಲೂ ಇಚ್ಚಿಸದ ವಿಷಯವಾಗಿತ್ತು. ಏಕೆಂದರೆ ಭಗವಂತನೇ ಹಣೆಯಲ್ಲಿ ಬರೆದಿದ್ದನೋ ಎಂಬಂತೆ ನಮ್ಮ ಪರಿಚಯವಾಗಿತ್ತು. ಅದು ಯಾವ ಸ್ವಾರ್ಥವೂ ಇಲ್ಲದ, ಗೊಡ್ಡು ಆಕರ್ಷಣೆಗಳಿಲ್ಲದ ಭಾವನೆಗಳ ಬಂಧ. ನಾನು ಆಕೆಯನ್ನು ಕಳೆದುಕೊಂಡರೆ ಇರಬಲ್ಲೆನೇ… ಹೀಗೆ ಏನೇನೋ ಯೋಚನೆಗಳು ಮನಸ್ಸಿನಲ್ಲಿ ಹಾದು ಹೋದವು. ಆದರೆ ಅದೆಂತದ್ದೋ ಒಂದು ಆತ್ಮವಿಶ್ವಾಸವೂ ಇತ್ತು.
ಹೌದು, ಅವಳೇನೋ ಗಂಭೀರ ವಿಷಯವನ್ನೇ ದೃಢವಾಗಿ ಹೇಳಬಯಸಿದ್ದಳು. ಅಂತೂ, ಕೊನೆಗೂ ಸಾಕಷ್ಟು ಸತಾಯಿಸಿದ ಬಳಿಕ ಅವಳು ನನ್ನ ಪ್ರೇಮ ನಿವೇದನೆಯನ್ನು ಸ್ವೀಕರಿಸಿದ್ದಳು. ಸಾಕಷ್ಟು ಯೋಚಿಸಿಯೇ ಆ ನಿರ್ಧಾರಕ್ಕೆ ಬಂದಿದ್ದಳು. ಆ ಮಾತು ಕೇಳುತ್ತಲೇ ನಾನು ಏನೋ ಗೆದ್ದುಬಿಟ್ಟಂತೆ ಅಕ್ಷರಶಃ ಅಲ್ಲಿ ಯಾರಿದ್ದಾರೆ, ಏನು ಭಾವಿಸಿಯಾರು ಎಂಬುದನ್ನೂ ಮರೆತು ಸಂಭ್ರಮಿಸಿದ್ದೆ. ಆಕೆಯ ಮಾತಲ್ಲೂ ನಗುವಿತ್ತು. ಅದು ಆಕೆಗೂ ನಿರಾಳತೆಯ ನಗುವಿದ್ದಿರಬಹುದು. ನನ್ನ ಹುಚ್ಚು ಸಂಭ್ರಮ ಕಂಡು ಆಕೆ ನಕ್ಕಿರಬಹುದು!
ಅದು ದೊಡ್ಡ ಪ್ರಯಾಣವೊಂದರ ಆರಂಭ. ದಾಂಪತ್ಯಕ್ಕೆ ಕಾಲಿರಿಸಿ ಹತ್ತಿರ ಹತ್ತಿರ 12 ವರ್ಷಗಳೇ ಸಂದರೂ ನನಗೆ ಫೆಬ್ರವರಿ 11 ಇವತ್ತಿಗೂ ವಿಶೇಷವೇ…ಮುಂದೆಯೂ ಹಾಗೆಯೇ ಇರಲಿದೆ. ನಮ್ಮಿಬ್ಬರ ಮದುವೆ ನಿಶ್ಚಯವಾದ ಫೆಬ್ರವರಿ 5 ನ್ನು ಪ್ರತಿ ಬಾರಿಯೂ ಆಕೆಯೇ ನೆನಪಿಸುತ್ತಾಳೆ. ಫೆಬ್ರವರಿ 11 ನ್ನು ಮಾತ್ರ ನಾನು ನೆನಪಿಸುತ್ತೇನೆ. ಅದು ಆಕೆಗೆ ನಿಮಿತ್ತ ಮಾತ್ರವಿರಬಹುದು, ಆದರೆ ನನಗೆ ಬಹುದೊಡ್ಡ ಕನಸೊಂದು ನನಸಾದ ದಿನ!
ಹೀಗೆ ದೊಡ್ಡ ತಿರುವೊಂದನ್ನು ಪಡೆದ ನಮ್ಮ ಪ್ರೀತಿ ಸದಾ ನಳನಳಿಸುವ ಹೋದೋಟದಂತಿದೆ. ಒಂದೊಂದು ಮುಳ್ಳುಗಳ ನೋವನ್ನೂ ಪ್ರೀತಿಯೆಂಬ ಹೂವಿನ ಸೌಂದರ್ಯ ಸುಲಭವಾಗಿ ಮರೆಸುತ್ತದೆ. ಬಣ್ಣಬಣ್ಣದ ಹೂಗಳ ಚಂದ ಕಷ್ಟಗಳನ್ನು ಇಲ್ಲವಾಗಿಸುತ್ತದೆ.
ಇಂತಿಪ್ಪ ಫೆಬ್ರವರಿ 11 ನನ್ನ ಪಾಲಿಗೆ, ಅಲ್ಲಲ್ಲ ನಮ್ಮಿಬ್ಬರ ಪಾಲಿಗೆ ನಿಜವಾದ ಪ್ರೇಮಿಗಳ ದಿನ. ಅಂದು, ಇಂದು, ಎಂದೆಂದೂ…💞
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ