ಹೊಸಬೆಳಕು ಮೂಡುತಿದೆ…
ಕಣ್ಣ ಮುಚ್ಚಲು ರೆಪ್ಪೆಯಡಿಯಲಿ ಮನವ ಸೋಂಕುವ ಕತ್ತಲು ಕನಸಿನಂಗಳ ಒರೆಸಿ ಬೆಳಗುತ ಸಜ್ಜು ನಾಳೆಯ ಕಟ್ಟಲು… ಕತ್ತಲೆಂಬುದು ಶಾಶ್ವತವಲ್ಲ, ಅದು ಜಗದ ಅಂತ್ಯವೂ ಅಲ್ಲ, ಅದು ಬೆಳಕಿನ ಹಾದಿಗೆ ಮುನ್ನುಡಿಯಷ್ಟೆ…ಅದೆಷ್ಟು ನಿಜವಲ್ಲವೇ…ನಮ್ಮ ಜೀವನವೆಂಬ ಸುಂದರ ಯಾನದಲ್ಲಿ ಕಷ್ಟಗಳೆಂಬ ಕತ್ತಲು ಸುಳಿಯಿತೆಂದು ಸರಿದು ಮರೆಯಾಗಲು ಸಾಧ್ಯವೇ? ಖಂಡಿತಾ ಇಲ್ಲ. ಜೀವನದ ಅಚ್ಚರಿಗಳನ್ನು ಕಣ್ತುಂಬಿಕೊಳ್ಳುತ್ತಾ ಭವಿಷ್ಯದ ಮೆಟ್ಟಿಲುಗಳನ್ನು ಹತ್ತುತ್ತಿದ್ದ ಕಾಲೇಜು ವಿದ್ಯಾರ್ಥಿಗಳಿಗೆ ಈ ಬಾರಿ ಕೊರೋನಾ ಆಘಾತ ನೀಡಿದೆ. ಆದರೀಗ ಕತ್ತಲು ಸರಿದು ಬೆಳಕು ಮೂಡುವ ಸಮಯ ಬಂದೇಬಿಟ್ಟಿದೆ… ಹೌದು…ಮೊದಮೊದಲು ಕೊರೋನಾದ ಕತ್ತಲು ಕವಿದರೂ ಆನ್‌ಲೈನ್ ಪಾಠವೆಂಬ ಚಂದಿರನಿದ್ದಾನಲ್ಲ ಎಂಬ ಹುಂಬ ಧೈರ್ಯವಿತ್ತು. ಹೊಸತನ ಮೂಡಿಸುವ ಸಹಜ ಕುತೂಹಲವದು…ಆದರೆ ಬರುಬರುತ್ತಾ ಅಮಾವಾಸ್ಯೆಯ ಅನುಭವ. ಆನ್‌ಲೈನ್ ಪಾಠದ ಕುತೂಹಲ ಮರೆಯಾಗಿತ್ತು. ಅದೊಂದು ಹೊರೆಯಾಗತೊಡಗಿತು. ಕಾಲೇಜ್ ಕಾರಿಡಾರ್, ಸ್ನೇಹಿತರು ನೆನಪಾಗತೊಡಗಿದರು. ಈಗ ಕ್ಲಾಸ್ ಯಾವಾಗ ಆರಂಭವಾಗುತ್ತೆ ಎಂಬ ಮೂಲಪ್ರಶ್ನೆ! ಕೊರೋನಾ ಕತ್ತಲಲ್ಲಿ ಉಪನ್ಯಾಸಕರಿಗೂ ವಿದ್ಯಾರ್ಥಿಗಳೇ ಮಿಂಚುವ ನಕ್ಷತ್ರಗಳು, ಆ ನಕ್ಷತ್ರಗಳಲ್ಲೇ ಬೆಳಕು ಕಾಣುವ ಪ್ರಯತ್ನ. ತಂತ್ರಜ್ಞಾನದ ಬಲೆಯಲ್ಲಿ ಸಿಲುಕಿ ನಲುಗಿದ ಹಿರಿಯರು ಒಂದೆಡೆಯಾದರೆ, ತಮ್ಮೆಲ್ಲಾ ಪಟ್ಟುಗಳನ್ನು ಪ್ರಯೋಗಿಸಿಯೂ ತರಗತಿ ಪಾಠಗಳಿಗೆ ಆನ್‌ಲೈನ್ ಸಮವಲ್ಲ ಎಂದು ಕಂಡುಕೊಂ...