ಸೋಲು ಗೆಲುವುಗಳ ಸಮರಸವೇ ಜೀವನ…


ಆತನಿನ್ನೂ 11 ವರ್ಷ ವಯಸ್ಸಿನ ಕನಸು ಕಂಗಳ ಹುಡುಗ. ತನ್ನ ಶ್ರೀಮಂತ ಸ್ನೇಹಿತನ ಮನೆಗೆ ಆಡಲೆಂದು ಹೋದಾಗ ಆ ಮನೆಯವರು ಈತನನ್ನು ಹೊರದಬ್ಬಿದ್ದರು, ಅದೂ ಕೇವಲ ಬಡವನ ಮಗ ಎಂಬ ಕಾರಣಕ್ಕಾಗಿ. ಆತ್ಮಾಭಿಮಾನವನ್ನು ಕೆಣಕಿದ ಘಟನೆಯಿಂದ ವಿಚಲಿತನಾದ ಹುಡುಗ ಆಗಲೇ ದೃಢನಿಶ್ಚಯ ಮಾಡಿಯಾಗಿತ್ತು. ನಾಗರಿಕ ಸೇವೆಯಲ್ಲಿ ದೇಶದಲ್ಲೇ ಅತ್ಯುನ್ನತ ಅರ್ಹತೆಯಾದ ಐಎಎಸ್‌ ಮಾಡಿಯೇ ತೀರುತ್ತೇನೆ ಎಂದು!

ಆದರೇನಂತೆ, ರೇಷನ್‌ ಅಂಗಡಿಯಲ್ಲಿ ದುಡಿದು, ರಿಕ್ಷಾ ಚಲಾಯಿಸಿ ಒಂದಷ್ಟು ಸಂಪಾದಿಸುತ್ತಿದ್ದ ಅಪ್ಪನ ಆರೋಗ್ಯ ಹದಗೆಟ್ಟಿತು. ಕಿವಿ ಕೇಳದಾಯಿತು, ಕಾಲಿನ ಗಾಯ ಸತಾಯಿಸಲಾರಂಭಿಸಿತು. ಕುಟುಂಬ ಆದಾಯಕ್ಕಾಗಿ ಈ ಯುವಕನ ಮುಖನ ಕಡೆ ನೆಟ್ಟಿತ್ತು. ಐಎಎಸ್‌ ಮಾಡಿ ನಾಗರಿಕ ಸೇವೆಗೆ ಸೇರಬೇಕೆಂಬ ಆತನ ಕನಸನ್ನು ಸಮಾಜ ಛೇಡಿಸಿತು. ಆದರೆ ಕುಟುಂಬ ಕೈ ಬಿಡಲಿಲ್ಲ. ಇದ್ದ ಆಸ್ತಿಯನ್ನೂ ಮಾರಿ ಹೆಚ್ಚಿನ ತರಬೇತಿಗೆ ಆತನನ್ನ  ದೆಹಲಿಗೆ ಕಳಿಸಿಕೊಟ್ಟಿತು. ಖಾಲಿ ಕೈಯಲ್ಲಿ ದೆಹಲಿ ಸೇರಿದ್ದ ಯುವಕ ಗಣಿತ  ಟ್ಯೂಷನ್‌ ಕೊಟ್ಟು ಒಂದಷ್ಟು ಸಂಪಾದನೆ ಮಾಡಲಾರಂಭಿಸಿದ. ಖಾಲಿ ಹೊಟ್ಟೆಯಲ್ಲೇ ಇರುವುದನ್ನು ರೂಢಿಸಿಕೊಂಡ.

ಅಪ್ಪನ ಆರೋಗ್ಯ ಮತ್ತಷ್ಟು ಹದಗೆಟ್ಟಿತು, ರಿಕ್ಷಾ ಎಳೆಯುವುದು ಅಸಾಧ್ಯವಾಯಿತು. ಯುವಕನ ಮುಂದೆಯಿದ್ದದ್ದು ಒಂದೇ ಆಯ್ಕೆ. ಮೊದಲ ಪ್ರಯತ್ನದಲ್ಲೇ ಐಎಎಸ್‌ ಪಾಸ್‌ ಮಾಡಬೇಕು. ಇಲ್ಲವೇ ತನ್ನ ಕನಸನ್ನು ಕೈಬಿಟ್ಟು ಹಳ್ಳಿಗೆ ಮರಳಿ ಕುಟುಂಬಕ್ಕೆ ಆಧಾರವಾಗಬೇಕು. ಈ ಎಲ್ಲಾ ನೋವು, ಸಂಕಟ, ಒತ್ತಡಗಳ ನಡುವೆ ಪರೀಕ್ಷೆ ಬರೆದ 22 ರ ಯುವಕ ಗೋವಿಂದ ಜೈಸ್ವಾಲ್‌ ಇತಿಹಾಸ ನಿರ್ಮಿಸಿದ್ದ. ವಾರಣಾಸಿಯ ಹಳ್ಳಿಯೊಂದರಿಂದ ಬಂದ ಸರ್ಕಾರಿ ಶಾಲೆಯಲ್ಲಿ ಓದಿದ ಹುಡುಗ ದೇಶದಲ್ಲೇ 46 ನೇ ರ್ಯಾಂಕ್‌ನೊಂದಿಗೆ ಐಎಎಸ್‌ ತೇರ್ಗಡೆಯಾಗಿದ್ದ.

ಇದು ಕೇವಲ ಒಂದು ಉದಾಹರಣೆ ಮಾತ್ರ. ದಿಟ್ಟ ನಿರ್ಧಾರ, ಛಲ, ನಿರಂತರ ಪ್ರಯತ್ನದಿಂದ ಅದ್ಭುತವನ್ನು ಸಾಧಿಸಿದ ಅದೆಷ್ಟೋ ಯುವಕ-ಯುವತಿಯರು ನಮ್ಮ ಮುಂದಿದ್ದಾರೆ. ಗೋವಿಂದ ಜೈಸ್ವಾಲ್‌ ನಮ್ಮ ನಿಮ್ಮಂತೆ ಒಬ್ಬ ಸಾಮಾನ್ಯ ವ್ಯಕ್ತಿ. ಆದರೆ ವ್ಯಕ್ತಿಯೊಳಗಿನ ಅಂತಃಶಕ್ತಿ ಅಸಾಧ್ಯ ಎಂಬುದನ್ನು ಸಾಧ್ಯವಾಗಿಸಿದೆ. ಯುವ ಜನತೆಯ ಈ ಶಕ್ತಿಯನ್ನು ಬಹಳ ಹಿಂದೆಯೇ ಅರಿತಿದ್ದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು,  ಜೀವನದಲ್ಲಿ ತಮ್ಮ ಸಂತೋಷವನ್ನಷ್ಟೇ ಬಯಸದೆ, ಸಮಾಜಕ್ಕೆ ಮುಡಿಪಾಗಿಡುವ ಯುವಕರು ಅದ್ಭುತವನ್ನು ಸಾಧಿಸಬಲ್ಲರು. ಸಮುದ್ದ ಅಲೆಗಳಂತೆ ದೇಶದೆಲ್ಲೆಡೆ ಹರಡಿ ಧರ್ಮ, ನೆಮ್ಮದಿ, ಶಿಕ್ಷಣವನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಯ ಮನೆಬಾಗಿಲಿಗೆ ತಲುಪಿಸಬಲ್ಲರು, ಎಂದಿದ್ದರು.

ಓದುಗರೇ, ರಟ್ಟೆಯಲ್ಲಿ ಬಲವಿರುವ, ಕಸುವಿರುವ, ಸಾಧನೆಯ ಹಸಿವಿರುವ ಯುವಜನರು ದೇಶದ ಚಿತ್ರಣವನ್ನೇ ಬದಲಿಸಬಿಡಬಲ್ಲರು. ಅದರಲ್ಲೂ ಜನಸಂಖ್ಯೆಯಲ್ಲಿ ಜಗತ್ತಿನಲ್ಲಿ ಎರಡನೇ ಸ್ಥಾನದಲ್ಲಿದ್ದರೂ, ಭಾರತ ಅತ್ಯಂತ ಯುವ ರಾಷ್ಟ್ರ ಎಂಬುದು ಗಮನಾರ್ಹ ಸಂಗತಿ. ಭಾರತದ ಜನಸಂಖ್ಯೆಯ 26.16 % ಮಂದಿ  0-14 ವರ್ಷದೊಳಗಿನವರಾದರೆ67.27 % ದಷ್ಟು 15-64 ರ ವಯಸ್ಸಿನೊಳಗಿನವರು. ಇದು ಜಗತ್ತಿನ ಯಾವುದೇ ಪ್ರಬಲ ದೇಶಗಳಲ್ಲಿನ ಯುವಜನತೆಯ ಪ್ರಮಾಣಕ್ಕಿಂತ ಹೆಚ್ಚು. ಅಭಿವೃದ್ಧಿಶೀಲ ಭಾರತಕ್ಕೆ ಅಭಿವೃದ್ಧಿ ಹೊಂದಿದ ದೇಶವಾಗಲು ಇದಕ್ಕಿಂತ ಇನ್ನೇನು ಬೇಕು?

ಯುವಜನರೇ ದೇಶದ ಭವಿಷ್ಯ. ಅವರ ಕೌಶಲ್ಯ, ಕುತೂಹಲ ಹೊಸ ಆವಿಷ್ಕಾರಗಳಿಗೆ ದಾರಿಮಾಡಿಕೊಡುತ್ತದೆ. ಇದೇ ಕಾರಣದಿಂದ ಕೇಂದ್ರ ಸರ್ಕಾರ ಕೌಶಲ್ಯಾಭಿವೃದ್ಧಿ ಸಚಿವಾಲಯವನ್ನು ಆರಂಭಿಸಿ, ಯುವಜನರನ್ನು ಕೌಶಲ್ಯಭರಿತರನ್ನಾಗಿಸಲು ಯೋಜನೆಗಳನ್ನು ಹಮ್ಮಿಕೊಂಡಿದೆ. ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ಕೃಷಿ, ಕ್ರೀಡೆ, ಸಂಸ್ಕೃತಿ ಹೀಗೆ ವಿಭಿನ್ನ ಕ್ಷೇತ್ರಗಳಲ್ಲಿ ಹೊಸ ಎತ್ತರವನ್ನು ಏರಿರುವ ನಮ್ಮ ದೇಶದ ಯುವಜನತೆ ತಮ್ಮೊಂದಿಗೆ ದೇಶವನ್ನೂ ಅಭಿವೃದ್ಧಿ ಪಥದಲ್ಲಿ ಸಾಗಿಸಿದ್ದಾರೆ. ವಿವಿಧ ದೇಶಗಳಲ್ಲಿ ಅತ್ಯಂತ ಪ್ರಭಾವಿ ಹುದ್ದೆಗಳನ್ನು ಭಾರತೀಯರು ಅಲಂಕರಿಸಿರುವುದು ದೇಶದ ಗೌರವವನ್ನು ಮತ್ತಷ್ಟು ಹೆಚ್ಚಿಸಿದೆ.

ಅದೇ, ಅವಕಾಶವಂಚಿತ ಅಥವಾ ಅಡ್ಡ ದಾರಿ ಹಿಡಿದ ಯುಜನತೆ ದೇಶಕ್ಕೆ ವರವಾಗುವ ಬದಲು ಹೊರೆಯಾಗಬಹುದು. ದೇಶದಲ್ಲಿ ವಿವಿಧ ಸಮಾಜಬಾಹಿರ ಚಟುವಟಿಕಗಳಲ್ಲಿ ತೊಡಗಿ ಕೊನೆಗೆ ಪೊಲೀಸರ ವಶವಾಗುವವರನ್ನೇ ಗಮನಿಸಿ. ಹೆಚ್ಚಿನವರು ಯುವಜನರು, ಹಲವರು ಬಾಲಾಪರಾಧಿಗಳು ಎಂಬ ಸಂಗತಿ ನಮ್ಮನ್ನು ಗಾಬರಿಗೊಳಿಸುತ್ತದೆ. ವೈಯಕ್ತಿಕವಾಗಿ ಗೊತ್ತು ಗುರಿಯಿಲ್ಲದೆ ಬೆಳೆದು, ತಮ್ಮ ಸಾಮಾಜಿಕ ಜವಾಬ್ದಾರಿಯನ್ನೂ ಮರೆಯುವ ಯುವಕರು ಡ್ರಗ್ಸ್‌ ಸೇವನೆ, ಅದಕ್ಕಾಗಿ ಅಪರಾಧ ಚಟುವಟಿಕೆಗಳಲ್ಲಿ ತೊಡಗಿ ಜೈಲುಪಾಲಾಗುತ್ತಾರೆ. ತಮ್ಮಲ್ಲಿರುವ  ದೈಹಿಕ ಸಾಮರ್ಥ್ಯ, ಕೌಶಲ್ಯಗಳ ದುರುಪಯೋಗ ಅವರನ್ನು ಅಂಧಕಾರಕ್ಕೆ ದೂಡುತ್ತದೆ.

ನೀವು ಗಿರೀಶ್‌ ಶರ್ಮಾ ಎಂಬ ವಿಶೇಷ ಸಾಮರ್ಥ್ಯದ ಬ್ಯಾಡ್ಮಿಂಟನ್‌ ಆಟಗಾರನ ಹೆಸರನ್ನು ಕೇಳಿರಬಹುದು. ಮೂಲತಃ ರಾಜಸ್ಥಾನದ, ಗುಜರಾತ್‌ನಲ್ಲಿ ಬೆಳೆದ  ಗಿರೀಶ್‌ ತಮಗೆ ಒಂದೇ ಕಾಲಿರುವುದು ಎಂದು ಕೈಕಟ್ಟಿ ಕೂರಲಿಲ್ಲ. ತಮ್ಮ 16 ನೇ ವಯಸ್ಸಿನಲ್ಲೇ ವೃತ್ತಿಪರ ಶಟಲ್‌ ಬ್ಯಾಡ್ಮಿಂಟನ್‌ ಆಟಗಾರನಾದ ಗಿರೀಶ್‌ ಕೆಲವೇ ತಿಂಗಳುಗಳಲ್ಲಿ ಸಿಂಗಲ್ಸ್‌ ಮತ್ತು ಡಬಲ್ಸ್‌ನಲ್ಲಿ ಭಾರತದ ನಂಬರ್‌.2 ಆಟಗಾರ ಅನಿಸಿಕೊಂಡರು. ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಎರಡು ಚಿನ್ನದ ಪದಕ ಪಡೆದ ಗಿರೀಶ್‌, ಥೈಲ್ಯಾಂಡ್‌, ಇಸ್ರೇಲ್‌ ಮೊದಲಾದ ದೇಶಗಳಲ್ಲಿ ಭಾರತವನ್ನು ಪ್ರತಿನಿಧಿಸಿ ಪದಕಗಳನ್ನು ಬಾಚಿಕೊಂಡರು.  ಜೀವನವೆಂದರೆ ನಮಗೆ ಒಂದೇ ಬಾರಿ ಸಿಗುವ ಒಂದು ಅದ್ಭುತ ವರ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು, ಎಂಬ ಮಾತಿಗೆ ಇವರೇ ನಿದರ್ಶನವಲ್ಲವೇ?

ಬದಲಾದ ಜೀವನಶೈಲಿ, ಕೊವಿಡ್‌- 19 ಸಾಂಕ್ರಾಮಿಕಗಳು ಹಲವು ಸವಾಲುಗಳನ್ನು ನಮ್ಮ ಮುಂದಿಟ್ಟಿವೆ. ಲಕ್ಷಾಂತರ ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ. ಹಲವರು ಅಲ್ಪ ಸಂಬಳಕ್ಕೆ ದುಡಿಯುತ್ತಿದ್ದಾರೆ. ಮೊದಲೇ ಜಾಗತೀಕರಣದ ಪ್ರಭಾವದಿಂದ ಸೃಷ್ಟಿಯಾದ ಸ್ಪರ್ಧೆ, ಅದರಿಂದ ಉಂಟಾಗುವ ಒತ್ತಡದಡಿ ನಲುಗಿದ್ದ ಯುವ ಸಮುದಾಯಕ್ಕೀಗ ದೊಡ್ಡ ಏಟು ಬಿದ್ದಂತಾಗಿದೆ. ಇದರಿಂದ ಅದೆಷ್ಟೋ ಮಂದಿ ಒತ್ತಡ, ಖಿನ್ನತೆಗೆ ಒಳಗಾಗಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಆತ್ಮಹತ್ಯೆ ಒಂದು ಪರಿಹಾರವಲ್ಲ, ಬದಲಾಗಿ ನಾವು ನಮಗೆ, ನಮ್ಮನ್ನು ನಂಬಿದವರಿಗೆ, ದೇಶಕ್ಕೆ ಮಾಡುವ ದ್ರೋಹ. ಕಷ್ಟ ನಮಗೆ ಮಾತ್ರವಲ್ಲ ಪ್ರಪಂಚದ ಸಕಲ ಜೀವಿಗಳನ್ನೂ ಪರೀಕ್ಷಿಸುತ್ತದೆ. ಆದರೆ ಕತ್ತಲು ಸರಿದು ಬೆಳಕು ಹರಿದೇ ಹರಿಯುತ್ತದೆಯಲ್ಲವೇ…

ಕಾಲಚಕ್ರ ಉರುಳುತ್ತಿದೆ. ಪಾಠ ಕಲಿಸುತ್ತಿದೆ. ಹಳ್ಳಿಯಲ್ಲಿದ್ದರೆ ಪ್ರಯೋಜನವಿಲ್ಲ ಎಂದವರು ಹಳ್ಳಿಗಳಿಗೆ ಮರಳುತ್ತಿದ್ದಾರೆ. ಕಾರು- ಬಂಗಲೆಯಿದ್ದರಷ್ಟೇ ಜೀವನ ಎಂದವರು ಸರಳ ಜೀವನಶೈಲಿ ರೂಢಿಸಿಕೊಂಡಿದ್ದಾರೆ. ಆರೋಗ್ಯದ ಬಗ್ಗೆ ತಲೆಕೆಡಿಸಿಕೊಳ್ಳದವರು ಈಗ ಆರೋಗ್ಯವಿಲ್ಲದಿದ್ದರೆ ಏನಿದ್ದೂ ಏನು ಪ್ರಯೋಜನ ಎಂದು ಅರ್ಥಮಾಡಿಕೊಂಡಿದ್ದಾರೆ. ಶಾರ್ಟ್‌ಕಟ್‌ ಮತ್ತು ಫಾಸ್ಟ್‌ ಫುಡ್‌ ಎರಡರ ಅಪಾಯವೂ ನಮಗೆ ಅರ್ಥವಾಗುತ್ತಿದೆ. ಸ್ವಾಭಿಮಾನಿಗೆ, ಕಷ್ಟಜೀವಿಗೆ ಹಳ್ಳಿಯಾದರೇನಂತೆ, ಪೇಟೆಯಾದರೇನಂತೆ. ಭೂಮಿ ನಂಬಿದವನನ್ನು ಎಂದಿಗೂ ಕೈ ಬಿಡದು ಎಂಬ ಮಾತಿನಂತೆ, ಯುವಕರು ಕೃಷಿಗೆ ಮರಳಿ, ನೆಮ್ಮದಿಯ ಬಾಳುವುದಕ್ಕೆ ಅಡ್ಡಿಯೇನಿಲ್ಲ. ಸಾಫ್ಟ್‌ವೇರ್‌ ಉದ್ಯೋಗವನ್ನು ಬಿಟ್ಟು ಕೃಷಿಯಲ್ಲಿ ಹೊಸ ಪ್ರಯೋಗಗಳನ್ನು ಅಳವಡಿಸಿ ಯಶಸ್ವಿಯಾದವರು ನಮ್ಮ ಮುಂದಿದ್ದಾರೆ.

ಅಂದಹಾಗೆ, 1999 ರಿಂದಲೇ ವಿಶ್ವಸಂಸ್ಥೆಯ ಘೋಷಣೆಯಂತೆ ಪ್ರತಿ ಆಗಸ್ಟ್‌ 12 ನ್ನು ಯುವ ಜನತೆಯೆಡೆ ಗಮನ ಸೆಳೆಯಲು ಅಂತಾರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತಿದೆ.  ಪ್ರತಿ ವರ್ಷ ಒಂದು ಸಂದೇಶದೊಂದಿಗೆ ಈ ದಿನಾಚರಣೆ ನಡೆಯುತ್ತಿರುವುದು ವಿಶೇಷ. ಕಳೆದ ವರ್ಷದ ವಿಷಯʼಜಾಗತಿಕ ವಿದ್ಯಮಾನಗಳಲ್ಲಿ ಯುವಜನತೆಯ ಪಾಲ್ಗೊಳ್ಳುವಿಕೆʼ ಎಂದಾಗಿದ್ದರೆ, ಈ ಬಾರಿ ʼಆಹಾರ ವ್ಯವಸ್ಥೆಯಲ್ಲಿ ರೂಪಾಂತರ: ಮನುಷ್ಯನ ಮತ್ತು ಜಾಗತಿಕ ಆರೋಗ್ಯಕ್ಕಾಗಿ ಯುವಜನತೆಯ ಆವಿಷ್ಕಾರʼ, ಎಂಬ ಸಂದೇಶವಿದೆ.

ದೇಶದ ಭವಿಷ್ಯ, ಅಂದರೆ ಯುವಜನತೆಯ ಮುಂದೆ ಹಲವು ಸವಾಲುಗಳಿವೆ. ಮುಂದಿನ ಕೆಲ ವರ್ಷಗಳಲ್ಲಿ ಆಹಾರದ ಕೊರತೆ ಜಗತ್ತನ್ನು ತೀವ್ರವಾಗಿ ಕಾಡಲಿದೆ ಎಂದು ವಿಜ್ಞಾನಿಗಳು ಈಗಾಗಲೇ ಎಚ್ಚರಿಸಿದ್ದಾರೆ. ಜೊತೆಗೆ ಕಲಬೆರಕೆ ಆಹಾರ ದಂಧೆ ಈಗ ಜಗತ್ತನ್ನೇ ವ್ಯಾಪಿಸಿದೆ. ಇದು ಕ್ಯಾನ್ಸರ್‌ನಂತಹ ಹಲವು ಮಾರಕ ಖಾಯಿಲೆಗಳಿಗೆ ಸದ್ದಿಲ್ಲದೆ ಕಾರಣವಾಗುತ್ತಿದೆ. ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು, ಹೊಸ ಆವಿಷ್ಕಾರಗಳ ಅಗತ್ಯವಿದೆ. ನಮ್ಮ ಮತ್ತು ನಮ್ಮ ಪರಿಸರದ ಆರೋಗ್ಯ ಸುಧಾರಿಸಿದರಷ್ಟೇ ನಾವು ಭವ್ಯ ಭವಿಷ್ಯವನ್ನು ನಿರೀಕ್ಷಿಸಬಹುದು.

ಕೊನೆಯಲ್ಲೊಂದು ಮಾತು. ಮಾಜಿ ರಾಷ್ಟ್ರಪತಿ, ವಿಜ್ಞಾನಿ ಡಾ. ಅಬ್ದುಲ್‌ ಕಲಾಂ ಅವರು ಹೇಳಿದಂತೆ ನಿದ್ದೆಯಲ್ಲಿ ಬರುವುದು ಕನಸಲ್ಲ, ಬದಲಾಗಿ ನಿಮ್ಮನ್ನು ನಿದ್ದೆ ಮಾಡಲು ಬಿಡದ ವಿಷಯವೇ ಕನಸು. ನಮ್ಮ ಗುರಿ ದೊಡ್ಡದಿರಲಿ, ಸ್ಪಷ್ಟವಾಗಿರಲಿ. ಅದಕ್ಕಾಗಿ ಪ್ರಯತ್ನವಿರಲಿ, ಕೊನೆಯವರೆಗೂ ಬದ್ಧತೆಯಿರಲಿ. ಆದರೂ ಸೋಲು-ಗೆಲುವು ಜೀವನದ ಭಾಗ. ಎರಡನ್ನೂ ಸಂಭಾಳಿಸಿಕೊಂಡು ನಡೆಯುವುದೇ ಜೀವನ. ಇದು ಬಲು ಅಮೂಲ್ಯ.  ಕೊರಗಲು, ಅನ್ಯರಿಗೆ ಕೇಡು ಬಗೆಯಲು ಅಲ್ಪ ಜೀವನದಲ್ಲಿ ಸಮಯವಿಲ್ಲ!  

ಗುರುಪ್ರಸಾದ್‌ ಟಿ ಎನ್‌

ಪತ್ರಿಕೋದ್ಯಮ ಉಪನ್ಯಾಸಕ

ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು

(ಮಂಜುವಾಣಿಯಲ್ಲಿ ಪ್ರಕಟವಾದ ಲೇಖನ)

 

 

 

 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪ್ರೀತಿ ಎಂದರೇನು ಎಂದು ಈಗ ಅರಿತೆನು…

ಸಿಂಹಾವಲೋಕನಕ್ಕೊಂದು ಸಮಯ

ಬೇಸರದಲ್ಲಿ ಬರೆದದ್ದು…ಹೌದಾ?!