ಕತ್ತಲ ಹಾದಿಯಲಿ ಕಾಣದ ಗುರಿಯೆಡೆಗೆ…
ನಾವೀಗ ಕತ್ತಲ ಮುಳ್ಳುದಾರಿಯಲ್ಲಿ ಕಾಣದ ಗುರಿಯೆಡೆಗೆ ನಡೆಯುತ್ತಿದ್ದೇವೆ. ಇದು ಬಲು ಕಠಿಣವೆನಿಸುತ್ತಿದೆ. ಆದರೆ ಇರುವುದು ಇದೊಂದೇ ದಾರಿ. ಇಲ್ಲಿ ನಾವಷ್ಟೇ ಅಲ್ಲ ಅದೆಷ್ಟೋ ಸಂಖ್ಯೆಯ ಸಹಪಯಣಿಗರೂ ಇದ್ದಾರೆ. ಎಲ್ಲರೂ ಕತ್ತಲ ದಾರಿಯಲ್ಲಿ ಏದುಸಿರು ಬಿಡುತ್ತಾ ಸಾಗುತ್ತಿದ್ದಾರೆ.
ಕಾಲಚಕ್ರ ಮಗ್ಗುಲು ಬದಲಿಸಿದೆ. ಸಾಂಕ್ರಮಿಕ ರೋಗ, ಪ್ರವಾಹ, ಜೊತೆಗೇ ಬಂದ ಮತ್ತಷ್ಟು ಸಮಸ್ಯೆಗಳ ಬಲಾಢ್ಯ ಶಕ್ತಿಯನ್ನು ಎದುರಿಸಲಾಗದೆ ನಾವು ಪರಿತಪಿಸುತ್ತಿದ್ದೇವೆ. ಮಕ್ಕಳು- ಹಿರಿಯರು, ಬಡವ-ಬಲ್ಲಿದ ಎಂಬ ಯಾವ ಬೇಧವೂ ಇಲ್ಲದೆ ಎಲ್ಲರೂ ಇಲ್ಲಿ ಸಮಪಾತ್ರರು. ನಡೆದ, ನಡೆಯುತ್ತಿರುವ ಈ ಅಸಾಧ್ಯ ಆಕ್ರಮಣ ನಮ್ಮ ಜೀವನದ ಮೇಲೆ ಮಾತ್ರವಲ್ಲ, ಯೋಚನೆಯ ಮೇಲೆ ಗಾಢ ಪರಿಣಾಮ ಬೀರುತ್ತಿವೆ. ಭರವಸೆಯ ಬಗೆಗೊಂದು ಹೊಸ ಪ್ರಶ್ನೆ ಮೂಡುವಂತೆ ಮಾಡಿದೆ.
ನೆನಪಿರಲಿ, ಬದಲಾವಣೆಯೆಂಬುದು ಲೋಕನಿಯಮ. ಇದು ಸಿಹಿ-ಕಹಿಯ ಸಂಗಮ. ನಮಗೀಗ ಕಹಿ ಗಳಿಗೆ ಎದುರಾಗಿದೆ. ಆದರೆ ಇದೇನೂ ಹೊಸತಲ್ಲ. ಕಾಲಚಕ್ರಕ್ಕೆ ಹೆದರಿದರೆ ನಾವು ಬದುಕಲ್ಲಿ ಸೋತಂತೆ. ಈ ಕ್ಷಣ ಸೋತರೆ, ಭರವಸೆ ಕಳೆದುಕೊಂಡರೆ ಅದು ಸತ್ತಂತೆ. ಸುರಾಸುರರೆನ್ನದೆ ವಿಶಾಲ ಕ್ಷೀರಸಾಗರವೆಂಬ ಬದುಕಿನಲ್ಲಿ ಮಥನ ನಡೆಸೋಣ. ಮೊದಲು ವಿಷವೇ ಧಕ್ಕಿದರೂ ಕುಗ್ಗದೆ ಅಮೃತ ಬಂದೀತೆಂಬ ಅಚಲ ಭರವಸೆಯೊಂದಿಗೆ. ಇಲ್ಲಿ ತನ್ನನ್ನು ತಾನು ನಂಬಿದವನಷ್ಟೇ ಬಾಳಿಯಾನು.
ಇಲ್ಲಿ ಯಾರ ಸಹಾಯದ ನಿರೀಕ್ಷೆಯೂ ಬೇಡ. ಯಾರನ್ನೂ ಕಾಯುವ ಪ್ರಮೇಯವಿಲ್ಲ. ಜಗನಿಯಮದನುಸಾರ ಹೊಸ ರೀತಿಯಲ್ಲಿ ಬದುಕಲು ಕಲಿಯಬೇಕಷ್ಟೇ. ಹುಟ್ಟಿಸಿದ ಭಗವಂತ ಹುಲ್ಲು ಮೇಯಿಸದೆ ಬಿಡಲಾರ ಎಂಬ ನಂಬಿಕೆಯಿರಲಿ. ಆಧುನಿಕ ಜಗತ್ತಿನ ಹೊಸ ವೇಷದಲ್ಲಿ ನಾವೂ ಪಾತ್ರಧಾರಿಗಳಾಗುವುದು ಇಲ್ಲಿ ಆಯ್ಕೆಯಲ್ಲ, ಅನಿವಾರ್ಯ. ಕಷ್ಟದ ಹಾದಿಯಲ್ಲಿ ಮುಳ್ಳು ಚುಚ್ಚಿದರೂ, ಸೋತೇನೆಂಬ ಭಯ ಕಾಡಿದರೂ ತಾಳ್ಮೆಯಿರಲಿ. ನಮ್ಮ ಮೇಲೆ ಪ್ರೀತಿಯಿಟ್ಟಿರುವವರ ಮೇಲೆ ಪ್ರೀತಿ, ನಂಬಿಕೆಯಿರಲಿ. ನಮ್ಮ ಜವಾಬ್ದಾರಿಗಳ ಬಗೆಗೆ ಬದ್ಧತೆಯಿರಲಿ.
ಒಮ್ಮೆಯಷ್ಟೇ ದೊರೆಯುವ ಈ ಜೀವನ ಎಷ್ಟೊಂದು ಅದ್ಭುತ. ಇದು ಬಯಸದೇ ಎಲ್ಲವನ್ನೂ ಕೊಡುತ್ತದೆ. ಅತಿಯಾಸೆ, ಅದರಿಂದ ಮೂಡುವ ಕೊರಗನ್ನು ತೊರೆದು ಜೀವನವನ್ನು ಪ್ರೀತಿಸೋಣ. ನಮ್ಮನ್ನು ನಾವು ಪ್ರೀತಿಸೋಣ. ಕಠಿಣ ಪರಿಸ್ಥಿತಿಯಲ್ಲಿ ಕುಗ್ಗದೆ, ಮುಂದೆ ನಡೆಯಬಲ್ಲ ನಮ್ಮ ಸಾಮರ್ಥ್ಯದ ಅರಿವಿರಲಿ. ಒಮ್ಮೆಯಷ್ಟೇ ಬರುವ ಈ ಜೀವನದ ಕಡೆಗೆ ಎಂದೂ ಮಸುಕಾಗದ ಭರವಸೆಯಿರಲಿ. ಮನುಷ್ಯರಾಗಿ ಎಲ್ಲಾ ಪ್ರೀತಿ ವಿಶ್ವಾಸಗಳನ್ನು ಮರೆತು, ನಮ್ಮವರನ್ನು ತೊರೆದು, ಕೊರಗಿ ಅಲ್ಪರಾಗಿ ಸಾಯದಿರೋಣ.
ಈ ಕಷ್ಟದ ಹಾದಿಯಲ್ಲಿ ಗುರಿಯೆಡೆಗೆ ಮಾತ್ರ ಗಮನಹರಿಸದೆ, ಸವೆಸಿದ ಹಾದಿ ಕಲಿಸಿದ ಪಾಠ ಮರೆಯದಿರಲಿ. ನಮ್ಮ ದುರಾಸೆಗೆ ಪ್ರತಿಯಾಗಿ ಪ್ರಕೃತಿ ತೋರಿದ ಮುನಿಸು ಮುಂದೆಂದಿಗೂ ನೆನಪಿರಲಿ. ಈ ಭುವಿಗೆ ನಾವಲ್ಲ ಒಡೆಯರು. ನಮ್ಮಷ್ಟೇ ಹಕ್ಕು ಹೊಂದಿರುವ ಸಕಲ ಜೀವಿಗಳ ಬಗ್ಗೆಯೂ ಕರುಣೆಯಿರಲಿ. ಬಡವ, ಶ್ರೀಮಂತ ಎಂಬ ಬಿಮ್ಮು ಬಿಟ್ಟು, ಜಾತಿ- ಧರ್ಮಗಳ ಹಂಗನ್ನು ತೊರೆದು ನಿಜವಾದ ಅರ್ಥದಲ್ಲಿ ಮನುಷ್ಯರಾಗೋಣ. ಎಲ್ಲಾ ಲೌಕಿಕ ಬಂಧನಗಳಿಂದ ಪ್ರೇರಿತ ಯೋಚನೆಗಳಾದ ಅಹಂಕಾರ, ಬಿಗುಮಾನ, ಸಿಟ್ಟು ಸೆಡರುಗಳನ್ನು ಬದಿಗಿಟ್ಟು ನಿಜಾರ್ಥದಲ್ಲಿ ಸ್ವತಂತ್ರರಾಗಿ. ಸಿರಿತನ, ಆಡಂಬರಗಳಿಂದ ಮುಕ್ತವಾಗಿ ದೀನರಾಗಿ ಸಾಗೋಣ ಕಾಣದ ಗುರಿಯೆಡೆಗೆ. ನೆನಪಿರಲಿ,,,,ನಮ್ಮ ದೇಹವೆಂಬ ಗುಡಿಯೊಳಗೆ ಭರವಸೆಯೇ ನಂದಾದೀಪವಾಗಿರಲಿ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ