ʼಗರುಡಗಮನ ವೃಷಭವಾಹನʼ- ಮಾಸ್ ಚಿತ್ರಕ್ಕೆ ಹೊಸ ವ್ಯಾಖ್ಯಾನ!






ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎಸ್‌ ವಿ ರಾಜೇಂದ್ರಸಿಂಗ್‌ ಬಾಬು ಅವರು ʼಭಾನುಪ್ರಭʼದಲ್ಲಿ ತಮ್ಮʼಗರುಡಗಮನನಿಗೆ ಮರುಳಾಗಿʼ ಲೇಖನದಲ್ಲಿ ʼಗರುಡಗಮನ ವೃಷಭವಾಹನʼ ಚಿತ್ರ ಹೇಗೆ ತಮ್ಮ ಚಲನಚಿತ್ರ ಎಂಬ ಕಲ್ಪನೆಯನ್ನೇ ಬದಲಿಸಿತು ಎಂಬುದನ್ನು ಉತ್ಪ್ರೇಕ್ಷೆಯಿಲ್ಲದೆ ವಿವರಿಸಿದ್ದಾರೆ. ಮೊದಲೇ ಚಿತ್ರದ ಬಗ್ಗೆ ಇದ್ದ ಕುತೂಹಲವನ್ನು ಅವರ ಲೇಖನ ಇಮ್ಮಡಿಗೊಳಿಸಿತು.

ನಿರಾಶೆಯಾಗಲಿಲ್ಲ. ಖಂಡಿತವಾಗಿಯೂ ಚಲನಚಿತ್ರದ ಸಾಂಪ್ರದಾಯಿಕ ವ್ಯಾಖ್ಯಾನವನ್ನೇ ಈ ಚಲನಚಿತ್ರ ಬದಲಿಸಿದೆ. ತುಳು ನಟ- ನಿರ್ದೇಶಕರ, ತುಳು ಶಬ್ದ- ಸಂಭಾಷಣೆಗಳನ್ನು ಒಳಗೊಂಡ ಚಿತ್ರ ಕರಾವಳಿಯ ಹೊರಗೆ ಅದ್ಭುತ ಯಶಸ್ಸು ಸಾಧಿಸಿರುವುದು ಚಿತ್ರ ನಿರ್ದೇಶಕರು- ನಿರ್ಮಾಪಕರ ಲೆಕ್ಕಾಚಾರಗಳನ್ನೇ ಬದಲಿಸಿದೆ. ಇಲ್ಲಿ ಯಾರೂ ಸ್ಟಾರ್‌ ನಟರಿಲ್ಲ, ʼಐಟಂ ಸಾಂಗ್‌-ಡ್ಯಾನ್ಸ್ʼ ನಂತಹ ಮಸಾಲೆಗಳಿಲ್ಲ. ಅದಿರಲಿ ನಾಯಕ ನಟ-ನಾಯಕ ನಟಿ, ಹೀರೋ-ವಿಲನ್‌ ಎಂಬ ಚೌಕಟ್ಟನ್ನೇ ಮೀರಿ ತನ್ನದೇ ಹೊಸ ಪರಿಭಾಷೆಯಲ್ಲಿ ಚಿತ್ರ ಮೂಡಿಬಂದಿದೆ. ಅದಕ್ಕೂ ಮುಖ್ಯವಾಗಿ ಭಾಷೆ, ಪ್ರದೇಶಗಳ ಬೇಧವಿಲ್ಲದೆ ಚಲನಚಿತ್ರ ವೀಕ್ಷಕರು ಚಿತ್ರಕ್ಕೆ ಭೇಷ್‌ ಎಂದಿದ್ದಾರೆ.

ಹಾಗೆ ನೋಡಿದರೆ ಈ ಚಿತ್ರ ಒಂದು ಅದ್ಭುತ ಸಾಹಸ. ತುಳುನಾಡಿದ ಮಂಗಳಾದೇವಿ ಎಂಬ ಪ್ರದೇಶ, ತುಳುಬಾಷೆ, ವೇಷಭೂಷಣ, ಸಂಸ್ಕೃತಿಯನ್ನು ಬಳಸಿಕೊಂಡ ಸ್ಟಾರ್‌ ನಟರಿಲ್ಲದೆ ಯಶಸ್ಸು ಪಡೆಯುವ ಇಂತಹ ಸಾಹಸವನ್ನು ಯಾರೂ ಮಾಡಿರಲಿಕ್ಕಿಲ್ಲವೇನೋ! ರಾಜ್‌ ಬಿ. ಶೆಟ್ಟಿ೦ಯವರೇ ಸಂದರ್ಶನವೊಂದರಲ್ಲಿ ಹೇಳಿದಂತೆ ಇದರಲ್ಲಿ ಕಥೆಯಲ್ಲ, ಇರುವುದು ಒಂದು ಅನುಭವ. ಕಥೆಯೊಳಗೆ ತಾವಾಗಿ ನಟಿಸಿರುವ ರಾಜ್‌ ಬಿ. ಶೆಟ್ಟಿ, ರಿಷಬ್‌ ಶೆಟ್ಟಿ ಸೇರಿದಂತೆ ಎಲ್ಲಾ ಕಲಾವಿದರು, ತಂತ್ರಜ್ಞರು ಕೊನೆಗೂ ಗೆದ್ದಿದ್ದಾರೆ.  

ಚಿತ್ರಪ್ರೇಮಿಗಳು ಬಯಸುವ ನಿಜವಾದ ʼಹೊಸತನʼ ಏನು ಎಂಬುದು ಈ ಚಿತ್ರದ ಯಶಸ್ಸಿನಿಂದ ಗೊತ್ತಾಗಿದೆ. ಕನ್ನಡ ಚಲನಚಿತ್ರರಂಗದಲ್ಲಿ ಪ್ರತಿಭಾನ್ವಿತರಿಗೆ ಬರವಿಲ್ಲ, ಹೊಸತನಕ್ಕೆ ಎಣೆಯಿಲ್ಲ ಎಂಬುದು ತಿಳಿದಾಗಿದೆ, ಜೊತೆಗೆ ಚಿತ್ರರಂಗದ ಭವಿಷ್ಯ ಉಜ್ವಲವಾಗಿದೆ ಎಂಬ ಭರವಸೆ ಮೂಡಿದೆ. ʼಮಾಸ್‌ ಚಿತ್ರʼ ಎಂಬ ವ್ಯಾಖ್ಯಾನವನ್ನೇ ʼಗರುಡಗಮನ ವೃಷಭವಾಹನʼ ಬುಡಮೇಲು ಮಾಡಿದೆ. ಸಿನಿಪ್ರಿಯರನ್ನು ಸೆಳೆಯಲು ಕೋಟಿಗಟ್ಟಲೆ ದುಡ್ಡು ಸುರಿಯಬೇಕಾಗಿಲ್ಲ, ಬದಲಾಗಿ ನಿಜವಾದ ಹೊಸತನವನ್ನು ಪ್ರೇಕ್ಷಕ ಮುಕ್ತವಾಗಿ ಸ್ವಾಗತಿಸುತ್ತಾನೆ ಎಂಬುದು ನಿಜವಾಗಿದೆ.

ಬಾಬು ಅವರು ಹೇಳುವಂತೆ ಚಿತ್ರದ ಗೆಲುವು-ಸೋಲು ಒಬ್ಬ ಸ್ಟಾರ್‌ ನಟನ ಮೇಲೆ ಅವಲಂಬಿತವಾಗಿರುವ ದಿನಗಳು ದೂರವಾಗುತ್ತಿವೆ. ಹೆಚ್ಚು ಬಂಡವಾಳ ಹಾಕದೆಯೂ, ಜನಪ್ರಿಯ ಬ್ಯಾನರ್‌ ಇಲ್ಲದೆಯೂ ಕೇವಲ ಪ್ರತಿಭೆಯನ್ನು ಬಳಸಿ, ಮೂಲ ಸತ್ವವನ್ನು ಬಳಸಿಯೇ ಚಿತ್ರ ಗೆಲ್ಲಿಸಬಹುದು ಎಂಬದಕ್ಕೆ ಇದೊಂದು ನಿದರ್ಶನ. ರಾಜ್‌ ಬಿ ಶೆಟ್ಟಿ, ರಿಷಬ್‌ ಶೆಟ್ಟಿ ಸೇರಿದಂತೆ ಎಲ್ಲಾ ಕಲಾವಿದರು, ಸಂಗೀತ ನಿರ್ದೇಶಕರು, ತಾಂತ್ರಿಕ ಸಿಬ್ಬಂದಿಗೆ ಇದೊಂದು ಅರ್ಹ ಗೆಲುವು. ಶುಭಾಶಯಗಳು…

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪ್ರೀತಿ ಎಂದರೇನು ಎಂದು ಈಗ ಅರಿತೆನು…

ಸಿಂಹಾವಲೋಕನಕ್ಕೊಂದು ಸಮಯ

ಬೇಸರದಲ್ಲಿ ಬರೆದದ್ದು…ಹೌದಾ?!