ʼಸೂಪರ್ ಪವರ್ʼ ಬಲೂನಿಗೆ ಚುಚ್ಚಿದ ಕೊರೋನಾ ಸೂಜಿ
ಟಾರ್ಗೆಟ್ 2020… ಹೌದು , 21 ನೇ ಶತಮಾನದ ಆರಂಭದ ವರ್ಷಗಳಲ್ಲೇ ಹಲವು ಹೊಸತುಗಳ ಮೂಲಕ ಜಗತ್ತಿನ ಸೂಪರ್ ಪವರ್ ರಾಷ್ಟ್ರವಾಗಬೇಕು ಎಂಬ ಕನಸು ಭಾರತವೂ ಸೇರಿದಂತೆ ಹಲವು ರಾಷ್ಟ್ರಗಳಿಗಿತ್ತು . ಶತ್ರು ರಾಷ್ಟ್ರಗಳ ಸದ್ದಡಗಿಸಬಲ್ಲ ಅಣ್ವಸ್ತ್ರಗಳನ್ನು ತಯಾರಿಸುವ ಹಪಾಹಪಿ , ಜೈವಿಕ ಸಮರಕ್ಕೂ ಒಳಗಿಂದಲೇ ಸಿದ್ಧತೆ , ಬಾಹ್ಯಾಕಾಶದಲ್ಲೂ ಏಕಸ್ವಾಮ್ಯ ತಯಾರಿಸುವ ದುರಾಸೆ , ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ , ಮೆಷಿನ್ ಲ್ಯಾಂಗ್ವೆಜ್ ಹೀಗೆ ತಂತ್ರಜ್ಞಾನದ ನಾಗಾಲೋಟ … ಈ ನಡುವೆ ವಿಶ್ವದಲ್ಲಿ ಅಪಾಯಕಾರಿ ವೇಗದಲ್ಲಿ ಹೆಚ್ಚುತ್ತಿರುವ ಹಲವು ಬಗೆಯ ಮಾಲಿನ್ಯಗಳು , ಅರಣ್ಯನಾಶ , ವನ್ಯಜೀವಿಗಳ ಆರ್ತನಾದ ಯಾವುದೂ ಕೇಳಲಿಲ್ಲ . ಆದರೆ ಕೊನೆಗೂ ಆಗಿದ್ದೇನು ? ದೌರ್ಜನ್ಯಗಳಿಂದ ಜರ್ಝರಿತಗೊಂಡ ಪ್ರಕೃತಿ , ಮನುಷ್ಯ ಮಾಡಿದ ಕೆಲಸಕ್ಕೆ ತಕ್ಕ ಶಾಸ್ತಿಯನ್ನೇ ಮಾಡಿದೆ . ಕೊರೋನಾ ಎಂಬ ಕಾಣದ ಶತ್ರು ಕೊಟ್ಟ ಏಟಿಕೆ , ಮನುಷ್ಯನಿಗೆ ತನ್ನ ಸ್ವಾರ್ಥ ತುಂಬಿದ , ಉಪಕಾರ ಸ್ಮರಣೆಯಿಲ್ಲದ , ಪರೋಪಕಾರ ಭಾವವಿಲ್ಲದ , ನಿಸರ್ಗದೊಂದಿಗೆ ಬಂಧವಿಲ್ಲದ , ಗೊತ್ತು ಗುರಿಯಿಲ್ಲದ ಜೀವನ ಅರಿವಿಗೆ ಬಂದಿದೆ . ಸಂಕಷ್ಟ ಕಾಲದಲ್ಲಿ ಕಂಡುಬಂದ ಯಾವತ್ತೂ ಕಲ್ಪಿಸಿಕೊಳ್ಳದಿದ್ದ ವೈರುಧ್ಯಗಳು ಇವೆಲ್ಲಕ್ಕೂ ಕನ್ನಡಿ ಹಿಡಿದಿವೆ. ಇದು ಹಣಕ್ಕಾಗಿ ಏನು ಮಾಡಲು ಹೇಸದ ಕಾಲ . ಮನೆ , ಕಾರು , ಬಂಗಾರ ...