ಮಾಧ್ಯಮ ಲೋಕದಲ್ಲಿ ಸ್ಕಿಲ್ ಮಂತ್ರ…
ಜರ್ನಲಿಸಂ ಓದಿದ್ರೆ ಕೆಲಸ ಸಿಗುತ್ತಾ… ಅಥವಾ ಜರ್ನಲಿಸ್ಟ್ ಆಗೋದಿಕ್ಕೆ ಪತ್ರಿಕೋದ್ಯಮ ಓದಲೇಬೇಕಾ, ಇದು ಸಾಮಾನ್ಯವಾಗಿ ಪತ್ರಿಕೋದ್ಯಮ ಶಿಕ್ಷಕರು ವಿದ್ಯಾರ್ಥಿಗಳಿಂದ ಎದುರಿಸುವ
ಭಾರೀ ಕಷ್ಟದ ಮತ್ತು ಅಷ್ಟೇ ಸುಲಭದ ಪ್ರಶ್ನೆ! ಮೊದಲ ಪ್ರಶ್ನೆಯ ಉತ್ತರ ಎರಡನೆಯದರಲ್ಲಿ ಹುದುಗಿಕೊಂಡಿದೆ ಎಂದು ಅರ್ಥಮಾಡಿಕೊಳ್ಳಲು
ಹೆಚ್ಚು ಕಷ್ಟವೇನಿಲ್ಲ.
ಸೇವೆಯಲ್ಲವಾದರೂ ಜವಾಬ್ದಾರಿಯ, ಕಷ್ಟವಲ್ಲದಿದ್ದರೂ ಸವಾಲೊಡ್ಡುವ ಪತ್ರಿಕಾರಂಗ
ಬೇರೆ ಕ್ಷೇತ್ರಗಳಿಗಿಂತ ಹಲವು ರೀತಿಯಲ್ಲಿ ಭಿನ್ನ. ತಂತ್ರಜ್ಞಾನದೊಂದಿಗೆ ಬದಲಾಗುವ ಓದುಗರ/ ನೋಡುಗರಬೇಕು-ಬೇಡಗಳ ಜೊತೆ ಓಡಲೇಬೇಕಾದ ಪತ್ರಿಕೋದ್ಯಮದಲ್ಲಿ
ಇತ್ತೀಚೆಗಿನ ಬೆಳವಣಿಗಳು ಬೆರಗುಮೂಡಿಸುವ ಜೊತೆಗೆ, ಬೆವರುವಂತೆಯೂ ಮಾಡುತ್ತಿವೆ!
ಸೋಷಿಯಲ್ ಮೀಡಿಯಾ ಸುಗ್ಗಿ!
ಸೋಷಿಯಲ್ ಮೀಡಿಯಾ ಎಂದರೆ ಸೋಮಾರಿಕಟ್ಟೆ ಎಂದು ಜರಿಯುವವರೇ
ಅದನ್ನೀಗ ಅಪ್ಪಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಪೆನ್ನಿಲ್ಲದಿದ್ದರೂ ನಡೆಯುತ್ತೆ ಅಂಗೈಯಲ್ಲಿ
ಜಗತ್ತು ತೋರಿಸುವ ಮೊಬೈಲ್ ಬೇಕೇಬೇಕು ಎಂಬ ಕಾಲ ಸೋಷಿಯಲ್ ಮೀಡಿಯಾಕ್ಕೆ ರತ್ನಗಂಬಳಿ ಹಾಸಿದೆ. ಸೋಷಿಯಲ್ ಮೀಡಿಯಾದ ಸಾಟಿಯಿಲ್ಲದೆ ವೇಗ, ತಲುಪುವ ಸಾಮರ್ಥ್ಯ, ದ್ವಿಮುಖ ಸಂವಹನದ ಅವಕಾಶವೂ ಈ ಬೆಳವಣಿಗೆಗೆ ಕಾರಣ. ಇದರ ನೇರ ಪರಿಣಾಮ ಕಳೆದೊಂದು ದಶಕದಿಂದ ಪತ್ರಿಕಾರಂಗದ ಮೇಲಾಗಿದೆ, ಆಗುತ್ತಲೇ ಇದೆ. ಪೇಪರ್ ಬದಲು ಇ-ಪೇಪರ್ ಓದುಗರ ಸಂಖ್ಯೆ ಹೆಚ್ಚಾಗುತ್ತಿರುವಂತೆ ಸುದ್ದಿ
ಮನೆಯಲ್ಲಿ ಲಾಭ-ನಷ್ಟದ ಲೆಕ್ಕಾಚಾರಗಳು ಜೋರಾಗಿವೆ.
ಸೋಷಿಯಲ್ ಮೀಡಿಯಾದ ಈ ಪರ್ವಕಾಲ ಸಾಂಪ್ರದಾಯಕ ಮಾಧ್ಯಮದಲ್ಲಿ ಬದಲಾವಣೆಯ
ಗಾಳಿ ಬೀಸಿದೆ. ಮಧ್ಯಮಗಳು ಒಮ್ಮುಖವಾಗುತ್ತಿದ್ದಂತೆ ಮಾನವಶಕ್ತಿಯ
ಅಗತ್ಯತೆ ಹಿಂದಿಗಿಂತ ಕಮ್ಮಿಯಾಗುತ್ತಿದೆ. ಈ ಸೋಷಿಯಲ್ ಬಿರುಗಾಳಿ ಟಿವಿ ಚಾನೆಲ್ಗಳನ್ನೂ ಬಿಟ್ಟಿಲ್ಲ. ವಾಟ್ಸಪ್, ಫೇಸ್ಬುಕ್, ಟ್ವಿಟರ್ಗಳಲ್ಲಿ ಹರಿದಾಡುವ ಸುದ್ದಿಯನ್ನೇ ʼನಮ್ಮಲ್ಲೇಮೊದಲುʼ ಎಂದು ತೋರಿಸಬೇಕಾದ ಸ್ಥಿತಿ ಬಂದಿರುವುದು
ವಿಚಿತ್ರವಾದರೂ ಸತ್ಯ. ಅದಕ್ಕಿಂತಲೂ ವಿಪರ್ಯಾಸವೆಂದರೆ ಸಾಮಾಜಿಕ
ಜಾಲತಾಣಗಳೇ ಇತರ ಮಾಧ್ಯಮಗಳಿಗೆ ದೊಡ್ಡ ಸುದ್ದಿಮೂಲವಾಗಿ ಬದಲಾಗಿವೆ! ಇಷ್ಟಾದರೂ ತೆರೆದುಕೊಳ್ಳುತ್ತಿರುವ ಹೊಸ ಅವಕಾಶಗಳು ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ
ಆಶಾದಾಯಕವಾಗಿವೆ.
ಪತ್ರಿಕೋದ್ಯಮದಲ್ಲಿ ಸ್ಕಿಲ್ ಮಂತ್ರ…
ಪೈಪೋಟಿ ಯುಗದಲ್ಲಿ ಬಚಾವಾಗಲೂ ಐಟಿಯಿಂದ, ಅಂಗಡಿಯವನವರೆಗೆ ಎಲ್ಲರೂ ಸ್ಕಿಲ್ ಮಂತ್ರ ಜಪಿಸತೊಡಗಿದ್ದಾರೆ. ಪತ್ರಿಕೋದ್ಯಮವೂ ಇದಕ್ಕೆ ಹೊರತಲ್ಲ. ಕೆಲಸ ಕೊಟ್ಟು, ತರಬೇತಿಯನ್ನೂ ನೀಡಿ ಪತ್ರಕರ್ತರನ್ನು ʼರೂಪಿಸುವʼ ಕಾಲ ಹಳತಾಗಿದೆ. ಪತ್ರಿಕೋದ್ಯಮ ಪಾಠದ ಜೊತೆಗೆ ಕೌಶಲ್ಯಾಭಿವೃದ್ಧಿ ಅನಿವಾರ್ಯ. ಅರೆಬರೆ ಕನ್ನಡ ಮತ್ತು ಇಂಗ್ಲಿಷ್ ಮಾತನಾಡುವವರ ಮಧ್ಯೆ ಭಾಷಾ ಶುದ್ಧಿ, ವೈವಿಧ್ಯಮಯ ಆಕರ್ಷಕ ಚುಟುಕು ಬರವಣಿಗೆ, ಅಪ್ಡೇಟ್ ಆಗುವ ಅಭ್ಯಾಸ ನಿಮ್ಮ ಕೈ ಹಿಡಿಯುತ್ತದೆ. ಬೈಲೈನ್ಗಳ ಮೂಲಕ ನಿಮ್ಮ ಹೆಸರು ಪರಿಚಯವಾದರೆ ಮುಂದೆ
ಅದೇ ನಿಮಗೆ ಗಟ್ಟಿ ಬದುಕು ಕಟ್ಟಿಕೊಡಬಹುದು.
ಬಹು ಭಾಷಾಜ್ಞಾನ, ಭಾಷಾಂತರ ಕೌಶಲ್ಯ, ಪ್ರತಿಲೇಖನಕಲೆ ನಿಮ್ಮನ್ನು ಎಲ್ಲೂ ಸಲ್ಲುವಂತೆ ಮಾಡುತ್ತದೆ. ಫೋಟೋಶಾಪ್, ವೀಡಿಯೋ ಎಡಿಟಿಂಗ್ ,ಪೇಜಿನೇಷನ್, ಸೋಷಿಯಲ್ ಮೀಡಿಯಾ ಜ್ಞಾನ, ಎನಿಮೇಷನ್ ತಿಳಿದಿದ್ದರಂತೂ ನಿಮಗೆ ಅವಕಾಶಗಳು ಗ್ಯಾರಂಟಿ. ಸಾಂಪ್ರದಾಯಿಕ ಫುಲ್ ಟೈಮ್ ಪತ್ರಕರ್ತನಾಗುವ ಜೊತೆಗೆ ಫ್ರೀಲಾನ್ಸರ್ ಆಗುವ ಮೂಲಕ ಎರಡನೇ ಆದಾಯಮೂಲ ಸೃಷ್ಟಿಸಿಕೊಳ್ಳಬಹುದು ಅಥವಾ ಸ್ವ- ಉದ್ಯೋಗದ ಕನಸನ್ನು ನನಸಾಗಿಸಿಕೊಳ್ಳಬಹುದು. ಇದಕ್ಕೆ ಪೂರಕವಾಗಿ ವಿಶೇಷ ಜ್ಞಾನಸಂಪಾದನೆಗೆ ಆನ್ಲೈನ್ ಕೋರ್ಸ್ಗಳು ಲಭ್ಯವಿವೆ.
ʼಜ್ಯಾಕ್ ಆಫ್ ಆಲ್ ಟ್ರೇಡ್ಸ್ ಮಾಸ್ಟರ್ ಇನ್ ನನ್ʼ ಆಗುವ ಬದಲು ಪತ್ರಕರ್ತನಾಗಿ ನಿಮ್ಮಿಷ್ಟದ ಪಾತ್ರದಲ್ಲಿ ಮಾಸ್ಟರ್ ಆಗಲು ಪ್ರಯತ್ನಿಸಿ. ಆಗ ಬದಲಾವಣೆಯ ಸುಳಿಗೆ ನಿಮ್ಮನ್ನು ಏನೂ ಮಾಡಲಾಗದು. ಸ್ಕಿಲ್ ಮಂತ್ರ ಸಿದ್ಧಿಸಿಕೊಂಡರೆ ನೀವು ಆಕಾಶಕ್ಕೇ
ಏಣಿಯಿಡಬಹುದು. ನಿಮ್ಮನ್ನು ಯಾರೂ ತಡೆಯಲಾರರು.
(ವಿವೇಕಾನಂದ ಕಾಲೇಜಿನ ʼವಿಕಾಸʼ ಪತ್ರಿಕೆಗೆ ಬರೆದ ಬರಹ)
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ