ಹೊಸತೇನೂ ಆಗಿಬಿಡುವುದಿಲ್ಲ…ನಾವೇ ಮಾಡಬೇಕಿದೆ!
ಹೊಸವರ್ಷಗಳು ಜಾಸ್ತಿ ಸಮಯ ಹೊಸತಾಗಿರುವುದಿಲ್ಲ. ನಮ್ಮ- ನಿಮ್ಮ ಜೀವನದಲ್ಲಿ ಅದೆಷ್ಟು ಹೊಸವರ್ಷಗಳು ಬಂದಿಲ್ಲ ಹೇಳಿ. ಕ್ಯಾಲೆಂಡರ್ ಬದಲಾಗುವುದು ಬಿಟ್ಟರೆ ಬೇರೇನೂ ಆಗುವುದಿಲ್ಲ…ಆದರೆ ʼ ಎಲ್ಲದಕ್ಕೂ ಕಾಲ ಕೂಡಿಬರಬೇಕು ʼ ಎಂಬ ಮಾತಿದೆಯಲ್ಲ. ತಾನಾಗೇ ಏನು ಬದಲಾಗುವುದಿಲ್ಲ, ಹಾಗಾಗಿ ಹೊಸ ವರ್ಷದ ನೆಪದಲ್ಲಿ ನಾವೇ ಏನಾದರೂ ಮಾಡೋಣ! ನಮಗೆ ಹೊಸವರ್ಷದ ಆರಂಭದಲ್ಲಿ ಭರ್ಜರಿ ಸಂಕಲ್ಪಗಳನ್ನು ಮಾಡಿ ವರ್ಷ ಹಳೆಯದಾಗುತ್ತಾ ಹೋದಂತೆ ಅವನ್ನು ಮರೆತುಬಿಡುವ ಗುಣವಿದೆ. ಅದಕ್ಕೆ ನಮ್ಮದೇ ಆದ ಕಾರಣ (ನೆಪ?) ಗಳನ್ನು ಹುಡುಕಿಕೊಂಡು ಸಮಾಧಾನಪಟ್ಟುಕೊಳ್ಳುತ್ತೇವೆ. ಈ ಬಾರಿ ಹೀಗೊಂದು ಪ್ರಯತ್ನ ಮಾಡೋಣ. ಭಯಂಕರ ಕೆಟ್ಟ ವರ್ಷ ಎಂಬ ಹಣೆಪಟ್ಟಿ ಹೊತ್ತು ನಮ್ಮಿಂದ ದೂರವಾಗುತ್ತಿರುವ 2020 ರ ಸಿಂಹಾವಲೋಕನದೊಂದಿಗೆ ಮುಂದಡಿಯಿಟ್ಟರೆ ಹೇಗೆ? ಈ ʼ ನಾನು ʼ, ʼ ನನ್ನದು ʼ ಎಂಬ ಮಾತುಗಳು ಬರೀ ಅಹಂಕಾರ ಸೂಚಕವಾಗಬೇಕಿಲ್ಲ. ಅವು ನಮ್ಮ ಸಾಧನೆಗೆ ಮೂಲಮಂತ್ರಗಳೂ ಆಗಬಹುದಲ್ಲವೇ…ನಮಗೆ ಹೊಸವರ್ಷದಲ್ಲಿ ಜಗತ್ತನ್ನೇ ಬದಲಿಸಿಬಿಡುತ್ತೇನೆ ಎಂಬ ಭ್ರಮೆ ಬೇಡ. ʼ ನಾವು ʼ ಬದಲಾಗೋಣ, ನಮ್ಮನ್ನು ನೋಡಿ ಸಮಾಜ, ಜಗತ್ತು ಬದಲಾಗಬಹುದು. ಹಾಗಾದರೆ 2020 ಕಲಿಸಿದ ಪಾಠವಾದರೂ ಏನು, 2021 ರ ಕಡೆಗೆ ನಮ್ಮ ನೋಟವಾದರೂ ಹೇಗಿರಬೇಕು… ಬದುಕು ಬಲು ಸುಂದರ: ಚತುರ್ಮುಖ ಬ್ರಹ್ಮ ಮನುಷ್ಯನನ್ನು ಸೃಷ್ಟಿಸಿದ ಬಳಿಕ ತನ್ನ ಸೃಷ್ಟಿ ಕಾರ್ಯವನ್ನು ನಿಲ್ಲಿಸಿದ ಎಂಬ ನಂಬಿಕೆಯಿದೆ. ಅವನ ಪ್ರಕಾರ ...