ಭಾವ ಬಂಧನದೊಳಗೆ ಒಂಬತ್ತು ವರುಷ …
ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ… ಹೌದು , ವರ್ಷ ಒಂಬತ್ತಾದರೂ ನಿನ್ನ ಪ್ರೀತಿಯ ಪರಿಯ ನಾನಿನ್ನೂ ಅರಿತಿಲ್ಲ. ಅದು ಸಾಗರದಂತೆ ಮಿತಿಯಿಲ್ಲದ್ದು , ಜೀವಾನಿಲದಂತೆ ಸ್ವಾರ್ಥವಿಲ್ಲದ್ದು ಎಂಬುದನ್ನಷ್ಟೇ ಬಲ್ಲೆ. ಹಾಗಾದರೆ ಈ ಪ್ರೀತಿಗೆ ನಾನು ಅರ್ಹನೇ , ಇದಕ್ಕೆ ಪ್ರತಿಯಾಗಿ ನಾನೇನು ಕೊಡಬಲ್ಲೆ ಎಂಬ ಯೋಚನೆ ಹಲವು ಬಾರಿ ಕಾಡಿದ್ದಿದೆ. ಉತ್ತರವೂ ದೊರೆತಿದೆ…ಇದಕ್ಕೆ ಬೇಕಿರುವುದೂ ಬರೀ ಪ್ರೀತಿಯಷ್ಟೇ… ಪ್ರೀತಿಯನ್ನು ಹಗುರ ಮಾತುಗಳಿಂದ ಹಂಗಿಸುವಾಗ ಯಾಕೋ ನಮ್ಮ ಪ್ರೀತಿಯ ಬಗ್ಗೆ ಸಾರಿ ಹೇಳಬೇಕು ಅನಿಸುತ್ತದೆ. ಹಾಗಂತ ಪ್ರೀತಿ ನನಗೇನೂ ಹೊಸದಾಗಿರಲಿಲ್ಲ. ಒಂದು ಸಾಂತ್ವಾನದ ನುಡಿಯಿಲ್ಲದೆ , ತಮ್ಮವರಿಲ್ಲದೆ ನೊಂದ ಅದೆಷ್ಟೋ ಜೀವಗಳಿರುವ ಈ ಜಗದಲ್ಲಿ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ಅಪ್ಪ-ಅಮ್ಮ , ಅಣ್ಣ-ಅತ್ತಿಗೆ , ಬಂಧುಮಿತ್ರರನ್ನು ಪಡೆಯಲು ನಾನೆಷ್ಟು ಅದೃಷ್ಟ ಮಾಡಿದ್ದೆ. ಆದರೆ ನೀನಿಲ್ಲದೆ ನಾನು ಹೇಗಿರುತ್ತಿದ್ದೆ , ಜೀವನ ಅದೆಷ್ಟು ಅಪೂರ್ಣವಾಗಿರುತ್ತಿತ್ತು ಎಂಬ ಕಲ್ಪನೆಯೇ ನನ್ನನ್ನು ವಿಸ್ಮಿತನನ್ನಾಗಿಸುತ್ತದೆ… ಹೌದು , ನನಗೆ ಜೀವನದಲ್ಲಿ ಇದಕ್ಕಿಂದ ದೊಡ್ಡ ವರ ಇನ್ನೇನು ಬೇಕು. ಉದ್ಯೋಗ ಬಿಟ್ಟು ಮತ್ತೆ ಓದಲೆಂದು ಬಂದಿದ್ದು ನಮ್ಮಿಬ್ಬರ ಭೇಟಿಗೆ ಆ ದೇವರೇ ಸೃಷ್ಟಿಸಿದ ನೆಪವೇ ?! ಪ್ರೀತಿ-ಪ್ರೇಮ ಎಂಬ ಬಗ್ಗೆ ಆಸಕ್ತಿಯೇ ಇಲ್ಲದ ನಾನು “ ಬದುಕಿದರೇ ಇವಳ ಜೊತೆಯೇ ” ಎಂಬ ನಿರ್ಧಾರ ಮಾಡಿದ್ದಾದರೂ ಹೇಗೆ ! ನಿನ್ನ ಮೇಲಿದ್ದ ಪ್ರೀತ...