ಹೊಸತೇನೂ ಆಗಿಬಿಡುವುದಿಲ್ಲ…ನಾವೇ ಮಾಡಬೇಕಿದೆ!
ಹೊಸವರ್ಷಗಳು ಜಾಸ್ತಿ ಸಮಯ ಹೊಸತಾಗಿರುವುದಿಲ್ಲ. ನಮ್ಮ- ನಿಮ್ಮ ಜೀವನದಲ್ಲಿ ಅದೆಷ್ಟು ಹೊಸವರ್ಷಗಳು ಬಂದಿಲ್ಲ ಹೇಳಿ. ಕ್ಯಾಲೆಂಡರ್ ಬದಲಾಗುವುದು ಬಿಟ್ಟರೆ ಬೇರೇನೂ ಆಗುವುದಿಲ್ಲ…ಆದರೆ ʼಎಲ್ಲದಕ್ಕೂ ಕಾಲ ಕೂಡಿಬರಬೇಕುʼ ಎಂಬ ಮಾತಿದೆಯಲ್ಲ. ತಾನಾಗೇ ಏನು ಬದಲಾಗುವುದಿಲ್ಲ, ಹಾಗಾಗಿ ಹೊಸ ವರ್ಷದ ನೆಪದಲ್ಲಿ ನಾವೇ ಏನಾದರೂ ಮಾಡೋಣ!
ನಮಗೆ ಹೊಸವರ್ಷದ ಆರಂಭದಲ್ಲಿ ಭರ್ಜರಿ ಸಂಕಲ್ಪಗಳನ್ನು ಮಾಡಿ ವರ್ಷ ಹಳೆಯದಾಗುತ್ತಾ ಹೋದಂತೆ ಅವನ್ನು ಮರೆತುಬಿಡುವ ಗುಣವಿದೆ. ಅದಕ್ಕೆ ನಮ್ಮದೇ ಆದ ಕಾರಣ (ನೆಪ?) ಗಳನ್ನು ಹುಡುಕಿಕೊಂಡು ಸಮಾಧಾನಪಟ್ಟುಕೊಳ್ಳುತ್ತೇವೆ. ಈ ಬಾರಿ ಹೀಗೊಂದು ಪ್ರಯತ್ನ ಮಾಡೋಣ. ಭಯಂಕರ ಕೆಟ್ಟ ವರ್ಷ ಎಂಬ ಹಣೆಪಟ್ಟಿ ಹೊತ್ತು ನಮ್ಮಿಂದ ದೂರವಾಗುತ್ತಿರುವ 2020 ರ ಸಿಂಹಾವಲೋಕನದೊಂದಿಗೆ ಮುಂದಡಿಯಿಟ್ಟರೆ ಹೇಗೆ?
ಈ ʼನಾನುʼ, ʼನನ್ನದುʼ ಎಂಬ ಮಾತುಗಳು ಬರೀ ಅಹಂಕಾರ ಸೂಚಕವಾಗಬೇಕಿಲ್ಲ. ಅವು ನಮ್ಮ ಸಾಧನೆಗೆ ಮೂಲಮಂತ್ರಗಳೂ ಆಗಬಹುದಲ್ಲವೇ…ನಮಗೆ ಹೊಸವರ್ಷದಲ್ಲಿ ಜಗತ್ತನ್ನೇ ಬದಲಿಸಿಬಿಡುತ್ತೇನೆ ಎಂಬ ಭ್ರಮೆ ಬೇಡ. ʼನಾವುʼ ಬದಲಾಗೋಣ, ನಮ್ಮನ್ನು ನೋಡಿ ಸಮಾಜ, ಜಗತ್ತು ಬದಲಾಗಬಹುದು. ಹಾಗಾದರೆ 2020 ಕಲಿಸಿದ ಪಾಠವಾದರೂ ಏನು, 2021 ರ ಕಡೆಗೆ ನಮ್ಮ ನೋಟವಾದರೂ ಹೇಗಿರಬೇಕು…
ಬದುಕು ಬಲು ಸುಂದರ: ಚತುರ್ಮುಖ ಬ್ರಹ್ಮ ಮನುಷ್ಯನನ್ನು ಸೃಷ್ಟಿಸಿದ ಬಳಿಕ ತನ್ನ ಸೃಷ್ಟಿ ಕಾರ್ಯವನ್ನು ನಿಲ್ಲಿಸಿದ ಎಂಬ ನಂಬಿಕೆಯಿದೆ. ಅವನ ಪ್ರಕಾರ ಮನುಷ್ಯ ಅತ್ಯುನ್ನತ ಸೃಷ್ಟಿ. ಹೌದು ಅನ್ನಿಸುವುದಿಲ್ಲವೇ…ನಮಗೆ ಇತರ ಯಾವುದೇ ಜೀವಿಗೂ ಇರದ ಬುದ್ಧಿಶಕ್ತಿ, ವಿವೇಚನಾ ಶಕ್ತಿಯಿದೆ. ನಮಗೆ ಬೇಕಾದಂತೆ ಜೀವನ ರೂಪಿಸಿಕೊಳ್ಳುವ ಅವಕಾಶವಿದೆ. ಎಷ್ಟೊಂದು ಅದ್ಭುತ ಈ ಜೀವನ. ಕಷ್ಟಕ್ಕೆ ಅಂಜಿ ಇದನ್ನೂ ಕೈಚೆಲ್ಲಿದರೆ ಕ್ಷಮೆಯುಂಟೇ?
‘ನನ್ನದುʼ ಏನೂ ಇಲ್ಲ: ಕೊರೋನಾ ʼಹೆಮ್ಮಾರಿʼ ಮಾತ್ರವಲ್ಲ. ನಮಗೆ ಪಾಠವನ್ನೂ ಕಲಿಸಿದೆ. ನಮಗೆಲ್ಲರಿಗೂ ನಮ್ಮ ಮಿತಿಯನ್ನು ನೆನಪಿಸಿದೆ. ಲಕ್ಷಾಂತರ ಜನರನ್ನು ಬಲಿಪಡೆದ, ನಮ್ಮೆಲ್ಲರನ್ನೂ ನಲುಗಿಸಿದ ಈ ಕಾಯಿಲೆ ಎಲ್ಲಿಯೂ ಯಾವ ಬೇಧವನ್ನೂ ಮಾಡಲಿಲ್ಲ! ʼನಮ್ಮವರನ್ನು ಮೀರಿಸುವವರಿಲ್ಲʼ ಎಂದವರಿಗೆ, ಜೊತೆಗೆ ʼನಾವು ಏನೂ ಅಲ್ಲ ಅಂದುಕೊಂಡವರಿಗೂʼ ಒಂದೇ ಪಾಠ…ಅದು ‘ಇವೆರಡೂ ಸುಳ್ಳು’ ಎಂಬುದು!
ನಮ್ಮವರಿಗೂ ಸಮಯ ನೀಡೋಣ: ಕೊವಿಡ್ ಕಲಿಸಿದ ಪ್ರಮುಖ ಪಾಠ ಪ್ರಪಂಚ ನಾವು ಅಂದುಕೊಂಡಂತಿಲ್ಲ, ಜೊತೆಗೆ ಇಲ್ಲಿ ನಮ್ಮನ್ನು ಪ್ರೀತಿಸುವ ಅದೆಷ್ಟೋ ಜೀವಗಳಿವೆ ಎಂಬುದು. ಕೆಲಸ ಕಳೆದುಕೊಂಡು ಕಂಗಾಲಾದಾಗ, ಸಾಂಕ್ರಾಮಿಕ ಕಂಗೆಡಿಸಿದಾಗ, ಶಾಲೆ-ಕಾಲೇಜು ಮುಚ್ಚಿ ಭವಿಷ್ಯ ಮಂಕೆನಿಸಿದಾಗ ಈ ಪ್ರೀತಿ ಅರ್ಥವಾಗಿದೆ. ಪರಿಚಯವೇ ಇಲ್ಲದವರು ನೆರವಾಗಿದ್ದಾರೆ, ಪ್ರಾಣವುಳಿಸಿದ್ದಾರೆ. ಯಾವಾಗಲೂ ಕೆಲಸ, ಕಾಲೇಜು ಎಂದು ʼಬ್ಯುಸಿʼ ಆಗಿರುತ್ತಿದ್ದ ನಮಗೆ ನಮ್ಮವರು ನಮ್ಮ ಮೇಲಿಟ್ಟಿರುವ ಪ್ರೀತಿ, ನಾವು ಅವರೊಂದಿಗೆ ನಡೆದುಕೊಳ್ಳಬೇಕಾದ ರೀತಿ ಎಲ್ಲವೂ ಅರ್ಥವಾಗಿದೆ. “ಮನುಷ್ಯತ್ವ ಉಳಿಯಬೇಕಾದರೆ ಪ್ರೀತಿ, ಸಹಾನುಭೂತಿಗಳೆರಡೂ ಇರಲೇಬೇಕು” ಎಂಬ ದಲೈ ಲಾಮಾರ ಮಾತು ಇಲ್ಲಿ ನೆನಪಾಗುತ್ತದೆ.
ಪ್ರಕೃತಿಯೆಂಬ ದೇವರು: ಈ ಪರಿಸರ, ಮಾಲಿನ್ಯ ಇದೆಲ್ಲಾ ʼಪರಿಸರವಾದಿಗಳ ಕೆಲಸʼ, ಅವರ ಕೆಲಸವೇ ಅದು ಎಂಬುದು ಎಂಬ ನಂಬಿಕೆಯಿತ್ತು! ಆದರೆ, ಕೊರೋನಾ ನಮ್ಮ ಯೋಚನಾ ಲಹರಿಯನ್ನು ಬದಲಿಸಿದೆ. ಎಲ್ಲರ ಕಷ್ಟಗಳೂ ನಮಗೆ ಸಂಬಂಧಿಸಿವೆ. ʼಭೂಮಿ ತಾಯಿʼ, ʼಪ್ರಕೃತಿ ದೇವತೆʼ ಎಂದು ನಾವು ಓದಿ ಮರೆತಿರುವ ಸಾಲುಗಳು ನೆನಪಾಗುತ್ತಿವೆ. ನಾವು ಮುಂದಿನ ತಲೆಮಾರಿಗೆ ಆಸ್ತಿ ಮಾಡಿಟ್ಟರೆ ಸಾಲದು, ಅವರು ಆರೋಗ್ಯವಾಗಿ, ನೆಮ್ಮದಿಯಾಗಿ ಬದುಕಲು ಪರಿಸರವೂ ಬೇಕು ಎಂಬುದು ಅರಿವಾಗಿದೆ.
ಪ್ರೀತಿಯಿರಲಿ, ಕೊರಗು ಬೇಡ: ದ್ವೇಷಪಡುವುದು ಕಷ್ಟವಾದರೂ ನಾವು ಕೆಲವೊಮ್ಮೆ ಅದರಲ್ಲಿ ಧಾರಾಳಿಗಳಾಗಿಬಿಡುತ್ತೇವೆ. ಪ್ರೀತಿ ಅದೆಷ್ಟು ಸುಂದರ ಎಂದು ತಿಳಿದಿದ್ದರೂ ನಾವದನ್ನು ಕಲಿಯುವುದೇ ಇಲ್ಲ. ʼದ್ವೇಷ ಬೆಳೆಸಿಕೊಳ್ಳುವಷ್ಟು ನಮ್ಮ ಜೀವನ ದೊಡ್ಡದಲ್ಲʼ. ನಮ್ಮನ್ನು ದ್ವೇಷಿಸುವವರನ್ನೂ ಪ್ರೀತಿಸೋಣ. ಸಹಾಯ ಮಾಡಲಾಗದೇ ಇರಬಹುದು, ಆದರೆ ಇತರರಿಗೆ ಕಷ್ಟ ಕೊಡುವುದು ಬೇಡ. ಕಳೆದು ಹೋದದ್ದಕ್ಕೆ ಕೊರಗಿ ಭವಿಷ್ಯವನ್ನೂ ಕಳೆದುಕೊಳ್ಳದಿರೋಣ. ನಗು ನಗುತಾ ನಲಿ ಏನೇ ಆಗಲಿ…ಎಂಬ ಹಾಡು ಪ್ರಾಕ್ಟಿಕಲ್ ಕೂಡ ಹೌದು!
ಇದಕ್ಕಿಂತ ಇನ್ನೇನು ಬೇಕು. ಈ ಸತ್ಯಗಳು ನಮಗಿರುವ ಜವಾಬ್ದಾರಿ (ಋಣ?), ಉತ್ತರದಾಯಿತ್ವವನ್ನೂ ನೆನಪಿಸುತ್ತವೆ. ಈ ಪಾಠಗಳ ಮೇಲೆಯೇ ನಮ್ಮ ಸಂಕಲ್ಪಸೌಧವನ್ನು ಕಟ್ಟಿಕೊಳ್ಳೋಣ. ಎಲ್ಲರಿಗೂ ಅನ್ವಯಿಸುವ, ಅಗತ್ಯವೂ ಆದ ಇವುಗಳನ್ನೂ ಮರೆಯುವವರು ನಾವಲ್ಲ…ಅಲ್ಲವೇ?!
Click the link for the published feature- UV Fusion
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ