ಬೇಸರದಲ್ಲಿ ಬರೆದದ್ದು…ಹೌದಾ?!
ಬೇಸರದಲ್ಲಿ ಬರೆದದ್ದೇ? ಬರೆದು ಬೇಸರವಾಯಿತೆ… ಹೌದಲ್ಲಾ… ತಿಳಿಯುತ್ತಿಲ್ಲ. ಆಕೆ ನೆನಪಾಗಿ ಕುಗ್ಗಿದೆನೇ? ಕುಗ್ಗಿದಾಗ ಆಕೆಯೇ ನೆನಪಾದಳೇ… ಹೌದಲ್ಲಾ..ಅದೂ ಇರಬಹುದಲ್ಲಾ! ದುಡಿದು ದಣಿದೆನೇ? ದಣಿದಾಗ…ದುಡಿಯಬೇಕಲ್ಲಾ ಅನಿಸಿತೇ? ಹೌದಲ್ಲಾ..ಹಾಗೂ ಅನ್ನಿಸಿರಬಹುದಲ್ಲಾ! ನೊಂದಾಗ ದೇವರು ನೆನಪಾದನೇ? ದೇವರ ನೆನೆಸಿಕೊಂಡು ನೊಂದೆನೇ… ಹೌದಲ್ಲಾ.. ಅದೇ ಆಗಿರಬೇಕಲ್ಲಾ! ಒಂಟಿಯಾದಾಗ ಭಯವಾಯಿತೇ? ಭಯವಾದಾಗ ಒಂಟಿ ಅನಿಸಿತೇ… ಹೌದಲ್ಲಾ ಯೋಚನೆ ಸರಿಯಾಗಿದೆಯಲ್ಲಾ! ಆಸೆಪಟ್ಟು ನಿರಾಶನಾದೆನೇ? ನಿರಾಶನಾಗಿ ಆಸೆಪಟ್ಟೆನೇ.. ಹೌದೌದು ಹಾಗೇ ಆಗಿರಬೇಕಲ್ಲಾ! ಯಾರದೋ ಮಾತು ಚುಚ್ಚಿತೇ? ಮನಸ್ಸಿಗೆ ನೋವಾದಾಗ ಮಾತು ನೆನಪಾಯಿತೆ… ಹೌದು ಅದು ಸರಿಯಲ್ಲಾ! ದೇವರ ನೆನೆಯದೇ ಕಷ್ಟ ಬಂತೇ? ಕಷ್ಟ ಬಂದಾಗ ದೇವರ ನೆನಪಾಯಿತೇ… ಹೌದಲ್ಲಾ ಆದರೆ ಇನ್ನೂ ತಿಳಿಯುತ್ತಿಲ್ಲ! ಮೊದಲಿಲ್ಲ ಕೊನೆಯಿಲ್ಲ…ಇಲ್ಲಿ ಹಾಗೇ ಎಲ್ಲಾ ನಾನ್ಯಾರೋ ನೀನ್ಯಾರೋ ಗೊತ್ತಿಲ್ಲ ಹಿಂದೇನು ಮುಂದೇನು ತಿಳಿದಿಲ್ಲ ಎಲ್ಲವೂ ಗೊಂದಲ… ಆದರೂ ಜೀವನ ಬಲು ಸುಂದರ! ಜಿಪಿ