ಕನಸಿಗೊಂದು ರೆಕ್ಕೆ ಬಂದಿದೆ….





ಆ ಇಳಿವಯಸ್ಸಿನ ತಾಯಿಗೆ ಮಗಳು ಅದ್ಭುತವಾದ ಉಡುಗೊರೆ ನೀಡಿದ್ದಳು. ತಾನು ಆಸೆಪಟ್ಟರೂ ಸಾಧಿಲಾಗದ್ದನ್ನು ಮಗಳು ಸಾಧಿಸಿ ತೋರಿಸಿದ್ದಳು. 38 ನೆಯ ಘಟಿಕೋತ್ಸವಕ್ಕೆಂದು ಶ್ವೇತವರ್ಣದಲ್ಲಿ ಚಂದವಾಗಿ ಸಿಂಗರಿಸಿಕೊಂಡಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಸಭಾಂಗಣದ ಎದುರು ದೈಹಿಕ ಶಿಕ್ಷಣ ಸ್ನಾತಕೋತ್ತರ ಪದವಿಯಲ್ಲಿ ಮೊದಲ  ರ‍್ಯಾಂಕ್‌ ಪಡೆದ ಸಾಧಕಿ ಮಗಳು ರಮ್ಯಾ ತಾಯಿ ಮತ್ತು ಅಕ್ಕನ ಜೊತೆ ಹೆಮ್ಮೆಯಿಂದ ಬೀಗುತ್ತಿದ್ದರು. 
  
ಪುತ್ತೂರಿನ ಗ್ರಾಮವೊಂದರಿಂದ ದೇರಣ್ಣ ನಾಯಕ್‌- ಪಾರ್ವತಿ ದಂಪತಿಯ ಮಗಳು ರಮ್ಯಾಗೆ ಈ ಸಂತೋಷವೇನೂ ಸುಲಭವಾಗಿ ದಕ್ಕಿಲ್ಲ. ಅವರ ತಾಯಿಗೆ ತಮ್ಮ ಮಕ್ಕಳಾದ ರಮ್ಯಾ, ಸೌಮ್ಯಾ (ಅಕ್ಕ) ಇಬ್ಬರನ್ನೂ ಚೆನ್ನಾಗಿ ಓದಿಸಬೇಕೆಂದುಕೊಂಡಿದ್ದರೂ ಕೂಲಿಯನ್ನೇ ಆಧರಿಸಿದ್ದ ಕುಟುಂಬದ ಆರ್ಥಿಕ ಪರಿಸ್ಥಿತಿ ಅದಕ್ಕೆ ಅವಕಾಶ ನೀಡಿರಲಿಲ್ಲ. ಹಿರಿಯವಳಾದ ಸೌಮ್ಯಾ ಉನ್ನತ ವಿದ್ಯಾಭ್ಯಾಸವನ್ನು ಕೈಬಿಡಬೇಕಾಯಿತು. ವಿವಾಹ ಜೀವನಕ್ಕೆ ಕಾಲಿಟ್ಟು, ಗ್ರಾಮೀಣ ವಾಚನಾಲಯವೊಂದರಲ್ಲಿ ಗ್ರಂಥಪಾಲಕಿಯಾಗಿ ಕೆಲಸ ಆರಂಭಿಸಿದ್ದರು. ಆದರೆ ಅವರ ಮುಂದಿದ್ದ ಗುರಿ, ತನಗಿಂತಲೂ ಚೂಟಿಯಾಗಿದ್ದ ತಂಗಿಯ ವಿದ್ಯಾಭ್ಯಾಸಕ್ಕೆ ನೆರವಾಗುವುದು. ಅದನ್ನವರು ಕೊನೆಗೂ ಸಾಧಿಸಿಬಿಟ್ಟರು. "ಅಕ್ಕಲ್ಲದಿದ್ದರೆ ನಾನೀ ಸಾಧನೆ ಖಂಡಿತಾ ಮಾಡಲಾಗುತ್ತಿರಲಿಲ್ಲ," ಎನ್ನುತ್ತಾರೆ ರಮ್ಯಾ.


ರಮ್ಯಾ ಓದಿಗಿಂತಲೂ ಆಟೋಟಗಳಲ್ಲಿ ಚುರುಕಾಗಿದ್ದರು. ಅವರ ಸಾಧನೆ ಗಮನಿಸಿ ಉಜಿರೆಯ ಎಸ್‌.ಡಿ.ಎಂ ಶಿಕ್ಷಣ ಸಂಸ್ಥೆ ಉಚಿತ ವಿದ್ಯಾಭ್ಯಾಸಕ್ಕೆ ಅವಕಾಶ ಮಾಡಿಕೊಟ್ಟಿತು. ಇದು ಅವರ ಕ್ರೀಡಾಬದುಕನ್ನೇ ಬದಲಿಸಿ ಹಲವು ಸಾಧನೆಗಳನ್ನು ಮಾಡಲು ಪ್ರೋತ್ಸಾಹಿಸಿತು. ಹೈ ಜಂಪ್‌ನಲ್ಲಿ ರಾಜ್ಯ ಮಟ್ಟದಲ್ಲಿ ಚಿನ್ನ ಗೆದ್ದ ಹುಡುಗಿ ರಾಷ್ಟ್ರೀಯ ಮಟ್ಟದಲ್ಲೂ 2010-11 ರಲ್ಲಿ 5 ನೇ ಸ್ಥಾನ ಪಡೆದರು. ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಹಲವು ಬಂಗಾರದ ಪದಕಗಳು ಅವರ ಮಡಿಲು ಸೇರಿದವು. ರಿಲೇ, ಹರ್ಡಲ್ಸ್‌ನಲ್ಲೂ ಉತ್ತಮ ಸಾಧನೆ ಮಾಡಿದರೂ, ಹೈ ಜಂಪ್‌ ರಮ್ಯಾರ ಮನಗೆದ್ದಿತ್ತು. ಸಧ್ಯ ಮಂಗಳೂರಿನ ರ‍್ಯಾನ್‌ ಇಂಟರ್‌ನ್ಯಾಷನಲ್‌ ಶಾಲೆಯಲ್ಲಿ ದೈಹಿಕ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿರುವ ರಮ್ಯಾರ ಪಿಹೆಚ್‌ಡಿ ಕನಸಿಗೆ ಮೊದಲ ರ‍್ಯಾಂಕ್‌ ನಿಂದ ರೆಕ್ಕೆ ಪುಕ್ಕ ಬಂದಂತಾಗಿದೆ. ಅಂದಹಾಗೆ ರಮ್ಯಾ ಬಿ.ಎಡ್‌ನಲ್ಲಿ ಮೂರನೇ ರ‍್ಯಾಂಕ್‌ ಪಡೆದ ಸಾಧನೆಯನ್ನೂ ಮಾಡಿದ್ದಾರೆ

ಓದು ಮತ್ತು ಆಟೋಟಗಳಲ್ಲೆರಡರಲ್ಲೂ ಸಾಧನೆ ಮಾಡಿರುವ ರಮ್ಯಾ ತಮ್ಮ ಗುರುಗಳನ್ನು ನೆನೆಯಲು ಮರೆಯುವುದಿಲ್ಲ. ಬಾಲ್ಯದ ವಸಂತಿ ಮೇಡಂ, ಪುತ್ತೂರು ವಿವೇಕಾನಂದ ಸಂಸ್ಥೆಯ ದಾಮೋದರ್‌ ಸರ್‌, ಉಜಿರೆಯ ರಮೇಶ್‌ ಸರ್‌, ಶಾರದಾ ಮೇಡಂ, ವಿಶ್ವವಿದ್ಯಾನಿಲಯದ ಬಿ ಟಿ ಮಾನೆ ಮೊದಲಾದವರಿಗೂ ತಮ್ಮ ಸಾಧನೆಯ ಪಾಲು ನೀಡುತ್ತಾರೆ. ಅಂತೂ ವಿಶ್ವವಿದ್ಯಾನಿಲಯದ ಈ ಬಾರಿಯ ಘಟಿಕೋತ್ಸವ ರ‍್ಥಿಕ ಅಡಚಣೆಗಳನ್ನು ಮೆಟ್ಟಿನಿಂತ ರಮ್ಯಾ, ಆಫ್ರಿಕಾದ ಜಾಂಬಿಯಾ ದೇಶದಿಂದ ಬಂದು ಪಿಹೆಚ್‌ಡಿ ಪದವಿ ಪಡೆದು ತನ್ನ ದೇಶಕ್ಕೆ ಕೊಡುಗೆ ನೀಡಬೇಕೆಂದುಕೊಂಡಿರುವ ಮೂಸ ಎಲ್‌ ಪಾಲ್‌, ಕುರುಡುತನದ ಸವಾಲು ಗೆದ್ದು ಬಿ.ಎಸ್‌.ಡಬ್ಲ್ಯೂ ನಲ್ಲಿ ಚಿನ್ನದ ಪದಕ ಪಡೆದ ಮೂಡಬಿದಿರೆಯ ಆಳ್ವಾಸ್‌ ಕಾಲೇಜಿನ ನಿತ್ಯಾನಂದನಂತಹ ಹಲವು ಸಾಧಕರ ಗಾಥೆಗಳಿಗೆ ಸಾಕ್ಷಿಯಾಯಿತು.

ಪದವಿ, ಬಹುಮಾನ, ಸಮ್ಮಾನ...

ಈ ಬಾರಿಯ ಘಟಿಕೋತ್ಸವದಲ್ಲಿ 29, 914ಭ್ಯರ್ಥಿಗಳಿಗೆ  ವಿವಿಧ ಪದವಿಗಳನ್ನು ಪ್ರಧಾನ ಮಾಡಲಾಯಿತು. 105 ಮಂದಿಗೆ ಪಿ.ಹೆಚ್‌.ಡಿ ಪದವಿ ಪ್ರಧಾನ ಮಾಡಲಾಯಿತು. ಒಟ್ಟು 34 ಪದಕಗಳು ಮತ್ತು 120 ಬಹುಮಾನಗಳನ್ನು 154 ಭ್ಯರ್ಥಿಗಳಿಗೆ  ನೀಡಲಾಯಿತು. 6217 ಸ್ನಾತಕೋತ್ತರ ಪದವಿ ಮತ್ತು 21,142 ಸ್ನಾತಕ ಪದವಿ ನೀಡಲಾಯಿತು. ಉದ್ಯಮಿ, ಸಮಾಜ ಸೇವಕ ಕೆ.ಸಿ ನಾಯಕ್‌ರಿಗೆ ಗೌರವ ಡಾಕ್ಟರೇಟ್‌ ನೀಡಿ ಗೌರವಿಸಲಾಯಿತು.



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪ್ರೀತಿ ಎಂದರೇನು ಎಂದು ಈಗ ಅರಿತೆನು…

ಸಿಂಹಾವಲೋಕನಕ್ಕೊಂದು ಸಮಯ

ಬೇಸರದಲ್ಲಿ ಬರೆದದ್ದು…ಹೌದಾ?!