ನಗುವ ನಯನ ಮಧುರ ಮೌನ, ಮಿಡಿವ ಹೃದಯ ಇರೆ ಮಾತೇಕೆ…

ಯಾಕೋ ಮಾತು ಮೌನವಾಗಿದೆ. ಮೌನವೇ ಮಧುರವಾಗಿದೆ ಜೊತೆಗಿರುವ ಮಿಡಿವ ಹೃದಯ ಸದಾ ಜೊತೆಗಿರಲಿ ಅಷ್ಟು ಸಾಕೆನಿಸಿದೆ… ಹತ್ತು ಸಂವತ್ಸರಗಳು ಕಳೆದಿವೆ. ಸಹಜವಾಗೇ ಕಲ್ಲು ಮುಳ್ಳುಗಳ ಹಾದಿಯಲ್ಲಿ ನಡೆದು ಬಂದಿದ್ದೇನೆ…ಆದರೆ ನಾನು ಯಾವತ್ತೂ ಒಂಟಿಯಾಗಿಲ್ಲ. ಆ ಭಾವನೆ ಒಂದು ಕ್ಷಣವೂ ಮನಸ್ಸಿನಲ್ಲಿ ಸುಳಿಯಲೂ ಆಕೆ ಬಿಟ್ಟಿಲ್ಲ. ನನ್ನನ್ನೇ ನಂಬಿ ಬಂದಾಕೆ, ತನ್ನ ಬೇಕು ಬೇಡಗಳನ್ನು ಕಡೆಗಣಿಸಿ ಅನುಕ್ಷಣವೂ ನನಗಾಗಿ ಬದುಕಿದ್ದಾಳೆ ಎಂದರೆ ಅದು ಸಾಮಾನ್ಯ ಸಂಗತಿಯಲ್ಲ. ನನಗೆ ಬದುಕು ಬಲು ಸುಂದರ ಅನಿಸುವಂತೆ ಮಾಡಿದ್ದು ಆಕೆಯೇ. ಹಾಗೆಂದು ನಾನು ಮೊದಲಿಂದಲೂ ಅದೃಷ್ಟವಂತನೇ. ಮನೆಯಲ್ಲಿ ಕಿರಿಯವನು. ಅಪ್ಪ- ಅಮ್ಮನ ಪ್ರೀತಿಯ ಜೊತೆಗೆ ಅಣ್ಣನ ಆರೈಕೆ ಬೋನಸ್. ಆದರೆ ಬದುಕಲ್ಲಿ ತಿರುವುಗಳು ಸಹಜ. ಸುಖದ ಬಳಿಕ ಕಷ್ಟ ಕಾಯುತ್ತಿರುತ್ತದೆ ಎಂಬುದಕ್ಕೆ ನಿದರ್ಶನಗಳು ಎಷ್ಟಿಲ್ಲ! ಆದರೆ ಸೃಷ್ಟಿಕರ್ತ ನನ್ನ ಹಣೆಬರಹವನ್ನು ವಿಶೇಷ ಕಾಳಜಿಯಿಂದ ಬರೆದಿದ್ದ ಅನಿಸುತ್ತದೆ. ʼಋಣಾನುಬಂಧ ʼ ಎಂಬ ಮಾತಿಗೆ ನಮಗಿಂತ ಬೇರೆ ಉದಾಹರಣೆ ಬೇಡ…! ʼ ಪ್ರೀತಿಯೊಂದು ಮಾಯೆ…ʼ ಎಂಬುದು ಸತ್ಯ. ನಾವಿಬ್ಬರೂ ಭೇಟಿಯಾಗಿದ್ದೇ ಒಂದು ಅಚ್ಚರಿ. ಸ್ನೇಹಿತರಾಗಿದ್ದ ನಮ್ಮಲ್ಲಿ ಪ್ರೀತಿಯೆಲ್ಲಿಂದ ಮೊಳಕೆಯೊಡೆಯಿತು, ಅದ್ಯಾವ ರೀತಿಯ ಆಕರ್ಷಣೆ... ಯಾವ ಧೈರ್ಯದಲ್ಲಿ ನಾನದನ್ನು ವ್ಯಕ್ತಪಡಿಸಿದೆನೋ…ನಂತರ ಆ ಕಾಯುವಿಕೆ… ದೇವರಿಗೇ ಪ್ರೀತಿ! ಇ ದೆಲ್ಲಾ ಆತನೇ ಆಡಿಸಿದ ಆಟವೇ? ಹಾಗಿದ್ದರೆ ಅ...