ಸಿಂಹಾವಲೋಕನಕ್ಕೊಂದು ಸಮಯ
ಹೊಸತು ಬಯಸುವ ನಮಗೆ ಸಂತೋಷದ ವಿಚಾರ ಎಂದರೆ ಹೊಸ ವರ್ಷ ಬಂದಿದೆ! ಹೊಸ ಕ್ಯಾಲೆಂಡರ್, ಹೊಸ ಡೈರಿ ಸಿಕ್ಕಿದೆ! 2023 ಎಂದು ಬರೆದೂ ಬರೆದೂ ಬೋರ್‌ಆಗಿದ್ದವರಿಗೆ ಹೊಸ ಸಂಖ್ಯೆ 2024 ಬಂದಿದೆ. ಆಚರಣೆಯೂ ಭರ್ಜರಿಯಾಗಿ ನಡೆದಿದೆ. ಕೆಲವರು ಮಧ್ಯರಾತ್ರಿ ಆಚರಿಸಿದರೆ, ಇನ್ನೂ ಕೆಲವರು ಮದ್ಯದೊಂದಿಗೆ, ಬೀದಿಗಿಳಿದು, ಪಾರ್ಟಿ ಮಾಡಿ, ಪಟಾಕಿ ಒಡೆದು… ಇನ್ನೂ ಹೇಗೇಗೋ ಆಚರಿಸಿದ್ದೇವೆ. ಇವೆಲ್ಲದರ ಮಧ್ಯೆ ಒಂದಷ್ಟು ಸಮಯ ಮಾಡಿಕೊಂಡು ಕಳೆದುಹೋದ ವರ್ಷದಲ್ಲಿ ಕಳೆದುಕೊಂಡದ್ದೇನು, ಪಡೆದುಕೊಂಡದ್ದೇನು ಎಂಬುದರ ಸಿಂಹಾವಲೋಕನ ಮಾಡಿಕೊಳ್ಳೋಣವೇ?
ಕಾಲಾಯ ತಸ್ಮೈ ನಮಃ…ಕಾಲಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ. ಅದು ಒಳ್ಳೆಯ ಕಾಲವಿರಲಿ, ಕೆಟ್ಟದಿರಲಿ…ಯಾರಿಗೂ ಕಾಯುವುದಿಲ್ಲ. ಸಂತೋಷವಿರಲಿ, ದುಃಖವಿರಲಿ ಯಾವುದೂ ಇಲ್ಲಿ ಶಾಶ್ವತವಲ್ಲ. ಆದರೆ ಅನುಭವ ಮಾತ್ರ ನಮಗೆ ಸಿಗುವ ಲಾಭ. ಕಳೆದ ವರ್ಷ ನಾವೆಲ್ಲರೂ ಅದೆಷ್ಟೋ ಘಟನೆಗಳಿಗೆ ಸಾಕ್ಷಿಯಾಗಿದ್ದೇವೆ. ಎಷ್ಟೋ ಜನರನ್ನು ಭೇಟಿಯಾಗಿದ್ದೇವೆ. ಅತ್ಯಂತ ಸಂತೋಷ, ಹೃದಯವೇ ಬಿರಿಯುವಷ್ಟು ದುಃಖ ಎರಡನ್ನೂ ಅನುಭವಿಸಿದ್ದೇವೆ. ಅದೆಲ್ಲಾ ಕಳೆದುಹೋಗಿದೆ. ಹಾಗಾದರೆ ನಮಗೇನು ಸಿಕ್ಕಿದೆ ಎಂದರೆ, ಅನುಭವ ಮಾತ್ರ. ಕಳೆದು ಹೋದ ವರ್ಷ ನಮಗೆ ಅಪಾರ ಅನುಭವಗಳನ್ನು ನೀಡಿದೆ.
ಜೀವನದ ಬಿಡಿಸಲಾರದ ಭಾಗವೇ ಸ್ನೇಹ. ಕೆಲವರ ಸ್ನೇಹಿತರ ಬಳಗ ಲೆಕ್ಕವಿಲ್ಲದ್ದು, ಇನ್ನೂ ಕೆಲವರಿಗೆ ಬೆರಳೆಣಿಕೆಯಷ್ಟು ಸ್ನೇಹಿತರು. ಸ್ನೇಹದ ವಿಧ ಹಲವಾದರೂ, ನಾವೆಲ್ಲರೂ ಅದಕ್ಕೆ ಕೊಡುವ ಮಹತ್ವ ಕಡಿಮೆಯಿಲ್ಲ. ಏಕೆಂದರೆ ಅದು ಜೀವನದಲ್ಲಿ ನಮಗೆ ಊರುಗೋಲಿದ್ದಂತೆ. ಹೆತ್ತವರು, ಸಂಬಂಧಿಕರಲ್ಲಿ ಹೇಳಲಾಗದ್ದನ್ನು ಹೇಳಿ ಹಗುರಾಗಲು ಸ್ನೇಹಿತರು ಬೇಕು. ಹಾಗೆಂದು ಗೆಳೆಯರು ನಮ್ಮ ಜೀವನದಲ್ಲಿ ಸಂತೋಷವನ್ನೇ ತುಂಬುತ್ತಾರೆ ಎಂದಲ್ಲ. ಕೆಲವೊಮ್ಮೆ ಮರೆಯಲಾಗದ ಕಹಿ ಅನುಭವವಾಗಿಬಿಡುತ್ತದೆ. ಅದೇ ರೀತಿ ಅಚ್ಚರಿಯೆಂಬಂದೆ ಅಪರಿಚಿತರು ಹತ್ತಿರವಾಗಿಬಿಡುತ್ತಾರೆ, ಪ್ರಾಣ ಸ್ನೇಹಿತರಾಗುತ್ತಾರೆ. 2023 ರಲ್ಲಿ ಇಂತಹ ಅನುಭವ ನಮಗೆಲ್ಲರಿಗೂ ಖಂಡಿತಾ ಆಗಿರುತ್ತದೆ.
ಕಳೆದುಹೋದ ವರ್ಷದಿಂದ ಅನುಭವಗಳೊಂದಿಗೆ ನೆನಪುಗಳು ನಮಗೆ ಸಿಗುತ್ತವೆ. ಬಾಲ್ಯದಲ್ಲಿ ಈಗ ಜೊತೆಗಿಲ್ಲದ ಸ್ನೇಹಿತರೊಂದಿಗೆ ಆಡುತ್ತಿದ್ದ ಕಚಕುಳಿಯಿಡುವ ನೆನಪು, ಅಮ್ಮನ ಮಡಿಲಲ್ಲಿ ಮಲಗಿ ಜೋರಾಗಿ ಅತ್ತ ನೆನಪು, ಅಪ್ಪ- ಅಣ್ಣ, ಆಕೆಯ ತ್ಯಾಗದ ನೆನಪು, ಕಣ್ಣೀರು ತರಿಸಿದ, ಕಂಗಾಲಾಗಿಸಿದ ಆ ಕಠಿಣ ನಿರ್ಧಾರದ ನೆನಪು… ಹೀಗೆ ನೆನಪುಗಳು ಕಾಲಕ್ಕೆ ಸೀಮಿತವಾಗದೆ ಸದಾ ನಮ್ಮೊಳಗೆ ಹರಿಯುತ್ತಿರುತ್ತವೆ. ಹೊಸ ವರ್ಷ ಬಂದರೇನಂತೆ ಹಳೇ ವರ್ಷ ನೆನಪಾಗಿ ಉಳಿಯುತ್ತದೆ. ಅದು ದುಃಖವಾಗಿರಬಹುದು, ಸಂತೋಷವಾಗಿರಬಹುದು, ಅದು ಇದ್ದೇ ಇರುತ್ತದೆ. ಕೆಲವೊಮ್ಮೆ ಕಷ್ಟಗಳನ್ನು ಎದುರಿಸುವಾಗ ನೆನಪುಗಳೇ ನೆರವಾಗುತ್ತವೆ… ಅದಕ್ಕೆ ವ್ಯಾಖ್ಯಾನವೆಂಬುದಿಲ್ಲ. ಕಳೆದ ವರ್ಷ ನಮಗೆ ಖಂಡಿತಾ ನೆನಪುಗಳನ್ನು ಕೊಟ್ಟಿರುತ್ತದೆ.
ಮನುಷ್ಯನಾದ ಮೇಲೆ ತಪ್ಪುಗಳು ಸಹಜ. ಅದು ಅರಿವಿಲ್ಲದೆ ಮಾಡಿದ್ದಿರಬಹುದು, ಯಾವುದೋ ಒತ್ತಡವಿರಬಹುದು, ಭಾವನೆಗಳಿಗೆ ಒಳಗಾಗಿ ಮಾಡಿದ್ದಿರಬಹುದು. ತನ್ನ ಮೇಲೆ ನಿಯಂತ್ರಣ ಸಾಧಿಸಬಲ್ಲವನು, ಸರಿ- ತಪ್ಪುಗಳನ್ನು ಚೆನ್ನಾಗಿ ಅರಿತವನು, ತ್ವರಿತವಾಗಿ ನಿರ್ಧಾರ ತೆಗೆದುಕೊಳ್ಳಬಲ್ಲವನು ಕಡಿಮೆ ತಪ್ಪುಗಳನ್ನು ಮಾಬಹುದೇ ಹೊರತು, ಯಾರೂ ಇದರಿಂದ ಹೊರತಾಗಿಲ್ಲ. ತಪ್ಪು ಮಾಡದವನಿಗೆ ಸರಿಯೇನು ಎಂಬುದರ ಅರಿವಾಗುದಿಲ್ಲವಂತೆ. ಅಂದರೆ ತಪ್ಪುಗಳು ನಮಗೆ ಜೀವನಾನುಭವ ನೀಡುತ್ತವೆ. ಮತ್ತಷ್ಟು ತಪ್ಪುಗಳಾಗದಂತೆ ಎಚ್ಚರಿಸುತ್ತವೆ ಅಥವಾ ಇನ್ಯಾರೋ ತಪ್ಪು ಮಾಡುತ್ತಿದ್ದಾಗ ಅವರನ್ನು ಎಚ್ಚರಿಸುವಂತೆ ಮಾಡುತ್ತವೆ. ಈ ಅನುಭವವೂ ನಮಗೆ ಖಂಡಿತಾ ಆಗಿರುತ್ತದೆ.
ಜೀವನವೆಂಬುದು ಹುಲ್ಲುಹಾಸಲ್ಲ. ಯಾರೂ ನಮಗೆ ಬೇಕಾದಂತೆ ಯಾವತ್ತೂ ಇರಲಾರರು. ಜೀವನದ ವಿವಿಧ ಹಂತಗಳಲ್ಲಿ ವಿವಿಧ ರೀತಿಯ ದುಃಖ, ನೋವುಗಳು ನಮ್ಮನ್ನು ಕಾಡುತ್ತವೆ. ಯಾವುದೋ ಅವಮಾನ ಎದುರಿಸಬೇಕಾಗಬಹುದು, ಯಾರನ್ನೋ ಶಾಶ್ವತವಾಗಿ ಕಳೆದುಕೊಳ್ಳಬೇಕಾಗಬಹುದು, ಇಷ್ಟವಿಲ್ಲದಿದ್ದರೂ ಯಾವುದೋ ನಿರ್ಧಾರ ತೆಗೆದುಕೊಳ್ಳಬೇಕಾಗಬಹುದು, ನಮ್ಮ ಆರೋಗ್ಯ ಪರಿಸ್ಥಿತಿಗಳು ನಮ್ಮನ್ನು ಪರೀಕ್ಷಿಸಬಹುದು. ಆದರೆ ಜೀವನದ ಈ ಸತ್ಯಗಳನ್ನು ಒಪ್ಪಿಕೊಳ್ಳೋಣ. ಸಂತೋಷ- ದುಃಖ, ಹುಟ್ಟು- ಸಾವಿನಷ್ಟೇ ಸಹಜ. ಇದೂ ನಮಗೆ ಅನುಭವವಾಗಿಯೇ ಇರುತ್ತದೆ…ಹೊಸ ಪಾಠ ಕಲಿಸಿರುತ್ತದೆ.
ಹಾಗಾದರೆ ಸಂಭ್ರಮವೇಕೆ?
ಜೀವನ ಬಲುಸುಂದರ. ಈ ಅಂತ್ಯ ತಿಳಿಯದ ದೂರಯಾನದಲ್ಲಿ ಭಾಗಿಯಾಗುವುದು ನಮ್ಮ ಅದೃಷ್ಟ ಮತ್ತು ಕರ್ತವ್ಯವೂ ಹೌದು. ಹೊಸ ವರ್ಷ ಈ ದೂರ ಪ್ರಯಾಣದಲ್ಲಿ ಒಂದು ಮೈಲಿಗಲ್ಲು. ನಮ್ಮ ಹಳೆಯ ಅನುಭವ ಏನೇ ಇರಲಿ, ಇಷ್ಟು ದೂರ ಯಶಸ್ವಿಯಾಗಿ ಕ್ರಮಿಸಿದ್ದೇವೆ ಎಂಬುದೇ ಖುಷಿಯ ವಿಚಾರವಲ್ಲವೇ! ಕಳೆಯಿಲ್ಲದ ಹೂದೋಟಕ್ಕೆ ನೀರುಣಿಸುವಂತೆ ಹೊಸ ವರ್ಷ, ಹುಟ್ಟುಹಬ್ಬದಂತಹ ನೆಪದಲ್ಲಿ ಸಂತೋಷದಾಚರಣೆ ನಮಗೆ ಇನ್ನಷ್ಟು ಸ್ಫೂರ್ತಿ ತುಂಬುತ್ತದೆ. ಬದುಕು ಇನ್ನಷ್ಟು ಕಳೆಗಟ್ಟುತ್ತದೆ.
ಭರವಸೆಯಿಲ್ಲದವನಿಗೆ, ಕೇವಲ ಋಣಾತ್ಮಕವಾಗಿ ಯೋಚಿಸುವವನಿಗೆ ವರ್ಷವೇನು, ಅನುದಿನವೂ ಯಾತನೆಯೇ. ಹಾಗಾಗಿ ಬದುಕು ಹೇಗೇ ಇರಲಿ, ಬಿಸಿಲಿಗೆ ಬರಡಾದರೂ ಆ ಭೂಮಿ ತಾಯಿ, ಗಿಡ ಮರಗಳು, ಜೀವಿಗಳು ಒಂದಲ್ಲಾ ಒಂದು ದಿನ ಮಳೆ ಸುರಿದೀತು ಎಂಬ ಭರವಸೆಯೊಂದಿಗೆ ಬದುಕುವಂತೆ, ನಾವೂ ಕಡು ಕಷ್ಟದಲ್ಲೂ ಯಾವುದಕ್ಕೂ ಅಂಜದೆ ನಮ್ಮ ಸರದಿಗಾಗಿ ಕಾಯೋಣ. ಒಳ್ಳೆಯ ದಿನಗಳು ಬಂದೇ ಬರುತ್ತವೆ. ನಾವೇನಾದರೂ ಸಾಧಿಸಿಯೇ ಸಾಧಿಸುತ್ತೇವೆ.
OLD ARTICLE: https://www.blogger.com/blog/post/edit/5207120592502921881/8244710235114727289
ಹೊಸ ಗುರಿಗಳನ್ನಿಟ್ಟುಕೊಳ್ಳೋಣ. ಆ ಗುರಿಯೆಡೆಗೆ ನಿಧಾನವಾಗಿ ಸಾಗೋಣ. ಖಂಡಿತಾ ಕಷ್ಟಗಳು ನಮ್ಮನ್ನು ಪರೀಕ್ಷಿಸುತ್ತವೆ. ಅದೃಷ್ಟ ಕೈ ಕೊಡುತ್ತದೆ. ಯಾವುದೂ ಬೇಡ ಅನ್ನಿಸಿಬಿಡುತ್ತದೆ. ಆದರೆ ಇರುವುದೊಂದೇ ಜೀವನ. ನಮಗೆ ಒಂದಲ್ಲದಿದ್ದರೆ ಇನ್ನೊಂದು ದಾರಿಯಿದೆ, ದಿಕ್ಕಿದೆ. ಆಡಿಕೊಳ್ಳುವವರು ಯಾವತ್ತೂ ಇರುತ್ತಾರೆ. ಅವರೊಂದಿಗೆ ನಮಗೆ ನೆರವಾಗುವವರೂ ದೊಡ್ಡ ಸಂಖ್ಯೆಯಲ್ಲಿರುತ್ತಾರೆ. ಸ್ನೇಹಿತರನ್ನು ಸಂಪಾದಿಸೋಣ. ಸ್ನೇಹಿತರಿಲ್ಲದಿದ್ದರೂ ಯಾರೊಂದಿಗೂ ಕೋಪ ಬೇಡ, ದ್ವೇಷ ಬೇಡ. ಅದಕ್ಕೆಂದು ನಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುವುದು ಬೇಡ. ಹೋದ ವರ್ಷ ದೊರೆತ ಅನುಭವದಿಂದ ಪಾಠ ಕಲಿತು ನಮ್ಮ ಯೋಚನೆಯಲ್ಲಿ ಧನಾತ್ಮಕತೆ ಅಳವಡಿಸಿಕೊಳ್ಳೋಣ, ಒಳ್ಳೆಯ ಹವ್ಯಾಸಗಳಿರಲಿ. ಇತರರು ಬದಲಾಗುತ್ತಾರೆ ಎಂದು ನಿರೀಕ್ಷಿಸದೆ ನಾವೇ ಬದಲಾಗುವುದು ಒಳ್ಳೆಯದಲ್ಲವೇ?
ಆದಿ ಅಂತ್ಯ ಯಾವುದೂ ತಿಳಿಯದಿದ್ದಾಗ, ಆಯ್ಕೆಗಳು ಹೆಚ್ಚಿಲ್ಲದಿದ್ದಾಗ, ಇರುವ ದಿನಗಳನ್ನು ಖುಷಿಯಾಗಿ ಕಳೆಯುವುದು, ಒಳ್ಳೆಯ ಕೆಲಸಗಳನ್ನು ಮಾಡುವುದೇ ಬುದ್ದಿವಂತಿಕೆ. ಇದು ಆಧ್ಯಾತ್ಮವೆಂದಲ್ಲ, ಇದೇ ಜೀವನದ ಸತ್ಯ. ಮತ್ತೆ ಹೊಸ ವರ್ಷದ ವಿಚಾರಕ್ಕೆ ಬರೋಣ! ಹೊಸತು ಬಂದಮೇಲೆ ಹಳತ್ತೆಲ್ಲಾ ಯಾಕೆ ಎಂಬ ಮನೋಭಾವ ಬೇಡ. ಕಳೆದ ವರ್ಷ ನಾವೇನು ಸಾಧಿಸಿದೆವು, ಅನುಭವಿಸಿದೆವು ಎಂದು ಒಮ್ಮೆ ಯೋಚಿಸಿದರೆ ಅದು ಮುಂದಿನ ಜೀವನವನ್ನು ಇನ್ನಷ್ಟು ಫಲಪ್ರದವಾಗಿಸೀತು. ಇನ್ನೊಂದು ವರ್ಷವನ್ನು ನಾವು ಕಳೆದುಕೊಂಡಿದ್ದೇವೆ, ಇರುವ ಅವಕಾಶ ಇನ್ನಷ್ಟು ಕಡಿಮೆಯಾಗಿದೆ ಎಂಬುದು ಸತ್ಯವಲ್ಲವೇ?!
ಹೊಸ ನೀರು ಬಂದಾಗ ಹಳೆ ನೀರು ಕೊಚ್ಚಿ ಹೋಗುವುದಿಲ್ಲ. ಅವುಗಳೆರಡರ ಸಂಗಮವಾಗಿ ನೀರು ನದಿಯಾಗಿ ಅದೆಷ್ಟೋ ದೂರ ಹರಿದು ವಿಶಾಲ ಸಾಗರವನ್ನು ಸೇರುತ್ತದೆ. ಕಾಡು, ನಾಡು, ಪರ್ವತಗಳೆನ್ನವನ್ನೂ ದಾಟಿ, ಅನುಭವಗಳ ಮೂಟೆಯೊಂದಿಗೆ, ದುಃಖ- ಸಂತೋಷಗಳನ್ನು ಮೀರಿ ಶಾಂತವಾಗಿ, ಅದೆಂತದ್ದೋ ನೆಮ್ಮದಿಯಿಂದ ತನ್ನ ಪ್ರಯಾಣ ಮುಗಿಸಿದಂತೆ…
<ಜಿಪಿ>
https://vijaykarnataka.com/news/vk-special/lets-welcome-the-new-year-2024-with-new-hopes-and-dreams/articleshow/106441770.cms
Really nice
ಪ್ರತ್ಯುತ್ತರಅಳಿಸಿThank you
ಅಳಿಸಿ