ಮಿಡಿವ ಹೃದಯ ಜೊತೆಗಿರಲು ಬದುಕು ಬಲು ಸುಂದರ…

       


ನಿನ್ನನ್ನು ಪ್ರಿಯೆ ಎಂದರೆ ಸಾಕೇ… ನನ್ನವಳು ಎಂದರೆ ಸ್ವಾರ್ಥವಾದೀತೇ?

ಹಾಗೊಂದು ಯೋಚನೆ ಮನಸ್ಸಿಗೆ ಬರಲು ಕಾರಣವಿದೆ. ಕಳೆದ ಹನ್ನೊಂದು ವರ್ಷಗಳಲ್ಲಿ ನೀನು ನನ್ನನ್ನು ಆವರಿಸಿಕೊಂಡಿರುವ ರೀತಿ, ಪಾತ್ರ ಬದಲಾದರೂ ನಮ್ಮ ಪ್ರೀತಿಗೆ ಎಲ್ಲೂ ಮಂಕು ಕವಿಯದಂತೆ ನೋಡಿಕೊಂಡಿರುವ ರೀತಿ ಒಮ್ಮೊಮ್ಮೆ ನನ್ನಲ್ಲಿ ವಿಸ್ಮಯ ಹುಟ್ಟಿಸುತ್ತದೆ! 

ಅಷ್ಟಕ್ಕೂ ನಮ್ಮ ಈ ಮಧುರ ಬಂಧದ ಆರಂಭವೂ ಒಂದು ವಿಸ್ಮಯವೇ ಅಲ್ಲವೇ? ಎಲ್ಲೋ ಇದ್ದ ನಾನು, ಇನ್ನೆಲ್ಲೋ ಇದ್ದ ನಿನ್ನನ್ನು ಸಂಧಿಸುವಂತಾಗಿದ್ದು, ಅದು ಗೆಳೆತನವಾದದ್ದು, ನನಗೇ ಗೊತ್ತಿಲ್ಲದೆ ನನ್ನೊಳಗೆ ಪ್ರೀತಿಯಾಗಿ ಬೆಳದದ್ದು… ಕಾಡಿಸಿದ ನಂತರವಷ್ಟೇ ಅದನ್ನು ನೀನು ಒಪ್ಪಿಕೊಂಡದ್ದು ಇದನ್ನೆಲ್ಲಾ ನಾನು ಮರೆಯಲು ಸಾಧ್ಯವೇ? ಋಣಾನುಬಂಧ ಎಂದರೆ ಇದೇ ಇರಬೇಕು…

ಹೌದು, ನಮ್ಮಿಬ್ಬರಿಗೂ ಇದು ಹೂವಿನ ಹಾಸಾಗಿರಲಿಲ್ಲ. ಮನುಷ್ಯ ಸಹಜ ಕಷ್ಟ – ನಷ್ಟಗಳು, ಅನಿರೀಕ್ಷಿತ ಆಘಾತಗಳು ನಮ್ಮನ್ನೂ ಬಿಟ್ಟಿಲ್ಲ. ಆದರೆ ಕಷ್ಟಗಳು ನಮ್ಮ ಸಂಬಂಧವನ್ನು ಗಟ್ಟಿಯಾಗಿಸಿವೆ. ಜೊತೆಯಾಗಿ ಇನ್ನಷ್ಟು ದೂರ ಸಾಗುವ ಭರವಸೆ ಮೂಡಿಸಿವೆ. ʼಪ್ರೀತಿʼ ಎಂಬ ಅಡಿಪಾಯದ ಮೇಲೆ ನಾವು ಬದುಕಿನ ಸೌಧವನ್ನು ಯಶಸ್ವಿಯಾಗಿ ಕಟ್ಟಿದ್ದೇವೆ. ಈ ಸೌಧ ಹಳತಾದೀತೇ ವಿನಃ ಎಂದೂ ಬೀಳಲಾರದು. ಏಕೆಂದರೆ ನಾವೀಗ ಜೊತೆಯಾಗಿ ಸಾಕಷ್ಟು ದೂರ ಕ್ರಮಿಸಿದ್ದೇವೆ. 

ನಿಜಕ್ಕೂ ಈ ಹನ್ನೊಂದು ವರ್ಷಗಳಲ್ಲಿ ಬದುಕು ಬಹಳಷ್ಟು ಬದಲಾಗಿದೆ. ನಾನು ಬದಲಾಗಿದ್ದೇನೋ ಗೊತ್ತಿಲ್ಲ. ಆದರೆ ನೀನು ಬದಲಾಗಿಲ್ಲ. ಅದೆಷ್ಟೇ ಒತ್ತಡಗಳು ಬಂದರೂ, ಜವಾಬ್ದಾರಿಗಳು ಹೆಚ್ಚಿದರೂ ನೀನು ಬದಲಾಗಿಲ್ಲ. ಆ ನಿನ್ನ ಪ್ರೀತಿ, ಕಾಳಜಿ ಎಲ್ಲವನ್ನೂ ವ್ಯಕ್ತಪಡಿಸುವ ರೀತಿ ಬದಲಾಗಿರಬಹುದು. ಕೆಲವೊಮ್ಮೆ ಹೇಳದೇ ಮನಸ್ಸೊಳಗಿಟ್ಟುಕೊಂಡಿರಬಹುದು. ಆದರೆ ಈಗಲೂ ಅದು ಸ್ಪಟಿಕದಂತೆ ಶುದ್ಧವಾಗಿದೆ. 

ಹಠಾತ್ತನೆ ನನಗಾಗಿ ನೀನು ಕಣ್ಣೀರಾಗುವಾಗ, ಮೌನಕ್ಕೆ ಜಾರುವಾಗ, ಹುಸಿ ಬೈಗುಳದಲ್ಲಿ, ಯಾರಿಗೋ ಸಲ್ಲಿಸುವ ದೂರಿನಲ್ಲಿ ನಾನು ನಿನ್ನ ಪ್ರೀತಿಯನ್ನು ಕಂಡು ಅಚ್ಚರಿಪಟ್ಟಿದ್ದೇನೆ. ನಾನು ನನ್ನ ಬಗ್ಗೆಯೇ ಯೋಚಿಸಿದ್ದೇನೆ. ನಿನ್ನೆಡೆಗೆ ನನ್ನ ಪ್ರೀತಿಯಲ್ಲಿ ಎಂದೂ ಕೊರತೆಯಾಗದು ಎಂದು ತಿಳಿದಿದ್ದರೂ, ನಿನ್ನನ್ನೆಂದೂ ನೋಯಿಸಬಾರದು, ನಿರಾಸೆಪಡಿಸಬಾರದು ಎಂದು ಜಾಗೃತನಾಗಿದ್ದೇನೆ. 

ನನ್ನ ಬಗ್ಗೆ ನಾನು ಯೋಚಿಸುವುದಕ್ಕಿಂತಲೂ ನೀನೇ ಯೋಚಿಸುತ್ತೀಯ ಎಂಬುದು ವಿಚಿತ್ರವಾದರೂ, ಖುಷಿ ಕೊಡುವ ಸತ್ಯ! ಜೀವನದ ಬಗ್ಗೆ ನಿನ್ನ ಯೋಚನೆ ಜವಾಬ್ದಾರಿಯುತವಾಗಿದೆ, ಪ್ರಬುದ್ಧವಾಗಿದೆ. ಇದು ನನ್ನ ಚಿಂತೆಯನ್ನು ಕಡಿಮೆ ಮಾಡಿದೆ, ಜೊತೆಗೆ ಒಂದಿಷ್ಟು ಸೋಮಾರಿಯನ್ನಾಗಿಸಿದೆ ಎಂದರೆ ಖಂಡಿತಾ ನೀನು ನಸುನಕ್ಕು ಹೌದೆನ್ನಬಹುದು. 

ನಾನು ಭವಿಷ್ಯದ ಬಗ್ಗೆ ಹೆಚ್ಚು ಯೋಚಿಸಲಾರೆ. ಆ ಸುಕ್ಕನ್ನು ಬಿಡಿಸಲಾರೆ. ಆದರೆ ನೀನು… ನೀನೀಗ ಅಮ್ಮನೂ ಹೌದಲ್ಲವೇ. ಆ ನಿನ್ನ ಬದಲಾದ ಪಾತ್ರ, ಅದನ್ನು ನೀನು ನಿರ್ವಹಿಸುತ್ತಿರುವ ರೀತಿ ನನ್ನಲ್ಲೇನೋ ಆತ್ಮವಿಶ್ವಾಸ ತುಂಬುತ್ತದೆ. ನಿನ್ನ ಸಾಮರ್ಥ್ಯದ ಬಗ್ಗೆ ಗೌರವ ಮೂಡುತ್ತದೆ. ನನಗೆ ಮಾತ್ರ ಸೀಮಿತವಾಗಿದ್ದ ಪ್ರೀತಿ ಈಗ ಮಕ್ಕಳಿಗೂ, ಕುಟುಂಬಕ್ಕೂ ಹಂಚಿಹೋಗುತ್ತಿರುವ ಬಗ್ಗೆ ಒಳಗೊಳಗೇ ಬೇಸರ ಇದ್ದರೂ ಇದು ಅನಿವಾರ್ಯವೂ ಹೌದು. ಈ ಸ್ವಾರ್ಥವನ್ನು ನಾನು ನಿನ್ನ ಬಳಿ ಹೇಗೇಗೋ ವ್ಯಕ್ತಪಡಿಸಲು ಹೋಗಿ ಬೈಗುಳ ತಿಂದಿರುವುದು ನಿನಗೆ ತಿಳಿದಿಲ್ಲವೇ! 

ಆತ್ಮಾವಲೋಕನ ಮಾಡಿಕೊಂಡಾಗ ನನಗೆ ಅನಿಸಿದ್ದಿದೆ. ಸಮವಾಗಿರಬೇಕಾದ ಜವಾಬ್ದಾರಿಯನ್ನು ನಾನೆಲ್ಲೋ ನಿನಗೆ ಹೆಗಲಿಗೇ ಜಾಸ್ತಿ ಹಾಗುತ್ತಿದ್ದೇನೋ ಎಂದು. ಆದರೆ ನೀನು ಸಮರ್ಥಳು, ನಮ್ಮ ಬದುಕಿನ ಬಂಡಿ ಹೇಗೆ, ಯಾವ ದಿಕ್ಕಿಗೆ ಹೋಗುತ್ತಿದೆ ಎಂದು ಹೆಚ್ಚು ಅರ್ಥಮಾಡಿಕೊಂಡವಳು. ಭವಿಷ್ಯಕ್ಕೂ ಇದೇ ಬೇಕಿರುವುದು ಎಂದು ತಿಳಿದುಕೊಂಡವಳು. ಹೀಗಾಗಿ ಬೇಸರವಾದರೂ ನಮಗಿಬ್ಬರಿಗೂ ಗೊತ್ತಿರುವುದೇ ಅಲ್ಲವೇ?! 

ಖಂಡಿತ ನಮ್ಮ ಬದುಕಿನ ಶೈಲಿ ಬದಲಾಗಿದೆ. ನಾವಿಬ್ಬರೂ ನಮ್ಮ ಸಮಯವನ್ನು ನಮ್ಮಿಬ್ಬರಿಗೂ (ಪ್ರದ್ಯುಮ್ನ, ಪರ್ಣಿಕಾ) ಹಂಚಬೇಕಿದೆ. ಅವರ ಬದುಕಿಗೆ ಅಡಿಪಾಯ ಹಾಕಿಕೊಡುವ ಜವಾಬ್ದಾರಿಯೂ ನಮ್ಮದೇ ಅಲ್ಲವೇ. ಅವರೂ ನಮ್ಮನ್ನು ಖುಷಿಪಡಿಸಬಲ್ಲರು, ಅಲ್ಲದೆ ನಮ್ಮ ಸುಖ-ದುಃಖದಲ್ಲಿ ಇನ್ನು ಅವರೂ ಪಾಲುದಾರರು… ನಮ್ಮ ನಡುವೆ ಮಾತು, ನಗು ಕಡಿಮೆಯಾಗಿರಬಹುದು. ಆದರೆ ನಾವೀಗ ಮೌನದಲ್ಲೇ ಮಾತಾಡಬಲ್ಲೆವು. ಮನಸ್ಸೊಳಗೇ ಖುಷಿಯಾಗಿರಬಲ್ಲೆವು. 

ಮುಂದಿನ ಕ್ಷಣ ಏನಾಗಲಿದೆ ಎಂಬುದು ನಮಗೆ ತಿಳಿದಿಲ್ಲ. ಹಾಗಾಗಿ ನಿರೀಕ್ಷೆಗಳು ಹೆಚ್ಚಿಲ್ಲ. ಆದರೆ ಇಷ್ಟು ದೂರವನ್ನು ಸಲೀಸಾಗಿ ಸಾಗಿದವರಿಗೆ ಮುಂದಿನ ಪಯಣ ಕಷ್ಟವಾಗದು ಎಂಬ ಭರವಸೆಯಿದೆ.  ಹನ್ನೊಂದು ಸಂವತ್ಸರ ಜೊತೆಗೆ ಸಾಗಿದ ಬಗ್ಗೆ ಹೆಮ್ಮೆ ಪಡೋಣ. ಎಲ್ಲಾ ನೋವುಗಳನ್ನು ಮರೆಸಿದ ಪ್ರೀತಿಯ ಭದ್ರ ಬುನಾದಿ ಇರುವವರೆಗೂ, ನನಗಾಗಿ ಮಿಡಿವ ನಿನ್ನ ಹೃದಯ ಜೊತೆಯಿರುವವರೆಗೂ ಬದುಕು ಬಲು ಸುಂದರ…

ಯಾಕೋ ಮಾತು ಮೌನವಾಗಿದೆ. ಮೌನವೇ ಮಧುರವಾಗಿದೆ 

ಜೊತೆಗಿರುವ ಮಿಡಿವ ಹೃದಯ ಸದಾ ಜೊತೆಗಿರಲಿ ಅಷ್ಟು ಸಾಕೆನಿಸಿದೆ…


ಇಂತೀ ನಿನ್ನವನು...





ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪ್ರೀತಿ ಎಂದರೇನು ಎಂದು ಈಗ ಅರಿತೆನು…

ಸಿಂಹಾವಲೋಕನಕ್ಕೊಂದು ಸಮಯ

ಬೇಸರದಲ್ಲಿ ಬರೆದದ್ದು…ಹೌದಾ?!