ಭವಿಷ್ಯದ ಕರಿಛಾಯೆ ಮತ್ತು ಶಿಕ್ಷಕನೆಂಬ ಆಶಾಕಿರಣ
“ ಅತ್ಯುತ್ತಮ ಶಿಕ್ಷಕ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುವವನಲ್ಲ ಬದಲಾಗಿ ಉತ್ತರ ಕಂಡುಕೊಳ್ಳಬೇಕೆಂಬ ಹಂಬಲದ ಕಿಡಿಯನ್ನು ನಿಮ್ಮೊಳಗೆ ಹೊತ್ತಿಸುವವನು ” …. ಈ ಮಾತು ಶಿಕ್ಷಕನೆಂದರೆ ಯಾರು ಅಥವಾ ಶಿಕ್ಷಕ ಹೇಗಿರಬೇಕು ಎಂಬುದನ್ನು ಅದೆಷ್ಟು ಸೂಚ್ಯವಾಗಿ ಹೇಳುತ್ತದೆ, ಅಲ್ಲವೇ… ಮಾಜಿ ರಾಷ್ಟ್ರಪತಿ, ‘ಭಾರತರತ್ನʼ ದಿವಂಗತ ಡಾ. ಎಪಿಜೆ ಅಬ್ದುಲ್ ಕಲಾಂ ಅವರು ತಮ್ಮ ಆತ್ಮಚರಿತ್ರೆಯಲ್ಲಿ ಗುರುಗಳಾದ ಪ್ರೊ. ಶ್ರೀನಿವಾಸನ್ ಅವರನ್ನು ವಿಶೇಷವಾಗಿ ಹೆಸರಿಸುತ್ತಾರೆ. ಮದ್ರಾಸು ಎಂಐಟಿಯಲ್ಲಿ ಕಲಾಂ ಮತ್ತವರ ತಂಡಕ್ಕೆ ಆಕಾಶಕಾಯ (ಏರೋಡೈನಾಮಿಕ್ಸ್) ವಿನ್ಯಾಸ ರಚಿಸಲು ಹೇಳಿದ್ದ ಪ್ರೊಫೆಸರ್, ಕಷ್ಟಪಟ್ಟು ತಯಾರಿಸಿದ ವಿನ್ಯಾಸವನ್ನು ನೋಡಿದ ಕೂಡಲೆ ʼಕೆಟ್ಟದಾಗಿದೆ, ನಿನ್ನಿಂದ ಇದನ್ನು ನಿರೀಕ್ಷಿಸಿರಲಿಲ್ಲʼ ಎಂದುಬಿಟ್ಟರಂತೆ. ಅಲ್ಲದೆ ಮೂರು ದಿನದಲ್ಲಿ ಮರುವಿನ್ಯಾಸ ರಚಿಸಿ ಒಪ್ಪಿಸಲು ಕಟ್ಟಾಜ್ಞೆ ಹೊರಡಿಸುತ್ತಾರೆ. ಪ್ರಾಧ್ಯಾಪಕರಿಂದ ಯಾವತ್ತು ಇಂತಹ ಮಾತು ಕೇಳದ ಕಲಾಂ ಕಂಗಾಲಾದರು. ಆದರೆ ಹಗಲಿರುಳು ಕೆಲಸ ಮಾಡಿ ತಯಾರಿಸಿದ ವಿನ್ಯಾಸವನ್ನು ನೋಡಿ ಬಾಯ್ತುಂಬ ಹೊಗಳಿದ ಗುರುಗಳು, ʼನಿನಗೆ ನನ್ನಿಂದ ಬೇಸರವಾಗುತ್ತದೆ ಎಂದು ತಿಳಿದಿತ್ತು. ಆದರೆ ನೀನು ಅದಕ್ಕಿಂತಲೂ ಉತ್ತಮ ವಿನ್ಯಾಸ ಸಿದ್ಧಪಡಿಸುತ್ತೀಯ ಎಂಬ ವಿಶ್ವಾಸ ನನಗಿತ್ತು, ʼ ಎಂದರಂತೆ! ಪ್ರತಿಯೊಂದು ಯಶೋಗಾಥೆಯ ಹಿಂದೆಯೂ ಶಿಕ್ಷಕನೊಬ್ಬನ ನೆರಳು ಕಾಣಸಿಗುತ್ತದೆ. ...