ವಿದಾಯ ಕೂಟ…ಭಾವನೆಗಳ ಹೊಯ್ದಾಟ…
ಕಾಲೇಜು ಬಿಟ್ಟು ವಾರದ ಮೇಲಾಯಿತು. ವಿದ್ಯಾರ್ಥಿಗಳು ಬದಲಾವಣೆಗೆ ಒಗ್ಗಿಕೊಂಡಿರುತ್ತಾರೆ. ಭಾವನೆಗಳ ಭರದಲ್ಲಿ ವಿದಾಯ ಕೂಟದ ಮಾತಾಡಿರುತ್ತಾರೆ ಅಂದುಕೊಂಡೇ ಹೋಗಿದ್ದೆ. ಆದರೆ ನಿಜಸ್ಥಿತಿ ಹಾಗಿರಲಿಲ್ಲ… ಪ್ರೀತಿಯ ವಿದ್ಯಾರ್ಥಿಗಳು (ಮಕ್ಕಳು) ತಮ್ಮ ಶಿಕ್ಷಕನಿಗೆ ವಿಶೇಷವಾಗಿ ವಿದಾಯ ಹೇಳಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು! ಕುಟುಂಬ ಸಮೇತ ಬನ್ನಿ ಎಂದು ಹೇಳಿದಾಗಲೂ ನನಗದು ಹೊಳೆದಿರಲಿಲ್ಲ. ಸಂತೋಷವೇ ಆದರೂ, ಭಾವನೆಗಳನ್ನು ಹಿಡಿದಿಟ್ಟುಕೊಳ್ಳಲೇಬೇಕಾದ ಸಂಕಟ ನನಗೆ. ನನಗಾಗಿ ಇಟ್ಟಿದ್ದ ಕುರ್ಚಿಯಲ್ಲಿ ಮೌನವಾಗಿ ಕುಳಿತೆ. ಬಲಭಾಗದಲ್ಲಿದ್ದ ಮನದನ್ನೆ ಅಶ್ವಿನಿಯ ಸ್ಥಿತಿಯೂ ಭಿನ್ನವಾಗಿರಲಿಲ್ಲ, ಮಗಳು ಪರ್ಣಿಕಾ ಅವಳದೇ ಪ್ರಪಂಚದಲ್ಲಿದ್ದಳು. ವಿದ್ಯಾರ್ಥಿಗಳ ಮುಖದಲ್ಲಿ ವಿಷಣ್ಣ ನಗೆಯಿತ್ತು. ವಿದ್ಯಾರ್ಥಿ ಅಕ್ಷಿತ್ ಕಾರ್ಯಕ್ರಮದ ಆಶಯಗಳನ್ನು ನನಗೂ ಅರ್ಥವಾಗುವಂತೆ ತಿಳಿಸಿದ್ದರು. ವಿಭಾಗದ ಮುಖ್ಯಸ್ಥರ ಪ್ರೀತಿಯ ಮನದಾಳದ ಮಾತುಗಳನ್ನು ಕೇಳಿ ಸಂತೋಷವಾಯಿತು. ಸಾರ್ಥಕತೆಯ ಭಾವನೆ ಮೂಡಿತು. ವಿದ್ಯಾರ್ಥಿಗಳ ಸರದಿ… ಕೆಲವರು ಮಾತನಾಡಿದರು… ಹಲವರಿಗೆ ಆಗಲಿಲ್ಲ. ಕೆಲವರು ಮಾತನಾಡಲು ಪ್ರಯತ್ನಿಸಿ ತಡವರಿಸಿದರು. ಇನ್ನೂ ಕೆಲವರು ನೆನಪುಗಳನ್ನು ಹೆಕ್ಕಿ ಅಂದುಕೊಂಡದ್ದಕ್ಕಿಂತ ಸ್ವಲ್ಪ ಹೆಚ್ಚೇ ಮಾತನಾಡಿದರು. ಬಳಿಕ ನನ್ನ ಸರದಿ…! ತುಂಬಾ ವಿಷಯಗಳನ್ನು ಹೇಳಬೇಕೆಂದುಕೊಂಡಿದ್ದೆ. ಏನು, ಹೇಗೆ, ಏಕೆ… ಯಾವುದೂ ಹೊಳೆಯಲಿಲ್ಲ. ಒಂದು ನೋಟ್‌ಮಾಡಿ...