ಆನ್‌ಲೈನ್ ಶಿಕ್ಷಣದಲ್ಲಿ ಆಫ್ ಆಗುವುದೇ ಹೆಚ್ಚು…!
(Picture courtesy- Zeenews)
ಶಾಲೆಗೆ ಹೋಗುವ ಪುಟ್ಟ ಮಕ್ಕಳನ್ನೊಮ್ಮೆ ಗಮನಿಸಿ. ಅವುಗಳ ಪುಟಾಣಿ ಪ್ರಪಂಚದಲ್ಲಿ ಹೆತ್ತವರ ನಂತರದ ಸ್ಥಾನ ಇರುವುದು ಟೀಚರ್ಗೆ. ನೀವೇನಾದರೂ ಟೀಚರ್ ಬಗ್ಗೆ ಹಗುರವಾಗಿ ಮಾತಾನಾಡಿದಿರೋ ಮಗುವಿನ ಪಾಲಿಗೆ ನೀವು ವಿಲನ್ ಆಗುವುದು ಗ್ಯಾರಂಟಿ! ಇದಕ್ಕೆ ಕಾರಣ ತುಂಬಾ ಸರಳ, ಕಲಿಕೆ ಎಂಬುದು ಒಂದು ಯಾಂತ್ರಿಕ ಕ್ರಿಯೆಯಲ್ಲ. ಅದೊಂದು ಭಾವನಾತ್ಮಕ ಸಂಗತಿ.
ಈ ಅನುಬಂಧ ನಿಲ್ಲುವುದಿಲ್ಲ. ಮಗು ಬೆಳೆದಂತೆ ತನ್ನ ಶಾಲೆಯನ್ನು, ಶಿಕ್ಷಕರನ್ನು ಹೆಚ್ಚಾಗಿ ಹಚ್ಚಿಕೊಂಡುಬಿಡುತ್ತದೆ. ಅವರನ್ನೇ ಮಾದರಿಯಾಗಿಸಿಕೊಂಡುಬಿಡುತ್ತದೆ. ನೋಡಿ ಕಲಿಯುವ ಮಕ್ಕಳ ಮೇಲೆ ಶಿಕ್ಷಕರು ಬೀರುವ ಪರಿಣಾಮ
ದೊಡ್ಡ ಮಟ್ಟದಲ್ಲಿರುತ್ತದೆ. ಅದಕ್ಕಾಗಿಯೇ ಅಲ್ಲವೇ ಹೆತ್ತವರು ತಮ್ಮ ಮಗುವಿಗೆ ಒಳ್ಳೆಯ ಶಿಕ್ಷಕರು
ಸಿಗಲಿ ಎಂದು ಬೇಡಿಕೊಳ್ಳುವುದು!
ಇದೇ ಕಾರಣಕ್ಕೆ ನಮ್ಮ ನೆನಪಿನ ಬುತ್ತಿ ತೆರೆದಾಗ ಅಲ್ಲಿ
ಶಿಕ್ಷಕರಿಗೊಂದು ಮಹತ್ವದ ಸ್ಥಾನ ಇದ್ದೇ ಇರುತ್ತದೆ. ಶಿಕ್ಷಕರು ಹೇಳುವ-ಬರೆಯುವ ʼGood’ ಎಂಬ ನಾಲ್ಕಕ್ಷರದ ಪದ, ಅವರ ಒಂದು ನಗು, ಅವರು ಬೆನ್ನು ತಟ್ಟುವಾಗ- ಕೆನ್ನೆ ಹಿಂಡುವಾಗ ಆಗುವ ಸಂತೋಷ, ಬೈಗುಳದ ಪರಿಣಾಮ ಎರಡೂ ಅಪರಿಮಿತ. ಹಾಗಾಗಿಯೇ ನಮಗೆ ಅವರು ಕಲಿಸಿದ ಪಾಠಕ್ಕಿಂತಲೂ ಅವರ
ಹಾವಭಾವ, ಪಾಠ ಮಾಡುವ ರೀತಿ, ಉಡುಗೆಯೇ ಹೆಚ್ಚು ನೆನಪಿರುತ್ತದೆ. ಇಲ್ಲಿ ಪಾಠಕ್ಕಿಂತಲೂ ಹೆಚ್ಚಿನದೇನೋ ಇದೆ ಎಂದೇ
ಅರ್ಥವಲ್ಲವೇ?
ಶಿಕ್ಷಣ ಸಾಮಾಜಿಕ ಪ್ರಕ್ರಿಯೆಯೂ ಹೌದು. ಮಗುವಿಗೆ ಶಾಲೆಗೆ ಹೋಗುವ ಬಸ್, ಅದರ ಡ್ರೈವರ್, ಕಂಡಕ್ಟರ್, ಸ್ನೇಹಿತರ ವಲಯ, ಹೊಡೆದವರು, ಸಮಾಧಾನ ಮಾಡಿದವರು ಎಲ್ಲರೂ ಮುಖ್ಯ. ಹೊಸ ಯೂನಿಫಾರ್ಮ್ ಧರಿಸುವ, ಹೊಸ ಚಪ್ಪಲಿ ಧರಿಸಿ ಸ್ನೇಹಿತರಿಗೆ ತೋರಿಸುವುದಕ್ಕಿಂತ
ಮಿಗಿಲಾದ ಸಂಭ್ರಮ ಅದಕ್ಕಿಲ್ಲ. ಶಾಲೆ, ತರಗತಿ, ಅಲ್ಲಿನ ಬೆಂಚ್, ಡೆಸ್ಕ್, ಕಾರಿಡಾರ್, ನೋಟಿಸ್ ಬೋರ್ಡ್, ಆಟ-ಪಾಠ ಎಲ್ಲವೂ ಅದರ ನಿತ್ಯ ಜೀವನದ ಅವಿಭಾಜ್ಯ ಅಂಗಗಳು. ಅದು ಪ್ರತಿದಿನವೂ ಸ್ನೇಹಿತರಿಂದ, ಶಿಕ್ಷಕರಿಂದ ಸಾಕಷ್ಟು ಕಲಿಯುತ್ತದೆ. ಅದಕ್ಕೆ ಸಂತೋಷ ಅನುಭವಿಸುವ, ಹಂಚಿಕೊಳ್ಳುವ, ದುಃಖವನ್ನು ನಿರ್ವಹಿಸುವ ಕಲೆ ಸಿದ್ಧಿಸುತ್ತದೆ. ನೆನಪಿರಲಿ ಇದ್ಯಾವುದೂ ಅದರ ಸಿಲೆಬಸ್ನಲ್ಲಿರುವುದಿಲ್ಲ!
ಈ ಪ್ರಕ್ರಿಯೆ ಮಕ್ಕಳು ಕಾಲೇಜು ಮುಗಿಸುವವರೆಗೂ
ಮುಂದುವರಿಯುತ್ತದೆ. ಕಾಲೇಜಿನಲ್ಲಿ ತಮ್ಮ ಜೀವನದ ಅಮೂಲ್ಯ ಘಟ್ಟದಲ್ಲಿರುವ ಮಕ್ಕಳು ಹಲವರಿಂದ
ಪ್ರೇರಣೆ ಪಡೆಯುತ್ತಾರೆ. ಕೆಲವು ಪ್ರಾಧ್ಯಾಪಕರಿಂದ ಮಕ್ಕಳ ಜೀವನವೇ ಬದಲಾಗುತ್ತದೆ. ಕೆಲವೊಮ್ಮೆ ಸ್ನೇಹಿತರೇ ಮಾರ್ಗದರ್ಶಕರಾಗುತ್ತಾರೆ. ತಂದೆ ತಾಯಿಯ ಬಳಿ ಹೇಳಲಾಗದ್ದನ್ನು ವಿದ್ಯಾರ್ಥಿಗಳು
ತಮ್ಮ ಉಪನ್ಯಾಸಕರ, ಸ್ನೇಹಿತರ ಬಳಿ ಹೇಳಿಕೊಳ್ಳುತ್ತಾರೆ, ಪರಿಹಾರ ಪಡೆದುಕೊಳ್ಳುತ್ತಾರೆ. ಹೆತ್ತವರಿಗೆ ತಿಳಿಯದ ವಿದ್ಯಾರ್ಥಿಗಳ ನಡವಳಿಕೆಯನ್ನು
ಶಿಕ್ಷಕರು ಗಮನಿಸಿ ತಿದ್ದುತ್ತಾರೆ. ಕಾಲೇಜ್ನ ಲೈಬ್ರೆರಿ, ಆಟದ ಮೈದಾನ, ಸಾಂಸ್ಕೃತಿಕ ಚಟುವಟಿಕೆಗಳು, ಚುನಾವಣೆ, ಸಾಹಿತ್ಯ, ಸಂಶೋಧನೆ ವಿದ್ಯಾರ್ಥಿಯ ಭವಿಷ್ಯವನ್ನು ರೂಪಿಸುತ್ತವೆ. ಆನ್ಲೈನ್ ಕ್ಲಾಸ್ನಲ್ಲಿ ಇದ್ಯಾವುದೂ ಆಗುವುದಿಲ್ಲ!
ಉದಾಹರಣೆಗೆ, ಇದು ಕಾಲ್ ಹೋಗಿ ವೀಡಿಯೋ ಕಾಲ್ ಬಂದಿರುವ ಕಾಲ. ನೀವು ಆತ್ಮೀಯರೊಂದಿಗೆ ಗಂಟೆಗಟ್ಟಲೆ ವೀಡಿಯೋ ಕಾಲ್ನಲ್ಲಿ ಹರಟುತ್ತೀರಿ ಎಂದಿಟ್ಟುಕೊಳ್ಳಿ. ಅದೂ ನಿಮಗಿಷ್ಟವಾದ ಭಾಷೆ, ನಿಮ್ಮದೇ ದಾಟಿ, ದೇಹ ಭಾಷೆ, ಬಳಸಿಕೊಂಡು. ಆದರೂ ನಿಮಗೆ ಅವರನ್ನೊಮ್ಮೆ ಭೇಟಿಯಾಗಿ ಮಾತನಾಡಬೇಕು
ಎಂದು ಅನ್ನಿಸದೇ ಇರದು. ಹೀಗಿರುವಾಗ ಸೀಮಿತ ಅವಧಿಯಲ್ಲಿ, ನಿಮ್ಮನ್ನು ನೀವು ನಿಯಂತ್ರಣದಲ್ಲಿಟ್ಟುಕೊಂಡು, ಗಮನ ಕೇಂದ್ರೀಕರಿಸಿಕೊಂಡು ವಿಷಯಗಳನ್ನು
ಅರ್ಥಮಾಡಿಕೊಳ್ಳುವುದು ಸಾಹಸದ ಕೆಲಸ. ಇದು ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಅಧ್ಯಾಪಕರಿಗೂ ಸವಾಲು. ಎಂತದ್ದೇ ಅಪ್ಲಿಕೇಶನ್ ಬಂದರೂ ಇಲ್ಲಿ ಪರಿಣಾಮಕಾರಿ ಸಂವಹನ ಕಷ್ಟಸಾಧ್ಯ. ಒಂದು ವೇಳೆ ವಿದ್ಯಾರ್ಥಿ ಪಾಠ ಅರ್ಥೈಸಿಕೊಂಡರೂ
ನಿಜಾರ್ಥದಲ್ಲಿ ಆತ ಕಳೆದುಕೊಂಡಿರುವುದೇ ಹೆಚ್ಚು.
ವಿದ್ಯಾರ್ಥಿಗಳ ಜೊತೆ ಆತ್ಮೀಯವಾಗಿ ಮಾತನಾಡಿ ಪಾಠ ಮಾಡುವ ಅಧ್ಯಾಪಕರಿಗೂ ಇದೊಂದು ಒಲ್ಲದ ಪ್ರಕ್ರಿಯೆ. ಎಲ್ಲರನ್ನೂ ಗಮನಿಸುತ್ತಾ, ಪ್ರಶ್ನೆ ಕೇಳುತ್ತಾ, ಬಯ್ಯುತ್ತಾ, ಹೊಗಳುತ್ತಾ, ವಿದ್ಯಾರ್ಥಿಗಳೊಂದಿಗೆ ಬೆರೆಯುವ ಅನುಭವ ಇಲ್ಲಿಲ್ಲ. ಪಾಠದ ಹೊರತಾಗಿ, ತರಗತಿಯ ಹೊರಗೆ ವಿದ್ಯಾರ್ಥಿಗಳ ಜೊತೆ ಆತ್ಮೀಯವಾಗಿ ಮಾತನಾಡುವ, ಸಮಸ್ಯೆಗಳಿಗೆ ಕಿವಿಯಾಗುವ, ಕಿವಿಮಾತು ಹೇಳುವ ಅವಕಾಶ ಇಲ್ಲಿ ಅಷ್ಟಕ್ಕಷ್ಟೇ. ಈಗ ಅಪ್ಲಿಕೇಶನ್ಗಳ ಮೂಲಕವೇ ಅಸೈನ್ಮೆಂಟ್ ನೀಡುವ, ಪರೀಕ್ಷೆ ನಡೆಸುವ ವ್ಯವಸ್ಥೆಯಿದ್ದರೂ ಅದು ತರಗತಿ ಪಾಠಕ್ಕೆ ಸಮನಲ್ಲ. ಜೊತೆಗೆ ಆನ್ಲೈನ್ ಕ್ಲಾಸ್ನಲ್ಲಿ ತಂತ್ರಜ್ಞಾನದ ದುರುಪಯೋಗವೂ ಸಾಕಷ್ಟು ವರದಿಯಾಗುತ್ತಿದೆ. ಕೋಲ್ಕತ್ತಾದಲ್ಲಿ ವಿದ್ಯಾರ್ಥಿಯೊಬ್ಬ ತಾನೇ ʼಪ್ರಾಂಶುಪಾಲʼ ನಾಗಿ ಶಾಲೆಗೆ ರಜೆ ಘೋಷಿಸಿದ್ದು, 55 ವರ್ಷ ಪ್ರಾಯದ ಹಿರಿಯ ಪ್ರಾಧ್ಯಾಪಕರೊಬ್ಬರನ್ನು ಅವಮಾನಿಸಿ ಕಣ್ಣೀರಿಡುವಂತೆ ಮಾಡಿದ್ದು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸುದ್ದಿಯಾಗಿದೆ.
ಹಾಗಾದರೆ ಶಿಕ್ಷಣದಲ್ಲಿ ಬದಲಾವಣೆಯೇ ಬೇಡವೇ ಎಂದರೆ
ಬೇಕು. ಆಶ್ರಮದಿಂದ
ಆನ್ಲೈನ್ ಶಿಕ್ಷಣದವರೆಗೆ ಬಂದವರು
ನಾವು. ಆದರೆ ಹಿಂದಿನ ಬದಲಾವಣೆಗಳು ವಿಶಾಲಾರ್ಥದ ಕಲಿಯುವಿಕೆಗೆ
ಅಡ್ಡಿಯಾಗಿರಲಿಲ್ಲ. ನಾವೀಗ ಇಂಟರ್ನೆಟ್ ಯುಗದಲ್ಲಿ ಬೆರಳ ತುದಿಗೆ ಸಿಗುವ ಅಮೂಲ್ಯ ಜ್ಞಾನವನ್ನು ಕಾಲ್ಕಸ ಮಾಡಲು ಸಾಧ್ಯವಿಲ್ಲ. ಆದರೆ ತಂತ್ರಜ್ಞಾನದ ಅದ್ಭುತ ಪ್ರಗತಿ ನಮ್ಮ ನಿಜಾರ್ಥದ ಶಿಕ್ಷಣಕ್ಕೆ ಪೂರಕವಾಗಿರಬೇಕೇ
ಹೊರತು ಅಡ್ಡಿಯಾಗಬಾರದು. ಈಗಾಗಲೇ ನಲುಗಿರುವ ಸಂಬಂಧಗಳು
ಇನ್ನಷ್ಟು ಯಾಂತ್ರಿಕವಾಗಬಾರದು. ಜಾಗತೀಕರಣದ ಒಂದು
ಪರಿಣಾಮವಾಗಿರುವ ಆನ್ಲೈನ್ ಶಿಕ್ಷಣವನ್ನು
ಒಪ್ಪಿಕೊಳ್ಳಬೇಕೇ ಹೊರತು ಅಪ್ಪಿಕೊಳ್ಳುವುದು ಬೇಡ. ಹಾಗೇನಾದರೂ
ಆದರೆ ಮುಂದಿನ ಜನಾಂಗ ಪಡೆಯುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು.
-Published in Kannada Press.com
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ